ತೆಲಂಗಾಣದಲ್ಲಿ ಶಥಾಯ – ಗತಯಾ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿ ಇಂದಿನಿಂದ 55 ದಿನಗಳ ಪ್ರಜಾಸಂಗ್ರಾಮ ಪಾದಯಾತ್ರೆ ಆರಂಭಿಸಿದೆ. ಸಾವಿರಾರು ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿರುವುದರಿಂದ ರಾಜ್ಯದಲ್ಲಿ ಕೋವಿಡ್ ಉಲ್ಭಣದ ಆತಂಕ ಉಂಟಾಗಿದೆ.
ಆರಂಭದ ದಿನವೇ “ಕೌಟುಂಬಿಕ ರಾಜಕಾರಣ ಮತ್ತು ಸರ್ವಾಧಿಕಾರಿ ವರ್ತನೆಯ ಕೆಸಿಆರ್ ಆಡಳಿತವನ್ನು ಕಿತ್ತು ಹಾಕಿ ಮತ್ತು ತಾಲಿಬಾನ್ ಮನಸ್ಥಿತಿಯ ಎಐಎಂಐಎಂ ಪಕ್ಷವನ್ನು ತಿರಸ್ಕರಿಸಿ” ಎಂದು ಪ್ರಚೋದನಕಾರಿ ಭಾಷಣದ ಮೂಲಕ ಯಾತ್ರೆ ಆರಂಭಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್‌ರವರು ಹೈದರಾಬಾದ್‌ನ ಓಲ್ಡ್ ಸಿಟಿಯಿಂದ ಗಣೇಶ ಶೋಭಾಯಾತ್ರೆ ಮತ್ತು ಹನುಮ ಜಯಂತಿ ಆಚರಣೆಗೆ ಕರೆ ನೀಡಿದ್ದಾರೆ.
“ತೆಲಂಗಾಣ ರಚನೆಯಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ರಾವ್‌ರವರ ಕುಟುಂಬ ಮಾತ್ರ ಫಲಾನುಭವಿಯಾಗಿದೆ. ಈಗ ಅವರು ದಲಿತ ಬಂಧು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆಗೂ ಮುಂಚೆ ಅವರು 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ, ದಲಿತ ಮುಖ್ಯಮಂತ್ರಿ, ಯುವಜನರಿಗೆ ಉದ್ಯೋಗದ ಬಗ್ಗೆ ಮಾತನಾಡಿದ್ದರು. ಆದರೆ ಅವೆಲ್ಲವನ್ನು ಮರೆತುಬಿಟ್ಟಿದ್ದಾರೆ” ಎಂದು ಬಂಡಿ ಸಂಜಯ್ ಟೀಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆಡಳಿತರೂಢ ಟಿಆರ್‌ಎಸ್ ಪಕ್ಷವು ಸುಳ್ಳು ಆರೋಪ ಮಾಡುವವರ ನಾಲಿಕೆ ಕತ್ತರಿಸಬೇಕು ಎಂದು ಕಿಡಿಕಾರಿದೆ. ಬಿಜೆಪಿಯು ರಾಜ್ಯದಲ್ಲಿ ಪಾದಯಾತ್ರೆ ಮಾಡುವುದನ್ನು ಬಿಟ್ಟು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ದೆಹಲಿಯಲ್ಲಿ ಪಾದಯಾತ್ರೆ ನಡೆಸಲಿ ಎಂದು ಸಲಹೆ ನೀಡಿದೆ.
ಇದನ್ನೂ ಓದಿ: ಕುಂದಾಪುರ: ದಲಿತರಿಗೆ ಸಾಮಾಜಿಕ ಬಹಿಷ್ಕಾರ – ಕುಡಿಯುವ ನೀರಿಗೂ ಅಡ್ಡಿ


