ಗುಪ್ತ ಕ್ಯಾಮರಾಗಳು, ಪೆಗಾಸಸ್ ತರಹದ ಕಣ್ಗಾವಲು ವ್ಯವಸ್ಥೆಗಳನ್ನು ಬಳಸಿಕೊಂಡು ಶಾಸಕರು, ಸಂಸದರನ್ನು ಹನಿಟ್ರ್ಯಾಪ್ ಮಾಡಲಾಗಿತ್ತು. ಇದು 2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾಯಿತು ಎಂದು ಶಿವಸೇನೆ (ಯುಬಿಟಿ) ಮಂಗಳವಾರ ಆರೋಪಿಸಿದೆ.
ಕೇಂದ್ರ ಸಂಸ್ಥೆಗಳ ಒತ್ತಡದಿಂದಾಗಿ ಅವಿಭಜಿತ ಶಿವಸೇನೆ ಮತ್ತು ಎನ್‌ಸಿಪಿಯ ಕೆಲವು ಶಾಸಕರು ನಿಷ್ಠೆಯನ್ನು ಬದಲಾಯಿಸಿದರು ಎಂದು ಶಿವಸೇನೆಯ (ಯುಬಿಟಿ) ಮುಖವಾಣಿ ಸಾಮ್ನಾದ ಸಂಪಾದಕೀಯ ಹೇಳಿದೆ.
ಕನಿಷ್ಠ 18 ಶಾಸಕರು ಮತ್ತು ನಾಲ್ವರು ಸಂಸದರನ್ನು ‘ಹನಿಟ್ರ್ಯಾಪ್’ ಮಾಡಲಾಗಿತ್ತು. ಅವರು ತಮ್ಮ ಇಮೇಜ್ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಕೈ ಜೋಡಿಸಿದರು ಎಂದಿದೆ.
ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಅವರು ಸಂಸದರು ಮತ್ತು ಶಾಸಕರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಆರೋಪಿಸಿದ್ದು, ಮಾಜಿ ವಿರೋಧ ಪಕ್ಷದ ನಾಯಕರಾದ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾಮ್ನಾ ಒತ್ತಾಯಿಸಿದೆ.
“ಇಸ್ರೇಲ್ ಮೂಲದ ಗುಪ್ತ ಕ್ಯಾಮರಾಗಳು ಮತ್ತು ಪೆಗಾಸಸ್ ತರಹದ ವ್ಯವಸ್ಥೆಯನ್ನು (ಕಣ್ಗಾವಲುಗಾಗಿ) ಪೂರ್ಣ ಪ್ರಮಾಣದಲ್ಲಿ ಬಳಸಲಾಯಿತು. ಈ (ಹನಿ) ಟ್ರ್ಯಾಪಿಂಗ್‌ನಿಂದಾಗಿ ಎಂವಿಎ ಸರ್ಕಾರ ಪತನಗೊಂಡಿತು ಎಂಬುದು ಈಗ ಸ್ಪಷ್ಟವಾಗಿದೆ” ಎಂದು ತಿಳಿಸಿದೆ.
ಬಿಜೆಪಿಯಲ್ಲಿ ಹನಿಟ್ರ್ಯಾಪ್ ಮಾಡುವ ವ್ಯವಸ್ಥೆ ಇತ್ತು ಮತ್ತು ಪೊಲೀಸರು ಕೂಡ ವಿರೋಧ ಪಕ್ಷದವರ ಮೇಲೆ ಕಣ್ಗಾವಲು ಇಟ್ಟಿದ್ದರು ಎಂದು ಸಾಮ್ನಾ ಆರೋಪಿಸಿದೆ.
ಶಿವಸೇನಾ ಸಂಸದರು ಮತ್ತು ಶಾಸಕರನ್ನು ಒಳಗೊಂಡ ಹನಿಟ್ರ್ಯಾಪಿಂಗ್‌ನ ಪುರಾವೆಗಳನ್ನು ಹೊಂದಿರುವ ಪೆನ್ ಡ್ರೈವ್ ಅನ್ನು ಏಕನಾಥ್ ಶಿಂಧೆ ಅವರಿಗೆ ಹಸ್ತಾಂತರಿಸಿದಾಗ, ಅವರು ಸೂರತ್, ಗುವಾಹಟಿ ಮತ್ತು ನಂತರ ಗೋವಾಕ್ಕೆ ಪ್ರಯಾಣ ಬೆಳೆಸಿದರು. ‘ಇದೊಂದು ರೀತಿಯ ಸಸ್ಪೆನ್ಸ್ ಥ್ರಿಲ್ಲರ್’ ಎಂದಿದೆ.
ಶಿಂಧೆ ಅವರಿಗೆ ಆರಂಭದಲ್ಲಿ ಸಂಖ್ಯಾ ಬಲದ ಕೊರತೆಯಿತ್ತು. ಆ ಸಮಯದಲ್ಲಿ ಅವರಿಗೆ ಕೇವಲ ಒಂಬತ್ತು ಅಥವಾ ಹತ್ತು ಶಾಸಕರ ಬೆಂಬಲವಿತ್ತು. ಆದಾಗ್ಯೂ, ಗೃಹ ಇಲಾಖೆಯ ಜನರು ಮತ್ತು ಅಂದಿನ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, ಸಂಸದರು ಮತ್ತು ಶಾಸಕರನ್ನು ಬ್ಲಾಕ್‌ಮೇಲ್ ಮಾಡಿದರು ಎಂದು ಸಾಮ್ನಾ ಆರೋಪಿಸಿದೆ.
ಶಿವಸೇನೆಯ ಸಚಿವರಾದ ಸಂಜಯ್ ಶಿರ್ಸಾತ್, ಯೋಗೇಶ್ ಕದಮ್ ಮತ್ತು ದಾದಾ ಭೂಸೆ ಮತ್ತು ಅವರ ಎನ್‌ಸಿಪಿ ಸಹೋದ್ಯೋಗಿ ಮಾಣಿಕ್ ಕೊಕಟೆ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಸಂಪಾದಕೀಯದಲ್ಲಿ ಆಗ್ರಹಿಸಲಾಗಿದೆ.
ಕೆಲವು ಸಚಿವರು ಹನಿಟ್ರ್ಯಾಪ್ ಹನಿಟ್ರ್ಯಾಪ್‌ಗೆ ಸಿಲುಕಿದ್ದು,ಅವರು ಕೂಡ ಸಂಪುಟದಿಂದ ಹೋಗಬೇಕಾಗುತ್ತದೆ ಎಂದಿದೆ.
ಕೆಲವು ಸಚಿವರ ನಡವಳಿಕೆಯು ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ಪುನರ್‌ರಚನೆ ನಡೆಯುವುದನ್ನು ಸೂಚಿಸುತ್ತದೆ ಎಂದು ಸಾಮ್ನಾ ಹೇಳಿದೆ.


