ಗುಜರಾತಿನ ರಾಜ್‌ಕೋಟ್‌ನ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಂದ ನಂಬರ್ ಪಡೆದು, ಅವರ ಒಪ್ಪಿಗೆಯಿಲ್ಲದೆ 350 ಜನರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡಿಕೊಂಡಿರುವ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಇದೀಗ ವೈರಲ್ ಆಗಿದೆ.
ರೋಗಿಗಳಲ್ಲಿ ಒಬ್ಬರಾದ ಜುನಾಗಢ್‌ನ ಕಮಲೇಶ್ ತುಮ್ಮರ್ ಅವರು ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದ ತಮ್ಮ ಖಾತೆಯನ್ನು ಹಂಚಿಕೊಂಡಾಗ ವಿವಾದ ಪ್ರಾರಂಭವಾಯಿತು.
ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ರಾಂಚೋಡ್ ದಾಸ್ ಟ್ರಸ್ಟ್ ಆಸ್ಪತ್ರೆಗೆ ಭೇಟಿ ನೀಡಿದ್ದ ತುಮ್ಮರ್, ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಇತರ 350 ರೋಗಿಗಳಲ್ಲಿ ತಾನೂ ಇದ್ದೇನೆ ಎಂದು ಹೇಳಿಕೊಂಡರು. ಅವರ ಪ್ರಕಾರ, ತಡರಾತ್ರಿ ರೋಗಿಗಳು ಮಲಗಿದ್ದಾಗ ಈ ಘಟನೆ ಸಂಭವಿಸಿದೆ.
“ಯಾರೋ ಬಂದು ನಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿಗಳನ್ನು ಕೇಳಿದರು. ನಾನು ನನ್ನದನ್ನು ನೀಡಿದ್ದೇನೆ ಮತ್ತು ಸ್ವಲ್ಪ ಸಮಯದ ನಂತರ, ‘ನೀವು ಬಿಜೆಪಿ ಸದಸ್ಯರಾಗಿದ್ದಿರಿ’ ಎಂದು ನನಗೆ ಸಂದೇಶ ಬಂದಿತು” ಎಂದು ತುಮ್ಮರ್ ವಿವರಿಸಿದರು.
“ಮೊಬೈಲ್ ನಂಬರ್ ನೀಡದಿದ್ದರೆ, ಯಾರಿಗೂ ಶಸ್ತ್ರಚಿಕಿತ್ಸೆ ಮಡಲಾಗುವುದಿಲ್ಲ ಎಂದು ನನಗೆ ಹೇಳಲಾಯಿತು. ಆಗ ನಾನು ವೀಡಿಯೊವನ್ನು ರೆಕಾರ್ಡ್ ಮಾಡಲು ಮತ್ತು ಅದನ್ನು ವೈರಲ್ ಮಾಡಲು ನಿರ್ಧರಿಸಿದೆ” ಎಂದು ತುಮ್ಮರ್ ವಿವರಿಸಿದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಂಚೋಡ್ ದಾಸ್ ಆಸ್ಪತ್ರೆಯ ಶಾಂತಿ ಬಡೋಲಿಯಾ, “ಈ ವ್ಯಕ್ತಿಯು ನಮ್ಮ ಸಿಬ್ಬಂದಿಯ ಭಾಗವಲ್ಲ. ಅವರು ರೋಗಿಗಳಲ್ಲಿ ಒಬ್ಬರ ಸಂಪರ್ಕದಲ್ಲಿದ್ದರು. ನಾವು ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುತ್ತೇವೆ” ಎಂದು ಹೇಳಿದರು.
“ಈ ಪ್ರಕ್ರಿಯೆಯಲ್ಲಿ ಪಕ್ಷದಿಂದ ಯಹಾರೂ ಭಾಗಿಯಾಗಿಲ್ಲ” ಎಂದು ಗುಜರಾತ್ ಬಿಜೆಪಿ ಉಪಾಧ್ಯಕ್ಷ ಗೋರ್ಧನ್ ಜಡಾಫಿಯಾ ಹೇಳಿದ್ದಾರೆ. “ಈ ರೀತಿ ಬಿಜೆಪಿಗೆ ಜನರನ್ನು ಸೇರಿಸಿಕೊಳ್ಳುವಂತೆ ನಾವು ಯಾರಿಗೂ ಸೂಚನೆ ನೀಡಿಲ್ಲ; ನಮ್ಮ ಕಚೇರಿಯಿಂದ ಯಾರೂ ಭಾಗಿಯಾಗಿಲ್ಲ. ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದರು.
ಇದನ್ನೂ ಓದಿ; ಗುಜರಾತ್: ಹೈಕೋರ್ಟ್ ನಿರ್ದೇಶನದ ನಂತರ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲು


