#BJPbetraysKarnataka ಬಿಜೆಪಿ ಕರ್ನಾಟಕಕ್ಕೆ ದ್ರೋಹವೆಸಗುತ್ತಿದೆ ಎಂಬ ಹ್ಯಾಸ್ ಟ್ಯಾಗ್ ಇಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. 7000 ಕ್ಕೂ ಹೆಚ್ಚು ಜನರು ಈ ಹ್ಯಾಸ್ ಟ್ಯಾಗ್ ಬಳಸಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಬಗೆಗಿನ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮುಖ್ಯವಾಗಿ ಮೂರು ಕಾರಣಗಳಿಗಾಗಿ ನೆಟ್ಟಿಗರು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ. ಮೊದಲನೆಯದು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪ್ರವಾಹ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ಇದುವರೆಗೂ ಒಂದು ರೂಪಾಯಿ ಸಹ ಪರಿಹಾರ ನೀಡಿಲ್ಲ. ಅಧ್ಯಯನಕ್ಕಾಗಿ ಸಮತಿ ರಚಿಸಿ ಎಲ್ಲಾ ಮುಗಿದಿದ್ದರೂ ಹಣ ಮಾತ್ರ ಬಿಡುಗಡೆಯಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರು ಚಂದ್ರಯಾನ2ರ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿಗೆ ಬಂದಾಗ ಸಹ ಪ್ರವಾಹ ಸಂತ್ರಸ್ತರನ್ನು ಮಾತಾಡಿಸಿರಲಿಲ್ಲ. ಅದೇ ಸಂದರ್ಭದಲ್ಲಿ ಕೆ.ಎಸ್ ಈಶ್ವರಪ್ಪ ಪರಿಹಾರ ಹಣವಾಗಿ 10ಸಾವಿರ ಕೊಟ್ಟಿರುವುದೇ ನಿಮಗೆ ಹೆಚ್ಚು ಎಂದು ಅಹಂಕಾರದ ಮಾತುಗಳನ್ನಾಡಿದ್ದರು. ಇನ್ನು ಬಿಜೆಪಿ ಸರ್ಕಾರ ರಾಜ್ಯದಲ್ಲಿ ನೆರೆಯಿಂದಾಗಿ ಸುಮಾರು 40 ಸಾವಿರ ಕೋಟಿ ಹಾನಿಯಾಗಿದ್ದರೆ ಪರಿಹಾರಕ್ಕಾಗಿ ಕೇವಲ 3800 ಕೋಟಿಗೆ ಮಾತ್ರ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿ ಬಿಜೆಪಿ ವಿರುದ್ಧದ ಸಿಟ್ಟು ಆಕ್ರೋಶವಾಗಿ ತಿರುಗಿದೆ.
ಎರಡನೇಯದಾಗಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ರವರನ್ನು ಇಡಿ ಬಂಧಿಸಿರುವುದು ರಾಜಕೀಯ ದ್ವೇಷಕ್ಕಾಗಿ ಎಂದು ಹೇಳಲಾಗುತ್ತಿದೆ. ಇದರ ವಿರುದ್ಧ ನಿನ್ನೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಸಹ ನಡೆದಿದೆ. ಸಹಜವಾಗಿ ಒಕ್ಕಲಿಗ ಸಮುದಾಯದ ಸಿಟ್ಟು ಬಿಜೆಪಿ ಮೇಲಿದೆ.
ಮೂರನೇಯದಾಗಿ ಐಬಿಪಿಎಸ್ ಪರೀಕ್ಷೆಯ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಹಳ ಹಿಂದಿನಿಂದಲೂ ಅನ್ಯಾಯ ಮಾಡಿಕೊಂಡು ಬರುತ್ತಿದ್ದು ಇಂದು ಸಹ ಕನ್ನಡಿಗರು ಉದ್ಯೋಗ ಪಡೆಯಲು ಕಠಿಣ ನೀತಿಗಳನ್ನು ಅನುಸರಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕನ್ನಡ ಕಾರ್ಯಕರ್ತರು ಸಮರ ಸಾರಿದ್ದಾರೆ.


