ಯುಪಿಎ ಆಡಳಿತದಲ್ಲಿ 2ಜಿ ಸ್ಪೆಕ್ಟ್ರಂನ ಆಡಳಿತಾತ್ಮಕ ಹಂಚಿಕೆಯನ್ನು ‘ಹಗರಣ’ ಎಂದು ಕರೆದಿದ್ದ ಬಿಜೆಪಿ, ಈಗ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಹರಾಜು ಇಲ್ಲದೆ ಸ್ಪೆಕ್ಟ್ರಂ ನೀಡಲು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಕೇಳುತ್ತಿದ್ದು, ಬಿಜೆಪಿಯ ಬೂಟಾಟಿಕೆಗೆ ಮಿತಿಯಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ ತನ್ನ ತೀರ್ಪನ್ನು ಮಾರ್ಪಡಿಸುವಂತೆ ಕೋರಿ ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮೋದಿ ಸರ್ಕಾರ ಮತ್ತು ಭ್ರಷ್ಟ ಜನತಾ ಪಾರ್ಟಿಯ ಬೂಟಾಟಿಕೆಗೆ ಯಾವುದೇ ಮಿತಿಯಿಲ್ಲ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ, 2ಜಿ ಸ್ಪೆಕ್ಟ್ರಂ ಆಡಳಿತಾತ್ಮಕ ಹಂಚಿಕೆಯನ್ನು ‘ಹಗರಣ’ ಎಂದು ಬಿಜೆಪಿ ಹೇಳಿತ್ತು. ಈಗ ಅದಕ್ಕೆ ತದ್ವಿರುದ್ಧವಾಗಿ ವಾದ ಮಂಡಿಸುತ್ತಿದ್ದಾರೆ. ಹರಾಜು ಮಾಡದೆ ತಮಗೆ ಬೇಕಾದವರಿಗೆ ಸ್ಪೆಕ್ಟ್ರಂ ನೀಡಲು ಅನುಮತಿ ನೀಡಲು ಕೇಂದ್ರವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಖಂಡಿತವಾಗಿಯೂ, ಈ ‘ಮೋದಾನಿ ಆಡಳಿತ’ ಈಗಾಗಲೇ ಸಾರ್ವಜನಿಕ ಸಂಪನ್ಮೂಲಗಳನ್ನು ಪ್ರಧಾನ ಮಂತ್ರಿಯ ಕ್ರೂರಿ ಬಂಡವಾಳಶಾಹಿ ಸ್ನೇಹಿತರಿಗೆ ಹಸ್ತಾಂತರಿಸುತ್ತಿದೆ. ವಿಮಾನ ನಿಲ್ದಾಣಗಳನ್ನು ಒಂದು ಕಂಪನಿಗೆ ಹಸ್ತಾಂತರಿಸಲಾಗಿದೆ. ಕಲ್ಲಿದ್ದಲು ಗಣಿಗಳನ್ನು ಮೋಸದ ಹರಾಜಿನಲ್ಲಿ ನೀಡಲಾಗಿದೆ. ಉಪಗ್ರಹ ಸ್ಪೆಕ್ಟ್ರಮ್ ಅನ್ನು ಸಹ ಹಸ್ತಾಂತರಿಸಲಾಗಿದೆ” ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
“ಒಟ್ಟಾರೆಯಾಗಿ 150 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳಿಗೆ ಬದಲಾಗಿ, ಅವರು ಈಗಾಗಲೇ ತಮ್ಮ ಕಾರ್ಪೊರೇಟ್ ದಾನಿಗಳಿಗೆ 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಸಂಪನ್ಮೂಲಗಳನ್ನು ಹಸ್ತಾಂತರಿಸಿದ್ದಾರೆ” ಎಂದಿದ್ದಾರೆ.
“ಜೂನ್ 4 ರಂದು, ಭಾರತದ ಮತದಾರರು ಈ ಪಕ್ಷಕ್ಕೆ ‘ಸಂಘಟಿತ ಲೂಟಿ’ ಬಾಗಿಲನ್ನು ತೋರಿಸಲಿದ್ದಾರೆ. ಇಂಡಿಯಾ ಸರ್ಕಾರವು ಅದಾನಿ ಮೆಗಾ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಸಲಿದೆ. ಪ್ರಧಾನಿ ತಮ್ಮ ಸುಸಜ್ಜಿತವಾದ ‘ಚಾರ್ ರಾಸ್ತೆ’ ಮೂಲಕ 8200 ಕೋಟಿ ರೂ. ಸಂಗ್ರಹಿಸಿದ
#PayPM ಹಗರಣ ಸೇರಿದಂತೆ ಇತರ ಹಗರಣಗಳನ್ನು ಸರ್ಕಾರ ತನಿಖೆ ನಡೆಸಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಫೆಬ್ರವರಿ 2, 2012 ರಂದು ನೀಡಿದ್ದ ತೀರ್ಪಿನಲ್ಲಿ, ಜನವರಿ 2008ರಲ್ಲಿ ಎ ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ ವಿವಿಧ ಸಂಸ್ಥೆಗಳಿಗೆ ನೀಡಲಾಗಿದ್ದ 2ಜಿ ತರಂಗಾಂತರ ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಸೋಮವಾರ, ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ಪೀಠದ ಮುಂದೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ಕೆಲವು ಪ್ರಕರಣಗಳಲ್ಲಿ ಕೇಂದ್ರವು 2ಜಿ ಸ್ಪೆಕ್ಟ್ರಂ ಪರವಾನಗಿಗಳನ್ನು ನೀಡಲು ಬಯಸಿರುವುದರಿಂದ 2012 ರ ತೀರ್ಪನ್ನು ಮಾರ್ಪಾಡು ಮಾಡಬೇಕು ಎಂದು ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : 27 ಪ್ರಕರಣಗಳು: ಪ್ರಧಾನಿ ಮೋದಿ ವಿರುದ್ಧದ ದೂರುಗಳಿಗೆ ಸಂಬಂಧಿಸಿ ಚುನಾವಣಾ ಆಯೋಗ ಏನು ಮಾಡಿದೆ?


