ವಾರಣಾಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ವಿವಾದದಲ್ಲಿ ಹಿಂದೂ ದಾವೆದಾರರೊಬ್ಬರು ಮತ್ತು ಅವರ ಕುಟುಂಬವು ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ಶನಿವಾರ ಹಿಂದೆ ಸರಿಯುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ದಾವೆದಾರ ಜಿತೇಂದ್ರ ಸಿಂಗ್ ವಿಸೇನ್ ಮತ್ತು ಅವರ ಕುಟುಂಬ [ಪತ್ನಿ ಕಿರಣ್ ಸಿಂಗ್ ಮತ್ತು ಸೊಸೆ ರಾಖಿ ಸಿಂಗ್] ಎಲ್ಲಾ ಪ್ರಕರಣಗಳಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜಿತೇಂದ್ರ ಸಿಂಗ್ ವಿಸೇನ್ ಅವರು, ”ನಾನು ಮತ್ತು ನನ್ನ ಕುಟುಂಬ ದೇಶ ಮತ್ತು ಧರ್ಮದ ಹಿತದೃಷ್ಟಿಯಿಂದ ನಾವು ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಎಲ್ಲಾ ಜ್ಞಾನವಾಪಿ ಸಂಬಂಧಿತ ಪ್ರಕರಣಗಳಿಂದ ಹಿಂದೆ ಸರಿಯುತ್ತಿದ್ದೇವೆ” ಎಂದು ಹೇಳಿದ್ದಾರೆ.
”ತಾನು ಮತ್ತು ತನ್ನ ಕುಟುಂಬವು ಕೆಲವು ಹಿಂದೂ ಧರ್ಮಿಯರಿಂದ ಮತ್ತು ಹಲವು ಕಡೆಗಳಿಂದ ಕಿರುಕುಳವನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸೀಮಿತ ಶಕ್ತಿ ಮತ್ತು ಸಂಪನ್ಮೂಲಗಳ ಕಾರಣದಿಂದಾಗಿ ನಾನು ಇನ್ನು ಮುಂದೆ ‘ಧರ್ಮ’ [ಸದಾಚಾರ]ಕ್ಕಾಗಿ ಈ ಯುದ್ಧವನ್ನು ಹೋರಾಡಲು ಸಾಧ್ಯವಿಲ್ಲ ಮತ್ತು ಅದಕ್ಕಾಗಿಯೇ ನಾನು ಎಲ್ಲ ಪ್ರಕರಣಗಳಿಂದ ಹಿಂದೆ ಸರಿಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
”ಬಹುಶಃ ನನ್ನ ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು ಈ ‘ಧರ್ಮಯುದ್ಧ’ [ಪವಿತ್ರ ಯುದ್ಧ] ಆರಂಭಿಸಿದ್ದು. ಧರ್ಮದ ಹೆಸರಿನಲ್ಲಿ ಗಿಮಿಕ್ ಆಡುವವರ ಜೊತೆ ಮಾತ್ರ ಈ ಸಮಾಜ ನಿಲ್ಲುತ್ತದೆ, ನನ್ನಂತವರ ಜೊತೆ ನಿಲ್ಲುವುದಿಲ್ಲ” ಎಂದು ಹೇಳಿದ್ದಾರೆ.
ಮಸೀದಿಯ ಆವರಣದೊಳಗೆ ಪೂಜೆ ಸಲ್ಲಿಸುವ ಹಕ್ಕು ಕೋರಿ ಅರ್ಜಿ ಸಲ್ಲಿಸಿದ ಐವರು ಹಿಂದೂ ಮಹಿಳೆಯರಲ್ಲಿ ರಾಖಿ ಸಿಂಗ್ ಕೂಡ ಸೇರಿದ್ದಾರೆ. ಮಸೀದಿಯಲ್ಲಿ ಹಿಂದೂ ದೇವತೆ ಶೃಂಗಾರ್ ಗೌರಿಯ ಚಿತ್ರವಿದೆ ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿ ವಜಾ; ಅಲಹಾಬಾದ್ ಹೈಕೋರ್ಟ್ ತೀರ್ಪು
ಕಳೆದ ವರ್ಷ ಮೇ ತಿಂಗಳಲ್ಲಿ ವಾರಣಾಸಿ ಸಿವಿಲ್ ಕೋರ್ಟ್ ಆದೇಶದ ಮೇರೆಗೆ ಮಸೀದಿ ಆವರಣದ ಸಮೀಕ್ಷೆ ವೇಳೆ ಅಂಡಾಕಾರದ ವಸ್ತುವೊಂದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಹಿಂದೂ ದಾವೆದಾರರು ಆ ವಸ್ತುವು ಶಿವಲಿಂಗವಾಗಿದೆ – ಇದು ಹಿಂದೂ ದೇವತೆ ಶಿವನ ಪ್ರಾತಿನಿಧ್ಯ ಎಂದು ಪ್ರತಿಪಾದಿಸಿದರು. ಆದಾಗ್ಯೂ, ಮಸೀದಿಯ ಉಸ್ತುವಾರಿ ಸಮಿತಿಯು ವಸ್ತುವು ವಾಜು ಖಾನಾ ಅಥವಾ ಕಾರಂಜಿ ಎಂದು ಪ್ರತಿಪಾದಿಸಿತ್ತು.
ವಿಸೇನ್ ಅವರು ವಿಶ್ವ ವೈದಿಕ ಸನಾತನ ಸಂಘ ಎಂಬ ಸಂಘಟನೆಯ ಅಧ್ಯಕ್ಷರಾಗಿದ್ದಾರೆ ಮತ್ತು ಅವರ ಪತ್ನಿ ಕಿರಣ್ ಸಿಂಗ್ ಅದರ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.


