ರಾಜಕಾರಣಿಗಳ ಬಯೊಪಿಕ್ ಭರಾಟೆ: ಬಾಲಿವುಡ್‍ನಿಂದ ಕಾಲಿವುಡ್‍ವರೆಗೆ

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ, ಪ್ರಚಾರಕ್ಕಾಗಿ ಪ್ರತಿಯೊಂದು ಮಾಧ್ಯಮವನ್ನು ಬಳಸಿಕೊಳ್ಳಲು ಯತ್ನಿಸುತ್ತವೆ. ಇತ್ತೀಚೆಗಂತೂ ಮಾಧ್ಯಮಗಳ ಭರಾಟೆ ಜಾಸ್ತಿಯಾಗಿದೆ. ಟಿವಿ ಮಾಧ್ಯಮಗಳು, ಮುದ್ರಣ ಮಾಧ್ಯಮಗಳ ಜೊತೆ ಸಾಮಾಜಿಕ ಜಾಲತಾಣ ಮಾಧ್ಯಮಗಳು ಪೈಪೋಟಿಗೆ ಬಿದ್ದಂತೆ ಕಾಣಿಸುತ್ತವೆ. ಈ ಎಲ್ಲಾ ಮಾಧ್ಯಮಗಳಿಗೂ ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿವೆ. ಇದೆ ರೀತಿ ಈ ಬಾರಿಯ ಚುನಾವಣೆಯಲ್ಲಿ ಸಿನೆಮಾವನ್ನು ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಪ್ರಯತ್ನಿಸಿದ್ದು, ಸಾಕಷ್ಟು ರಾಜಕೀಯ ನಾಯಕರ ‘ಬಯೋಪಿಕ್‘ಗಳು ಈ ಬಾರಿ ತೆರೆಗೆ ಬಂದಿದ್ದು ಇನ್ನೂ ಕೆಲವು ಸಿನೆಮಾಗಳು ಬಿಡುಗಡೆಯ ಹಂತದಲ್ಲಿವೆ.

ಹೆಸರಾಂತ ವ್ಯಕ್ತಿಗಳ ಜೀವನದ ಬಗ್ಗೆ ನಿರ್ಮಿಸುವ ಸಿನೆಮಾಗಳನ್ನು ಬಯೋಪಿಕ್‍ಗಳೆಂದು ಕರೆಯುತ್ತಾರೆ. ಭಾರತೀಯ ಸಿನೆಮಾ ರಂಗದಲ್ಲಿ ಸಾಕಷ್ಟು ಬಯೋಪಿಕ್ ಸಿನೆಮಾಗಳು ತಯಾರಾಗಿವೆ. ಆದರೆ ಈ ರೀತಿಯಾಗಿ ಲಜ್ಜೆಗೆಟ್ಟು ಸಿನೆಮಾ ಮಂದಿ ರಾಜಕಾರಣಿಗಳಿಗೆ ಸ್ಪಂದಿಸಿದ್ದು ಇದೇ ಮೊದಲು ಅನಿಸುತ್ತೆ. ಬಿಜೆಪಿ ಈ ಚುನಾವಣೆಯಲ್ಲಿ ತನ್ನ ವಿಚಾರಗಳನ್ನು ತುರುಕಲು ಸಾಕಷ್ಟು ಸಿನೆಮಾಗಳಿಗೆ ದುಡ್ಡು ಖರ್ಚು ಮಾಡಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರನ್ನ ಒಬ್ಬ ಅಸಮರ್ಥ ಮತ್ತು ಕೈಗೊಂಬೆಯ ರೀತಿಯ ಪ್ರಧಾನಿಯನ್ನಾಗಿ ತೋರಿಸಲು ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಸಿನೆಮಾ ಮಾಡಿಸಿದ್ದರು. ಬಿಜೆಪಿಯ ಸದಸ್ಯ ಅನುಪಮ್ ಖೇರ್ ಅದರಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಅದು ಚುನಾವಣೆಗೂ ಸಾಕಷ್ಟು ಮುಂಚೆಯೇ ಬಂದರೂ, ಒಂದು ವಾರವು ಸಹ ಯಾವುದೇ ಥೀಯೆಟರ್‍ನಲ್ಲಿ ಓಡಲಿಲ್ಲ. ಇನ್ನು ಸೈನಿಕರ ಹೆಸರಲ್ಲಿ ಓಟು ಕೇಳಿದ ಬಿಜೆಪಿಯ ಪರವಾಗಿ ಸರ್ಜಿಕಲ್ ಸ್ಟ್ರೈಕ್‍ನ ಕಥಾ ಹಂದರವನ್ನು ಇಟ್ಟುಕೊಂಡು ‘ಉರಿ’ ಎಂಬ ಸಿನೆಮಾವನ್ನು ನಿರ್ಮಿಸಿ ಬಿಡುಗಡೆಗೊಳಿಸಿದರು. ಇದರಲ್ಲಿ ರೋಚಕತೆ ಇದ್ದುದರಿಂದ ಜನರ ಗಮನಸೆಳೆಯಿತು. ಅದನ್ನು ಸಂಪೂರ್ಣವಾಗಿ ಪ್ರೊಪಗಾಂಡ ಸಿನೆಮಾ ಎನ್ನಬಹುದಾಗಿದೆ.

ಬಿಜೆಪಿಯು ಮತ್ತೊಮ್ಮೆ ಮೋದಿ ಎಂಬ ಘೋಷವಾಕ್ಯವನ್ನು ಎಲ್ಲ ಕಡೆ ಹೇಳಲು ಶುರು ಮಾಡಿದಂತೆ ಮೋದಿಯ ಜೀವನ ಚರಿತ್ರೆಯನ್ನು ತಯಾರಿಸಿ ಚುನಾವಣೆಗೆ ಮುಂಚೆ ಬಿಡುಗಡೆ ಮಾಡಲು ಯತ್ನಿಸಿತು. ವಿವೇಕ್ ಒಬೆರಾಯ್ (ಇವರ ಕುಟುಂಬವೂ ಬಿಜೆಪಿಯಲ್ಲಿದೆ) ಮೋದಿಯ ಪಾತ್ರವನ್ನು ನಿರ್ವಹಿಸಿದ್ದರು. ಚುನಾವಣೆಯ ಸಂದರ್ಭದಲಲಿ ಈ ಚಿತ್ರ ಬಿಡುಗಡೆಗೆ ಭಾರಿ ವಿರೋಧ ವ್ಯಕ್ತವಾದ ಕಾರಣ ಚುನಾವಣಾ ಆಯೋಗ ತಡೆ ಹಿಡಿದಿದೆ. ಚುನಾವಣಾ ಫಲಿತಾಂಶದ ನಂತರದ ದಿನವೇ ಬಿಡುಗಡೆ ಆಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದರ ಟ್ರೈಲರ್ ನೋಡಿದರೆ ದಾಖಲೆಗಳಿಲ್ಲದ ಸುಳ್ಳುಗಳ ಸರಮಾಲೆಯೇ ಇವರ ಸಿನೆಮಾ ಕಥೆಯ ಹಂದರ ಎನಿಸುವಂತಿದೆ. ಹೀಗೆ ತಮ್ಮ ಪಕ್ಷದ ಪ್ರಚಾರಕ್ಕಾಗಿಯೇ ಸಿನೆಮಾಗಳನ್ನ ಮಾಡುತ್ತಿದ್ದಾರೆ. ಇದರಲ್ಲಿ ನಟಿಸುವ ನಟರು ತಮ್ಮನ್ನು ತಾವು ಎಷ್ಟೊಂದು ಮಾರಿಕೊಂಡಿರುತ್ತಾರೆ ಎಂದು ಗಮನಿಸಬೇಕಿದೆ. ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನೆಮಾದಲ್ಲಿ ನಟಿಸಿದ ಒಬ್ಬ ಯುವನಟ ಈಗ ಪಶ್ಚಾತ್ತಾಪ ಪಡುತ್ತಿದ್ದಾನೆ. ಇದು ರಾಷ್ಟ ಮಟ್ಟದ ರಾಜಕೀಯ ಪಕ್ಷಗಳ ಕಥೆಯಾದರೆ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಸಿನೆಮಾಗಳು ಬಂದಿವೆ. ಬಾಲಿವುಡ್‍ನಲ್ಲಿ ಶಿವಸೇನೆಯ ಮುಖ್ಯಸ್ಥ ಬಾಳಠಾಕ್ರೆ ಬಗ್ಗೆಯು ಸಿನೆಮಾ ಒಂದು ಬಂದಿದೆ. ಈ ಸಿನೆಮಾವನ್ನು ಅಭಿಜಿತ್ ಫಾನ್ಸೆ ನಿರ್ದೇಶಿಸಿದ್ದು ಠಾಕ್ರೆ ಪಾತ್ರವನ್ನು ನವಜುದ್ದೀನ್ ಸಿದ್ದಿಕಿ ಮಾಡಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತ ಮೇಲೆ ಕೂಡ ಸಿನೆಮಾ ಮಾಡಲಿದ್ದಾರೆ ಎಂಬ ಮಾತುಗಳು ಕಾಲಿವುಡ್‍ನಲ್ಲಿ ಕೇಳಿಸುತ್ತಿವೆ..

ಇದನ್ನು ಓದಿ ; ಮನುಜಮತ ಸಿನೆಮಾ  ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ 

ಚಂದ್ರಬಾಬು ನಾಯ್ಡುಗೆ ತಲೆನೋವಾದ ಆರ್.ಜಿ.ವಿ
ಆಂಧ್ರ ಮತ್ತು ತೆಲಂಗಾಣದಲ್ಲಿ ಬರಿ ಬಯೋಪಿಕ್‍ಗಳದ್ದೆ ಚರ್ಚೆಯಾಗಿಬಿಟ್ಟಿದೆ. ತೆಲುಗು ದೇಶಂ ಪಾರ್ಟಿಯ ಸಂಸ್ಥಾಪಕರು ಹಾಗೂ ಹೆಸರಾಂತ ನಟರಾದ ದಿವಂಗತ ನಂದಮೂರಿ ತಾರಕ ರಾಮರಾವು (ಎನ್.ಟಿ.ಆರ್)ರವರ ಜೀವನ ಆಧಾರಿತವಾಗಿ ಎರಡು ಚಿತ್ರಗಳು ತೆರೆಗೆ ಬಂದಿವೆ. ಈ ಸಿನೆಮಾವನ್ನು ರಾಧಾಕೃಷ್ಣ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಸ್ವತಃ ಎನ್.ಟಿ.ರಾಮಾರಾವ್ ರ ಪಾತ್ರವನ್ನ ಅವರ ಮಗ ತೆಲುಗುದೇಶಂ ಶಾಸಕ ನಂದಮೂರಿ ಬಾಲಕೃಷ್ಣ ಮಾಡಿದ್ದಾರೆ. ಇದು ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು. ಆದರೆ ವಿವಾದಗಳಿಗೆ ಪ್ರಸಿದ್ಧ ಹೊಂದಿರುವ ರಾಂ ಗೋಪಾಲ್ ವರ್ಮ ಲಕ್ಷ್ಮೀಸ್ ಎನ್.ಟಿ.ಆರ್ ಎಂದು ಹೊಸ ಸಿನೆಮಾದ ಟ್ರೈಲರ್ ಬಿಟ್ಟು ಆಂಧ್ರದಲ್ಲಿ ತೆಲುಗುದೇಶಂ ಪಾರ್ಟಿಗೆ ತಲೆನೋವಾಗಿದ್ದರು. ಏಕೆಂದರೆ ಹಾಲಿ ಮುಖ್ಯಮಂತ್ರಿ ಎನ್‍ಟಿಆರ್ ಅಳಿಯ ಚಂದ್ರಬಾಬು ನಾಯ್ಡು ರಾಮರಾವ್ ನಂತರ ಪಾರ್ಟಿಯ ಹಿಡಿತವನ್ನು ಕೈಗೆತ್ತಿಕೊಂಡವರು ಆದರೆ ಲಕ್ಷ್ಮೀ ಪಾರ್ವತಿ ಎನ್.ಟಿ.ಆರ್ ಎರಡನೇ ಹೆಂಡತಿ. ಆಕೆ ಈ ಕುಟುಂಬದಿಂದ ದೂರ ಇದ್ದಾರೆ ಮತ್ತು ಅವರೇ ರಾಮರಾವ್ ಕೊನೆಯ ದಿನಗಳಲ್ಲಿ ಜೊತೆಗಿದ್ದವರು. ಈಕೆಯ ಜೊತೆ ಚಂದ್ರಬಾಬು ನಾಯ್ಡು ಜಗಳಗಳೇ ಎನ್.ಟಿ.ಆರ್ ಸಾವಿಗೆ ಕಾರಣವಾಯಿತು ಮತ್ತು ನಾನು ಲಕ್ಷ್ಮೀ ಪಾರ್ವತಿ ದೃಷ್ಟಿಕೋನದಿಂದ ಸಿನೆಮಾ ತೆಗೆಯುತ್ತೇನೆ ಎಂದು ಆರ್‍ಜಿವಿ ಕೂತುಬಿಟ್ಟರು. ಈ ಸಿನೆಮಾ ಬಂದರೆ ಖಂಡಿತ ಚುನಾವಣೆಯಲ್ಲಿ ತೊಂದರೆಯಾಗುತ್ತೆ ಎಂದು ತೆಲುಗುದೇಶಂ ಕೋರ್ಟ್‍ಗೆ ಹೋಗಿ ಕೇವಲ ತೆಲಂಗಾಣದಲ್ಲಿ ಮಾತ್ರ ಲಕ್ಷ್ಮೀಸ್ ಎನ್.ಟಿ.ಆರ್ ಬಿಡುಗಡೆಯಾಯಿತು. ಈ ಸಿನೆಮಾದ ನಿರ್ಮಾಪಕರು ವೈಎಸ್‍ಆರ್ ಕಾಂಗ್ರೆಸ್‍ನ ಜಗನ್ ಮೋಹನ್ ರೆಡ್ಡಿ ಆಪ್ತರು ಎಂದು ಕೂಡ ಹೇಳಲಾಗುತ್ತಿದೆ.

ಇತ್ತಿಚಿಗೆ ಚುನಾವಣೆಯ ನಂತರ ಚಿತ್ರ ಬಿಡುಗಡೆ ಮಾಡಲು ಸುದ್ದಿಗೋಷ್ಟಿ ಮಾಡಿದ ರಾಮ್ ಗೋಪಾಲ ವರ್ಮರನ್ನ ವಿಜಯವಾಡದಲ್ಲಿ ಅರೆಸ್ಟ್ ಮಾಡಲಾಗಿತ್ತು. ಇತ್ತಕಡೆ ತೆಲಂಗಾಣದ ಹಾಲಿ ಮುಖ್ಯಮಂತ್ರಿ ಕೆ.ಸಿ.ಆರ್‍ರ ಜೀವನ ಚರಿತ್ರೆಯ ಒಂದು ಸಿನೆಮಾ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಮತ್ತೆ ರಾಂ ಗೋಪಾಲ್ ವರ್ಮ ನಿರ್ದೇಶನದಲ್ಲಿ ಕೆಸಿಆರ್ ಕುರಿತು ಟೈಗರ್ ಹೆಸರಿನ ಸಿನೆಮಾ ತಯಾರಾಗುತ್ತಿದೆ. ಚುನಾವಣೆಗಿಂತ ಮುಂಚೆ ಜಗನ್ ಮೋಹನ್ ರೆಡ್ಡಿಯ ತಂದೆ ವೈಎಸ್ ರಾಜಶೇಖರ್ ರೆಡ್ಡಿಯ ಕುರಿತು ಯಾತ್ರ ಸಿನೆಮಾ ಬಿಡುಗಡೆಯಾಗಿತ್ತು. ಇದು ವೈಎಸ್‍ಆರ್ ಇಡೀ ಆಂದ್ರಪ್ರದೇಶದಲ್ಲಿ ಪಾದಯಾತ್ರೆ ಮಾಡಿ ಮುಖ್ಯಮಂತ್ರಿಯಾದ ಕಥೆಯ ಹಂದರವನ್ನು ಒಳಗೊಂಡಿತ್ತು ಅದೇ ದಾರಿಯಲ್ಲಿ ಜಗನ್ ಕೂಡ ಪಾದಯಾತ್ರೆ ಮಾಡಿ ಅದು ಕೊನೆಗೊಳ್ಳುವ ಸಮಯದಲ್ಲಿ ಸಿನೆಮಾ ಬಿಡುಗಡೆಯಾಗಿತ್ತು. ಹೀಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಬಯೋಪಿಕ್‍ಗಳ ಕ್ರೇಜ್ ಇನ್ನೂ ಮುಗಿದಿಲ್ಲ.

ಆದರೆ ಸಾಕಷ್ಷು ಬಯೋಪಿಕ್‍ಗಳು ಚುನಾವಣೆಯನ್ನೆ ಉದ್ದೇಶಿಸಿ ಬಂದದ್ದರಿಂದ ಇವು ಕೇವಲ ತಮ್ಮ ನಾಯಕರನ್ನು ವಿಜೃಂಭಿಸುವ ಮತ್ತು ಮತ ಬೇಟೆಯ ದೃಷ್ಟಿಯಿಂದ ಮಾತ್ರ ಸಿನೆಮಾ ತಯಾರಾಗಿವೆ. ಹಾಗಾಗಿ ಇವು ವಾಸ್ತವ ಜೀವನ ಚರಿತ್ರೆಗಿಂತ ಸುಳ್ಳುಗಳನ್ನೇ ವಿಜೃಂಭಿಸುವ ಸಾಧ್ಯತೆ ಹೆಚ್ಚಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here