Homeಕಥೆಬಾರ್ಡರ್ ಕೇಸ್ ಬಸವಣ್ಣ: ಅಣೇಕಟ್ಟೆ ವಿಶ್ವನಾಥ್‌ರವರ ಕಥೆ

ಬಾರ್ಡರ್ ಕೇಸ್ ಬಸವಣ್ಣ: ಅಣೇಕಟ್ಟೆ ವಿಶ್ವನಾಥ್‌ರವರ ಕಥೆ

- Advertisement -
- Advertisement -

ಈ ನುಗ್ಗೇಹಳ್ಳಿ ಪೋಲೀಸ್ ಠಾಣೆ ಸರಹದ್ದು ಮುಕ್ತಾಯ, ನೊಣವಿನಕೆರೆ ಪೋಲೀಸ್ ಠಾಣೆ ಸರಹದ್ದು ಪ್ರಾರಂಭ ಎಂಬ ಈ ಎರಡು ಬೋರ್ಡು ಇರುವ ಕಡೆ ನನ್ನ ತಿಪಟೂರಿನ ಗೆಳೆಯ ಸಂತೋಷ್ ಮತ್ತು ಒಬ್ಬರು ಪೋಲೀಸ್ ನಿಂತಿದ್ದು, ಕಾರಿನಲ್ಲಿ ಹೋಗುವಾಗ ನನಗೆ ಕಂಡಿತು. ತಕ್ಷಣ,  “ಮಂಜು, ಮಂಜು, ಸ್ವಲ್ಪ ಗಾಡಿ ನಿಲ್ಸು” ಎಂದು ದಿಢೀರನೆ ಡ್ರೈವರ್ ಗೆ  ಹೇಳಿದೆ. ಈ ಬೋರ್ಡ್ ಹತ್ತಿರ ನಾನು ನಿಲ್ಲಿಸು ಎಂದು ಹೇಳಿದರೆ ಒಂದೈವತ್ತು ಮೀಟರ್ ದೂರಕ್ಕೆ ಕಾರು ನಿಲ್ಲಿಸಿದ.

ಈ ಕಾರಿನಲ್ಲಿ ನಾನು, ಕ್ಯಾಮರಾ ಮನ್ ಗಳಾದ ರಾಜು, ಸುನೀಲ್ ಮತ್ತು ಪಶು ವೈದ್ಯಾಧಿಕಾರಿಯಾದ ಸುಪ್ರಿಯಾ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಕೆಳಗಿಳಿದು ಬಂದ ಕೂಡಲೇ ಸಂತೋಷ್ ತುಂಬಾ ಸಂತೋಷಗೊಂಡು ಹುಬ್ಬೇರಿಸಿ ನೋಡಿ “ಅರ್ರೇ ವಿಶ್ವಣ್ಣ, ನೀವೇನಿಲ್ಲಿ?”  ಅಂದರು. ಈ ಸಂತೋಷ್, ಭೂಮಿ ಇಲ್ಲದ ಅಲೆಮಾರಿಗಳ ಪರ ಹೋರಾಟ ಮಾಡುವ ತುಂಬಾ ಬದ್ಧತೆಯ ಹುಡುಗ. ಮೊನ್ನೆ ಮೊನ್ನೆ ತಿಪಟೂರಿನಲ್ಲಿ ಟೆಂಟ್ ಹಾಕಿಕೊಂಡಿದ್ದ  ಅಲೆಮಾರಿಗಳನ್ನು ತಾಲ್ಲೂಕು ಆಡಳಿತ ಒಕ್ಕಲೆಬ್ಬಿಸಿತ್ತು. ಇದೇ ವಿಷಯಕ್ಕಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬಂದಿದ್ದ ಸಂತೋಷ್, ಪೋಲೀಸರ ಜೊತೆ ಇದೇ ವಿಷಯ ಮಾತನಾಡುತ್ತಿದ್ದರು. “ಏನಿಲ್ಲ ಸಂತೋಷ್ ಹಸುವಿನ ಬಗ್ಗೆ ಕೆಲವು ಸಿನಿಮಾ ಮಾಡ್ತಾ ಇದಿನಿ, ಅದಕ್ಕಾಗಿ ಶೂಟಿಂಗ್ ಮಾಡೋಕೆ ಹೋಗ್ತಾ ಇದೀವಿ” ಎಂದೆನು. “ವ್ಹಾ. ಏನ್ ಸರ್ ನೀವು. ಹಸಿವಿನ ಬಗ್ಗೆ ಯಾವ ತರ ಸಿನಿಮಾ ಮಾಡ್ತಾ ಇದಿರ?” ಅವನ ಕಣ್ಣುಗಳಲ್ಲಿ ಕುತೂಹಲ. “ನೊ. ನೊ. ಸಂತೋಷ್, ಇದು ‘ಹಸಿವಿನ’ ಬಗ್ಗೆ ಅಲ್ಲ ‘ಹಸುವಿನ’ ಬಗ್ಗೆ, ನೀನು ಜನರ ‘ಹಸಿವಿನ’ ಬಗ್ಗೆನೆ ಜಾಸ್ತಿ ಯೋಚನೆ ಮಾಡೋದರಿಂದ ಹಾಗೆ ಕೇಳಿಸಿದೆ ತಪ್ಪಿಲ್ಲ ಬಿಡು” ಎಂದೆನು. ಅಷ್ಟು ಹೊತ್ತಿಗೆ ಅಲ್ಲೆ ನಿಂತಿದ್ದ ಪೋಲೀಸರನ್ನು ಪರಿಚಯಿಸಿದ. ಸರ್ ಇವರು ಬಾರ್ಡರ್ ಕೇಸ್  ಬಸವಣ್ಣ ಅಂತ ನೊಣವಿನಕೆರೆ ಪೋಲೀಸ್ ಸ್ಟೇಶನ್ನಿನ ಪೋಲೀಸ್ ಅಧಿಕಾರಿ. ಇವರು ನಮ್ಮ ಎಲ್ಲಾ ಹೋರಾಟಗಳಿಗೂ ತುಂಬಾ ಸಪೋರ್ಟ್ ಮಾಡ್ತಾರೆ. ಇವರು ಬೇರೆ ಪೋಲೀಸ್ ಆಫೀಸರ್ ತರ ಅಲ್ಲ, ಹಾಗೇ ಹೀಗೆ ಎಂದೆಲ್ಲಾ ಅವರನ್ನು ಪರಿಚಯಿಸಿದರು. ಸಂತೋಷ್ ನನ್ನನ್ನೂ ಇದೇ ತರ ಪರಿಚಯಿಸಿದರು. ಅಷ್ಟು ಹೊತ್ತಿಗೆ ಕಾರಿನಲ್ಲಿ ಕುಳಿತಿದ್ದ ರಾಜು, ಸುನೀಲ್, ಡಾಕ್ಟರ್ ಸುಪ್ರಿಯಾ ನಮ್ಮ ಜೊತೆ ಸೇರಿಕೊಂಡರು. ಈ ಬಾರ್ಡರ್ ನಲ್ಲಿ ನಡೆಯೊ ಅನೇಕ ವಿಚಾರವನ್ನು ಸಂತೋಷ್ ನಮ್ಮೊಂದಿಗೆ ಹೇಳಲು ತೊಡಗಿದರು.

ಈ ಬಾರ್ಡರ್ ಕೇಸ್ ಬಸವಣ್ಣ ಅಂತಾನೆ ಕರಿಯೊ ಬಸವಣ್ಣ ಪೋಲೀಸರದ್ದು ಈ ಬಾರ್ಡರ್ ಊರೇ ಆಗಿದ್ದರಿಂದ ಎಲ್ಲಾ ಬಾರ್ಡರ್ ಕೇಸ್ ಗಳನ್ನು ಇವರಿಗೆ ವಹಿಸುತ್ತಾರೆ. ಈ ಬಾರ್ಡರ್ ನಲ್ಲಿ ನಡೆಯೊ ಕೇಸುಗಳು ತುಂಬಾ ವಿಚಿತ್ರವಾದವು. ಅವುಗಳನ್ನು ಹ್ಯಾಂಡಲ್ ಮಾಡುವಲ್ಲಿ ಅನುಭವ ಇದ್ದದರಿಂದ ತಜ್ಞತೆಯನ್ನು  ಹೊಂದಿದ್ದರು. ಒಮ್ಮೆ ಈ ಬಾರ್ಡರ್ ನಲ್ಲಿ ಇದ್ದ ಒಂದು ಬಾರಿನಿಂದ ಬರುತ್ತಿದ್ದ ಮಾಮೂಲು ವಸೂಲಿಗಾಗಿ ಎರಡೂ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಗಳ ನಡುವೆ ಜಗಳ ನಡೆದು, ಇದೇ ಬಾರ್ಡರ್ ಕೇಸ್ ಬಸವಣ್ಣನ ಮಧ್ಯಸ್ಥಿಕೆಯಲ್ಲಿ ಇಬ್ಬರಿಗೂ ಅರ್ಧರ್ಧ ಮಾಮೂಲು ಕೊಡುವಂತೆ ತೀರ್ಮಾನ ಆಗಿತ್ತು. ಆದರೂ ಈ ಬಾರ್ಡರ್ ಕೇಸ್ ಗಳ ವಿಷಯದಲ್ಲಿ ಇಬ್ಬರೂ ಸಬ್ ಇನ್ಸ್ ಪೆಕ್ಟರ್ ಗಳ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಅಂತದ್ದೆ ಒಂದು ವಿಚಿತ್ರ ಕೇಸ್ ತನಿಖೆಗಾಗಿ ಬಾರ್ಡರ್ ಕೇಸ್ ಬಸವಣ್ಣ ಬಂದಿದ್ದರು.   ಈ ಬೋರ್ಡಿನಿಂದ ಪಕ್ಕದಲ್ಲಿ ಹೋಗುವ ಮಣ್ಣಿನ ರಸ್ತೆಯಲ್ಲಿ ನೇರವಾಗಿ ಒಂದು ಫರ್ಲಾಂಗು ಹೋದರೆ ಮೋಡಿ ಮಾದೇಗೌಡನ ತೋಟ ಮತ್ತು ಮನೆ ಇದೆ. ಈ ತನಿಖೆ ನಡೆಸುತ್ತಿರೊ ಕೇಸ್ ಇವರದ್ದೇ ಮನೆಯದು.

 

ಮೋಡಿ ಮಾದೇಗೌಡನ ಚಿಕ್ಕಂದಿನಿಂದ ಮೋಡಿ ಅಂದರೆ ಬ್ಲಾಕ್ ಮ್ಯಾಜಿಕ್ ಕಲಿಯುವಲ್ಲಿ ತುಂಬಾ ಆಸಕ್ತಿ ಹೊಂದಿದ್ದ. ಇದಕ್ಕಾಗಿ ಕೊಳ್ಳೇಗಾಲ, ಕೇರಳ ಸುತ್ತಿ ಅಲೆದು ಕಲಿತು ಬಂದಿದ್ದ. ಮನೆ ಎದುರಿಗೆ ಚೌಡಿ ಸ್ಥಾಪನೆ ಮಾಡಿಕೊಂಡು ಪೂಜೆ ಮಾಡಿಕೊಂಡಿದ್ದ. ಈ ಮೋಡಿಯನ್ನು ಅವನೆಂದೂ ಜನರ ಎದುರು ಸಾರ್ವಜನಿಕ ಪ್ರದರ್ಶನ ಮಾಡಲಿಲ್ಲ. ಬದಲಾಗಿ ತನ್ನ ಆಪ್ತರ ಎದುರು ಒಮ್ಮೆಮ್ಮೆ, ಹುರುಳಿಕಾಳು ಎಸೆದು ಚೇಳು ಬರೋರೀತಿ ಮಾಡುತ್ತಿದ್ದ. ಆದರೆ ವ್ಯಾಧಿ ನಿವಾರಣೆಗೆ ಹೆಸರುವಾಸಿಯಾಗಿದ್ದ. ಜನ ತಮ್ಮ ಏನೇನೋ ಸಮಸ್ಯೆಗೆ ಈ ಚೌಡಿ ಪೂಜೆಗೆ ಬರುತ್ತಿದ್ದರು. ಈ ಸಮಯದಲ್ಲಿ ತಮ್ಮ ಕಷ್ಟ ಸುಖ ಹೇಳಿಕೊಳ್ತಾ ಇದ್ದರು. ಇವನು ಮೋಡಿ ಕಲಿತ ಮೇಲೆ ಊರಿನ ಜನರ ಕೇಂದ್ರ ಇವನೇ ಆಗಿದ್ದರಿಂದ ಊರಿನ ನಾಯಕನಾಗಿದ್ದ ಚಿಕ್ಕೇಗೌಡನ ಹತ್ತಿರ ಬರುತ್ತಿದ್ದ. ಜಗಳ ಗುದ್ದಾಟದ ತೀರ್ಮಾನದ ಕೇಸುಗಳೆಲ್ಲಾ ಕಡಿಮೆಯಾಗಿ, ಅದೇ ಕೇಸುಗಳು ಚೌಡಿ ಮುಂದೆ ಕಾಂಪ್ರಮೈಸ್ ಆಗ್ತಾ ಇದ್ದು. ಅದಕ್ಕಾಗಿ ಚಿಕ್ಕೇಗೌಡ ಈ ಮೋಡಿ ಮಾದೇಗೌಡನ ಮೇಲೆ ಹಲ್ಲು ಮಸಿತಾ ಇದ್ದ.

ಮೋಡಿ ಮಾದೇಗೌಡನಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ಬಿಂಧು ಮತ್ತೊಬ್ಬಳು ಸಿಂಧು. ಸಿಂಧು ಓದು ಮುಗಿಸಿ ಅಪ್ಪನಿಗೆ ಸಹಾಯ ಮಾಡಲು ಬೆಂಗಳೂರಲ್ಲಿ ಗಾರ್ಮೆಂಟ್ ನಲ್ಲಿ ಕೆಲಸ ಮಾಡ್ತಾ ಇದ್ದಳು. ಗಾರ್ಮೆಂಟ್ ನಲ್ಲಿದ್ದುಕೊಂಡೆ ಗಾರ್ಮೆಂಟ್ ಹೆಣ್ಣುಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡೊ ಹೋರಾಟ ಮಾಡ್ತಾ ಇದ್ದಳು. ಅಪ್ಪನು ಈ ಚೌಡಿ ಪೂಜೆ ಹಿಡಿದ ಮೇಲೆ ಮನೆಯ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತು. ಸಿಂಧು ಊರಿಗೆ ಬಂದು, ಅಲ್ಲೇ ಹತ್ತಿರ ಸಾವಯವ ಹಾಲು ಉತ್ಪಾದನೆ ಮಾಡುವ ಅಕ್ಷಯಕಲ್ಪ ಸಂಸ್ಥೆಗೆ ಕೆಲಸಕ್ಕೆ ಸೇರಿದಳು. ಅಕ್ಷಯಕಲ್ಪ ಸಂಸ್ಥೆಗೆ ಸೇರಿದ ಮೇಲೆ ತನ್ನ ಕಾರ್ಮಿಕ ಹೋರಾಟವನ್ನು ಬೇರೆ ತರ ತಿರುಗಿಸಿದಳು. ಅಕ್ಷಯಕಲ್ಪ ಬೆಳಿಗ್ಗೆ ಮಧ್ಯಾಹ್ನ ಕಾರ್ಮಿಕರಿಗೆ ಕೊಡ್ತಾ ಇದ್ದ ಗುಣಮಟ್ಟದ ಆಹಾರ ಅವಳಿಗೆ ಬಹಳ ಇಷ್ಟ ಆಯ್ತು. ಅಲ್ಲಿ ಬೆಳಿಗ್ಗೆ ರಾಗಿ ಅಂಬಲಿ ಜೊತೆ ಮಜ್ಜಿಗೆ ಕೊಡ್ತಾ ಇದ್ದರು. ನಂತರ ಉಪಹಾರಕ್ಕೆ ವಿಧವಿಧವಾದ ಸಾವಯವ ತರಕಾರಿ ಪಲ್ಯ, ಇಡ್ಲಿ, ದೋಸೆ, ಪಾಲೀಶ್ ಮಾಡದ ಸಾವಯವ ಅಕ್ಕಿಯ ಫಲಾವ್, ರಾಗಿ ರೊಟ್ಟಿ ಕೊಡ್ತಾ ಇದ್ದರು. ಮಧ್ಯಾಹ್ನದ ಊಟ ನೋಡಿದರಂತೂ ಅಕ್ಷಯಕಲ್ಪಕ್ಕೆ ಕೆಲಸಕ್ಕೆ ಸೇರಬೇಕೆನಿಸ್ತಾ ಇತ್ತು. ರಾಗಿ ಮುದ್ದೆ, ತರಾವರಿ ಸಾವಯವ ತರಕಾರಿ ಪಲ್ಯ, ಸಾಂಬಾರ್, ರಸಮ್, ಪಾಲೀಶ್ ಮಾಡದ ಸಾವಯವ ರಾಜಮುಡಿ ಕೆಂಪಕ್ಕಿ ಅನ್ನ, ಗಟ್ಟಿ ಮೊಸರು, ಮಸಾಲ ಮಜ್ಜಿಗೆ, ಹೆಸರುಕಾಳು ಕೋಸಂಬರಿ, ಬಾಳೆಹಣ್ಣಿನ ರಸಾಯನ ಇಷ್ಟೂ ಇರುತ್ತಿತ್ತು. ಇದೆಲ್ಲಾದಕ್ಕೂ ಕಾರ್ಮಿಕರಿಗೆ ಬರೀ ಹತ್ತು ರೂಪಾಯಿ ಚಾರ್ಜ್ ಮಾಡ್ತಾ ಇದ್ದರು. ಗಾರ್ಮೆಂಟ್ ನಲ್ಲಿ ಒಣಗಿದ ಕಡ್ಡಿಯಂತಿದ್ದ ಸಿಂಧು ಅಕ್ಷಯಕಲ್ಪ ಸೇರಿದ ಮೇಲೆ ಇಂತಹ ಗುಣಮಟ್ಟದ ಆಹಾರ ತಿಂದೇ ದುಂಡಗೂ ಆದಳು. ಅಷ್ಟೇ ಅಲ್ಲ, ಅವಳಿಗೆ ಮಗುವೂ ಆಯಿತು. ಆದ್ದರಿಂದ ಇಡೀ ರಾಜ್ಯದಲ್ಲಿ ಅಕ್ಷಯಕಲ್ಪ ಮಾದರಿಯಲ್ಲೇ ಕಾರ್ಮಿಕರಿಗೆ ಗುಣಮಟ್ಟದ ಆಹಾರ ಕೊಡಬೇಕೆಂದು ‘ಗುಣಮಟ್ಟದ ಆಹಾರ ಕಾರ್ಮಿಕರ ಹಕ್ಕು’ ಅನ್ನುವ ಹೋರಾಟ ಶುರು ಮಾಡಿದ್ದಳು.

ಇದೆಲ್ಲಾ ಹೇಳ್ತಾ ಸಂತೋಷ್ ಮತ್ತು ಬಸವಣ್ಣ ಮಾದೇಗೌಡನ ಮನೆಯ ಹತ್ತಿರ ನಮ್ಮನ್ನು ಕರೆದುಕೊಂಡು ಹೋದರು. ನಮಗೂ ಕುತೂಹಲ ಹೆಚ್ಚಾದ್ದರಿಂದ ನಾವೂ ಅವರನ್ನು ಹಿಂಬಾಲಿಸಿ ಮಾದೇಗೌಡನ ಮನೆಯ ಹತ್ತಿರ ಬಂದೆವು. ಮೋಡೀ ಮಾದೇಗೌಡರು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ ಎಳನೀರು ಕೊಟ್ಟರು. ಬಸವಣ್ಣ, “ಮಾದೇಗೌಡರೆ, ಈಗ ಕೇಸ್ ಏನ್ ಮಾಡೋದು?” ಎಂದರು ಬಸವಣ್ಣ. “ಏನಾದರೂ ಮಾಡಿ ಸ್ವಾಮಿ, ಚೌಡಿ ಯಾವತ್ತೂ ನನ್ನ ಕೈಬಿಟ್ಟಿಲ್ಲ. ಅನ್ನ ತಿನ್ನ ಕೈಯಲ್ಲಿ, ಹೇಲ್ ತಿನ್ನೊ ಕೆಲಸ ನಾನು ಯಾವತ್ತೂ ಮಾಡಿಲ್ಲ” ಎಂದರು ಮಾದೇಗೌಡರು. ನಮಗೇನೂ ಅರ್ಥವಾದಂತೆ ಕಾಣಲಿಲ್ಲ ಇದನ್ನು ಅರ್ಥಮಾಡಿಕೊಂಡು ಈ ಮಾತುಕತೆಯಲ್ಲಿ ನಾವಿರುವುದು ಸರಿಯಲ್ಲವೆಂದು, ಸಂತೋಷ್ ಕಣ್ಣುಮಿಟುಗಿಸಿ ಅವನ ಹಿಂದೆ ಬರಲು ತಿಳಿಸಿದ. ನಾನು, ರಾಜು, ಡಾಕ್ಟರ್, ಸುನೀಲ್ ಸಂತೋಷ್ ಹಿಂದೆ ಮಾದೇಗೌಡರ ತೋಟದೊಳಕ್ಕೆ ಹೋದೆವು.

ಅಲ್ಲಿ ನಡೆದ ಈ ವಿಚಿತ್ರ ಕೇಸ್ ನ ಮಾಹಿತಿ ನೀಡಿದ. ಮಾದೇಗೌಡರ ಮಕ್ಕಳಾದ ಸಿಂಧು ಮತ್ತು ಮತ್ತು ಬಿಂಧು ಇಬ್ಬರನ್ನು ಚಿಕ್ಕೇಗೌಡನ ಇಬ್ಬರು ಮಕ್ಕಳಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಸಿಂಧು ತನ್ನ ಗಂಡನ ಜೊತೆ ತವರುಮನೆಯಲ್ಲೇ ಉಳಿಯಬೇಕೆಂದು, ಬಿಂದು ಗಂಡನ ಮನೆಯಲ್ಲಿ ಇರಬೇಕೆಂದು ಮದುವೆಗೂ ಮೊದಲೆ ತೀರ್ಮಾನವಾಗಿತ್ತು. ಈ ತೀರ್ಮಾನ ಹಿರಿಯರೇ ಮಾಡಿದ್ದರೂ ಬಿಂದುವಿಗೆ ಸಿಂಧು ಮೇಲೆ ಅಸಮಾಧಾನ ಶುರುವಾಯ್ತು. ಈ ಅಸಮಾಧಾನಕ್ಕೆ ಚಿಕ್ಕೇಗೌಡನ ಹಳೆ ದ್ವೇಷ ಜೊತೆ ಸೇರಿಕೊಂಡು ಸಂಬಂಧವೇ ಹರಿದು ಹೋಗಿತ್ತು. ಬಿಂಧುಗೆ ಮಕ್ಕಳಿರಲಿಲ್ಲ, ಸಿಂಧುಗೆ ಮಗು ಹುಟ್ಟಿದ ಮೇಲೆ ಈ ಸಂಬಂಧ ಇನ್ನೂ ಹದಗೆಡುತ್ತಾ ಹೋಯ್ತು.

ಈಗ ಬಿಂಧು ಏಳು ತಿಂಗಳ ಗರ್ಭಿಣಿ, ಅವಳಿಗೆ ಮನೆಯಲ್ಲಿ ಅಪ್ಪ ಅಮ್ಮನ ನೋಡುವ ಆಸೆಯಾಯ್ತು. ಅದಕ್ಕಿಂತ ಹೆಚ್ಚಿನದಾಗಿ ಅವಳ ತವರು ಮನೆಯಲ್ಲಿ ಇರುವ ಹಸುವಿನ ಹಾಲನ್ನು ಕುಡಿಯುವ ಬಯಕೆಯಾಯ್ತು. ಅವಳು ಬಾಲ್ಯದಲ್ಲಿ ಈ ಹಸುವಿನ ಹಸಿ ಹಾಲನ್ನು ಕಾಯಿಸದೆ ಕುಡಿಯುತ್ತಿದ್ದಳು. ಆ ಹಸಿ ಹಾಲಲ್ಲಿ ಬರುತ್ತಿದ್ದ ಘಮ್ಮೆನ್ನುವ ಸುವಾಸನೆ ಅವಳಿಗೆ ನೆನಪಾಯಿತು. ಈ ಬಯಕೆಯನ್ನು ಈಡೇರಿಸುವುದಕ್ಕಾಗಿ, ಪುನಃ ಎರಡೂ ಕುಟುಂಬ ಬೆಸೆಯಬೇಕೆಂದು ಅನೇಕರು ಹೇಳಿದರು. ಅದಕ್ಕಾಗಿ ಬಿಂಧುವನ್ನು  ನೆನ್ನೆ ತವರುಮನೆಗೆ ಕರೆದುಕೊಂಡು ಬಂದು, ಚೌಡಿಯ ಎದುರು ಕೂರಿಸಿ ಹೊಸ ಸೀರಿ ಉಡಿಸಿ, ಮಡ್ಲಕ್ಕಿ ಹಾಕಿ ಹಸುವಿನ ಹಸಿ ಹಾಲನ್ನು ಕೊಟ್ಟರು. ಈ ಹಾಲನ್ನು ಕುಡಿದ ಒಂದೆರಡು ಗಂಟೆಯಲ್ಲಿ ಬಿಂದುವಿಗೆ ಒಂದೆರಡು ಹನಿ ಬ್ಲೀಡಿಂಗ್ ಶುರುವಾಗಿದೆ. ಭಯದಿಂದ ಬಿಂದುವನ್ನು ಹಾಸನದ ಖಾಸಗಿ ಆಸ್ಪತ್ರಗೆ ಸೇರಿಸಲಾಗಿದೆ.

ಇದೇ ಸಮಯವನ್ನು ಕಾಯುತ್ತಿದ್ದ ಚಿಕ್ಕೇಗೌಡ ಮಾದೇಗೌಡನ ಜನಪ್ರಿಯತೆ ಹಾಳು ಮಾಡಲಿಕ್ಕಾಗಿ, ತನ್ನ ಮಗಳಿಗೆ ಮಾಟ ಮಾಡಿದ್ದಾನೆ. ಹಾಲಿನಲ್ಲಿ ಏನೋ ಬೆರೆಸಿದ್ದಾನೆಂದು ಅಪಪ್ರಚಾರ ಮಾಡಿದ್ದಾನೆ. ಅದಕ್ಕಾಗಿ ಕಂಪ್ಲೇಟ್ ಕೊಡಲು ನೊಣವಿನಕೆರೆಗೆ ಹೋಗಿದ್ದಾನೆ. ಅವರು ಈ ಕೇಸು ನಮಗೆ ಬರೊಲ್ಲ ಎಂದಿದ್ದಾರೆ. ನಂತರ ನುಗ್ಗೇಹಳ್ಳಿಗೆ ಹೋಗಿದ್ದಾನೆ. ಈತರ ಎರಡೂ ದಿನದಿಂದ ಎರಡೂ ಪೋಲೀಸ್ ಸ್ಟೇಷನ್ ಅಲೆಯುತ್ತಾ ರಾಜಕೀಯದವರಿಂದ ಪೋನ್ ಮಾಡಿಸಿ ಕೇಸ್ ಮಾಡಿಕೊಳ್ಳಲು ಒತ್ತಡ ತರ್ತಾ ಇದ್ದಾನೆ. ಈ ಪೋಲೀಸರು ಪಜೀತಿ ಬಿದ್ದು ಕೊನೆಗೆ ಈ ಕೇಸನ್ನು ಹೇಗಾದರೂ ಮಾಡಿ ಸಾಲ್ವ್ ಮಾಡಿ ಎಂದು ಬಾರ್ಡರ್ ಕೇಸ್ ಬಸವಣ್ಣನನ್ನು ಹಾಕಿದ್ದಾರೆ. ಈ ಬಸವಣ್ಣ ಅದಕ್ಕಾಗಿ ಮಾದೇಗೌಡರ ಹತ್ತಿರ ಮಾತಾಡೋಕೆ ಬಂದಿದ್ದಾನೆ.

ಪೋಲೀಸರ ಪಜೀತಿಗೆ ಕಾರಣ ಇಷ್ಟೆ. ಈ ಬಾರ್ಡರ್ ವಿಚಾರದಲ್ಲಿ ಕೇಸುಗಳನ್ನು ಯಾವ ಠಾಣೆಯಲ್ಲಿ ದಾಖಲಿಸಿಕೊಳ್ಳಬೇಕು ಎಂಬ ವಿಷಯದಲ್ಲಿ ಒಂದು ಸ್ಪಷ್ಟತೆ ಇದೆ. ಆರೋಪಿ ಮತ್ತು ದೂರುದಾರ ಯಾವುದೇ ಪೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿರಲಿ, ದೂರು ನೀಡುತ್ತಿರುವುದಕ್ಕೆ ಕಾರಣವಾದ ಘಟನೆ ನಡೆದ ಸ್ಥಳವು ಯಾವ ಸ್ಟೇಷನ್ ವ್ಯಾಪ್ತಿಗೆ ಬರುತ್ತದೆಯೋ ಅದೇ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಬೇಕು. ಆದರೆ ಇಲ್ಲಿ ಪ್ರಕರಣ ತುಂಬಾ ವಿಚಿತ್ರವಾಗಿದೆ. ಈ ಮಾದೇಗೌಡನ ಜಮೀನು ಈ ಎರಡೂ ಬಾರ್ಡರ್ ಗೂ ಸೇರುವ ಎರಡು ಪ್ರತ್ಯೇಕ  ಸರ್ವೆ ನಂಬರ್ ಆಗಿದ್ದರು ಒಟ್ಟಿಗಿದೆ. ಹೀಗೆ ಒಟ್ಟಿಗಿರುವ ಸರ್ವೆನಂಬರುಗಳಲ್ಲಿ ಕಟ್ಟಿರುವ ಮನೆ ಸರಿಯಾಗಿ ಎರಡೂ ಬಾರ್ಡರಿಗೂ ಮಧ್ಯ ಇದೆ. ಇದೇ ಮನೆಯಲ್ಲೇ ಮಗಳಿಗೆ ಮಡಿಲು ತುಂಬಿ ಹಾಲು ನೀಡಿದ್ದು. ಆದ್ದರಿಂದ ಈ ಕೇಸನ್ನು ದಾಖಲಿಸಲು ಸಾಧ್ಯವಾಗದೆ ಕಾಂಪ್ರಮೈಸ್ ಮಾಡಿಸಲು ಬಸವಣ್ಣನಿಗೆ ದೊಡ್ಡ ಜವಾಬ್ದಾರಿ ಬಿದ್ದಿತ್ತು.

ಪೋಲಿಸರ ಪಜೀತಿಗೆ ಇನ್ನೊಂದು ಕಾರಣ ಏನೆಂದರೆ, ಈ ಚಿಕ್ಕೇಗೌಡ ಮಾದೇಗೌಡನ ಜನಪ್ರಿಯತೆ ಹಾಳು ಮಾಡಲು ‘ಮಗಳಿಗೆ ಮಾಟ ಮಾಡಿಸಿದ್ದಾನೆ’ ಎಂದೇ ದೂರು ನೀಡಿದ್ದನು. ಹಾಲಿನಲ್ಲಿ ವಿಷ ಹಾಕಿದ್ದ ಎಂದು ದೂರು ನೀಡಿದ್ದರೆ ದೂರು ದಾಖಲಾಗುತ್ತಿತ್ತು. ಆದರೆ ‘ಮಾಟ ಮಾಡಿಸಿದ್ದಾನೆ’ ಎಂದು ದೂರು ನೀಡಿರುವುದರಿಂದ, ಯಾವ ಯಾವ ಸೆಕ್ಷನ್ ಅಡಿ ಕೇಸ್ ದಾಖಲಿಸಬೇಕೆಂದು ಪೋಲೀಸರಲ್ಲಿ ಗೊಂದಲವಿತ್ತು.

ಸಂತೋಷ್ ಇಷ್ಟೆಲ್ಲಾ ನಮಗೆ ತಿಳಿಸುವ ಹೊತ್ತಿಗೆ, ಬಸವಣ್ಣ ಮತ್ತು ಮಾದೇಗೌಡರ ಸಂಭಾಷಣೆ ಮುಗಿದಿರುವಂತೆ ಅನ್ನಿಸಿತು. ನಾವು ಅವರು ಇರುವ ಕಡೆ ಬಂದೆವು. ಮಾದೇಗೌಡ ನಮ್ಮನ್ನು ನೋಡಿ ಬಸವಣ್ಣನಿಗೆ ಹೇಳುವಂತೆ, “ನಾನು ಮೋಡಿ ಮಾಡುತ್ತೇನೆ ನಿಜ. ಆದರೆ ಈ ತಾಯಿ ಚೌಡಿಯನ್ನ, ಒಬ್ಬರಿಗೆ ಹಾನಿ ಮಾಡಲಿಕ್ಕಾಗಿ ನಾನು ಯಾವತ್ತೂ ಬಳಸಿಕೊಂಡಿಲ್ಲ. ಜನರಲ್ಲಿರೊ ಭಯವನ್ನು ಹೋಗಲಾಡಿಸಲಷ್ಟೆ  ಚೌಡಿಯನ್ನು ಆರಾಧಿಸುತ್ತೇನೆ. ಭಯ ಬಿತ್ತಲಿಕ್ಕಾಗಿ ಅಲ್ಲ. ಭಯವನ್ನೇ ತನ್ನ ನಾಯಕತ್ವದ ಬಂಡವಾಳ ಮಾಡಿಕೊಂಡ ಚಿಕ್ಕೇಗೌಡನಿಗೆ ಈ ಊರಿನ ಭಯ ಹೋಗಲಾಡಿಸೊ ಚೌಡಿಯ ಪೂಜೆ ಬಗ್ಗೆ ಅನುಮಾನ ಹುಟ್ಟಾಕೊಕೆ ಮಾಡ್ತಿದ್ದಾನೆ. ನನ್ನ ಮಗಳು ಚೆನ್ನಾಗಿರಲಿ ಅಂತಾನೆ ಇವತ್ತು ಪೂಜೆ ಮಾಡಿದೆ. ಅವಳಿಗೆ ಏನೂ ಆಗಲ್ಲ”. ಅವನ ಧ್ವನಿಯಲ್ಲಿ ನಂಬಿಕೆಯೂ, ಕಣ್ಣುಗಳಲ್ಲಿ ಆತ್ಮವಿಶ್ವಾಸವೂ ತುಂಬಿತ್ತು.

ಬಸವಣ್ಣ ಪೋಲೀಸರಾಗಿದ್ದರೂ, ಕಾನೂನು, ಸೆಕ್ಷನ್ ಗಳಿಂದ ಸಂಬಂಧವನ್ನು ಕಟ್ಟೊಕೆ ಸಾಧ್ಯವಿಲ್ಲ ಅಂತ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ಕೇಸು ರಿಜಿಸ್ಟರ್ ಆಗೋಕೆ ಮೊದಲು ಅದನ್ನು ಸಾಲ್ವ್ ಮಾಡೋಕೆ ಪ್ರಯತ್ನ ಪಡ್ತಾ ಇದ್ದರು. ಅದಕ್ಕಾಗಿ ಆಸ್ಪತ್ರಯಲ್ಲಿರೊ ಬಿಂದುನ ಮಾತನಾಡಿಸೋಕೆ ಹೊರಟರು. ನಾವು ಹಸುಗಳ ಸಾಕಾಣಿಕೆ ಬಗ್ಗೆ ಮಾಡ್ತಾ ಇದ್ದ ವಿಡಿಯೊ ಚಿತ್ರೀಕರಣಕ್ಕಾಗಿ ನುಗ್ಗೆಹಳ್ಳಿಯಲ್ಲಿರೊ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಂದ ಒಂದು ಅಭಿಪ್ರಾಯ ಚಿತ್ರೀಕರಣ ಮಾಡಿಕೊಂಡು ಚನ್ನರಾಯಪಟ್ಟಣದ ಮಾರ್ಗವಾಗಿ ಹೋಗಿ ಶ್ರವಣಬೆಳಗೊಳದ ಹತ್ತಿರ ಸಚಿನ್ ಫಾರ್ಮ್ ನಲ್ಲಿ ಹಸುಗಳ ಸಾಕಾಣಿಕೆಯನ್ನು ಚಿತ್ರೀಕರಣ ಮಾಡಬೇಕಿತ್ತು. ಈ ಮಾತನ್ನು ಕೇಳಿಸಿಕೊಂಡ ಬಸವಣ್ಣ, “ನುಗ್ಗೆಹಳ್ಳಿಯಲ್ಲಿ ಡಾಕ್ಟರ್ ಮಾತನಾಡಿಸೋಕೆ ಎಷ್ಟು ಹೊತ್ತು ಆಗುತ್ತೆ?” ಎಂದರು. “ಡಾಕ್ಟರ್ ಪೇಶಂಟ್‍ ನೋಡ್ತಾ ಬ್ಯುಸಿ ಇರ್ತಾರೆ, ಅಲ್ಲಿ ನಾವು ಹತ್ತದಿನೈದು ನಿಮಿಷ ಇರ್ತೇವೆ.  ನಾವು ಈಗಾಗಲೆ ಸ್ಕ್ರಿಪ್ಟ್ ಕಳಿಸಿದ್ದೇವೆ, ಅದನ್ನು ನೋಡಿ ಡಾಕ್ಟರ್ ಮಾತಾಡ್ತಾರೆ” ಎಂದೆನು. “ಹಾಗಾದರೆ ನಾನೂ ನಿಮ್ ಜೊತೆ ಚನ್ನರಾಯಪಟ್ಟಣದವರೆಗೂ ಬರಬಹುದೆ? ಎಂದರು ಬಸವಣ್ಣ. ನಾನು ಆಗಬಹುದು ಎಂದೆನು.

ನಾನು ರಾಜು, ಸುನೀಲ್, ಸುಪ್ರಿಯಾ, ಬಸವಣ್ಣ ಎಲ್ಲರೂ ಸಂತೋಷನಿಗೆ ಧನ್ಯವಾದ ಹೇಳಿ ಕಾರಿನಲ್ಲಿ ಹೊರಟೆವು. ನುಗ್ಗೆಹಳ್ಳಿ ಸುಮಾರು ದೂರ ಇದ್ದರಿಂದ, ಮತ್ತೆ ಮಾತಿಗೆ ನಿಂತೆವು. ಬಸವಣ್ಣ “ನೀವು ಏನು ವಿಡಿಯೋ ಮಾಡ್ತಿದೀರ ಗೊತ್ತಾಗಲಿಲ್ಲ” ಎಂದರು. “ನಾವು, ಅಕ್ಷಯಕಲ್ಪ ಸಾವಯವ ಹಾಲನ್ನು ಯಾವ ರೀತಿ ಉತ್ಪಾದಿಸ್ತಾ ಇದೆ, ಆ ಹಾಲು ಗ್ರಾಹಕರ ದೃಷ್ಟಿಯಿಂದ ಹೇಗೆ ಮುಖ್ಯ ಅಂತ ಇಪ್ಪತ್ತು ಚಿಕ್ಕ ಚಿಕ್ಕ ವಿಡಿಯೊ ಮಾಡ್ತಾ ಇದ್ದೀವಿ” ಎಂದೆನು. ಹೀಗೆ ಅದು ಇದು ಮಾತಾಡುವ ಹೊತ್ತಿಗೆ ನುಗ್ಗೆಹಳ್ಳಿಯ ಖಾಸಗಿ ಆಸ್ಪತ್ರೆ ತಲುಪಿದೆವು. ಅಲ್ಲಿ ಪೇಶೆಂಟ್‍ ಗಳು ಅನೇಕ ಜನ ಇದ್ದರೂ, ನಾವು ಮೊದಲೆ ತಿಳಿಸಿದ್ದರಿಂದ ಡಾಕ್ಟರ್ ನಾವು ಚಿತ್ರೀಕರಣ ಮಾಡಿಕೊಳ್ಳಲು ಆದ್ಯತೆ ಮೇರೆಗೆ ಅವಕಾಶ ಮಾಡಿಕೊಟ್ಟರು. ಈಗಾಗಲೆ ಕಳಿಸಿದ್ದ ಸ್ಕ್ರಿಪ್ಟ್ ಗೆ ಡಾಕ್ಟರ್ ಪ್ರಿಪೇರ್ ಆಗಿದ್ದರು. ಡಾಕ್ಟರ್ ಚೇಂಬರ್ ನಲ್ಲಿ ಕ್ಯಾಮೆರಾ ಸೆಟ್ ಮಾಡಿ, ಡಾಕ್ಟರ್ ಗೆ ಕಾಲರ್ ಮೈಕ್ ತೊಡಿಸಿದ ರಾಜು “ರೋಲ್” ಎಂದರು.

ಡಾಕ್ಟರ್ “ಒಂದ್ ವೇಳೆ ಈ ಕಾಯಿಲೆ ಬಂದ ಹಸುವಿನ ಹಾಲು ನೀವು ಕುಡಿದರೆ, ನಿಮಗೂ ಈ ಬ್ಯಾಕ್ಟೀರಿಯಾ ಬರುತ್ತೆ. ಈ ಬ್ಯಾಕ್ಟೀರಿಯಾ ನಿಮಗೆ ಬಂದರೆ, ನೀವು ಪುರುಷರಾಗಿದ್ದರೆ ಪುರುಷತ್ವನೆ ಹೋಗಬಹುದು. ಗರ್ಭವತಿ ಮಹಿಳೆಯಾಗಿದ್ದರೆ ಗರ್ಭಪಾತವಾಗಬಹುದು, ಇಳಿವಯಸ್ಸಿನವರಾಗಿದ್ದರೆ, ಮೂಳೆ ಅಥವಾ ಸಂದಿನೋವು ಬರಬಹುದು. ಹಸಿ ಹಾಲನ್ನು ಕುಡಿಯೋದರಿಂದ ಮಾತ್ರ ಈ ಕಾಯಿಲೆ ಬರುತ್ತದೆ. ಹಾಲನ್ನು ಚೆನ್ನಾಗಿ ಕಾಯಿಸಿ ಕುಡಿದಾಗ ಈ ಸಮಸ್ಯೆ ಇರಲ್ಲ.  ಹಸುವಿನೊಂದಿಗೆ ಇರುವ ಪಶುವೈದ್ಯರು ಹಾಗೂ ಹಸು ಸಾಕುವವರಿಗೂ  ಇದು ಮಾರಕ” ಎಂದು ಒಂದೇ ಟೇಕ್ ನಲ್ಲಿ ಹೇಳಿ ಬಿಟ್ಟರು. ನಾನು ಪ್ಯಾಕ್ ಅಪ್ ಹೇಳುವುದನ್ನೇ ಕಾಯುತ್ತಿರುವ ಸುನೀಲ್ ನನ್ನತ್ತ ನೋಡಿದ. ನಾನು “ಪ್ಯಾಕ್ ಅಪ್” ಅಂದ ಕೂಡಲೆ ಕ್ಯಾಮೆರಾ ಜೊಡಿಸಿ ಹೊರಟೆವು. ಹದಿನೈದು ನಿಮಿಷ ಎಂದಿದ್ದ ಕೆಲಸವನ್ನು ಹತ್ತೇ ನಿಮಿಷದಲ್ಲಿ ಮುಗಿಸಿ ಹೊರಟೆವು.

ಡಾಕ್ಟರ್ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಬಸವಣ್ಣನ ತಲೆಯಲ್ಲಿ ಏನೇನೊ ಪ್ರಶ್ನೆಗಳು ಎದ್ದಿವೆ. ಏಕೆಂದರೆ, ಎರಡರಿಂದ ಮೂರು ನಿಮಿಷದ ವಿಡಿಯೊದಲ್ಲಿ, ಡಾಕ್ಟರ್ ಹೇಳಬೇಕಿರುವ ಸ್ಕ್ರಿಪ್ಟ್ ಅನ್ನು ಮಾತ್ರ ಅವರಿಗೆ ನೀಡಿದ್ದೆನು. ಅದರ ಹಿಂದೆ ಮುಂದೆ ಏನೂ ತಿಳಿಯದೆ ಬಸವಣ್ಣ ಕೇಳಿದರು. ಈಗ ರೆಕಾರ್ಡ್ ಮಾಡಿಕೊಂಡ ವಿಡಿಯೋದ ಬಗ್ಗೆ ಸ್ವಲ್ಪ ಹೇಳ್ತೀರಾ ಅಂದರು. ನಾನು ನಮ್ಮ ಪಶುವೈದ್ಯಾಧಿಕಾರಿ ಸುಪ್ರಿಯಾ ಇದಾರೆ. ಅವರೇ ಹೇಳ್ತಾರೆ ಎಂದೆನು. ಸುಪ್ರಿಯಾ ನೋಡಲಿಕ್ಕೆ ಕಾಲೇಜು ಹುಡುಗಿಯಂತೆ ಕಂಡರೂ, ಅದ್ಭುತ ಜ್ಞಾನ ಹೊಂದಿದ್ದರು. ಅಕ್ಷಯಕಲ್ಪ ಸಾವಯವ ಹಾಲು ಉತ್ಪಾದನೆಯಲ್ಲಿ ರೈತರನ್ನು ಪ್ರೀತಿಯಿಂದ ಮಾತನಾಡಿಸಿ ಎಜುಕೇಟ್ ಮಾಡುತ್ತಾ ರೈತರ ಮನಗೆದ್ದಿದ್ದರು. ನುಗ್ಗೆಹಳ್ಳಿಯಿಂದ ಚನ್ನರಾಯಪಟ್ಟಣ ಸೇರುವ ವರೆಗೂ ಮಾತುಕತೆ ಮುಂದುವರೆಯಿತು.

“ಬ್ರುಸ್ಸೆಲ್ಲಾ ಎಂದು ಬ್ಯಾಕ್ಟೀರಿಯಾ ಇದೆ ಸರ್, ಅದು ಕೆಲವು ಹಸುಗಳಲ್ಲಿ ಇರುತ್ತದೆ. ಈ ಬ್ಯಾಕ್ಟೀರಿಯಾ ಬಂದ ಹಸುಗೆ 7-8-9ನೇ ತಿಂಗಳಲ್ಲಿ ಅಬಾರ್ಶನ್ ಆಗಬಹುದು, ಇಲ್ಲ ಕರುಹಾಕಿದಾಗ ಸೆತ್ತೆ ಬೀಳದೆ ಇರಬಹುದು, ಅಥವಾ ಸೆತ್ತೆ ಬೀಳೋದು ನಿಧಾನ ಆಗಬಹುದು, ಅಥವಾ ಹಸುವಿನ ಮುಂಗಾಲು ಅಥವಾ ಹಿಂಗಾಲು ಗೆಣ್ಣುಗಳು ಊತ ಬರಬಹುದು. ಈತರ ಬ್ರುಸೆಲ್ಲಾ ಬ್ಯಾಕ್ಟೀರಿಯಾ ಇರೊ ಹಸುವಿನ ಹಸಿ ಹಾಲನ್ನು ಕುಡಿದರೆ ಆ ಬ್ಯಾಕ್ಟೀರಿಯಾ ಹಾಲನ್ನು ಕುಡಿದವರಿಗೂ ಬರುತ್ತೆ. ಈ ಬ್ಯಾಕ್ಟೀರಿಯಾ ಬಂದರೆ ಏನಾಗುತ್ತದೆ, ಅನ್ನೋದನ್ನೇ ಡಾಕ್ಟರ್ ಹೇಳಿದರು. ಈ ಕಾಯಿಲೆಗೆ ಮದ್ದಿಲ್ಲದೆ ಇರೊದರಿಂದ, ಈ ಬ್ಯಾಕ್ಟೀರಿಯಾ ಇರುವ ಹಸುಗಳನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ದಯಾಮರಣಕ್ಕೆ ಕೊಡಬಹುದು. ಅಕ್ಷಯಕಲ್ಪದಲ್ಲಿ ನಾವು ಗ್ರಾಹಕರ ಹಿತದೃಷ್ಟಿಯಿಂದ ಪ್ರತಿಯೊಂದು ಹಸುವನ್ನು ಬ್ರುಸೆಲ್ಲಾ ರಹಿತ ಹಸು ಅಂತ ಖಾತ್ರಿಪಡಿಸಿಕೊಂಡ ನಂತರವೇ ಹಾಲನ್ನು ರೈತರಿಂದ ಖರೀದಿಸಿ ಗ್ರಾಹಕರಿಗೆ ಒದಗಿಸ್ತೀವಿ. ಬೇರೆ ರೈತರಿಂದ ಹಸುವೊಂದು ಅಕ್ಷಯಕಲ್ಪ ರೈತ ಖರೀದಿಸ್ತಾನೆ ಅಂದರೆ ಅದರ ರಕ್ತದ ಸ್ಯಾಂಪಲ್ ತೆಗೆದು ಲ್ಯಾಬ್ ಗೆ ಕಳಸ್ತೀವಿ. ಲ್ಯಾಬಲ್ಲಿ ಬ್ರುಸೆಲ್ಲಾ ಇಲ್ಲ ಅಂತ ರಿಪೋರ್ಟ್ ಬಂದ ಮೇಲಷ್ಟೆ ಅದು ಅಕ್ಷಯಕಲ್ಪ ರೈತರ ಕೊಟ್ಟಿಗೆಗೆ ಆ ಹಸು ಬರುತ್ತೆ. ಅಕ್ಷಯಕಲ್ಪದ ಪ್ರತಿ ಹಸುವಿಗೂ ಬ್ರುಸೆಲ್ಲಾ ಟೆಸ್ಟ್ ಮಾಡಲಾಗಿದೆ. ಇಡೀ ಭಾರತದಲ್ಲಿಯೇ ಬ್ರುಸೆಲ್ಲಾ ರಹಿತ ಹಾಲು ಉತ್ಪಾದಿಸುತ್ತಿರುವುದು ಅಕ್ಷಯಕಲ್ಪ ಮಾತ್ರ ಎಂಬುದು ಹೆಮ್ಮೆಯಿಂದ ಹೇಳ್ತೀವಿ”. ಎಂದು ವಿವರವಾಗಿ ಸುಪ್ರಿಯಾ ವಿವರಿಸಿದರು.

ಇಷ್ಟರಲ್ಲಿ, ಬಸವಣ್ಣನ “ಈ ಬ್ರುಸೆಲ್ಲಾ ಬಂದಿರೋ ಹಸುವಿನ ಹಾಲು ಕುಡಿದರೆ ಅಬಾರ್ಶನ್ ಆಗುತ್ತದೆಯಾ’?” ಎಂದರು. ಸುಪ್ರಿಯಾ “ಆಗಬಹುದು” ಎಂದರು. “ಹಾಗಾದರೆ, ಬಿಂದು ಬಯಸಿ ಕುಡಿದ ಹಸುವಿನ ಹಸಿ ಹಾಲಲ್ಲಿ ಬ್ರುಸೆಲ್ಲಾ ಬ್ಯಾಕ್ಟೀರಿಯಾ ಇರಬಹುದೇ?, ಡಾಕ್ಟ್ರೆ, ಈ ಬ್ರುಸೆಲ್ಲಾ ‘ಇದೆ’ ಅಥವಾ ‘ಇಲ್ಲ’ ಅಂತ ಹೇಗೆ ಗೊತ್ತಾಗುತ್ತದೆ” ಎಂದರು ಬಸವಣ್ಣ. ಸುಪ್ರಿಯಾ ಉತ್ತರಿಸುತ್ತಾ, “ನಾವು ಆ ಹಸುವಿನ ರಕ್ತದ ಸ್ಯಾಂಪಲ್ ತೆಗೆದು ಲ್ಯಾಬಿಗೆ ಕಳಿಸ್ತೇವೆ. ಆ ಲ್ಯಾಬಲ್ಲಿ, ಹಸುವಿನಲ್ಲಿ ಈ ಬ್ಯಾಕ್ಟಿರಿಯಾ ‘ಇದೆಯಾ’ ಅಥವಾ ‘ಇಲ್ಲವಾ’ ಎಂದು ಖಾತ್ರಿ ಪಡಿಸ್ತಾರೆ”. ಬಸವಣ್ಣ “ಹಾಗಾದರೆ, ಈ ಮಾದೇಗೌಡನ ಹಸುವಿನಲ್ಲಿ ಈ ಬ್ಯಾಕ್ಟೀರಿಯಾ ಇದೆಯಾ ಅಂತ ನಮಗೆ ಚೆಕ್ ಮಾಡಿಕೊಡ್ತೀರಾ?” ಎಂದು ಕೇಳಿಕೊಂಡರು.

ಸುಪ್ರಿಯಾ “ಆಗಬಹುದು” ಎಂದರು. ಬಸವಣ್ಣ ಹಾಸನ ಹೋಗವು ಪ್ಲಾನ್ ಅನ್ನು ಬದಲಾಯಿಸಿ, ನಮ್ಮ ಜೊತೆ ಶ್ರವಣಬೆಳಗೊಳಕ್ಕೆ ಬಂದರು. ಅಲ್ಲಿ ಸಚಿನ್ ಅವರ ಸಾವಯವ ಹಸುಗಳ ಸಾಕಾಣಿಕೆಯ ವಿಡಿಯೊ ಚಿತ್ರೀಕರಣ ಮುಗಿಸಿಕೊಂಡು ವಾಪಸ್ಸು ಬರುವಾಗ ಮಾದೇಗೌಡರ ಹಸುವಿನಿಂದ ರಕ್ತದ ಸ್ಯಾಂಪಲ್ ತೆಗೆದುಕೊಂಡು ಸುಪ್ರಿಯಾ ಲ್ಯಾಬಿಗೆ ಕಳುಹಿಸಿದರು. ರಕ್ತದ ವರದಿ ಬಗ್ಗೆ ಕುತೂಹಲ ಹೊಂದಿದ್ದ ಬಸವಣ್ಣ “ಯಾವಾಗ ವರದಿ ಬರುತ್ತದೆ”? ಎಂದರು. ಇದು ಗವರ್ನಮೆಂಟ್ ಲ್ಯಾಬ್, ಇದು ಪೋಲೀಸ್ ಕೇಸ್ ಇರುವುದರಿಂದ, ನೀವು ಒತ್ತಾಯ ಮಾಡಿದರೆ ನಾಳೇನೆ ವರದಿ ಕೊಡಬಹುದು” ಎಂದರು ಸುಪ್ರಿಯಾ.

ಮರುದಿನ, ನಾವು ಇದೇ ಬಾರ್ಡರ್ ಹತ್ತಿರವೇ ಹಳ್ಳಿಯೊಂದರಲ್ಲಿ ಚಿತ್ರೀಕರಣ ಮಾಡಲು ಸಿದ್ಧವಾಗುತ್ತಿದ್ದರು. ಅಷ್ಟು ಹೊತ್ತಿಗೆ ಸುಪ್ರಿಯಾಗೆ ಪೋಲೀಸ್ ಬಸವಣ್ಣನಿಂದ ಕರೆಯೊಂದು ಬಂತು. ಅವರು ಕುಳಿತು ಮಾತನಾಡಲು ಬಯಸಿದ್ದರು. ಅದರಂತೆ ನಾವು ಇದೇ ಬಾರ್ಡರ್ ಹತ್ತಿರ ಸಂತೋಷ್ ಮನೆಯಲ್ಲಿ ಸೇರಿದೆವು. ಬಸವಣ್ಣನು ವರದಿಯೊಂದನ್ನು ತಂದಿದ್ದನು. ಅದರಲ್ಲಿ ಆ ಹಸುವಿಗೆ ಬ್ರುಸೆಲ್ಲಾ ಇಲ್ಲಾ ಎಂದು ಖಾತ್ರಿಯಾಗಿತ್ತು. ‘ಈಗ ನನಗೆ ಬ್ರುಸೆಲ್ಲಾ ಇರುವ ಹಸುವಿನಿಂದ ರಕ್ತದ ಮಾದರಿ ಸಂಗ್ರಹಿಸಿ ಕೊಡಬೇಕೆಂದು’ ಬಸವಣ್ಣ ಸುಪ್ರಿಯಾರನ್ನು ಕೇಳಿಕೊಂಡರು. ಸುಪ್ರಿಯಾಗೆ ಬಸವಣ್ಣ ಏನು ಹೇಳುತ್ತಿದ್ದಾರೆ, ಏಕೆ ಹೀಗೆ ಹೇಳುತ್ತಿದ್ದಾರೆಂದು ಅರ್ಥವಾಗಲಿಲ್ಲ.

ಬಸವಣ್ಣ ವಿವರಿಸುತ್ತಾ, ನೋಡಿ ಡಾಕ್ಟ್ರೆ, ನಾನು ಈಗಾಗಲೆ ಹೇಳಿದ ಹಾಗೆ, ಈ ಕೇಸನ್ನು ‘ಮಾಟದ ಹೆಸರಲ್ಲಿ ದಾಖಲಿಸಿಕೊಂಡು ತನಿಖೆ ನಡೆಸಿದರೆ, ನ್ಯಾಯ ಸಿಗುತ್ತದೆಯೊ ಇಲ್ಲವೊ, ಗರ್ಭವತಿಯಾಗಿ ಆಸ್ಪತ್ರೆಯಲ್ಲಿರೊ ಬಸುರಿಗೆ, ಹೊಟ್ಟೆನಲ್ಲಿರುವ ಮಗುವಿಗೆ ದೊಡ್ಡ ಅಘಾತವಾಗುತ್ತದೆ. ಬ್ರುಸೆಲ್ಲಾ ಇಂದ ಬ್ಲೀಡಿಂಗ್ ಆಗಿಲ್ಲ ಅನ್ನೊದು ಸತ್ಯವಾದರೂ, ಅಪ್ಪನೆ ಈತರ ಮಾಡಿದಾರೆ ಅಂತ ಆ ಬಿಂದುಗೆ ಅನುಮಾನ ಶುರುವಾದರೆ, ಅದು ಇನ್ನೂ ದೊಡ್ಡ ಮಾನಸಿಕ ಗಾಯವಾಗುತ್ತದೆ. ಬಸುರಿ ಹೆಂಗಸಿಗೆ ಹೀಗೆಲ್ಲಾ ಆಗಬಾರದು.  ಅಪ್ಪ ನನಗೆ ಈ ತರ ಮಾಡಿದಾರೆ ಅನ್ನುವ ಭಾವನೆಯನ್ನು ಚಿಕ್ಕೇಗೌಡ ಹುಟ್ಟು ಹಾಕ್ತಾ ಇದಾನೆ. ಇದು ಅವನ ಹಳೇ ದ್ವೇಷ. ಮಾದೇಗೌಡ ನಮಗೆ ಗೊತ್ತಿರೋನು. ಅವನು ಈತರ ಮಾಟ ಮಾಡಿಲ್ಲ ಅನ್ನೋದಕ್ಕೆ ಸಾಕ್ಷಿ ಇಲ್ಲ. ಆದರೆ ಕಳ್ಳುಬಳ್ಳಿ ಮಾತು ನನಗೆ ಕೇಳಿಸುತ್ತೆ. ಮಾದೇಗೌಡ ಅಂತ ಕೆಲಸ ಮಾಡಿಲ್ಲ. ಬ್ರುಸೆಲ್ಲಾ ಇರೋ ಹಸು ನಿಮಗೆ ಗೊತ್ತಿರುತ್ತೆ, ನೀವು ಅದರ ರಕ್ತದ ಮಾದರಿಯನ್ನು ತೆಗೆದುಕೊಟ್ಟರೆ, ನಾನು ಇದೇ ಹಸುವಿನ ಮಾದರಿ ಅದು ಅಂತ ಲ್ಯಾಬಲ್ಲಿ ರಿಪೋರ್ಟ್ ಬರೆಸ್ತೀನಿ. ಅದರಿಂದ, ಈ ಬ್ಯಾಕ್ಟೀರಿಯಾದಿಂದ ಅಬಾರ್ಶನ್ ಆಯ್ತು ಅಂತ ಪ್ರಚಾರವಾಗುತ್ತೆ. ಇದರಿಂದ ಯಾರಿಗೂ ಗೊತ್ತಿಲ್ಲದೆ ಇರೊ ಬ್ರುಸೆಲ್ಲಾ ಬಗ್ಗೆ ಜನರಿಗೂ ಮಾಹಿತಿ ಸಿಗುತ್ತೆ. ಅಪ್ಪ ಮಗಳ ಸಂಬಂಧಾನೂ ಚೆನ್ನಾಗಿರುತ್ತೆ. ಈ ಚಿಕ್ಕೆಗೌಡನ ತಂತ್ರಕ್ಕೂ ಪ್ರತಿತಂತ್ರವಾಗಿರುತ್ತದೆ. ಪೋಲೀಸ್ ಇಲಾಖೆಗೂ ತಲೆನೋವಾಗಿರೊ ಬಾರ್ಡರ್ ಕೇಸ್ ಒಂದು ಮುಗಿದು ಹೋಗುತ್ತೆ. ಇಲ್ಲಿ ಒಂದು ತಪ್ಪನ್ನು ಮಾಡಿದರೆ ಅನೇಕರಿಗೆ ಅನುಕೂಲವಾಗುತ್ತದೆ, ನೀವೂ ಒಂದು ಹೆಣ್ಣು, ಆ ಗರ್ಭಿಣಿ ಮತ್ತು ಹೊಟ್ಟೆಯಲ್ಲಿರೊ ಮಗುವಿನ ಮುಖ ನೋಡಿ, ಇಷ್ಟು ಸಹಾಯ ಮಾಡಿ.”

ಬಸವಣ್ಣನ ಮಾತುಕೇಳಿ ಎದ್ದು ನಿಂತು ಸುಪ್ರಿಯಾ ಬಸವಣ್ಣನನ್ನು ತಬ್ಬಿಕೊಂಡಳು, ಅವಳ ಕಣ್ಣಲ್ಲಿ ನೀರು ಬಂದಿತ್ತು. ಪೋಲೀಸ್ ಇಲಾಖೆಯ ಒಳಗೂ ಸಂಬಂಧಗಳನ್ನು ಇಷ್ಟೊಂದು ಗೌರವದಿಂದ ಕಟ್ಟುವ ವ್ಯಕ್ತಿಗಳಿದ್ದಾರಾ. ಅವರ ಪ್ರೀತಿಯು ಸುಪ್ರಿಯಾ ಧ್ವನಿಯು ನಡುಗುವಂತೆ ಮಾಡಿತ್ತು. “ಬಸವಣ್ಣ ಸರ್, ನೀವು ಹೇಳುತ್ತಿರುವುದು, ಕೇಳಿ ನನಗೆ ಸಂಕಟವಾಯ್ತು. ಆ ಮಗು ಮತ್ತು ತಾಯಿಯ ದೃಷ್ಟಿಯಿಂದ ಅವರ ಸಂಬಂಧದ ದೃಷ್ಟಿಯಿಂದ ನಾನು ಹಾಗೆ ನಿಮಗೆ ಸಹಾಯ ಮಾಡಲೇಬೇಕೆಂದು ನನ್ನ ಹೃದಯ ಹೇಳುತ್ತಿದೆ. ಆದರೆ, ನಾನು ಅಕ್ಷಯಕಲ್ಪ ಉದ್ಯೋಗಿ, ಇಲ್ಲಿ ನಾನು ನನ್ನ ಉದ್ಯೋಗದ ನಿಯಮಗಳ ವಿರುದ್ಧ ಹಾಗೆ ಮಾಡುವಂತಿಲ್ಲ. ನನಗೆ ಅಕ್ಷಯಕಲ್ಪದ ನಿಯಮಗಳೆ ಮುಖ್ಯ. ಕ್ಷಮಿಸಿ” ಎಂದು ಕೈ ಮುಗಿದು ಹೊರಟರು.

ವಿಡಿಯೊ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಮರಳಿದೆ. ಒಂದೆರಡು ದಿನಗಳ ನಂತರ ಈ ಕೇಸಿನ ಕುತೂಹಲ ತಡೆಯಲಾಗದೆ. ‘ಏನಾಯಿತೆಂದು’ ಸಂತೋಷ್ ಗೆ ಫೋನ್ ಮಾಡಿದೆ. ಸಂತೋಷ್, “ಬಾರ್ಡರ್ ಕೇಸ್ ಬಸವಣ್ಣ ಗೆದ್ದು ಬಿಟ್ಟರು ವಿಶ್ವಣ್ಣ”. ಕುತೂಹಲ ತಡೆಯಲಾಗಲಿಲ್ಲ , “ಹೇಗೆ ಸಂತೋಷ್?”. “ಲ್ಯಾಬಿಂದ ಬ್ರುಸೆಲ್ಲಾ ರಿಪೋರ್ಟ್ ತಂದರು ಅಷ್ಟೆ. ಈಗ ಬಿಂದು ತವರುಮನೆಗೆ ಬಂದಿದ್ದಾಳೆ. ಹೆರಿಗೆಯಾಗೊವರೆಗೂ ಇಲ್ಲೇ ಇರ್ತೀನಿ ಅಂತ ಹೇಳಿದ್ದಾಳೆ.” ಎಂದನು. ಸಂತೋಷದಿಂದ “ಅದು ಸರೀ ಸಂತೋಷ್, ರಿಪೋರ್ಟ್ ಹೇಗೆ ತಂದರು?” ಎಂದೆನು. ಸಂತೋಷ್ ಹೇಳಿದ “ಅದೇ ವಿಶ್ವಣ್ಣ, ಬಾರ್ಡರ್ ಕೇಸ್ ಬಸವಣ್ಣ ಅಂದರೆ”…

  • ಆಣೇಕಟ್ಟೆ ವಿಶ್ವನಾಥ್

(ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಅಣೇಕಟ್ಟೆಯವರಾದ ವಿಶ್ವನಾಥ್‌ರವರು ಕೃಷಿಕರು ಮತ್ತು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿಗಳು. ತೆಂಗಿನ ಮೌಲ್ಯವರ್ಧನೆ ಇವರ ಆಸಕ್ತಿಯ ಕ್ಷೇತ್ರ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...