ಹಲವು ದಿನಗಳಿಂದ ನಡೆಯುತ್ತಿದ್ದ ಕರ್ನಾಟಕ ಸಿಎಂ ಬದಲಾವಣೆ ವಿಚಾರ ಇಂದು ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಬಿ.ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇಂದು ಘೋಷಿಸಿದ್ದಾರೆ.
I have decided to resign. I will meet the Governor after lunch: Karnataka CM BS Yediyurappa at a programme to mark the celebration of 2 years of his govt pic.twitter.com/sOn0lXAfeD
— ANI (@ANI) July 26, 2021
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ 2 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಊಟದ ನಂತರ ನಾನು ರಾಜ್ಯಪಾಲರನ್ನು ಭೇಟಿಯಾಗುತ್ತೇನೆ, ರಾಜೀನಾಮೆ ಪತ್ರ ಸಲ್ಲಿಸುತ್ತೇವೆ” ಎಂದು ಘೋಷಿಸಿದ್ದಾರೆ.
ದುಃಖತಪ್ತರಾಗಿ ಮಾತನಾಡಿದ ಅವರು “75 ವರ್ಷ ದಾಟಿದ ಯಡಿಯೂರಪ್ಪನವರನ್ನು ಮತ್ತೆ ಎರಡು ವರ್ಷ ಮುಖ್ಯಮಂತ್ರಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಅಮಿತ್ ಶಾರವರಿಗೆ, ಜೆ.ಪಿ ನಡ್ಡಾರವರಿಗೆ ಧನ್ಯವಾದ ತಿಳಿಸುತ್ತೇನೆ ಅವರಿಗೆ ನಾನು ಋಣಿಯಾಗಿದ್ದೇನೆ. ಮುಂದೆಯೇ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಅವರ ನಿರೀಕ್ಷೆಯಂತೆ ಕೆಲಸ ಮಾಡೋಣ. ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ ಬದಲಿಗೆ ಸಂತೋಷದಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದರು.
ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ರಾಜ್ಯದ ಜನರ ಬೆಂಬಲದಿಂದ, ಪ್ರಧಾನಿ ಶ್ರೀ @narendramodi, ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda, ಗೃಹ ಸಚಿವ ಶ್ರೀ @AmitShah ರವರ ಸಹಕಾರದಿಂದ, ಎಲ್ಲಾ ಶಾಸಕರು, ಪಕ್ಷದ ನೆರವಿನಿಂದ 2 ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನ ನಡೆಸಿದ ತೃಪ್ತಿ ನನಗಿದೆ.
— B.S. Yediyurappa (@BSYBJP) July 26, 2021
ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆಯಲ್ಲಿ ಹೋಗಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದರು. ಆದರೆ ತದನಂತರ ಮನಸ್ಸು ಬದಲಿಸಿ ಕಾರಿನಲ್ಲಿ ಪ್ರಯಾಣಿಸಿ ರಾಜೀನಾಮೆ ಸಲ್ಲಿಸಲಿದ್ದಾರೆ.
ಕರ್ನಾಕದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್ ಯಡಿಯೂರಪ್ಪನವರು ಒಮ್ಮೆಯೂ ಪೂರ್ಣಾವಧಿಯಾಗಿ ಅಧಿಕಾರಿ ನಿರ್ವಹಿಸಲು ಸಾಧ್ಯವಾಗಿಲ್ಲ. ಇಂದಿಗೆ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷವಾಗಿತ್ತು. ಸಂಭ್ರಮಾಚರಣೆಯ ದಿನವೇ ಅವರು ರಾಜೀನಾಮೆ ಘೋಷಿಸಿದ್ದಾರೆ.
ಯಡಿಯೂರಪ್ಪನವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ಅರಿತೇ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ರವರು ಆಂಧ್ರಪ್ರದೇಶಕ್ಕೆ ತೆರಳಿದ್ದವರು ವಾಪಸ್ ಬಂದಿದ್ದಾರೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭವಾಗಿದೆ. ಈ ಕುರಿತು ಯಡಿಯೂರಪ್ಪನವರು ಯಾವುದೇ ಸುಳಿವು ನೀಡಿಲ್ಲ. ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರ ತಿಳಿಸಿದ್ದಾರೆ.
ನಾಳೆ ನವದೆಹಲಿಯಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು ಅಲ್ಲಿ ಕರ್ನಾಟಕದ ಹೊಸ ಸಿಎಂ ಯಾರಾಗಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ವಿಧಿವಶ


