ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಾರಿತ್ರ್ಯ ಹರಣ ಮಾಡಲು ಸೃಷ್ಟಿಸಲಾಗಿದ್ದ “ಬುಲ್ಲಿ ಬಾಯಿ” ಮತ್ತು “ಸುಲ್ಲಿ ಡೀಲ್ಸ್” ಆಪ್ ತಯಾರಕ ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬುಲ್ಲಿ ಬಾಯ್ ಅಪ್ಲಿಕೇಶನ್ ರಚಿಸಿದ ನೀರಜ್ ಬಿಷ್ಣೋಯ್ ಎಂಬಾತನನ್ನು ಪ್ರಮುಖ ಆರೋಪಿಯಾಗಿ ಗುರುತಿಸಿ ಜನವರಿ 6ರಂದು ಬಂಧಿಸಲಾಯಿತು. ಸುಲ್ಲಿ ಡೀಲ್ಸ್ ಅಪ್ಲಿಕೇಶನ್‌ನ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್ ಎಂದು ಗುರುತಿಸಿ ಜನವರಿ 8 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಅವರಿಬ್ಬರಿಗೂ ಜಾಮೀನು ನೀಡಿರುವ ನ್ಯಾಯಾಲಯ ‘ಆರೋಪಿಗಳು ಮೊದಲ ಬಾರಿಗೆ ಅಪರಾಧವೆಸಗಿದ್ದಾರೆ. ನಿರಂತರ ಸೆರೆವಾಸವು ಅವರ ಒಟ್ಟಾರೆ ಯೋಗಕ್ಷೇಮಕ್ಕೆ ಹಾನಿಕಾರಕವಾಗಿದೆ’ ಎಂದು ಹೇಳಿದೆ.
ಬುಲ್ಲಿ ಬಾಯ್ ಆ್ಯಪ್ ಅನ್ನು ನವೆಂಬರ್ 2021 ರಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಡಿಸೆಂಬರ್‌ನಲ್ಲಿ ನವೀಕರಿಸಲಾಗಿದೆ ಎಂದು ವಿಚಾರಣೆಯ ಸಮಯದಲ್ಲಿ ಬಿಷ್ಣೋಯ್ ಬಹಿರಂಗಪಡಿಸಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆ್ಯಪ್ ಬಗ್ಗೆ ಮಾತನಾಡಲು ಅವನು ಟ್ವಿಟರ್ ಖಾತೆಯನ್ನು ಸಹ ರಚಿಸಿದ್ದ ಎಂದು ಆರೋಪಿಸಲಾಗಿದೆ.
ಪತ್ರಕರ್ತರು, ಸಮಾಜ ಸೇವಕರು, ವಿದ್ಯಾರ್ಥಿಗಳು, ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಹಲವಾರು ಮುಸ್ಲಿಂ ಮಹಿಳೆಯರ 100ಕ್ಕೂ ಹೆಚ್ಚು ಚಿತ್ರಗಳನ್ನು ಬುಲ್ಲಿ ಬಾಯ್ ಅಪ್ಲಿಕೇಷನ್‌ನಲ್ಲಿ ಪೋಸ್ಟ್ ಮಾಡಿ ಅವಹೇಳನಕಾರಿ ಬರೆದು ಹರಾಜಿಗಿಡಲಾಗಿತ್ತು. ಈ ವಿಷಯದ ಕುರಿತು ದೂರು ದಾಖಲಾದ ನಂತರ ಆಪ್‌ಗಳನ್ನು ನಿರ್ಬಂಧಿಸಲಾಗಿತ್ತು. ಈ ಪ್ರಕರಣವನ್ನು ಮುಂಬೈ ಸೈಬರ್ ಸೆಲ್ ಡಿಸಿಪಿ ರಶ್ಮಿ ಅವರು ತನಿಖೆಯ ನೇತೃತ್ವ ವಹಿಸಿ ಬೇಧಿಸಿದ್ದರು. ಈಗ ಅವರನ್ನು ಸಹ ಸೈಬ್ ಸೆಲ್ ವಿಭಾಗದಿಂದ ವರ್ಗಾವಣೆ ಮಾಡಲಾಗಿದೆ.
ಈಗ ಈ ಸೂಕ್ಷ್ಮ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಸಾಕ್ಷ್ಯ ನಾಶ ಮಾಡಬಾರದು, ಅನುಮತಿಯಿಲ್ಲದೆ ವಿದೇಶಕ್ಕೆ ತೆರಳಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಇದನ್ನೂ ಓದಿ; ’ಬುಲ್ಲಿ ಬಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ


