ಕರ್ನಾಟಕದ ಹಾವೇರಿ ಜಿಲ್ಲೆಯ ಹಾನಗಲ್, ವಿಜಯಪುರ ಜಿಲ್ಲೆಯ ಸಿಂದಗಿ ಸೇರಿ ರಾಷ್ಟ್ರಾದ್ಯಂತ ಇಂದು (ಅಕ್ಟೋಬರ್ 30) ಉಪಚುನಾವಣೆ ನಡೆಯುತ್ತಿದೆ. ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನ ನಡುವೆ ಈ ಕ್ಷೇತ್ರಗಳ ಜನತೆ ಮತ ಚಲಾವಣೆ ಮಾಡುತ್ತಿದ್ದಾರೆ.
13 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 29 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ನವೆಂಬರ್ 2ರಂದು ಫಲಿತಾಂಶ ಹೊರಬೀಳಲಿದೆ.
ಕರ್ನಾಟಕದ ಹಾವೇರಿ ಜಿಲ್ಲೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯಾಗಿದ್ದು, ಹಾನಗಲ್ ವಿಧಾನಸಭಾ ಕ್ಷೇತ್ರದ ಗೆಲುವು ಪ್ರತಿಷ್ಠೆಯದ್ದಾಗಿದೆ. ಒಟ್ಟು 13 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಆರು ಮಂದಿ ಸ್ಪರ್ಧಿಸಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ಒಟ್ಟು 4,39,148 ಮತದಾರರಿದ್ದು, 230 ಸರ್ವೀಸ್ ಓಟುಗಳಿವೆ. 560 ಮತಗಟ್ಟೆಗಳಲ್ಲಿ ಮತ ಚಲಾವಣೆ ನಡೆಯುತ್ತಿದೆ.
ಸಿಂದಗಿಯ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಹಾಗೂ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ಉದಾಸಿಯವರ ನಿಧನದಿಂದಾಗಿ ಚುನಾವಣೆ ನಡೆಯುತ್ತಿದೆ. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ (ಸಿಂದಗಿ), ಮಾಜಿ ಶಾಸಕ ಶ್ರೀನಿವಾಸ ಮಾನೆ (ಹಾನಗಲ್) ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ರಮೇಶ್ ಬೂಸನೂರ್ (ಸಿಂಧಗಿ), ಶಿವರಾಜ್ ಸಜ್ಜನರ್ (ಹಾನಗಲ್) ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಮುಸ್ಲಿಂ ಅಭ್ಯರ್ಥಿಗಳನ್ನು ಜೆಡಿಎಸ್ ಎರಡೂ ಕ್ಷೇತ್ರಗಳಲ್ಲೂ ಕಣಕ್ಕಿಳಿಸಿದೆ. ನಾಜಿಯಾ ಶಕೀಲ್ ಅಹಮದ್ ಅಂಗಡಿ (ಸಿಂದಗಿ), ನಿಯಾಜ್ ಶೈಖ್ (ಹಾನಗಲ್) ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದಿಂದಾಗಿ ಈ ಕ್ಷೇತ್ರಗಳ ಜನರು ಶೋಕಾಚರಣೆಯ ನಡುವೆ ಮತ ಚಲಾವಣೆ ಮಾಡುತ್ತಿದ್ದಾರೆ.
ಹಾನಗಲ್ ಕ್ಷೇತ್ರದ ನೋಟಾ ಮತದಾನದ ಜಾಗೃತಿ ಕಾರ್ಯಕರ್ತ ಪ್ರಶಾಂತ್ ಮುಚ್ಚಂಡಿಯವರು ‘ನಾನುಗೌರಿ.ಕಾಂ’ನೊಂದಿಗೆ ಮಾತನಾಡಿ, “ಪುನೀತ್ ಅವರ ನಿಧನವು ಕ್ಷೇತ್ರದ ಜನರಲ್ಲಿ ನೋವು ತಂದಿದೆ. ಅನೇಕರು ಕಣ್ಣೀರು ಹಾಕಿದ್ದಾರೆ. ಆದರೂ ಮತದಾನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಶಾಂತಿಯುತವಾಗಿ ಮತ ಚಲಾವಣೆ ಮಾಡುತ್ತಿದ್ದಾರೆ” ಎಂದರು.
“ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಕಂಡು ಬರುತ್ತಿಲ್ಲ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಹೊರಗಿನವರು ಆಗಿರುವುದು ಇದಕ್ಕೆ ಕಾರಣ. ಬಹಿರಂಗ ಪ್ರಚಾರ ಮುಗಿದ ಮೇಲೂ ಅನೇಕರು ಇಲ್ಲಿಯೇ ಉಳಿದಿದ್ದಾರೆ. ಹಣದ ಹೊಳೆಯೇ ಹರಿದಿದೆ” ಎಂದು ಆರೋಪಿಸಿದರು.
ಇದನ್ನೂ ಓದಿರಿ: ಉಪಚುನಾವಣೆ: ಸಿಂಧಗಿಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಪ್ರತಿಪಕ್ಷಗಳ ಆರೋಪ


