ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಒಳಗಾದ ಜನರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಇಂದು ಬೀದಿಬದಿ ವ್ಯಾಪಾರಿಗಳಿಗಾಗಿ 20 ಸಾವಿರ ಕೋಟಿ ರೂ ತೆಗೆದಿಡಲು ನಿರ್ಧರಿಸಲಾಗಿದೆ. ಕ್ಷೌರಿಕ ಅಂಗಡಿಗಳನ್ನೂ ಸಹ ಬೀದಿ ಬದಿಯ ವ್ಯಾಪಾರಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಇವರಿಗೆ 10,000 ಸಾಲ ನೀಡಲು ಕೇಂದ್ರ ಯೋಜನೆ ರೂಪಿಸಿದೆ. ಈ ಸಾಲ ಒಂದು ವರ್ಷದ ವರೆಗೆ ಬಡ್ಡಿ ರಹಿತವಾಗಿದ್ದು, ಸಾಲ ಪಾವತಿ ವಿಳಂಬಕ್ಕೂ ದಂಡ ವಿಧಿಸುವಂತಿಲ್ಲ ಎಂದು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ದೇಶದಾದ್ಯಂತ ಘೋಷಿಸಲಾಗುತ್ತಿರುವ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರಿಗಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ರೂ ಪ್ಯಾಕೇಜ್ ಗೆ ಕೇಂದ್ರ ಸಚಿವ ಸಂಪುಟ ಸಭೆ ಹಂತಹಂತವಾಗಿ ಒಪ್ಪಿಗೆ ನೀಡುತ್ತಿದೆ ಎನ್ನಲಾಗಿದೆ. ಸಣ್ಣ ಮತ್ತು ಬೀದಿ ಬದಿಯ ವ್ಯಾಪಾರಿಗಳ ಜೊತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಲು ಕೇಂದ್ರ ಹೊಸ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಬೆಳೆ ಸಾಲ ಪಾವತಿಗೆ 2021ರ ವರೆಗೆ ಅವಧಿ ವಿಸ್ತರಣೆ, ಪಡಿತರ ಕಾರ್ಡ್ ಇಲ್ಲದವರಿಗೂ ಪಡಿತರ ನೀಡುವ ಯೋಜನೆ, APMC ಕಾಯ್ದೆ ತಿದ್ದುಪಡಿ ಹಾಗೂ ಜೋಳ, ಗೋಧಿ, ಸಜ್ಜೆ, ತೊಗರಿ ಸೇರಿದಂತೆ 14 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಿ ಸರ್ಕಾರವೇ ರೈತರಿಗೆ ಬೆಳೆಗಳನ್ನು ಖರೀದಿ ಮಾಡುವುದಕ್ಕೂ ಸಹ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಒಪ್ಪಿಗೆ ಪಡೆಯಲಾಗಿದೆ.
ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಒತ್ತು: ಗಡ್ಕರಿ
ದೇಶದ ಆರ್ಥಿಕತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾತ್ರ ನಿರ್ಣಾಯಕವಾಗಿದ್ದು, ಲಾಕ್ಡೌನ್ನಿಂದಾಗಿ ಈ ವಲಯವೂ ಸಹ ಸಾಕಷ್ಟು ನಷ್ಟ ಅನುಭವಿಸಿದೆ. ಹೀಗಾಗಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಿತೀನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದ ಜಿಡಿಪಿ ಗೆ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಶೇ.29ರಷ್ಟು ಕೊಡುಗೆ ನೀಡಿವೆ. ಆದ್ದರಿಂದಲೇ ಈ ವಲಯಕ್ಕೆ ಕೇಂದ್ರದ ಕಡೆಯಿಂದ ಹೆಚ್ಚು ಕೊಡಗೆ ನೀಡಲಾಗುತ್ತಿದೆ.
ಈ ವಲಯದಿಂದ ವರ್ಷಕ್ಕೆ ಶೇ.48 ರಷ್ಟು ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿದೆ. ಆದರೆ, 2006ರ MSME ಕಾಯ್ದೆಯಿಂದಾಗಿ ಉದ್ಯಮಕ್ಕೆ ಲಾಭವಾಗುತ್ತಿಲ್ಲ. ಹೀಗಾಗಿ ಈ ಕಾಯ್ದೆಯಲ್ಲಿ ಬದಲಾವಣೆ ಮಾಡಿ ನೆರವು ನೀಡಲಾಗುತ್ತಿದೆ. ಈಗ ಮಾಡಿರುವ ಬದಲಾವಣೆಯಲ್ಲಿ ,MSME ವ್ಯವಹಾರದಲ್ಲಿ ರಫ್ತನ್ನು ಪರಿಗಣಿಸುವುದಿಲ್ಲ ಪರಿಣಾಮ ಈ ಉದ್ಯಕ್ಕೆ ಹೆಚ್ಚು ಉಳಿತಾಯವಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
ಓದಿ: ರಾಜ್ಯ 7.5 ಲಕ್ಷ ಚಾಲಕರಲ್ಲಿ 80 ಸಾವಿರ ಚಾಲಕರಿಗೆ ಮಾತ್ರ ಕೊರೊನಾ ಪರಿಹಾರ: ವರದಿ


