Homeಕರ್ನಾಟಕಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ

ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ

"ಕಾರ್ಯಕ್ರಮದಲ್ಲಿ ನಾವು ಯಾವುದೆ ತಪ್ಪು ಮಾತುಗಳನ್ನು ಆಡಿಲ್ಲ. ಅದರಾಚೆಗೂ ಕೆಲವರು ಹಾಕುತ್ತಿರುವ ಅಶ್ಲೀಲ ಕಮೆಂಟುಗಳು ನಮಗೆ ತೀರಾ ಬೇಜಾರು ಮಾಡಿದೆ. ನಾವು ಏನೂ ತಪ್ಪಿ ಮಾತನಾಡಿಲ್ಲ ಆದರೂ ನಮ್ಮ ಮಾತಿನಿಂದ ನಿಮಗೆ ಬೇಜಾರು ಆಗಿದ್ದರೆ ಕ್ಷಮಿಸಿ"

- Advertisement -
- Advertisement -

ಖಾಸಗಿ ಚಾನೆಲ್ ಒಂದರ ಹಾಸ್ಯ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದ್ದಕ್ಕೆ ತುಳು ರಂಗಭೂಮಿ ಹಾಗೂ ಸಿನೆಮಾದ ಹಿರಿಯ ಕಲಾವಿದ ಅರವಿಂದ್ ಬೋಳಾರ್ ಹಾಗೂ ಚಾನೆಲ್ ವಿರುದ್ದ ಮಂಗಳೂರಿನ ಕಾವೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕರಾವಳಿಯ ಸ್ಥಳೀಯ ಚಾನೆಲ್ ಡೈಜಿವರ್ಲ್ಡ್ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ “ಪ್ರೈವೆಟ್ ಚಾಲೆಂಜ್” ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ಪುರೋಹಿತರು ಹಾಗೂ ಜ್ಯೋತಿಷಗಳ ಧಾರ್ಮಿಕ ಭಾವನೆಗೆ ದಕ್ಕೆ ತರಲಾಗಿದೆ ಎಂದು ಚಾನೆಲ್ ನಿರೂಪಕ ವಾಲ್ಟರ್‌ ನಂದಳಿಕೆ ಮತ್ತು ಕಲಾವಿದ ಅರವಿಂದ ಬೋಳಾರ್ ವಿರುದ್ದ ಶಿವರಾಜ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.

ಆಗಸ್ಟ್ 9 ರಂದು ಪ್ರಸಾರವಾದ ಈ ಹಾಸ್ಯ ಕಾರ್ಯಕ್ರಮದಲ್ಲಿ ಕಲಾವಿದ ಅರವಿಂದ್ ಬೋಳಾರ್‌ ”ಬರೆದಿಪಿ ಜ್ಯೋತಿಷಿ”(ಬರೆದಿಡುವ ಜ್ಯೋತಿಷಿ) ಎಂಬ ಪಾತ್ರದಲ್ಲಿ ನಟಿಸಿ, ಜ್ಯೋತಿಷ್ಯವನ್ನು ವಿಡಂಭನೆಗೆ ಒಳಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಜ್ಯೋತಿಷ್ಯರು ಸ್ತೀ ವಶೀಕರಣ, ಭವಿಷ್ಯ ನುಡಿಯುವುದರ ಬಗ್ಗೆ ಹಾಸ್ಯವಾಗಿ ಚಾಟಿ ಬೀಸಲಾಗಿತ್ತು. ಇದಕ್ಕೆ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂಬ ತಕರಾರು ಎದ್ದಿದ್ದು, ಇದೀಗ ಕೇಸು ದಾಖಲಾಗಿದೆ.

ಘಟನೆಯ ಬಗ್ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು, ಕಲಾವಿದನ ಮೇಲೆ ಕೇಸು ದಾಖಲಾಗಿರುವುದನ್ನು ವಿರೋಧಿಸಿದ್ದಾರೆ. ಈ ಕೇಸು ಕೇವಲ ಇವತ್ತಿನ ಆಕ್ರೋಶ ಮಾತ್ರವಲ್ಲ. ಅರವಿಂದ ಬೋಳಾರ್ ಈ ಹಿಂದೆ ರಾಜಕಾರಣಿಯೊಬ್ಬರನ್ನು ವಿಡಂಭನೆ ಮಾಡಿರುವುದರ ಅಸಮಾಧಾನವನ್ನು ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಕಾರ್ಯಕ್ರಮದಲ್ಲಿ ಯಾವುದೇ ಅವಹೇಳಕಾರಿ ಅಂಶಗಳಿಲ್ಲ. ಕಾರ್ಯಕ್ರಮದಲ್ಲಿ ಕಪಟ ಜ್ಯೋತಿಷಿಗಳು, ವಾಮಾಚಾರಿಗಳು ಮತ್ತು ಮಂತ್ರವಾದಿಗಳಿಂದ ಜನರು ಅತ್ಯಂತ ಹೆಚ್ಚು ಕಷ್ಟನಷ್ಟಗಳಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ. ಅಲ್ಲಿನ ವಿಡಂಭನೆ ಆರೋಗ್ಯಕರವಾಗಿದೆ. ಆದರೆ ಅದನ್ನೆ ಇಟ್ಟುಕೊಂಡು ತುಳುನಾಡಿನ ಖ್ಯಾತ ನಟನೊಬ್ಬನನ್ನು ಹಣಿಯಲು ಪ್ರಯತ್ನಿಸುವುದು ಖಂಡನಾರ್ಹ. ಇದು ಕೇವಲ ಮೇಲ್ನೋಟಕ್ಕೆ ಕಂಡ ರೀತಿ ಕೇವಲ ಜ್ಯೋತಿಷಿಗಳ ವಿಷಯ ಮಾತ್ರವಲ್ಲ, ಇದರ ಹಿಂದೆ ಸಮಾಜದ ಅಂಕುಡೊಂಕುಗಳನ್ನು ಎತ್ತಿತೋರಿಸುವ ಕಲಾವಿದನ ಬಾಯಿಮುಚ್ಚಿಸುವ ಪ್ರಯತ್ನ ಕೂಡಾ ಇದೆ. ನಾವು ಅವರ ಜೊತೆ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.

ರಂಗಕರ್ಮಿ ಐ. ಕೆ. ಬೊಳುವಾರು “ಅರವಿಂದ ಬೋಳಾರ್ ಅವರ ಹಾಸ್ಯ ವಿಡಂಬನೆಗೆ ಒಳಗಾಗಿರುವ ಎಲ್ಲ ಸಾಮಾಜಿಕ ಅಪಾಯಕಾರೀ ಶಕ್ತಿಗಳು ಒಂದಾಗುವ ಅಪಾಯ ಬರಬಹುದು. ಕಲಾವಿದ ಅರವಿಂದ ಬೋಳಾರ್ ಸರ್, ವಾಲ್ಟರ್ ನಂದಳಿಕೆಯವರ ಜೊತೆ ನಾನೂ ಇದ್ದೇನೆ” ಎಂದು ಹೇಳಿದ್ದಾರೆ.

 

ಸಿನೆಮಾ ಪತ್ರಕರ್ತ ಶಶಿಕರ ಪಾತೂರು “ಜನರ ನೋವು, ಸಂಕಟಗಳನ್ನು ಬಳಸಿ ದರ್ಬಾರ್ ನಡೆಸುವ ಮಂತ್ರವಾದಿ, ಜ್ಯೋತಿಷಿಗಳು, ದೆವ್ವ ಬಿಡಿಸುವವರ ಮನೆಹಾಳುತನದ ಮುಂದೆ ತನ್ನ ಹಾಸ್ಯ, ನಟನೆಯ ಮೂಲಕ ಜನರ ನೋವು ಮರೆಸಲು ಯತ್ನಿಸುವ ಅರವಿಂದ ಬೋಳಾರ್ ತುಳುನಾಡಿನ‌ ಆಸ್ತಿ. ನಾನು ಬೋಳಾರ್ ಜೊತೆಗೆ ಇದ್ದೇನೆ” ಎಂದು ಹೇಳಿದ್ದಾರೆ.

ತುಳುವರನ್ನು ನೋವು ನುಂಗಿ ನಗುವಂತೆ ಮಾಡಿದವರು ಅರವಿಂದ ಬೋಳಾರ್. ತುಳುವರ ನೋವುಗಳನ್ನೇ ಎನ್ ಕ್ಯಾಶ್ ಮಾಡಿ ಖಜಾನೆ ತುಂಬಿಸಿಕೊಂಡವರು…

Posted by ಶಶಿಕರ ಪಾತೂರು on Tuesday, August 11, 2020

ಯುವ ಸಂಶೋಧಕ ಬರಹಗಾರ ಚರಣ್ ಐವರ್ನಾಡ್, “ಕರಾವಳಿಯ ಸಂಸ್ಕೃತಿಯನ್ನು ಮಾರುಕಟ್ಟೆ ಮಾಡಿಕೊಂಡು ಕೋಟಿ ಕೋಟಿ ಕೊಳ್ಳೆ ಹೊಡೆದು ಚೀಲ ತುಂಬಿಸಿಕೊಂಡು ಮಹಡಿ ಮೇಲೆ ಮಹಡಿ ಕಟ್ಟುವ ಅಷ್ಟ ಮಂಗಳದವರು ತುಳುನಾಡಿನ ಸಂಸ್ಕೃತಿಗೆ ಮಾರಕ. ನಾನು ಅರವಿಂದ್ ಬೋಳಾರ್ ಜೊತೆ ಇದ್ದೇನೆ” ಎಂದು ವಿಸ್ತಾರವಾದ ಬರಹವನ್ನು ಬರೆದಿದ್ದಾರೆ.

#am_with_aravind_bolarAravind Bolarತುಳು ಚಿತ್ರರಂಗದ ಮತ್ತು ರಂಗಭೂಮಿಯ ಹಾಸ್ಯ ನಟ ಅರವಿಂದ ಬೋಳಾರ್ ಮೇಲೆ ಧಾರ್ಮಿಕ ಭಾವನೆಗೆ ದಕ್ಕೆ…

Posted by Charan Aivarnad on Monday, August 10, 2020

ಉದ್ಯಮಿ ಹರೀಶ್ ಪೂಜಾರಿ, “ನನ್ನ ಅತ್ಯಂತ ಇಷ್ಟದ ರಂಗನಟ, ಸಿನಿಮಾ ನಟ ಅರವಿಂದ ಬೋಳಾರ್ ಮೇಲೆ ’ಜ್ಯೋತಿಷಿ’ ಗಳು ಪ್ರಕರಣ ದಾಖಲಿಸಿದ್ದಾರೆಂಬ ಸುದ್ಧಿ ಹರಿದಾಡುತ್ತಿದೆ ಇದು ನಿಜವೇ ಆಗಿದ್ದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಬೋಳಾರ್ ಜೊತೆ ನಾನಿದ್ದೇನೆ” ಎಂದು ಹೇಳಿದ್ದಾರೆ.

ನನ್ನ ಅತ್ಯಂತ ಇಷ್ಟದ ರಂಗನಟ , ಸಿನಿಮಾ ನಟ ಅರವಿಂದ ಬೋಳಾರ್ ಮೇಲೆ "ಜ್ಯೋತಿಷಿ" ಗಳು ಪ್ರಕರಣ ದಾಖಲಿಸಿದ್ದಾರೆಂಬ ಸುದ್ಧಿ ಹರಿದಾಡುತ್ತಿದೆ ಇದು ನಿಜವೇ ಆಗಿದ್ದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆ ಬೋಳಾರ್ ಜೊತೆ ನಾನಿದ್ದೇನೆ ನೀವು..

Posted by Harisha D Poojary on Tuesday, August 11, 2020

ಇಂಜಿನಿಯರ್ ಆಗಿರುವ ಆಸ್ಕರ್ ಲೂಯಿಸ್ “ಒಬ್ಬ ವಿಚಾರವಾದಿಯಾಗಿ, ಪ್ರಜ್ಞಾವಂತನಾಗಿ ಈ ಕಾರ್ಯಕ್ರಮವನ್ನು ನೋಡಿದವರಿಗೆ, ಇದರಲ್ಲಿ ಜ್ಯೋತಿಷ್ಯದ ಸುತ್ತ ಹೆಣೆದುಕೊಂಡಿರುವ ಮೌಢ್ಯವನ್ನು ಇನ್ನಷ್ಟು ತೀಕ್ಷ್ಣವಾಗಿ, ಆಳವಾಗಿ ವಿಮರ್ಶೆಗೆ ಒಳಪಡಿಸಬಹುದಿತ್ತು. ಕೊರೋನಾದಂತಹ ಕಷ್ಟಕಾಲದಲ್ಲಿ ಬಿಲಸೇರಿ ಕೂತಿರುವ ಕಪಟಿಗಳನ್ನು ಬಾಲ ಹಿಡಿದು ಹೊರ ಎಳೆಯಬಹುದಿತ್ತು. ಆದರೆ ಕಾರ್ಯಕ್ರಮದ ಈ ಕಂತು ಅಷ್ಟೊಂದು ಆಳಕ್ಕೆ ಹೋಗದೇ, ಹಾಸ್ಯ ಕೇಂದ್ರಿತವಾಗಿ ಜ್ಯೋತಿಷ್ಯದ ಮೌಢ್ಯತೆಯನ್ನು ಮೇಲಿಂದ ಮೇಲೆ ವಿಮರ್ಶಿಸುತ್ತಾ ಹೋಗಿದೆ… ಧಾರ್ಮಿಕ ವಿಚಾರಗಳಂತೂ ಇಲ್ಲಿ ಪ್ರಸ್ತಾವನೆ ಆಗಿಯೇ ಇಲ್ಲ.. ಇಷ್ಟಕ್ಕೇ ಇಂತಹ ಅರಚಾಟ.. ಇನ್ನು ಜ್ಯೋತಿಷ್ಯದ ಸುತ್ತ ಅಡಕವಾಗಿರುವ ಪೂರ್ತಿ ಕಪಟತನವನ್ನು ಬಯಲು ಮಾಡಿದ್ದರೆ ಇನ್ನೇನಾಗುತ್ತಿತ್ತೋ.” ಎಂದು ಕೇಳಿದ್ದಾರೆ.

ಈ ನಡುವೆ ಚಾನೆಲ್ ನಿರೂಪಕ ವಾಲ್ಟರ್ ನಂದಳಿಕೆ ಹಾಗೂ ಕಲಾವಿದ ಅರವಿಂದ ಬೋಳಾರ್ ಚಾನೆಲ್‌ನಲ್ಲಿ ಬಂದು, “ಕಾರ್ಯಕ್ರಮದಲ್ಲಿ ನಾವು ಯಾವುದೆ ತಪ್ಪು ಮಾತುಗಳನ್ನು ಆಡಿಲ್ಲ. ಅದರಾಚೆಗೂ ಕೆಲವರು ಹಾಕುತ್ತಿರುವ ಅಶ್ಲೀಲ ಕಮೆಂಟುಗಳು ನಮಗೆ ತೀರಾ ಬೇಜಾರು ಮಾಡಿದೆ. ನಾವು ಏನೂ ತಪ್ಪಿ ಮಾತನಾಡಿಲ್ಲ ಆದರೂ ನಮ್ಮ ಮಾತಿನಿಂದ ನಿಮಗೆ ಬೇಜಾರು ಆಗಿದ್ದರೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ.


ಓದಿ: ಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...