ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇತ್ತೀಚಿನ ದಿನಗಳಲ್ಲಿ ಅನೇಕ ರಾಜಕೀಯ ಚರ್ಚೆಗೆ ಗುರಿಯಾಗುತ್ತಿದ್ದಾರೆ. ಬೆಡ್ ಬ್ಲಾಕಿಂಗ್, ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನ್ ಜಾಹೀರಾತು ಸೇರಿ ಇತ್ತೀಚೆಗೆ ತೇಜಸ್ವಿ ಸೂರ್ಯ ಹಲವು ವಿವಾದಗಳಿಗೆ ಕಾರಣರಾಗಿದ್ದರು. ಈಗ ಮತ್ತೊಮ್ಮೆ ಅವರ ವಿರುದ್ಧ ದೂರು ದಾಖಲಾಗಿದೆ. RTI ಕಾರ್ಯಕರ್ತ ವಿಜಯ್ ಡೇನಿಸ್ ಅವರು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಲಾಕ್ ಡೌನ್ ನಿಯಮಗಳ ಉಲ್ಲಂಘನೆ ವಿಚಾರದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಕರ್ನಾಟಕದಲ್ಲಿ ಎಲ್ಲಾ ಹೊಟೇಲ್ ಗಳು ಪಾರ್ಸೆಲ್ ಸರ್ವಿಸ್ ಗಳನ್ನು ಮಾತ್ರ ನೀಡುತ್ತಿವೆ. ಯಾವುದೇ ಹೊಟೇಲ್ ಗಳಲ್ಲಿ ಊಟ ತಿನಿಸುಗಳನ್ನು ಸವಿಯಲು ಸಾರ್ವಜನಿಕರಿಗೆ ಇದುವರೆಗೆ ಅನುಮತಿಯಿಲ್ಲ. ಮುಖ್ಯಮಂತ್ರಿಯಿಂದ ಹಿಡಿದು ಸಾರ್ವಜನಿಕರವರೆಗೆ ಎಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆ. ಜನಪ್ರತಿನಿಧಿಗಳಂತೂ ಲಾಕ್ ಡೌನ್ ನಿಯಮವನ್ನು ಪಾಲಿಸಿ ಜನರಿಗೆ ಮಾದರಿಯಾಗಿ ವರ್ತಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಸಂಸದ ತೇಜಸ್ವಿ ಸೂರ್ಯ ಮಾತ್ರ ಲಾಕ್ ಡೌನ್ ನಿಯಮವನ್ನು ಪಾಲಿಸುವ ಉತ್ಸಾಹ ತೋರುತ್ತಿರುವಂತೆ ಕಾಣುತ್ತಿಲ್ಲ. ಸಂಸದ ತೇಜಸ್ವೀ ಸೂರ್ಯ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಹೊಟೇಲ್ ಒಂದರಲ್ಲಿ ಗಾಯಕ ವಿಜಯ ಪ್ರಕಾಶ್ ಅವರೊಂದಿಗೆ ರಾತ್ರಿಯ ಭೋಜನವನ್ನು ಸವಿದಿರುವ ಫೋಟೊಗಳು ವೈರಲ್ ಆಗಿವೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೊಟೇಲ್ ನಲ್ಲಿ ಗಾಯಕ ವಿಜಯ ಪ್ರಕಾಶ್ ಮತ್ತು ತೇಜಸ್ವಿ ಸೂರ್ಯ ಮಂಗಳವಾರ ಜೂನ್ 15 ರ ರಾತ್ರಿ ಭೋಜನವನ್ನು ಸವಿದಿದ್ದರು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು.
RTI ಕಾರ್ಯಕರ್ತ ವಿಜಯ್ ಡೆನ್ನಿಸ್ ಅವರು ಹಲಸೂರು ಗೇಟ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತೇಜಸ್ವಿ ಸೂರ್ಯ ಅವರ ಭೋಜನದ ವಿಷಯವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅವರ ನಡೆ NDMA ಆ್ಯಕ್ಟ್ ಮತ್ತು IPC ಸೆಕ್ಷನ್ ಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂಸದರ ವಿರುದ್ಧ ತಕ್ಷಣವೇ FIR ದಾಖಲಿಸಬೇಕು ಎಂದು ವಿಜಯ್ ಡೆನ್ನಿಸ್ ತಮ್ಮ ದೂರಿನಲ್ಲಿ ಪೊಲೀಸರನ್ನು ಆಗ್ರಹಿಸಿದ್ದಾರೆ.
As per NDMA rules people can't sit inside hotel and have food only take away are allowed. @Tejasvi_Surya doesn't know the rule of land he and Singer Vijaya Prakash having food inside Nisarga hotel which is next @DgpKarnataka office. When are you filing FIR against MP @Copsview ? pic.twitter.com/xUXe6hKf94
— Kashyap Nandan (@kashyapnandan_) June 16, 2021
ವಿಜಯ್ ಡೆನ್ನಿಸ್ ದೂರು ದಾಖಲಿಸಿ ದಿನ ಕಳೆದಿದ್ದರೂ ಇದುವರೆಗೆ ಪೊಲೀಸರು ಈ ಸಂಬಂಧ ಸಂಸದರ ವಿರುದ್ಧ ಯಾವುದೇ FIR ದಾಖಲಿಸಿರುವುದಿಲ್ಲ. ಪ್ರತಿಕ್ರಿಯೆಗಾಗಿ ಠಾಣಾ ಅಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಉತ್ತರಿಸಲು ನಿರಾಕರಿಸಿದ್ದಾರೆ.
ರಾಜ್ಯದಲ್ಲಿ ಕಠಿಣ ನಿರ್ಬಂಧಗಳ ಕಾರಣದಿಂದ ಕೊರೋನಾ ಎರಡನೇ ಅಲೆಯ ತೀವ್ರತೆ ಸಾಕಷ್ಟು ಇಳಿಮುಖವಾಗಿದೆ. ತಜ್ಞರು ಕೊರೋನಾ 3 ನೇ ಅಲೆಯನ್ನು ನಿರೀಕ್ಷಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಂಜೆ 7 ರ ನಂತರ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಕೂಡ ಜಾರಿಯಲ್ಲಿದೆ. ಅಗತ್ಯ ಸೇವೆಗಳ ಹೊರತುಪಡಿಸಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧವಿದೆ. ಆದರೆ ಇದೆಲ್ಲವನ್ನೂ ಕಡೆಗಣಿಸಿ ಸಂಸದರು ಹೊಟೇಲ್ ನಲ್ಲಿ ಊಟಕ್ಕೆ ತೆರಳಿರುವುದು ಎಲ್ಲರಲ್ಲೂ ಆಶ್ಚರ್ಯವನ್ನು ಹುಟ್ಟುಹಾಕಿದೆ. ಕೊರೋನಾ ವಿರುದ್ಧ ಉಡಾಫೆಯ ವರ್ತನೆ ಸಲ್ಲದು ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ :ನಿಯಂತ್ರಿಸಲು ಸಾಧ್ಯವಾಗದ ಎಲ್ಲವನ್ನೂ ಮೋದಿ ಸರ್ಕಾರ ಧ್ವಂಸ ಮಾಡುತ್ತಿದೆ: ಮಮತಾ ಬ್ಯಾನರ್ಜಿ


