ಲಂಚಕ್ಕೆ ಬೇಡಿಕೆ, ಕಿರುಕುಳ, ಬೆದರಿಕೆ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಮುನಿರತ್ನ ನಾಯ್ಡು ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ತನ್ನ ಸಹಚರರೊಂದಿಗೆ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೋಲಾರದ ನಂಗಲಿ ಚೆಕ್‌ಪೋಸ್ಟ್ ಬಳಿ ಬಂಧಿಸಲಾಗಿದೆ. ಶುಕ್ರವಾರ ವೈಯಾಲಿಕಾವಲ್ ಪೊಲೀಸರು ನಾಯ್ಡು ವಿರುದ್ಧ ಎರಡು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ನಂತರ, ಕೋಲಾರ ಜಿಲ್ಲಾ ಪೊಲೀಸರ ನೆರವಿನೊಂದಿಗೆ ಅವರ ಬಂಧನವಾಗಿದೆ.
ಎಫ್‌ಐಆರ್‌ಗಳು ಮತ್ತು ಆಡಿಯೊ ಸಾಕ್ಷ್ಯಗಳು ನಾಯ್ಡು ಅವರ ಬಂಧನಕ್ಕೆ ಕಾರಣವಾಗಿವೆ. ದೂರುಗಳು, 2019 ಮತ್ತು 2024 ರ ನಡುವಿನ ಘಟನೆಗಳನ್ನು ಒಳಗೊಂಡಿವೆ. ಕಸ ವಿಲೇವಾರಿಗೆ 10 ಆಟೋರಿಕ್ಷಾಗಳನ್ನು ಖರೀದಿಸುವ ನೆಪದಲ್ಲಿ ನಾಯ್ಡು ₹30 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು ₹ 20 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಚೆಲುವರಾಜು ಅವರು ಮೊದಲ ಎಫ್‌ಐಆರ್ ದಾಖಲಿಸಿದ್ದಾರೆ. ಹಣ ಕೊಡಲು ನಿರಾಕರಿಸಿದಾಗ ನಾಯ್ಡು ಸಹಚರರಿಂದ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಚೆಲುವರಾಜು ಆರೋಪಿಸಿದ್ದಾರೆ.
ಎರಡನೇ ಎಫ್‌ಐಆರ್ ಅನ್ನು ಮಾಜಿ ಕಾರ್ಪೊರೇಟರ್ ವೇಲುನಾಯಕರ್ ಎಂ ದಾಖಲಿಸಿದ್ದಾರೆ, ನಾಯ್ಡು ಅವರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುನಿರತ್ನ ಅವರು ತನ್ನ ಮೇಳಿನ ಆರೋಪಗಳನ್ನು ಅಲ್ಲಗಳೆದಿದ್ದು, ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ. ಗುತ್ತಿಗೆದಾರರಿಗೆ ಬೆದರಿಕೆ ಹಾಕುವ ಸಂದರ್ಭದಲ್ಲಿ ನಾಯ್ಡು ಅವರು ಒಕ್ಕಲಿಗರು ಮತ್ತು ದಲಿತರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಕೂಡ ಇತ್ತೀಚೆಗೆ ವೈರಲ್ ಆಗಿತ್ತು.
ಈ ಆರೋಪವನ್ನು ನಾಯ್ಡು ತಳ್ಳಿಹಾಕಿದ್ದು, ಆಡಿಯೋ ತಿರುಚಲಾಗಿದೆ ಎಂದು ಹೇಳಿದ್ದಾರೆ. “ತಂತ್ರಜ್ಞಾನವು ಯಾವುದೇ ವ್ಯಕ್ತಿಯ ಧ್ವನಿಯನ್ನು ನಕಲಿಸಲು ಅವಕಾಶ ನೀಡುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಧ್ವನಿಯನ್ನು ನಕಲು ಮಾಡಿದ ನಾಲ್ವರನ್ನು ಬಂಧಿಸಿದ ಪ್ರಕರಣದ ಬಗ್ಗೆ ನೀವು ಕೇಳಿಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.
ಅಲ್ಲದೆ, ದೂರುದಾರ ಚೆಲುವರಾಜು ಜತೆ ಸಂವಹನ ನಡೆಸಿರುವುದನ್ನು ಸಾಬೀತುಪಡಿಸಲಿ ಎಂದು ತನಿಖಾಧಿಕಾರಿಗಳಿಗೆ ಸವಾಲು ಹಾಕಿದರು.
ಈ ಪ್ರಕರಣಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ ಮುನಿರತ್ನ, ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಈ ಪ್ರಕರಣಗಳನ್ನು ಸಂಘಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಚೆಲುವರಾಜು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರೂ ಬಿಜೆಪಿ ಶಾಸಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಆಗ ಸಿದ್ದರಾಮಯ್ಯ ಅವರಿಗೆ ಕಾನೂನು ಕ್ರಮ ಮತ್ತು ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ; ಲಂಚ ಮತ್ತು ಜಾತಿ ನಿಂದನೆ | ಹಿರಿಯ ಬಿಜೆಪಿ ಶಾಸಕ ಮುನಿರತ್ನ ಬಂಧನ


