ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಜಾತಿ ಘರ್ಷಣೆ ನಡೆದಿದ್ದು, ಎರಡು ಗುಂಪುಗಳ ನಡುವಿನ ಮಾರಾಮಾರಿಗೆ ಇಬ್ಬರು ಮೃತಪಟ್ಟಿರುವ, ಅನೇಕರು ಗಾಯಗೊಂಡಿದ್ದಾರೆ.
ಗ್ರಾಮದಲ್ಲಿ ಗ್ರಾಮಪಂಚಾಯ್ತಿ ಪಕ್ಕದ ಜಾಗದಲ್ಲಿ ವಾಲ್ಮೀಕಿ ಪ್ರತಿಮೆ ಇಟ್ಟು ಬೋರ್ಡ್ ಹಾಕಲು ನಾಯಕ (ಎಸ್‌ಟಿ) ಸಮುದಾಯದವರು ಮುಂದಾಗಿದ್ದಾರೆ. ಆದರೆ ಇದಕ್ಕೆ ಅದೇ ಗ್ರಾಮದ ದಲಿತ ಮುಖಂಡ ಸಣ್ಣ ಹನುಮಂತರವರು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮದಲ್ಲಿ ಜಾತಿಗೊಂದು ಪ್ರತಿಮೆ ಮಾಡಲು ಬದಲು ಬುದ್ಧ, ಬಸವ ಮತ್ತು ಅಂಬೇಡ್ಕರ್‌ರವರ ಪ್ರತಿಮೆ ಇಟ್ಟು ವಿಶ್ವ ಮಾನವ ಸಂದೇಶ ಸಾರೋಣ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಅಲ್ಲಿನ ಮುಸ್ಲಿಂ ಸಮುದಾಯದವರು ಸಹ ಬೆಂಬಲಿಸಿದ್ದರು.
ಇದು ಅಲ್ಲಿನ ನಾಯಕ ಸಮುದಾಯಕ್ಕೆ ಸಿಟ್ಟು ತಂದಿತ್ತು. ಅವರು ದಲಿತ ಮುಖಂಡ ಸಿಪಿಐ -ಎಂಎಲ್ ಲಿಬರೇಷನ್ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಸಣ್ಣ ಹನುಮಂತ ಮೇಲೆ ಸಿಡಿಮಿಡಿಗೊಂಡಿದ್ದರು ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಗ್ರಾಮ ತೊರೆದಿದ್ದರು. ಈ ವಿಚಾರದಲ್ಲಿ ನಾಯಕ ಸಮುದಾಯದವರು ಮುಸ್ಲಿಮರ ಮೇಲೆ ಕೋಪಗೊಂಡಿದ್ದರು ಎನ್ನಲಾಗಿದೆ.
ಮೊಹರಂ ಹಬ್ಬದ ಮೂರನೇ ದಿನದಂದು ಹೂ ತರಲು ಹೋಗಿದ್ದ ಭಾಷಾ ಸಾಬ್ ಎಂಬ ಮುಸ್ಲಿಂ ಯುವಕನೊಂದಿಗೆ ಜಗಳವಾಗಿ ಹೊಡೆದಾಟವಾಗಿತ್ತು. ವಾಲ್ಮೀಕಿ ಸಮುದಾಯದವರು ಹಲವು ಮುಸ್ಲಿಂ ಯುವಕರಿಗೆ ಹಲ್ಲೆ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಮುಸ್ಲಿಮರು ದಲಿತರ ಜೊತೆಗೂಡಿ ಹೊಡೆದಾಟಕ್ಕೆ ಧುಮುಕಿದರು. ಇದರಿಂದಾಗಿ ಭಾಷಾ ಸಾಬ್ (27) ಮತ್ತು ನಾಯಕ ಸಮುದಾಯದ ಯಂಕಪ್ಪ ತಳವಾರ (60) ಹತ್ಯೆಯಾಗಿದ್ದಾರೆ. 10ಕ್ಕೂ ಹೆಚ್ಚು ಜನರಿಗೆ ಪೆಟ್ಟು ತಗುಲಿದೆ. ದಲಿತ ಸಮುದಾಯದ ಧರ್ಮಣ್ಣ ಹರಿಜನ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವಾರಣ ಸೃಷ್ಟಿಯಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಗ್ರಾಮದಲ್ಲಿ ಪೊಲೀಸ್ ಪಹರೆ ನಿಂತಿದ್ದು ಆಗಸ್ಟ್ 20ರ ವರೆಗೂ ಸೆಕ್ಷನ್ 144 ಅನ್ವಯ ನಿಷೇದಾಜ್ಞೆ ಹೇರಲಾಗಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲ್ಲಶೆಟ್ಟಿ ತಿಳಿಸಿದ್ದಾರೆ.
ಯಲ್ಲಾಲಿಂಗ ಕೊಲೆ ಪ್ರಕರಣ
ಯಲ್ಲಾಲಿಂಗ ಎಂಬ ಕುರುಬ ಸಮುದಾಯಕ್ಕೆ ಸೇರಿದ್ದ ವಿದ್ಯಾರ್ಥಿ ಖಾಸಗಿ ಸುದ್ದಿವಾಹಿನಿಗೆ ತಮ್ಮ ಗ್ರಾಮದ ಸಮಸ್ಯೆಗಳನ್ನು ಹೇಳಿದ್ದಕ್ಕೆ ಆತನನ್ನು 2015ರ ಜನವರಿ 11 ರಂದು ಕೊಲೆಗೈಯ್ಯಲಾಗಿತ್ತು. ಆತನ ಶವ ಕೊಪ್ಪಳದ ರೈಲು ನಿಲ್ದಾಣದಲ್ಲಿ ಪತ್ತೆಯಾದ ನಂತರ ಅನುಮಾನ ಬಂದಿದ್ದರಿಂದ ಹೆಚ್ಚಿನ ತನಿಖೆಯ ನಂತರ ಕೊಲೆ ಎಂದು ತಿಳಿದುಬಂದಿತ್ತು. ಈ ಪ್ರಕರಣ ರಾಜ್ಯದಂತ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೇ ಬೃಹತ್ ‘ಹುಲಿಹೈದರ್ ಚಲೋ’ ಹೋರಾಟ ಸಹ ನಡೆದಿತ್ತು. ಈ ಕೊಲೆ ಆರೋಪದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿಯವರ ಆಪ್ತರು ಎನ್ನಲಾದ ಹನುಮೇಶ್ ನಾಯಕ್ ಮತ್ತು ಮಹಾಂತೇಶ ನಾಯಕ್ ಸೇರಿ 9 ಜನರನ್ನು ಬಂಧಿಸಲಾಗಿತ್ತು.
ಆ ಹೋರಾಟದಲ್ಲಿ ದಲಿತ ಮುಖಂಡ ಸಣ್ಣ ಹನುಮಂತರವರು ಹೋರಾಟದ ನೇತೃತ್ವ ವಹಿಸಿದ್ದರು. ಇದು ಆರೋಪಿ ಹನುಮೇಶ್ ನಾಯಕ್‌ಗೆ ಸೇಡು ಮೂಡುವಂತೆ ಮಾಡಿತ್ತು. ಹಾಗಾಗಿ ಆತ ತನ್ನ ಸಮುದಾಯದವರನ್ನು ಎತ್ತುಕಟ್ಟಿ ಸಣ್ಣ ಹನುಮಂತ ಮೇಲೆ ಹಲ್ಲೆಗೆ ಪ್ರಚೋದನೆ ನೀಡುತ್ತಿದ್ದ. ಅದರ ಭಾಗವಾಗಿ ಈ ಗಲಾಟೆ ನಡೆದಿದೆ. ಆದರೆ ಸಣ್ಣ ಹನುಮಂತುರವರು ತಪ್ಪಿಸಿಕೊಂಡಿದ್ದು, ಇಬ್ಬರು ಬಲಿಯಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲೆ ಆರೋಪಿಯ ಮದುವೆಯಲ್ಲಿ ಪೊಲೀಸರು ಭಾಗಿ: ತೀವ್ರ ಖಂಡನೆ – ಕಡ್ಡಾಯ ರಜೆ ಶಿಕ್ಷೆ



People gave gone mad. Unnecessaryly two innocent lives