ಭಾರತವು ಅರ್ಥಿಕವಾಗಿ ಸದೃಢವಾಗುತ್ತಿರುವ ಹೊರತಾಗಿಯೂ ದೇಶದಲ್ಲಿ ಪ್ರಾಯಕ್ಕೆ ಸರಿಯಾದ ದೇಹದ ಬೆಳವಣಿಗೆಯಿರದ (ಕುಬ್ಜ) ಮಕ್ಕಳ ಸಂಖ್ಯೆಯು ಸಬ್-ಸಹರನ್ ಆಫ್ರಿಕಾದ ರಾಷ್ಟ್ರಗಳ ಮಕ್ಕಳಿಗಿಂತ ಹೆಚ್ಚಿದೆ. ಭಾರತದಲ್ಲಿ ಜಾತಿ ತಾರತಮ್ಯ ಅಧಿಕವಾಗಿರುವುದೇ ಇದಕ್ಕೆ ಕಾರಣವೆಂದು ‘ಜರ್ನಲ್ ಆಫ್ ಇಕನಾಮಿಕ್ಸ್, ರೇಸ್ ಆ್ಯಂಡ್ ಪಾಲಿಸಿ‘ ನಿಯತಕಾಲಿಕೆ ಅಕ್ಟೋಬರ್ 26ರಂದು ಪ್ರಕಟಿಸಿದ ಅಧ್ಯಯನ ವರದಿಯಯಲ್ಲಿ ತಿಳಿಸಿದೆ.
ಅರ್ಥಶಾಸ್ತ್ರಜ್ಞರಾದ ಅಶ್ವಿನಿ ದೇಶಪಾಂಡೆ ಮತ್ತು ರಾಜೇಶ್ ರಾಮಚಂದ್ರನ್ ಅವರು ರಚಿಸಿರುವ ಅಧ್ಯಯನ ವರದಿಯಲ್ಲಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಂತಹ ಐತಿಹಾಸಿಕವಾಗಿ ಕಡೆಗಣಿಸಲ್ಪಟ್ಟಿರುವ ಸಮುದಾಯಗಳ ಮಕ್ಕಳು ಕುಳ್ಳಗಿರುವ ಸಾಧ್ಯತೆಯು, ಪ್ರಬಲ ಜಾತಿಯ ಮಕ್ಕಳಿಗಿಂತ ಶೇ.50ರಷ್ಟು ಅಧಿಕವೆಂದು ಹೇಳಲಾಗಿದೆ.
ಪ್ರಬಲ ಪಂಗಡಗಳ ಶೇ.27ರಷ್ಟು ಮಕ್ಕಳಲ್ಲಿ ಕುಬ್ಜತೆಯುು ಕಂಡು ಬಂದಿದೆ. ಸಬ್-ಸಹರನ್ ಆಫ್ರಿಕಾದಲ್ಲಿ ಶೇ.34ರಷ್ಟು ಮಕ್ಕಳು ವಯಸ್ಸಿಗಿಂತ ಕಡಿಮೆ ಎತ್ತರವನ್ನು ಹೊಂದಿದ್ದರೆ, ಭಾರತದಲ್ಲಿ ಅಂತಹ ಮಕ್ಕಳ ಸಂಖ್ಯೆ ಒಟ್ಟಾರೆ ಶೇ.36 ಆಗಿದೆ. ದೀರ್ಘಕಾಲದ ಅಥವಾ ಪುನರಾವರ್ತಿತ ಅಪೌಷ್ಟಿಕತೆಯು ಮಕ್ಕಳ ಕುಬ್ಜತನಕ್ಕೆ ಕಾರಣವೆಂದು ವರದಿಯು ವಿವರಿಸಿದೆ.
ಸಬ್-ಸಹರನ್ ಆಫ್ರಿಕಾದ ಮಕ್ಕಳು ಭಾರತದಲ್ಲಿರುವುದಕ್ಕಿಂತ ‘ಕೆಟ್ಟ ರೋಗ ಪರಿಸರ ಮತ್ತು ಕಡಿಮೆ ಕ್ಯಾಲೋರಿ ಸಮಸ್ಯೆ’ಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದ ಮಕ್ಕಳಲ್ಲಿ ಹೆಚ್ಚಿನ ಕುಬ್ಜತೆ ಕಂಡು ಬರುತ್ತಿರುವುದನ್ನು ‘ಇಂಡಿಯನ್ ಎನಿಗ್ಮಾ’ಎಂದು ಕರೆದಿರುವ ವರದಿಯು, ಕೇವಲ ಪ್ರಬಲ ವರ್ಗದ ಮಕ್ಕಳನ್ನು ಆಫ್ರಿಕಾದೊಂದಿಗೆ ಹೋಲಿಸಿದರೆ ಭಾರತದ ಸ್ಥಿತಿಯು ಚೆನ್ನಾಗಿದೆ ಎಂದಿದೆ.
ವರದಿಯಲ್ಲಿ ಬಹಿರಂಗಗೊಂಡಿರುವ ವಿಚಾರ ಆಶ್ಚರ್ಯಪಡುವಂತಲ್ಲ. ಸಾಮಾನ್ಯವಾಗಿ ಭಾರತದಲ್ಲಿ ಪ್ರಬಲ ವರ್ಗದ ಮಕ್ಕಳು ಉತ್ತಮ ಆಹಾರ ಪಡೆಯುತ್ತಿದ್ದಾರೆ. ರೋಗಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗದ ಮತ್ತು ಬುಡಕಟ್ಟು ವರ್ಗದ ಮಕ್ಕಳು ಪೌಷ್ಟಿಕ ಆಹಾರ ಮತ್ತು ರೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ದೇಶಪಾಂಡೆ ಮತ್ತು ರಾಮಚಂದ್ರನ್ ಅವರ ಅಧ್ಯಯನ ವರದಿಯನ್ನು ಭಾರತದ ಐದು ವರ್ಷದೊಳಗಿನ 2 ಲಕ್ಷ ಮಕ್ಕಳನ್ನು ಒಳಗೊಂಡ ರಾಷ್ಟ್ರವ್ಯಾಪಿ ಗೃಹ ಸಮೀಕ್ಷೆಯ ಆಧಾರದ ಮೇಲೆ ರಚಿಸಲಾಗಿದೆ. ಇದು 2019 ರಿಂದ 2021ರವರೆಗಿನ ಭಾರತದ ರಾಷ್ಟ್ರೀಯ ಆರೋಗ್ಯ ಮತ್ತು ಜನಸಂಖ್ಯಾ ಸಮೀಕ್ಷೆಗಳ ಮೇಲಿನ ಸಂಶೋಧನೆಗಳನ್ನು ಆಧರಿಸಿದೆ. ಅಲ್ಲದೆ, ಸಬ್-ಸಹರನ್ ಆಫ್ರಿಕಾ ದೇಶಗಳ 2015ರ ನಂತರದ ದತ್ತಾಂಶಗಳನ್ನು ಇದಕ್ಕಾಗಿ ವಿಶ್ಲೇಷಿಸಲಾಗಿದೆ.
ಭಾರತದಲ್ಲಿ ವಯಸ್ಸಿಗೆ ಅನುಗುಣವಾದ ಎತ್ತರವನ್ನು ಹೊಂದಿರದ ಮಕ್ಕಳ ಸಂಖ್ಯೆ 2022ರಲ್ಲಿ 31.7 ಶೇಖಡ ಆಗಿದ್ದರೆ, ಸಬ್-ಸಹರನ್ ಆಫ್ರಿಕಾದ ರಾಷ್ಟ್ರಗಳಲ್ಲಿ ಅಂತಹ ಮಕ್ಕಳ ಸಂಖ್ಯೆ 31.3 ಶೇ. ಆಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್), ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಬ್ಯಾಂಕ್ ಪ್ರಕಟಿಸಿದ ಮಕ್ಕಳ ಪೌಷ್ಟಿಕತೆ ಕುರಿತ ಜಂಟಿ ಅಂದಾಜು ವರದಿ ತಿಳಿಸಿದೆ.
ಅಧ್ಯಯನ ವರದಿ ಪ್ರಕಟಿಸಿರುವ ಅರ್ಥಶಾಸ್ತ್ರಜ್ಞರಾದ ಅಶ್ವಿನಿ ದೇಶಪಾಂಡೆ ಹರಿಯಾಣದ ಅಶೋಕ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರೆ, ರಾಮಚಂದ್ರನ್ ಅವರು ಮೊನಾಶ್ ವಿಶ್ವವಿದ್ಯಾಲಯ ಮಲೇಷ್ಯಾದಲ್ಲಿ ಹಿರಿಯ ಉಪನ್ಯಾಸಕರಾಗಿದ್ದಾರೆ.
ಭಾರತದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಕುಬ್ಜತೆಯನ್ನು ಪರಿಹರಿಸಲು ಏನಾದರು ನೀತಿ ರೂಪಿಸುವುದಾದರೆ, ಅದರಲ್ಲಿ ಜಾತಿಯನ್ನು ಮುಖ್ಯವಾಗಿ ಪರಿಗಣಿಸಬೇಕು ಎಂದು ಅಧ್ಯಯನ ವರದಿ ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ‘ಜೈ ಶ್ರೀ ರಾಮ್’ ಘೋಷಣೆ ಕೂಗಿಲ್ಲ ಎಂಬ ಕಾರಣಕ್ಕೆ ಊಟ ನಿರಾಕರಿಸಿದ ಎನ್‌ಜಿಒ ಸಿಬ್ಬಂದಿ; ವಿಡಿಯೊ ವೈರಲ್


