Homeಮುಖಪುಟನಗರ ಭಾರತದಲ್ಲಿ ವಸತಿ ಪ್ರತ್ಯೇಕೀಕರಣ ಮತ್ತು ಜಾತಿಯ ಉಳಿಕೆ

ನಗರ ಭಾರತದಲ್ಲಿ ವಸತಿ ಪ್ರತ್ಯೇಕೀಕರಣ ಮತ್ತು ಜಾತಿಯ ಉಳಿಕೆ

- Advertisement -
- Advertisement -

ಬಿ.ಆರ್. ಅಂಬೇಡ್ಕರ್ ಅವರು “ಕೆಳ ಜಾತಿ”ಯ ಜನರು ಸ್ಥಳೀಯತೆಯಿಂದ ಪಾರಾಗಲು ಮತ್ತು ನಗರೀಕರಣವು ಒದಗಿಸಬಹುದಾದ ಬಹುಜನಾಂಗೀಯ ಕೂಡು ಸಂಸ್ಕೃತಿಯ (ಕಾಸ್ಮೋಪಾಲಿಟನಿಸಂ) ಮೌಲ್ಯಗಳ ಲಾಭ ಪಡೆಯಲು ನಗರಗಳತ್ತ ವಲಸೆ ಹೋಗಬೇಕು ಎಂದು ಪ್ರತಿಪಾದಿಸಿದ್ದರು. ಭಾರತದ ಐದು ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ದಿಲ್ಲಿ, ಕೋಲ್ಕತಾ ಮತ್ತು ಮುಂಬಯಿಯ 2011ರ ಬ್ಲಾಕ್ ಮಟ್ಟದ ಜನಸಂಖ್ಯಾ ದತ್ತಾಂಶಗಳನ್ನು ಬಳಸಿಕೊಂಡು ಮಾಡಲಾದ ಲೆಕ್ಕಾಚಾರದ ಆಧಾರದಲ್ಲಿ ಭಾರತದ ನಗರಗಳು ಅತ್ಯಂತ ಹೆಚ್ಚು ಪ್ರತ್ಯೇಕೀಕರಣ ಹೊಂದಿರುವುದು ಮಾತ್ರವಲ್ಲ, ಜನಸಂಖ್ಯೆಯ ಪ್ರಮಾಣವು ಪ್ರತ್ಯೇಕೀಕರಣದ ಪ್ರಮಾಣದ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಈ ಅಧ್ಯಯನ ಲೇಖನವು ಕಂಡುಕೊಳ್ಳುತ್ತದೆ. ವಾಸ್ತವವಾಗಿ ಅತ್ಯಂತ ದೊಡ್ಡ ನಗರಗಳೇ ಅತ್ಯಂತ ಹೆಚ್ಚಾಗಿ ವಿಭಜಿತವಾಗಿವೆ.

ನಗರ ಭಾರತದ ಉದ್ದಗಲಕ್ಕೂ ಜಾತಿ ಅಥವಾ ಧರ್ಮದ ಗುರುತು ಆಧರಿತ ವಸತಿ ತಾರತಮ್ಯವು ಸಾಮಾನ್ಯ ವಿಷಯವಾಗಿದೆ. (ಥೋರಟ್ ಮತ್ತಿತರರು, 2015). ಸಾಮಾನ್ಯವಾಗಿ ಮುಗ್ಧವಾದ ’ಸಾಂಸ್ಕೃತಿಕ ಆದ್ಯತೆ’ಯ ಕಾರಣ ನೀಡಲಾಗುವ ಇಂತಹ ತಾರತಮ್ಯವು ಎಷ್ಟು ವ್ಯಾಪಕವಾಗಿದೆ? ನಗರ ಭಾರತದಲ್ಲಿ ನೆರೆಹೊರೆಯ ಪ್ರತ್ಯೇಕೀಕರಣದ ಕುರಿತ ದೃಷ್ಟಾಂತ ಸಾಕ್ಷ್ಯಗಳು, ಆಧುನೀಕರಣ ಮತ್ತು ನಗರೀಕರಣಗಳು- ಭಾರತದ ಸಾಂಪ್ರದಾಯಿಕ ಜಾತಿ ಸಮಾಜದ ರಚನೆಯ ಮುಖ್ಯ ಗುಣಲಕ್ಷಣವಾದ ವಸತಿ ಪ್ರದೇಶಗಳ ಸಂಪೂರ್ಣ ಪ್ರತ್ಯೇಕೀಕರಣವನ್ನು ತಡೆಯುವಂತಹ ಯಾವುದೇ ಪರಿಣಾಮ ಬೀರಿಲ್ಲ- ಎಂದು ತಿಳಿಸುತ್ತವೆ. ಆದಾಗ್ಯೂ, ನೆರೆಹೊರೆಯ ಮಟ್ಟದಲ್ಲಿ ವಸತಿ ಪ್ರತ್ಯೇಕೀಕರಣದ ವಾಸ್ತವಿಕ ವಿನ್ಯಾಸಗಳ ಕುರಿತು ಭಾರತದಲ್ಲಿ ದೇಶವ್ಯಾಪಿ ವ್ಯವಸ್ಥಿತ ದತ್ತಾಂಶಗಳಿಲ್ಲ. ದೊಡ್ಡ ನಗರಗಳು ಸಣ್ಣ ಪಟ್ಟಣಗಳಿಗಿಂತ ಕಡಿಮೆ ಪ್ರತ್ಯೇಕೀಕರಣ ಹೊಂದಿವೆಯೆ? ಹೆಚ್ಚಿನ ಜಾತಿ ವೈವಿಧ್ಯ ಹೊಂದಿರುವ ನಗರಗಳು ಮತ್ತು ಪಟ್ಟಣಗಳು ಕಡಿಮೆ ಪ್ರತ್ಯೇಕೀಕರಣ ಹೊಂದಿವೆಯೆ?

ವಸತಿ ಪ್ರತ್ಯೇಕೀಕರಣವು ಹೇಗೆ ಗುಂಪುಗಳ ನಡುವಣ ಸಾಮಾಜಿಕ ಕಂದರವು ಹೆಚ್ಚುವುದಕ್ಕೆ ಕಾರಣವಾಗುತ್ತವೆ ಮತ್ತು ಆ ಮೂಲಕ ಐತಿಹಾಸಿಕ ತಾರತಮ್ಯ ವ್ಯವಸ್ಥೆಯನ್ನು ಮತ್ತು ಸಾಮಾಜಿಕ ಪೂರ್ವಗ್ರಹಗಳನ್ನು ಗಟ್ಟಿಗೊಳಿಸುತ್ತವೆ ಎಂಬುದನ್ನು ವಿಶ್ವದಾದ್ಯಂತ ಸಿಕ್ಕುವ ಸಾಕ್ಷ್ಯಾಧಾರಗಳು ತೋರಿಸಿಕೊಟ್ಟಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಯುಎಸ್‌ಎಯ ನಗರಗಳಲ್ಲಿ ಆಫ್ರಿಕನ್ ಅಮೆರಿಕನ್ನರು ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಪ್ರತ್ಯೇಕೀಕರಣವು ಒಂದು ಚಿಂತನಾ ಸೆಲೆಯನ್ನೇ ಹುಟ್ಟುಹಾಕಿತ್ತು. ಜನಾಂಗೀಯ ಪ್ರತ್ಯೇಕೀಕರಣವು ಅಂಚಿಗೆ ಸರಿಸಲ್ಪಟ್ಟ ದಮನಿತ ಸಮುದಾಯಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದೂರಮಾಡುವುದರಿಂದಾಗಿ, ಅದು ಅಭಿವೃದ್ಧಿ ಪ್ರಕ್ರಿಯೆಗೆ ಮಾರಕವಾಗಿದೆ ಎಂದು ಆ ಚಿಂತನಾ ಸೆಲೆ ವಾದಿಸುತ್ತದೆ. (ಕಟ್ಲರ್ ಮತ್ತು ಗ್ಲೇಸರ್, 1997). ಹೆಚ್ಚು ಇತ್ತೀಚೆಗೆ ಚೆಟ್ಟಿ ಮತ್ತಿತರರು (2014) ತೀವ್ರತಮವಾದ ಪ್ರತ್ಯೇಕೀಕರಣವು ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಯನ್ನು ಇನ್ನಷ್ಟು ಕಡಿಮೆಗೊಳಿಸುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ.

ಭಾರತದಲ್ಲಿ ದೊಡ್ಡದೊಡ್ಡ ಜನಸಮೂಹಗಳ ಜಾಗಗಳಲ್ಲಿ ಜಾತಿ ಆಧರಿತ ಸಾಮಾಜಿಕ ಮತ್ತು ಆರ್ಥಿಕ ಅವಗಣನೆಗೆ ’ಪ್ರದೇಶಗಳ ಪ್ರತ್ಯೇಕೀಕರಣ’ ಮೂಲ ಕೇಂದ್ರವಾಗಿದೆ. (ಘುರ್ಯೆ,1969). ಭಾರತದ ಹಲವಾರು ಭಾಗಗಳಲ್ಲಿ ಹಳ್ಳಿಗಳ ವಸತಿಗಳು ಇನ್ನೂ ಜಾತಿ ಆಧರಿತ ಕೇರಿಗಳಾಗಿ ಪ್ರತ್ಯೇಕೀಕರಣಗೊಂಡಿದ್ದು, ಕೆಳಜಾತಿಯ ಗುಂಪುಗಳು ಊರಂಚಿನಲ್ಲಿ ಅಥವಾ ಹೊರಗಿನ ಜಾಗಗಳಲ್ಲಿ ವಸತಿಗಳನ್ನು ಹೊಂದಿವೆ. ಈ ತಾರತಮ್ಯದ ಜಾಗ ಹಂಚಿಕೆಯು ಸಾಮಾಜಿಕ ತಾರತಮ್ಯ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಮುಖ್ಯ ಕಾರಣವಾಗಿದೆ, ಮಾತ್ರವಲ್ಲದೆ, ಕುಡಿಯುವ ನೀರಿನಂತಹ ಸಾರ್ವಜನಿಕ ಸೌಲಭ್ಯಗಳ ಲಭ್ಯತೆಯಲ್ಲಿ ತಾರತಮ್ಯಕ್ಕೆ ಕಾರಣವಾಗಿದೆ. (ಮುಖರ್ಜಿ, 1968). ಇಂತಹ ತಾರತಮ್ಯದ ಆಚರಣೆಗಳಿಗೆ ವಿರುದ್ಧವಾಗಿಯೇ ಭಾರತೀಯ ಸಂವಿಧಾನದ ಜನಕ ಬಿ.ಆರ್. ಅಂಬೇಡ್ಕರ್ ಅವರು ಅವಗಣಿತ ಜಾತಿಗುಂಪುಗಳಾದ ದಲಿತರು ಹೆಚ್ಚುಹೆಚ್ಚಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಬೇಕು ಎಂದು ವಾದಿಸಿದ್ದರು. ನಗರ ಪ್ರದೇಶಗಳಿಗೆ ವಲಸೆಯು ನೀಡಬಹುದಾದ ಭರವಸೆಯೇ ಇದರ ಹಿಂದಿನ ಮೂಲ ಊಹೆಯಾಗಿತ್ತು. ನಗರವು ಒದಗಿಸುವ ಅಜ್ಞಾತತೆಯು ಜಾತಿ ಗುರುತಿನ ಹೊರೆಯನ್ನು ಕಡಿಮೆಗೊಳಿಸಿ, ಅದರ ಜಾಗದಲ್ಲಿ ವರ್ಗ ಗುರುತು ಬರುತ್ತದೆ ಎಂಬುದೇ ಆ ಊಹೆಯಾಗಿತ್ತು. (ಆಂದ್ರೆ ಬೀತೇ Beteille, 1997). ಆದುದರಿಂದ ಜಾತಿಯು ಗ್ರಾಮದಲ್ಲಿ ಮಾಡುವಂತಹ ಸ್ಥಳದ ವರ್ಗೀಕರಣದ ನಗರದಲ್ಲಿ  ನಿಂತುಹೋಗುತ್ತದೆ; (ಸ್ವಾಲ್ಲೋ, 1982). ಹಲವಾರು ಪ್ರಮುಖ ಸಾರ್ವಜನಿಕ ಬುದ್ಧಿಜೀವಿಗಳು ಜಾತಿ ಆಧರಿತ ಸ್ಥಳದ ಪ್ರತ್ಯೇಕೀಕರಣಕ್ಕೆ ನಗರೀಕರಣವೇ ಮದ್ದು; ಯಾಕೆಂದರೆ, ಜಾತಿಯು ದುರ್ಬಲವಾಗುತ್ತಿದೆ ಮತ್ತು ಭಾರತವು ನಗರೀಕರಣಗೊಳ್ಳುತ್ತಿರುವಂತೆಯೇ ಜಾತಿ ಇನ್ನಷ್ಟು ದುರ್ಬಲವಾಗಲಿದೆ ಎಂದು ಇನ್ನೂ ವಾದಿಸುತ್ತಿದ್ದಾರೆ. (ಪ್ರಸಾದ್, 2010). ಆಧುನಿಕ ಭಾರತದ ನಗರೀಕರಣದ ಅನುಭವವು ಈ ಪರಿಹಾರಕ್ಕೆ ಅನುಗುಣವಾಗಿದೆಯೇ? ಭಾರತವು ತೀವ್ರಗತಿಯಲ್ಲಿ ನಗರೀಕರಣವಾಗುತ್ತಿರುವಂತೆಯೇ ಜಾತಿ ಆಧರಿತ ಸ್ಥಳದ ಪ್ರತ್ಯೇಕೀಕರಣವು ಕಡಿಮೆಯಾಗುತ್ತಿದೆಯೇ?

ಪ್ರತ್ಯೇಕೀಕರಣವನ್ನು ಅಧ್ಯಯನ ಮಾಡುವಾಗ ವಾರ್ಡುಗಳನ್ನು ನೆರೆಹೊರೆಯ ಸ್ಥಳಾವಕಾಶದ ಅಳತೆಗೋಲಾಗಿ ಬಳಸುವುದರ ಮಿತಿಗಳು

2001 ಮತ್ತು 2011ರ ದಶವಾರ್ಷಿಕ ಜನಗಣತಿಗಳ ನಡುವೆ ನಗರ ಭಾರತದ ದಲಿತ ಜನಸಂಖ್ಯೆಯು ಶೇ.40 ಹೆಚ್ಚಿದೆ. ಐತಿಹಾಸಿಕವಾಗಿ ಕಡೆಗಣಿಸಲ್ಪಟ್ಟ ಮತ್ತು ಹಿಂದೆ ಅಸ್ಪೃಶ್ಯವಾಗಿದ್ದ ಈ ಗುಂಪುಗಳು ಹೇಗೆ ಭಾರತದ ಬೆಳೆಯುತ್ತಿರುವ ನಗರ ಕೇಂದ್ರಗಳಲ್ಲಿ ಬೆರೆತಿವೆ? ಈ ಪ್ರಶ್ನೆಗೆ ಉತ್ತರ ನೀಡಲು ನಮಗೆ ಒಂದು ಅತ್ಯಂತ ಸ್ಪಷ್ಟವಾದ ನೆರೆಹೊರೆಯ ಮಟ್ಟದ, ಸ್ಥಳಾವಕಾಶದ ಪ್ರತ್ಯೇಕೀಕರಣದ ವಿನ್ಯಾಸಗಳ- ನಗರಗಳ ನೆರೆಹೊರೆಗಳಲ್ಲಿ ಸಾಮಾಜಿಕ ಗುಂಪುಗಳ ವಿತರಣೆಯ- ವಿಶ್ಲೇಷಣೆ ಅಗತ್ಯವಿದೆ. ಆದರೆ, ಇತ್ತೀಚಿನವರೆಗೂ ನಗರೀಕರಣಗೊಳ್ಳುತ್ತಿರುವ ಭಾರತದಲ್ಲಿ ವಸತಿ ಪ್ರತ್ಯೇಕೀಕರಣದ ಕುರಿತು ವ್ಯವಸ್ಥಿತವಾಗಿ ವಿಶ್ಲೇಷಿಸಲು ನೆರೆಹೊರೆಯ ಮಟ್ಟದ ದತ್ತಾಂಶಗಳು ಲಭ್ಯವಿರಲಿಲ್ಲ.

ಐತಿಹಾಸಿಕವಾಗಿ ಭಾರತದ ಜನಗಣತಿಗಳು ಒಟ್ಟು ಮೂರು ಸ್ಥೂಲವಾದ ವಿಭಾಗಗಳಲ್ಲಿ ವರದಿ ಮಾಡುತ್ತವೆ: ವಾರ್ಡ್ ಮಟ್ಟದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಬುಡಕಟ್ಟು (ಎಸ್‌ಟಿ) ಮತ್ತು ಉಳಿದ ಇತರರು (ಒಟಿಎಚ್). ನಗರ ಪ್ರದೇಶಗಳಲ್ಲಿ ಒಂದು ವಾರ್ಡಿನ ಗಾತ್ರವು ಸಾಕಷ್ಟು ದೊಡ್ಡದಾಗಿದ್ದು, ಜನಸಂಖ್ಯೆಯ ಪ್ರಮಾಣವು ಅವುಗಳಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಉದಾಹರಣೆಗೆ, ಸಣ್ಣ ಪಟ್ಟಣಗಳಲ್ಲಿ, ವಾರ್ಡ್ ಒಂದರ ಜನಸಂಖ್ಯೆಯ ಪ್ರಮಾಣವು 1,500ದಿಂದ 6,000ದ ತನಕ ಇದ್ದರೆ, ಮಹಾನಗರಗಳಲ್ಲಿ ಅದು 30,000ದಿಂದ 2,00,000 ತನಕ ಇರಬಹುದು. (ಪ್ರಸಾದ್, 2006). ಆದುದರಿಂದ, ಪ್ರತ್ಯೇಕೀಕರಣದ ಅಧ್ಯಯನಕ್ಕಾಗಿ ವಿಶ್ಲೇಷಣೆ ಮಾಡಲು ಸ್ಥಳಾವಕಾಶದ ಘಟಕವಾಗಿ ವಾರ್ಡ್ ಅಷ್ಟೊಂದು ಉಪಯುಕ್ತವಲ್ಲ. ಆದರೂ,
ಹೆಚ್ಚು ಸ್ಪಷ್ಟವಾದ ಸ್ಥಳಾವಕಾಶದ ಆಡಳಿತಾತ್ಮಕ ದತ್ತಾಂಶಗಳ ಅಲಭ್ಯತೆಯಿಂದ ಸೀಮಿತವಾಗಿರುವುದರಿಂದ ಭಾರತದ ಬಹುತೇಕ ಪ್ರತ್ಯೇಕೀಕರಣ ಕುರಿತ ಅಧ್ಯಯನಗಳು- ಇದೇ ಅಸ್ಪಷ್ಟವಾದ ದತ್ತಾಂಶಗಳ ಮೇಲೆ ಅವಲಂಬಿತವಾಗಿವೆ. (ಡುಪಾಂಟ್ 2004, ಸಿಧ್ವಾನಿ 2015, ವಿಥಾಯತಿಲ್ ಮತ್ತು ಸಿಂಗ್ 2012).

ನಗರ ಭಾರತದಲ್ಲಿ ನೆರೆಹೊರೆಯ ಮಟ್ಟದ ಪ್ರತ್ಯೇಕೀಕರಣದ ಅಳತೆ

ನಾವು ನಮ್ಮ ಇತ್ತೀಚಿನ ಅಧ್ಯಯನದಲ್ಲಿ (ಭಾರತಿ ಮತ್ತಿತರರು, 2019) ಸ್ಥಳಾವಕಾಶದ ಸ್ಪಷ್ಟತೆಯ ಸಮಸ್ಯೆಯನ್ನು ಇನ್ನಷ್ಟು ವಿವರವಾಗಿ ವಿಸ್ತರಿಸಿ, ವಾರ್ಡ್‌ಗಳು ಏಕೆ ವಿಶ್ಲೇಷಣೆಗೆ ಹೆಚ್ಚು ಸೂಕ್ತವಾದ ಘಟಕಗಳಲ್ಲ ಎಂದು ತೋರಿಸಿಕೊಟ್ಟಿದ್ದೇವೆ. ನಾವು ಇದಕ್ಕಾಗಿ, ಜನಗಣತಿಯ ’ಗಣತಿ ಬ್ಲಾಕ್’ಗಳಂತಹ (ಎನ್ಯುಮರೇಶನ್ ಬ್ಲಾಕ್ ಅಥವಾ ಇ.ಬಿ.) ಇನ್ನಷ್ಟು ಸೂಕ್ಷ್ಮವಾದ ಭೌಗೋಳಿಕ ಘಟಕಗಳಿಗೆ ಹೋಗಬೇಕು.ಇವು ನೆರೆಹೊರೆಗೆ ಹೆಚ್ಚು ಸೂಕ್ತವಾದ ಬದಲಿ ಘಟಕಗಳಾಗಬಹುದು ನಾವು ಪ್ರತಿಪಾದಿಸುತ್ತೇವೆ. ಒಂದು ಗಣತಿ ಬ್ಲಾಕ್ ಅಥವಾ ಘಟಕವು (ಇ.ಬಿ.) ಸರಾಸರಿಯಾಗಿ 100ರಿಂದ125 ಮನೆಗಳನ್ನು ಹೊಂದಿದ್ದು, 650ರಿಂದ 700 ಜನಸಂಖ್ಯೆ ಹೊಂದಿರುತ್ತದೆ. ಆದುದರಿಂದ, ಗಣತಿ ಘಟಕವು ನೆರೆಹೊರೆಯ ಪರಿಕಲ್ಪನೆಗೆ ಹೆಚ್ಚು ವಾಸ್ತವಿಕ ಮತ್ತು ಹತ್ತಿರವಾದದ್ದು.

ಚಿತ್ರ 1. ಬೆಂಗಳೂರಿನ
ವಾರ್ಡ್‌ಗಳ ಒಳಗೆ ಎಸ್‌ಸಿ+ಎಸ್‌ಟಿ ಜನಸಂಖ್ಯೆಯ ಏರುಪೇರು

ಚಿತ್ರ 1ನ್ನು ಪರಿಶೀಲಿಸಿ. ಇಲ್ಲಿ ನಾವು ಬೆಂಗಳೂರಿನ ವಿವಿಧ ವಾರ್ಡ್‌ಗಳ ಒಳಗಿನ ಗಣತಿ ಬ್ಲಾಕ್ (ಇ.ಬಿ.) ಮಟ್ಟದ ಎಸ್‌ಸಿ/ಎಸ್‌ಟಿ ಜನಸಂಖ್ಯೆಯ ಪ್ರಾತಿನಿಧ್ಯದ ಚಿತ್ರಣವನ್ನು ನೀಡಿದ್ದೇವೆ. ಇದರಲ್ಲಿ ಒಂದು ನಿರ್ದಿಷ್ಟ ವಾರ್ಡಿನ ಒಳಗಿನ ಗಣತಿ ಬ್ಲಾಕ್‌ಗಳಲ್ಲಿ ಜಾತಿ ಸಂರಚನೆಯು ಗಮನಾರ್ಹವಾಗಿ ವೈವಿಧ್ಯಮಯ ಆಗಿರುವುದನ್ನು ಗಮನಿಸುವುದು ಕಷ್ಟವಲ್ಲ. ಎಸ್‌ಸಿ/ಎಸ್‌ಟಿ ಜನಸಂಖ್ಯೆ ತೀರಾ ಕಡಿಮೆ ಇರುವ ಹಲವಾರು ಗಣತಿ ಘಟಕಗಳನ್ನು ನೋಡಬಹುದು. ಅದೇ ಹೊತ್ತಿಗೆ (ಆಡಳಿತಾತ್ಮಕ) ವಾರ್ಡಿನ ಒಳಗೆಯೇ ಸಾಕಷ್ಟು ಹೆಚ್ಚಿನ ಎಸ್‌ಸಿ/ಎಸ್‌ಟಿ ಜನಸಂಖ್ಯೆ ಹೊಂದಿರುವ ಗುಂಪುಗಳನ್ನು ನೋಡಬಹುದು. (ಚುಕ್ಕಿ ಗಡಿಗಳಿಂದ ಗುರುತಿಸಲಾಗಿದೆ.) ಇಲ್ಲಿ ಪ್ರಮುಖವಾಗಿ ಇತರ ವರ್ಗಗಳ (ಒಟಿಎಚ್) ಜನರೇ ವಾಸಿಸುತ್ತಾರೆ. ನಾವಿಲ್ಲಿ ಮನವರಿಕೆ ಮಾಡಬಯಸುವ ವಿಷಯವೆಂದರೆ: ಜನಸಂಖ್ಯೆಯು ಸೂಕ್ಷ್ಮ ಮಟ್ಟದಲ್ಲಿ ಗುಂಪುಗಟ್ಟಿದಾಗ, ಒಂದು ವಾರ್ಡಿನ ಒಳಗೆಯೂ, ಅದು ಜಾತಿ ಸಂರಚನೆಯಲ್ಲಿ ವೈವಿಧ್ಯಮಯವಾಗಿರುವಾಗಲೂ ಸಮುದಾಯಗಳು ತೀರಾ ಪ್ರತ್ಯೇಕಿತವಾಗಿರಬಹುದು. ಆದುದರಿಂದ, ನಗರ ಪ್ರದೇಶಗಳಲ್ಲಿ ಸ್ಥಳಾವಕಾಶದ ಪ್ರತ್ಯೇಕೀಕರಣ ಅಧ್ಯಯನವನ್ನು ಭೌಗೋಳಿಕವಾಗಿ ಇನ್ನಷ್ಟು ಸೂಕ್ಷ್ಮ ಮಟ್ಟದಲ್ಲಿ ಅಂದರೆ, ಉದಾಹರಣೆಗೆ ಒಂದು ಬೀದಿಯ ಮಟ್ಟದಲ್ಲಿ ಮಾಡಬೇಕಾಗಿದೆ.

ಜನಗಣತಿ ಘಟಕವನ್ನು ನಮ್ಮ ವಿಶ್ಲೇಷಣೆಯ ಘಟಕವನ್ನಾಗಿ ಮಾಡಿಕೊಂಡು, ಇಲ್ಲಿ ನಾವು ಭಾರತದ ಐದು ಮಹಾನಗರಗಳಲ್ಲಿ ಜಾತಿ ಆಧರಿತ ಪ್ರತ್ಯೇಕೀಕರಣವನ್ನು ಲೆಕ್ಕಾಚಾರ ಹಾಕುತ್ತಿದ್ದೇವೆ. ಅವೆಂದರೆ, ಚೆನ್ನೈ, ದಿಲ್ಲಿ, ಕೋಲ್ಕತಾ, ಮುಂಬಯಿ ಮತ್ತು ಬೆಂಗಳೂರು. ಇದು ಲಭ್ಯವಿರುವ ಅತ್ಯಂತ ಸಣ್ಣ ಸ್ಥಳಾವಕಾಶದ ಘಟಕವಾದ ಗಣತಿ ಘಟಕ (ಇ.ಬಿ.)ಗಳನ್ನು ಬಳಸಿಕೊಂಡು ಭಾರತೀಯ ನಗರಗಳಲ್ಲಿ ಜಾತಿ ಆಧರಿತ ವಸತಿ ಪ್ರತ್ಯೇಕೀಕರಣವನ್ನು ಅಧ್ಯಯನ ಮಾಡುವ ಮೊತ್ತಮೊದಲ ಪ್ರಯತ್ನವಾಗಿದೆ.

ಐದು ಪ್ರಮುಖ ಭಾರತೀಯ ನಗರಗಳೊಳಗೆ ಪ್ರತ್ಯೇಕೀಕರಣ

ನಾವು ವಸತಿ ಪ್ರತ್ಯೇಕೀಕರಣವನ್ನು ಅಳೆಯಲು ಒಂದು ಸರಳ ’ಅಸಾಮ್ಯತೆಯ ಸೂಚಿ’ಯನ್ನು ಬಳಸುತ್ತೇವೆ. ಈ ಅಸಾಮ್ಯತೆಯ ಅಳತೆಯು ಒಂದು ಭೌಗೋಳಿಕ ಘಟಕದಲ್ಲಿ ಹೆಚ್ಚು ಒತ್ತೊತ್ತಾದ ಘಟಕಕ್ಕೆ ಹೋಲಿಸಿದಾಗ ಇರುವ ’ಏಕರೂಪತೆ’ಯ ಚಿತ್ರಣವನ್ನು ನೀಡುತ್ತದೆ ಮತ್ತು ಅತ್ಯಂತ ನಿಖರವಾದ ಏಕರೂಪತೆಯನ್ನು ಸಾಧಿಸಲು ಸ್ಥಳಾಂತರಿಸಬೇಕಾದ ಜನಸಂಖ್ಯೆಯ ಅನುಪಾತದ ಭಾಗವನ್ನು ಪ್ರತಿನಿಧಿಸುತ್ತದೆ.

ಭಾರತದ ರಾಷ್ಟ್ರೀಯ ಜನಗಣತಿಯ ದತ್ತಾಂಶದೊಂದಿಗೆ ಹೇಗೆ ಒಂದು ಗಣತಿ ಘಟಕ ಅಥವಾ ವಾರ್ಡ್ ಮಟ್ಟದ ಜನಸಂಖ್ಯೆಯ ಭಾಗಗಳು (ಎಸ್‌ಸಿ, ಎಸ್‌ಟಿ ಮತ್ತು ಒಟಿಎಚ್)- (ಆಡಳಿತಾತ್ಮಕ) ವಾರ್ಡ್ ಅಥವಾ ನಗರ ಮಟ್ಟದಂತಹ ಒಟ್ಟಾದ ದೊಡ್ಡ ಸ್ಥಳಾವಕಾಶಕ್ಕಿಂತ ಕ್ರಮವಾಗಿ ಬೇರೆಯಾಗಿರುತ್ತದೆ ಎಂದು ಅಸಾಮ್ಯತೆಯ ಸೂಚಿಯು ಅಳೆಯುತ್ತದೆ. ಸೂಚಿ ಡಿ- 0 ಮತ್ತು 1ರ ನಡುವೆಯಿದ್ದು, ಸೊನ್ನೆಯು ಗುಂಪುಗಳ ಸಂಪೂರ್ಣ ಏಕೀಕರಣ ಅಥವಾ ಒಟ್ಟುಸೇರುವಿಕೆಯನ್ನು ಸೂಚಿಸಿದರೆ, ಒಂದು- ತೀರಾ ಪ್ರತ್ಯೇಕೀಕರಣವನ್ನು ಸೂಚಿಸುತ್ತದೆ.

ಕೋಷ್ಟಕ 1ರಲ್ಲಿ ಭಾರತದ ಮಹಾನಗರಗಳಲ್ಲಿ ಪ್ರತ್ಯೇಕೀಕರಣದ ಲೆಕ್ಕಾಚಾರವನ್ನು ವರದಿ ಮಾಡುತ್ತಿದ್ದೇವೆ.

ಕೋಷ್ಟಕ 1. ಪ್ರತ್ಯೇಕೀಕರಣದ ವಿನ್ಯಾಸಗಳು: ಅಸಾಮ್ಯತೆಯ ಸೂಚಿ

ಸೂಚನೆ: ‘Pop. Wtd. Mean’ – population-weighted mean (average) – ಸರಾಸರಿ
ವಿಥಾಯತಿಲ್ ಮತ್ತು ಸಿಂಗ್ (2012), ಸಾಂಪ್ರದಾಯಿಕವಾಗಿ ವಾರ್ಡ್-ನಗರ ಮಟ್ಟದಲ್ಲಿ ಲೆಕ್ಕಾಚಾರ ಹಾಕಿದಂತೆ ಅಸಾಮ್ಯತೆಯ ಸೂಚಿಯನ್ನು ಕಾಲಂ 1ರಲ್ಲಿ ಸೂಕ್ಷ್ಮವಾದ ಇ.ಬಿ. ಮಟ್ಟದ ಲೆಕ್ಕಾಚಾರಕ್ಕೆ ಮಾನದಂಡವಾಗಿ ನೀಡಲಾಗಿದೆ. ಎರಡನೇ ಕಾಲಂನಲ್ಲಿ ಒಂದು ಬ್ಲಾಕ್-ನಗರ ಮಟ್ಟದ ಅಸಾಮ್ಯತೆಯ ಸೂಚಿಯು, ಅಂದರೆ ಒಂದು ಇ.ಬಿ.ಯಲ್ಲಿನ ಜಾತಿ ಸಂರಚನೆಯು ಇಡೀ ನಗರದಲ್ಲಿರುವುದಕ್ಕಿಂತ ಹೇಗೆ ಬೇರೆಯಾಗಿರುತ್ತದೆ ಎಂದು ವರದಿ ಮಾಡಲಾಗಿದೆ. ಎರಡನೇ ಕಾಲಂನಲ್ಲಿರುವ ಸಂಖ್ಯೆಗಳು ಮೊದಲನೇ ಕಾಲಂನಲ್ಲಿ ಇರುವುದಕ್ಕಿಂತ ಗಮನಾರ್ಹವಾಗಿ ದೊಡ್ಡದಾಗಿವೆ. ಈ ಎರಡು ಕಾಲಂಗಳ ನಡುವಿನ ಹೋಲಿಕೆಯಿಂದ ಒಂದು ವಾರ್ಡಿನೊಳಗಿನ ಪ್ರತ್ಯೇಕೀಕರಣವನ್ನು ಕಡೆಗಣಿಸುವುದರಿಂದ, ಒಂದು ನಗರದ ಪ್ರತ್ಯೇಕೀಕರಣದ ಗಮನಾರ್ಹ ಭಾಗವನ್ನು ಹೇಗೆ ಕಡೆಗಣಿಸಿದಂತಾಗುತ್ತದೆ ಎಂದು ತೋರಿಸಿಕೊಡಬಹುದು.

ಕೊನೆಯ ಎರಡು ಕಾಲಂಗಳು ವಾರ್ಡಿನೊಳಗಿನ ಪ್ರತ್ಯೇಕೀಕರಣದ ನೇರ ಲೆಕ್ಕಾಚಾರವನ್ನು ಒದಗಿಸುತ್ತದೆ. ಇಲ್ಲಿ ನಾವು ಪ್ರತೀ ವಾರ್ಡಿನಲ್ಲಿ ಇ.ಬಿ.ಯಿಂದ ಇ.ಬಿ.ಗೆ (ಜನಗಣತಿ ಘಟಕದಿಂದ ಘಟಕಕ್ಕೆ) ಜಾತಿ ಸಂರಚನೆಯು ಹೇಗೆ ಬದಲಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ್ದೇವೆ. ಬಳಸಿದ ಜನಸಂಖ್ಯೆಯ ಮಾನದಂಡಕ್ಕೆ ಹೊರತಾಗಿಯೂ ವಾರ್ಡ್‌ಗಳ ಒಳಗೆ ಸಾಕಷ್ಟು ಜಾತಿ ವೈವಿಧ್ಯ ಇರುವುದು ಇಲ್ಲಿ ಮತ್ತೆ ಸ್ಪಷ್ಟವಾಗುತ್ತದೆ. ಹೀಗಿದ್ದರೂ, ಬಳಸಿದ ಲೆಕ್ಕಾಚಾರ ವಿಧಾನಗಳು ಬದಲಾದರೂ, ಪ್ರತ್ಯೇಕೀಕರಣಕ್ಕೆ ಸಂಬಂಧಿಸಿದಂತೆ ಈ ನಗರಗಳ ಕ್ರಮಾಂಕದಲ್ಲಿ ಬದಲಾವಣೆ ಆಗುವುದಿಲ್ಲ. ಈ ಐದು ನಗರಗಳಲ್ಲಿ ಕೋಲ್ಕತಾ ಅತೀ ಹೆಚ್ಚು ಮತ್ತು ಬೆಂಗಳೂರು ಅತ್ಯಂತ ಕಡಿಮೆ ಪ್ರತ್ಯೇಕೀಕರಣ ಹೊಂದಿದೆ. ಈ ನಗರಗಳು ಬೇರೆಬೇರೆ ಮಟ್ಟದ ಪ್ರತ್ಯೇಕೀಕರಣ ಹೊಂದಿರುವುದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ, ಇದರ ಪರಿಣಾಮವೇನು ಎಂಬುದು ಇನ್ನಷ್ಟು ಸಂಶೋಧನೆ ನಡೆಯಬೇಕಾದ ಮುಕ್ತ ಪ್ರಶ್ನೆಯಾಗಿದೆ.

ಈಗ ಒಂದು ನಗರದ ಒಳಗೆಯೇ ವಾರ್ಡ್‌ಗಳು ಮತ್ತು ಗಣತಿ ಘಟಕಗಳು (ಇ.ಬಿ.) ಎಷ್ಟು ಪ್ರತ್ಯೇಕೀಕರಣ ಹೊಂದಿವೆ ಎಂಬುದು ನಮಗೆ ಗೊತ್ತಿರುವುದರಿಂದ, ಇವುಗಳಿಗೆ ಯಾವುದಾದರೂ ನಿರ್ದಿಷ್ಟ ವಿನ್ಯಾಸ ಇದೆಯೇ ಎಂಬ ಪ್ರಶ್ನೆ ಕೇಳುವುದರಿಂದ ಹೊಸ ತಿಳಿವಳಿಕೆ ಒದಗಬಹುದು. ಒಂದು ವಾರ್ಡಿನ ಗಾತ್ರಕ್ಕೂ ಪ್ರತ್ಯೇಕೀಕರಣದ ಮಟ್ಟಕ್ಕೂ ಸಂಬಂಧವಿದೆಯೇ? ದೊಡ್ಡ ವಾರ್ಡ್‌ಗಳು ಹೆಚ್ಚಿನ ಪ್ರತ್ಯೇಕೀಕರಣವನ್ನು ತೋರಿಸುತ್ತವೆಯೇ? ನಮಗೆ ಹೇಳಿಕೊಳ್ಳುವಂತಹ ಇಂತಹ ಯಾವುದೇ ಸಂಬಂಧವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಚಿತ್ರ 2. ವಾರ್ಡಿನ ಗಾತ್ರ ಮತ್ತು ಬ್ಲಾಕ್-ವಾರ್ಡ್ ಅಸಾಮ್ಯತೆಯ ಸೂಚಿಯ ನಡುವಿನ ಸಂಬಂಧ

ಚಿತ್ರ 2ರಲ್ಲಿ ನಾವು ಪ್ರತಿಯೊಂದು ನಗರದಲ್ಲಿ ಈ ಸಂಬಂಧವನ್ನು ನಮೂದಿಸಿದ್ದೇವೆ. ಆದರೆ, ಇಲ್ಲಿ ಯಾವುದೇ ಸ್ಪಷ್ಟವಾದ ವಿನ್ಯಾಸ ಕಂಡುಬರುವುದಿಲ್ಲ

ನಗರೀಕರಣದ ಭರವಸೆ: ಭಾರತದ ಅತೀದೊಡ್ಡ 147 ನಗರಗಳತ್ತ ಒಂದು ನೋಟ

ಈ ಶೋಧನೆಯ ಹಾದಿಯಲ್ಲಿ ಮುಂದುವರಿಯುತ್ತಾ ನಾವು ನಮ್ಮ ಸಂಶೋಧನೆಯನ್ನು 2011ರ ಜನಗಣತಿಯಂತೆ ಮೂರು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದ ಎಲ್ಲಾ 147 ನಗರಗಳಿಗೆ ವಿಸ್ತರಿಸಿದ್ದೇವೆ. ನಾವು ಈ 147 ನಗರಗಳನ್ನು ಅವುಗಳ ಜನಸಂಖ್ಯೆಯ ಪ್ರಮಾಣಕ್ಕೆ ಮತ್ತು ಪ್ರತ್ಯೇಕೀಕರಣದ ಪ್ರಮಾಣಕ್ಕೆ ಅನುಗುಣವಾಗಿ ಶ್ರೇಣೀಕರಣಗೊಳಿಸಿದ್ದೇವೆ. ದೊಡ್ಡ ನಗರಗಳು ಹೆಚ್ಚಿನ ಆರ್ಥಿಕ ಚೈತನ್ಯ ಮತ್ತು ಚಲನಶೀಲತೆಯನ್ನು ಹೊಂದಿರುತ್ತವೆ ಮತ್ತು ಸ್ವಭಾವದಲ್ಲಿ ಹೆಚ್ಚಿನ ಉದಾರತೆ ಮತ್ತು ಸಮಭಾವ ತೋರಿಸುತ್ತವೆ ಎಂದು ನಾವು ಊಹಿಸಿದ್ದೆವು. ಪರಿಣಾಮವಾಗಿ, ಅವು ಆಧುನೀಕರಣದ ಸಿದ್ಧಾಂತದ ವಾದವು ಸೂಚಿಸುವ ಪ್ರಕಾರ ಹೆಚ್ಚು ತಾರತಮ್ಯರಹಿತ ಅವಕಾಶಗಳನ್ನು ಹೊಂದಿರುತ್ತವೆ ಎಂದು ಭಾವಿಸಿದ್ದೆವು. ಇದಕ್ಕೆ ವ್ಯತಿರಿಕ್ತವಾಗಿ, ಈ 147 ನಗರಗಳ ಗಾತ್ರಕ್ಕೂ ಪ್ರತ್ಯೇಕೀಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. (ಚಿತ 3). ಹೈದರಾಬಾದ್ ಸೇರಿದಂತೆ ಆರು ಮಹಾನಗರಗಳು ಈ ವಾದದಿಂದ ಹೊರಗುಳಿದಿವೆ- ಆದರೆ, ತೀವ್ರತಮದ ಪ್ರತ್ಯೇಕೀಕರಣದ ವಿಷಯದಲ್ಲಿ ಮಾತ್ರ.

ಚಿತ್ರ 3: ನಗರ ಗಾತ್ರ ಮತ್ತು ಪ್ರತ್ಯೇಕೀಕರಣ

ಜಾತಿ ವೈವಿಧ್ಯ ಹೊಂದಿರುವ ವಾರ್ಡ್ ಮತ್ತು ನಗರಗಳಲ್ಲೂ ಸೂಕ್ಷ್ಮ ಪ್ರತ್ಯೇಕೀಕರಣ

ಈ ನಗರಗಳಾದ್ಯಂತ ಹೆಚ್ಚು ಜಾತಿ ವೈವಿಧ್ಯ ಹೊಂದಿರುವ ನಗರ, ವಾರ್ಡ್‌ಗಳು ಕಡಿಮೆ ಪ್ರತ್ಯೇಕೀಕರಣ ಹೊಂದಿವೆಯೇ? ಇದೊಂದು ಮುಖ್ಯ ಪ್ರಶ್ನೆ; ಏಕೆಂದರೆ, ದೊಡ್ಡ ಸ್ಥಳಾವಕಾಶದಲ್ಲಿ ಹೆಚ್ಚಿನ ಜಾತಿ ವೈವಿಧ್ಯವು- ಗುಂಪುಗಳ ಪರಸ್ಪರ ಬೆರೆಯುವಿಕೆಗೆ ಮತ್ತು ಒಂದು ರೀತಿಯ ಸಾಮುದಾಯಿಕ ಭಾವನೆಗೆ ಹೆಚ್ಚಿನ ಅವಕಾಶ ಒದಗಿಸುತ್ತದೆ ಎಂಬ ವಾದವಿದೆ. ಆದರೆ, ಈ ಊಹೆಯು ಗಟ್ಟಿಯಾಗಿ ನಿಲ್ಲುವಂತೆ ನಮಗೆ ಕಾಣುವುದಿಲ್ಲ. ಈ 147 ನಗರಗಳಲ್ಲೇ ಆಗಿರಲಿ, ಅಥವಾ ಅವುಗಳಲ್ಲಿರುವ ವಾರ್ಡ್‌ಗಳಲ್ಲೇ ಆಗಿರಲಿ, ಅವುಗಳಲ್ಲಿ ಇರುವ ಹೆಚ್ಚಿನ ಜಾತಿ ವೈವಿಧ್ಯ ಮತ್ತು ಪ್ರತ್ಯೇಕೀಕರಣದ ಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ. (ಚಿತ್ರ 4). ಜಾತಿ ವೈವಿಧ್ಯ ಇರುವ ನಗರಗಳು ಮತ್ತು ವಾರ್ಡ್‌ಗಳಲ್ಲೂ ಈ ಸೂಕ್ಷ್ಮ ಪ್ರತ್ಯೇಕೀಕರಣ ಇದೆ. ಇದು ಹೆಚ್ಚಾಗಿ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಇದನ್ನು ನಾವು ’ಫ್ರಾಕ್ಟಲ್ ಅರ್ಬನಿಸಂ’ ಅಂದರೆ, ಬಿರುಕುಗೊಂಡ ನಗರೀಕರಣ ಎಂದು ಕರೆಯುತ್ತೇವೆ. (ಭಾರತಿ ಮತ್ತಿತರರು 2020).

ಪರಿಣಾಮಗಳೇನು?

ನಮ್ಮ ಸಂಶೋಧನೆಯು ಎರಡು ವಿಶ್ಲೇಷಣಾತ್ಮಕ ಒಳನೋಟಗಳನ್ನು ಒದಗಿಸುತ್ತದೆ. ಮೊದಲನೆಯದು: ಪ್ರತ್ಯೇಕೀಕರಣದ ವಿಶ್ಲೇಷಣೆಯಲ್ಲಿ ನೆರೆಹೊರೆಯ ಸೂಕ್ತವಾದ ಭೌಗೋಳಿಕ ವಿಸ್ತಾರ ಎಷ್ಟಿರಬೇಕು? ಯುಎಸ್‌ಎಯಲ್ಲಿ ವಸತಿ ಪ್ರತ್ಯೇಕೀಕರಣದ ಅಧ್ಯಯನಗಳು ಸಾಮಾನ್ಯವಾಗಿ ಸ್ಥಳ ವಿಸ್ತಾರದ ಮೂಲ ಘಟಕವಾಗಿ- ಜನಗಣತಿ ಹರಹು ಅಥವಾ ಪ್ರದೇಶವನ್ನು ಅವಲಂಬಿಸುತ್ತವೆ. (ಐಸ್‌ಲ್ಯಾಂಡ್ ಮತ್ತು ವೇಯಿನ್‌ಬರ್ಗ್, 2002, ಮಾಸ್ಸೇ ಮತ್ತು ಡೆಂಟನ್, 1987). ಇದೇ ಜನಗಣತಿ ಪ್ರದೇಶವು ಕಾಲಾಂತರದಿಂದ ನಗರೀಕರಣದ ವಿನ್ಯಾಸಗಳನ್ನು ಮತ್ತು ಅದರ ವಿಕಾಸವನ್ನು ಅಧ್ಯಯನ ಮಾಡಲು ಮೂಲ ಘಟಕವಾಗಿದೆ. ಗಣತಿ ಘಟಕ (ಇ.ಬಿ.)ಗಳನ್ನು ನೆರೆಹೊರೆಗೆ ಸಮಾನವಾದ ಆದರ್ಶ ಅಥವಾ ಸೂಕ್ತ ಘಟಕವಾಗಿ ಪರಿಗಣಿಸಿದರೆ, ನೀತಿನಿರ್ದೇಶಕರು ಇಂತಹ ಸೂಕ್ಷ್ಮ ಮಟ್ಟದ ದತ್ತಾಂಶಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕಿರುವುದು ಅನಿವಾರ್ಯವಾಗಿರುತ್ತದೆ. ಹೆಚ್ಚುವರಿಯಾಗಿ ಪ್ರತ್ಯೇಕೀಕರಣಗೊಂಡ ಅವಕಾಶಗಳು ಹೇಗೆ ಆರ್ಥಿಕ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇತರ ಅಭಿವೃದ್ಧಿ ಸೂಚಿಗಳಲ್ಲಿಯೂ ಇಂತಹ ಮಾಹಿತಿಗಳನ್ನು ಹೊಂದಿರುವುದು ಮುಖ್ಯ ಅಗತ್ಯ.

ಚಿತ್ರ 4: ಜಾತಿ ವೈವಿಧ್ಯ ಮತ್ತು ಪ್ರತ್ಯೇಕೀಕರಣ

ನಮ್ಮ ಎರಡನೇ ಕೊಡುಗೆಯೆಂದರೆ, ಭಾರತದ ನಗರೀಕರಣದ ಪ್ರಕ್ರಿಯೆ ಮತ್ತು ಸ್ಥಳಾವಕಾಶದ ತಾರತಮ್ಯದ ಕುರಿತ ವಾಸ್ತವದ ವ್ಯಾಖ್ಯಾನ. ಅದೆಂದರೆ, ನಗರಗಳು ತೀವ್ರವಾದ ಪ್ರತ್ಯೇಕೀಕರಣಕ್ಕೆ ಒಳಗಾಗಿರುವುದು ಮಾತ್ರವಲ್ಲದೇ, ಜನಸಂಖ್ಯೆಯ ಗಾತ್ರವೂ ಪ್ರತ್ಯೇಕೀಕರಣದ ಪ್ರಮಾಣದೊಂದಿಗೆ ಸಂಬಂಧ ಹೊಂದಿರುವಂತೆ ಕಂಡುಬರದಿರುವುದು. ವಾಸ್ತವಿಕವಾಗಿ ದೊಡ್ಡ ನಗರಗಳೇ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕೀಕರಣವನ್ನು ಹೊಂದಿವೆ. ಈ ಫಲಿತಾಂಶಗಳು ನಗರೀಕರಣದ ಸಿದ್ಧಾಂತಕ್ಕೆ ಮೂಲವಾಗಿರುವ ಅಡಿಗಲ್ಲಿಗೇ ಸವಾಲೆಸೆಯುತ್ತದೆ. ಅದೆಂದರೆ, ಭಾರತದ ನಗರಗಳು ಜಾತಿಗಡಿಗಳನ್ನು ದುರ್ಬಲಗೊಳಿಸುತ್ತಿವೆ ಎಂಬುದು.

ಬಿ.ಆರ್. ಅಂಬೇಡ್ಕರ್ ಅವರ “ಕೆಳ ಜಾತಿ”ಯ ಜನರು ಸ್ಥಳೀಯತೆಯಿಂದ ಪಾರಾಗಲು ಮತ್ತು ನಗರೀಕರಣವು ಒದಗಿಸಬಹುದಾದ ಬಹುಜನಾಂಗೀಯ ಕೂಡು ಸಂಸ್ಕೃತಿಯ (ಕಾಸ್ಮೋಪಾಲಿಟನಿಸಂ) ಮೌಲ್ಯಗಳ ಲಾಭ ಪಡೆಯಲು ನಗರಗಳತ್ತ ವಲಸೆ ಹೋಗಬೇಕು ಎಂಬ ಪ್ರತಿಪಾದನೆಯು ಭಾರತದ ಸಂವಿಧಾನವು ಅಸ್ತಿತ್ವಕ್ಕೆ ಬಂದು 70 ವರ್ಷಗಳ ನಂತರವೂ ಮರೀಚಿಕೆಯಾಗಿಯೇ ಉಳಿದಿದೆ.

(ಕನ್ನಡಕ್ಕೆ): ನಿಖಿಲ ಕೋಲ್ಪೆ

ನವೀನ್ ಭಾರತಿ

ನವೀನ್ ಭಾರತಿ
ಸಾರ್ವಜನಿಕ ನೀತಿ, ನಗರ ಸಮಾಜಶಾಸ್ತ್ರಗಳಲ್ಲಿ ಅಧ್ಯಯನ ನಡೆಸುತ್ತಿರುವ ನವೀನ್ ಭಾರತಿ ಸದ್ಯ ಹಾರ್ವರ್ಡ್‌ನಲ್ಲಿ ಉನ್ನತ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

₹100 ₹200 ₹500 ₹1000 Others


ಇದನ್ನೂ ಓದಿ: ದಲಿತ ಇತಿಹಾಸ ತಿಂಗಳು: ಗತದ ನೆನಪುಗಳು ಮತ್ತು ವರ್ತಮಾನದ ಅವಮಾನ, ಹಲ್ಲೆ- ಕೊಲೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...