ತಮ್ಮ ಸರ್ಕಾರ ಇದ್ದಾಗ ಜಾತಿ ಸಮೀಕ್ಷೆ ವರದಿಯನ್ನು ಒಪ್ಪಿಕೊಂಡು, ಈಗ ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸೋಮವಾರ ಉಡುಪಿಯಲ್ಲಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಸಮೀಕ್ಷಾ ವರದಿಯನ್ನು ಸಮರ್ಥಿಸಿಕೊಂಡ ಅವರು, ವರದಿಯು ಅನುಷ್ಠಾನಗೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಪ್ರಕಾಶ್ ಅವರು, ವರದಿಯು ಅವೈಜ್ಞಾನಿಕ ಅಥವಾ ಕೇವಲ ಜಾತಿ ಎಣಿಕೆಯ ಒಂದು ಪ್ರಕ್ರಿಯೆ ಎಂಬ ಹೇಳಿಕೆಗಳನ್ನು ಅವರು ನಿರಾಕರಿಸಿದ್ದಾರೆ.
“ಇದು ಕೇವಲ ಜಾತಿ ಎಣಿಕೆಯಲ್ಲ. ಇದು ಶಿಕ್ಷಣ ಮತ್ತು ಉದ್ಯೋಗ ಉದ್ದೇಶಗಳಿಗಾಗಿ ಸಿದ್ಧಪಡಿಸಲಾದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದೆ. ನಡೆಸಿದ ಸಮೀಕ್ಷೆಗಳಲ್ಲಿ, ಜಾತಿ ಯಾವುದು ಎಂಬುವುದು ಒಂದು ಅಂಶ ಮಾತ್ರವಾಗಿದೆ” ಎಂದು ಅವರು ಒತ್ತಿ ಹೇಳಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಈ ಹಿಂದಿನ ಅಧ್ಯಕ್ಷ ಕಾಂತರಾಜ್ ನೇತೃತ್ವದಲ್ಲಿ ಆರಂಭಿಸಲಾದ ಸಮೀಕ್ಷೆಯು 54 ಪ್ರಶ್ನೆಗಳನ್ನು ಹೊಂದಿರುವ ವಿವರವಾದ ಸ್ವರೂಪವನ್ನು ಬಳಸಿಕೊಂಡಿದ್ದು, ಜಾತಿ ಗುರುತಿಸುವಿಕೆಗಿಂತ ಹೆಚ್ಚಿನ ಸಾಮಾಜಿಕ-ಆರ್ಥಿಕ ಸೂಚಕಗಳನ್ನು ವರದಿ ಒಳಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರದಿಯು ಕೆಲವು ಜಾತಿಗಳನ್ನು ಕಡೆಗಣಿಸುತ್ತದೆ ಎಂಬ ಆತಂಕಗಳ ಬಗ್ಗೆ ಮಾತನಾಡಿದ ಜಯಪ್ರಕಾಶ್ ಅವರು, ವರದಿಯು ರಾಜ್ಯದಲ್ಲಿ ಪ್ರಸ್ತುತ ಇರುವ ಎಲ್ಲಾ ಜಾತಿಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ವರದಿಯು ಸರಿಸುಮಾರು ಐನೂರು ಜಾತಿಗಳನ್ನು ಒಳಗೊಂಡಿದ್ದು, ಸಮೀಕ್ಷೆಯ ಸಮಯದಲ್ಲಿ ಜನರು ಹೇಳಿದ ಜಾತಿಯನ್ನು ಆಯೋಗವು ದಾಖಲಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರದಿಯ ರಚನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದ ಅವರು, ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆದ ಶಿಕ್ಷಕರು ಸಮೀಕ್ಷೆಯನ್ನು ನಡೆಸಿದ್ದಾರೆ ಎಂದು ಹೇಳಿದ್ದಾರೆ. ದತ್ತಾಂಶ ಸಂಗ್ರಹಣೆಯ ಕಠಿಣ ಪ್ರಕ್ರಿಯೆಯನ್ನು ವಿವರಿಸಿದ ಅವರು, ಸಂಗ್ರಹಿಸಿದ ದತ್ತಾಂಶದ ಮೇಲೆ ಪ್ರಭಾವ ಬೀರಲು ಸಾಧ್ಯವೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
“ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ, ಆಯಾ ಜಿಲ್ಲಾ ಅಧಿಕಾರಿಗಳು ಸಮೀಕ್ಷೆಯನ್ನು ನಡೆಸಿದರು. ತರಬೇತಿ ಪಡೆದ ಶಿಕ್ಷಕರು ಸಮೀಕ್ಷೆಯನ್ನು ಕೈಗೊಳ್ಳಲು ಪ್ರತಿ ಹಳ್ಳಿಗೆ ಹೋಗಿದ್ದಾರೆ. ಯಾವುದೇ ಶಿಕ್ಷಕರಿಗೆ ವೈಯಕ್ತಿಕ ಹಿತಾಸಕ್ತಿಗಳು ಇರಲು ಸಾಧ್ಯವಿಲ್ಲ. ಅವರು ಒದಗಿಸಿದ ಸ್ವರೂಪವನ್ನು ಭರ್ತಿ ಮಾಡಿದ್ದಾರೆ. ಇದು ಖಾಸಗಿ ವ್ಯಕ್ತಿಗಳು ಸಿದ್ಧಪಡಿಸಿದ ವರದಿಯಲ್ಲ. ಸಮ ಸಮಾಜವನ್ನು ನಿರ್ಮಿಸಲು ಈ ವರದಿಯನ್ನು ಜಾರಿಗೆ ತರಬೇಕು. ಅವಕಾಶಗಳಿಂದ ವಂಚಿತರಾದವರಿಗೆ ಮೀಸಲಾತಿ ಅಗತ್ಯ” ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ವರದಿಗೆ ಸಂಬಂಧಿಸಿದಂತೆ ಬಿಜೆಪಿಯ ಟೀಕೆಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರೇ ತನ್ನನ್ನು ಮತ್ತು ಸಮಿತಿಯ ಇತರ ಸದಸ್ಯರನ್ನು ನೇಮಿಸಿತ್ತು. ಅಷ್ಟೆ ಅಲ್ಲದೆ, ಆರಂಭದಲ್ಲಿ ಮಧ್ಯಂತರ ವರದಿಯನ್ನು ಬಿಜೆಪಿ ಸ್ವೀಕರಿಸಿತ್ತು, ಆದರೆ ಈಗ ಅವರು ಅದನ್ನು ತಿರಸ್ಕರಿಸುತ್ತಿದ್ದಾರೆ, ಇದು “ಅನ್ಯಾಯ” ಮತ್ತು ರಾಜಕೀಯ ಪ್ರೇರಿತ ಎಂದು ಅವರು ಹೇಳಿದ್ದಾರೆ.
“ನನ್ನನ್ನು ನೇಮಿಸಿದ್ದು ಬಿಜೆಪಿ ಸರ್ಕಾರ. ಎಲ್ಲಾ ಸಮಿತಿ ಸದಸ್ಯರನ್ನು ಬಿಜೆಪಿ ಸರ್ಕಾರ ನೇಮಿಸಿತು. ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಮಧ್ಯಂತರ ವರದಿಯನ್ನು ಸಲ್ಲಿಸಿದ್ದೇವೆ. ಆಗ ಒಪ್ಪಿಕೊಂಡು ಈಗ ವಿರೋಧಿಸುವುದು ಸರಿಯಲ್ಲ; ಇದು ರಾಜಕೀಯ,” ಎಂದು ಹೆಗ್ಡೆ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಉರ್ದು ಭಾರತಕ್ಕೆ ಅನ್ಯವಲ್ಲ’ | ಮಹಾರಾಷ್ಟ್ರ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆ ಎತ್ತಿಹಿಡಿದ ಸುಪ್ರೀಂಕೋರ್ಟ್
‘ಉರ್ದು ಭಾರತಕ್ಕೆ ಅನ್ಯವಲ್ಲ’ | ಮಹಾರಾಷ್ಟ್ರ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆ ಎತ್ತಿಹಿಡಿದ ಸುಪ್ರೀಂಕೋರ್ಟ್

