ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ.
ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ರೋಹನ್ ರಾಯ್, ನಟರಾದ ಡಿನೋ ಮೋರಿಯಾ ಮತ್ತು ಸೂರಜ್ ಪಂಚೋಲಿ, ಆದಿತ್ಯ ಅವರ ಅಂಗರಕ್ಷಕರು, ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ, ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಮುಂಬೈ ಪೊಲೀಸ್‌ನ ಮಾಜಿ ಆಯುಕ್ತ ಪರಮ್ ಬೀರ್ ಸಿಂಗ್, ಡಿಸಿಪಿ ವಿಶಾಲ್ ಠಾಕೂರ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ, ತನಿಖೆಗೆ ಒಳಪಡಬೇಕಾದ ಪಾತ್ರಗಳನ್ನು ಹೊಂದಿರುವ ಹಲವು ವ್ಯಕ್ತಿಗಳ ಹೆಸರುಗಳು ಎಫ್‌ಐಆರ್‌ನಲ್ಲಿ ಸೇರಿವೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್, ಹಲವಾರು ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ತಜ್ಞರು, ವೈದ್ಯರು ಮತ್ತು ಇತರ ವ್ಯಕ್ತಿಗಳ ಹೆಸರೂ ಎಫ್‌ಐಆರ್‌ನಲ್ಲಿ ಒಳಗೊಂಡಿವೆ ಎಂದು timesofindia.indiatimes.com ವರದಿ ಮಾಡಿದೆ.
“ಆದಿತ್ಯ ಠಾಕ್ರೆ ಅವರ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಇತರರು ಈ ಪಿತೂರಿ ಹಾಗೂ ಅದರ ನಂತರದ ಮುಚ್ಚಿಹಾಕುವಿಕೆಯಲ್ಲಿ (ಕವರ್-ಅಪ್) ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಕರಣದ ದಾಖಲೆಗಳು, ಕಡತಗಳು ಮತ್ತು ಇತರ ಸಾರ್ವಜನಿಕ ದಾಖಲೆಗಳ ನಾಶ ಅಥವಾ ದಮನ, ಅಧಿಕೃತ ದಾಖಲೆಗಳ ನಕಲು (fabrication) ಹಾಗೂ ಕಾನೂನುಬಾಹಿರ ಉದ್ದೇಶಗಳಿಗಾಗಿ ಮತ್ತು ಅಪರಾಧಿಗಳನ್ನು ರಕ್ಷಿಸಲು ಸಾರ್ವಜನಿಕ ಹಣ, ಮಾನವಶಕ್ತಿ ಮತ್ತು ಪೊಲೀಸ್ ಯಾಂತ್ರಿಕತೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಸಾರ್ವಜನಿಕ ಸೇವಕರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕಾಗಿದೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.
“ಪಟ್ಟಿ ಮಾಡಲಾದ ವ್ಯಕ್ತಿಗಳನ್ನು ಆಪಾದಿತ ಪ್ರಮುಖ ಅಪರಾಧಗಳು, ಕ್ರಿಮಿನಲ್ ಪಿತೂರಿ, ‘ನಂತರದ ಸುಳ್ಳು ಆತ್ಮಹತ್ಯೆಯ ಕಥೆಯ ಸೃಷ್ಟಿ ಮತ್ತು ಪ್ರಚಾರ’ ಹಾಗೂ ಸಾಕ್ಷ್ಯಗಳ ಆಪಾದಿತ ದಮನ, ನಾಶ ಅಥವಾ ನಕಲು ಮಾಡುವಿಕೆಗೆ (fabrication) ಸಂಬಂಧಿಸಿದಂತೆ ತನಿಖೆ ಮಾಡಲಾಗುವುದು” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಎಫ್‌ಐಆರ್‌ನಲ್ಲಿ ಮಾಲ್ವಾನಿ ಪೊಲೀಸ್ ಠಾಣೆಗೆ ಸೇರಿದ ಅಧಿಕಾರಿಗಳು, ಮರಣೋತ್ತರ ಪರೀಕ್ಷೆಯಲ್ಲಿ (post-mortem) ಭಾಗಿಯಾಗಿದ್ದ ವೈದ್ಯರು ಹಾಗೂ ಸಿಬ್ಬಂದಿ, ಕಲಿನಾದ ವಿಧಿವಿಜ್ಞಾನ ಪ್ರಯೋಗಾಲಯದ (Forensic Science Laboratory) ಅಧಿಕಾರಿಗಳು, ರೀಜೆಂಟ್ ಗ್ಯಾಲಕ್ಸಿ ಕಟ್ಟಡದ ಭದ್ರತಾ ಸಿಬ್ಬಂದಿ, ವಿಶೇಷ ತನಿಖಾ ತಂಡದ (SIT) ಸದಸ್ಯರು ಮತ್ತು ಇತರ ಅಪರಿಚಿತ ವ್ಯಕ್ತಿಗಳ ಹೆಸರುಗಳನ್ನೂ ಸಹ ಸೇರಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, ಬಾಂಬೆ ಹೈಕೋರ್ಟ್ ದಿಶಾ ಸಾಲಿಯಾನ್ ಅವರ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿಸಿತ್ತು ಮತ್ತು ಆರು ವರ್ಷಗಳ ಕಾಲ ಎಫ್‌ಐಆರ್ ದಾಖಲಿಸಲು ವಿಫಲವಾದ ಮುಂಬೈ ಪೊಲೀಸರನ್ನು ಟೀಕಿಸಿತ್ತು.
ಪೊಲೀಸ್ ತನಿಖೆಯು “ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಈ ಪ್ರಕರಣವನ್ನು ಕೇವಲ ಆಕಸ್ಮಿಕ ಸಾವು ಎಂದು ಪರಿಗಣಿಸುವ ನಿರ್ಧಾರವನ್ನೂ ಪ್ರಶ್ನಿಸಿದ ನ್ಯಾಯಪೀಠವು, ತನಿಖೆಯಲ್ಲಿನ “ಸ್ಪಷ್ಟ ವೈರುಧ್ಯಗಳನ್ನು” ಎತ್ತಿ ತೋರಿಸಿತ್ತು.
ಮುಂಬೈನ ಮಲಾಡ್ ಪ್ರದೇಶದಲ್ಲಿರುವ ವಸತಿ ಕಟ್ಟಡವೊಂದರಿಂದ ಬಿದ್ದು ದಿಶಾ ಸಾಲಿಯನ್ ಜೂನ್ 8, 2020ರಂದು ಮೃತಪಟ್ಟರು. ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಆಕಸ್ಮಿಕ ಸಾವು ವರದಿಯನ್ನು (ADR) ದಾಖಲಿಸಿದ್ದರು.
ದಿಶಾ ಸಾಲಿಯಾವ್ ಅವರು ನಟ ಸುಶಾಂತ್ ಸಿಂಗ್ ಅವರ ಮ್ಯಾನೇಜರ್ ಆಗಿ ಅಲ್ಪಕಾಲ ಕೆಲಸ ಮಾಡಿದ್ದರು. ಸಾಲಿಯಾನ್ ಅವರ ನಿಧನದ ಆರು ದಿನಗಳ ನಂತರ, ಅಂದರೆ 2020ರ ಜೂನ್ 14ರಂದು, ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸುಶಾಂತ್ ಸಿಂಗ್ ಕೂಡ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ಎರಡು ಸಾವುಗಳು ಅಲ್ಪ ಸಮಯದ ಅಂತರದಲ್ಲಿ ಸಂಭವಿಸಿದ್ದರಿಂದ ಅವುಗಳ ನಡುವೆ ಏನಾದರೂ ಸಂಬಂಧವಿರಬಹುದೇ ಎಂಬ ಬಗ್ಗೆ ವ್ಯಾಪಕ ಊಹಾಪೋಹಗಳು ಉಂಟಾಗಿತ್ತು. ಆದಾಗ್ಯೂ, ಈ ಪ್ರಕರಣಗಳ ತನಿಖೆಯನ್ನು ಪ್ರತ್ಯೇಕವಾಗಿಯೇ ನಡೆಸಲಾಯಿತು.
ಸುಶಾಂತ್ ಸಿಂಗ್ ಅವರ ಸಾವಿನ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾದ ನಂತರ, ಮಹಾರಾಷ್ಟ್ರ ಸರ್ಕಾರವು ಸಿಬಿಐ ತನಿಖೆಗೆ ಆದೇಶಿಸಿತ್ತು. ನಂತರ ಸಿಬಿಐ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸುವ ಪ್ರಕರಣ ಮುಕ್ತಾಯದ ವರದಿಯನ್ನು ಸಲ್ಲಿಸಿತ್ತು. ಸಂಬಂಧಪಟ್ಟ ನ್ಯಾಯಾಲಯ ಈ ವರದಿಯ ಕುರಿತು ಇನ್ನೂ ವಿಚಾರಣೆ ನಡೆಸಬೇಕಿದೆ.


