ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಮರು ಜೀವ ಬಂದಿದ್ದು, ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಬೋಲ್ಕರ್ ಹತ್ಯೆ ಪ್ರಕರಣದ ಐವರು ಆರೋಪಿಗಳ ಮೇಲೆ ದೋಷರೋಪ ಪಟ್ಟಿ ಸಲ್ಲಿಸಲು ಪುಣೆ ವಿಶೇಷ ನ್ಯಾಯಾಲಯ ಸೆ.7ರಂದು ಆದೇಶ ಹೊರಡಿಸಲಿದೆ.
ಮಹಾರಾಷ್ಟ್ರದ ಮೂಲದ ವಿಚಾರವಾದಿ, ಹೋರಾಟಗಾರ ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ ಎಂಟು ವರ್ಷಗಳ ಬಳಿಕ, ಸನಾತನ ಸಂಸ್ಥೆಗೆ ಸೇರಿದ ಐವರ ಮೇಲೆ ಈ ಕ್ರಮ ಜರುಗಿಸಲಾಗುತ್ತಿದೆ. ಐವರು ಆರೋಪಿಗಳ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿ, ಭಯೋತ್ಪಾದನೆ ಕೃತ್ಯದಲ್ಲಿ ಭಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದೋಷಾರೋಪ ಸಲ್ಲಿಕೆಯಾಗಲಿದೆ.
2014ರಲ್ಲಿ ದಾಬೋಲ್ಕರ್ ಹತ್ಯೆ ಪ್ರಕರಣ ಪುಣೆ ಪೊಲೀಸರಿಂದ ಸಿಬಿಐಗೆ ತನಿಖೆ ವರ್ಗಾವಣೆಯಾಗಿತ್ತು. ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸನಾತನ ಸಂಸ್ಥೆಗೆ ಸಂಬಂಧಿಸಿದ ಐವರನ್ನು ಸಿಬಿಐ ಬಂಧಿಸಿತ್ತು.
ಹಂತಕರಾದ ಡಾ.ವೀರೇಂದ್ರಸಿನ್ಹಾ ತಾವಡೆ, ಸಚಿನ್ ಆಂದುರೆ, ಶರದ್ ಕಲಾಸ್ಕರ್, ವಕೀಲ ಸಂಜೀವ್ ಪುಣೇಕರ್, ಆತನ ಸಹಾಯಕ ವಿಕ್ರಮ್ ಭಾವೆ ಬಂಧನಕ್ಕೊಳಗಾಗಿದ್ದರು.
ವಕೀಲ ಸಂಜೀವ್ ಪುಣೇಕರ್ ಮತ್ತು ವಿಕ್ರಮ್ ಭಾವೆ ಜಾಮೀನು ಮೇಲೆ ಹೊರಗಡೆ ಬಂದಿದ್ದರು. ಮೂವರು ಜೈಲಿನಲ್ಲಿದ್ದರು.
ಆಗಸ್ಟ್ 2013ರಲ್ಲಿ ಪುಣೆಯಲ್ಲಿ ಬೆಳಗಿನ ವಾಕಿಂಗ್ ವೇಳೆ ದಾಬೋಲ್ಕರ್ ಅವರ ಹತ್ಯೆ ಮಾಡಲಾಗಿತ್ತು. ಅದಾದ ನಂತರ ಗೋವಿಂದ ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶರ ಹತ್ಯೆಗಳಾಗಿದ್ದವು.
ಇದನ್ನೂ ಓದಿ: ‘ಎರಡು ಗುಂಡು ಹಾರಿಸಿ ಕೊಂದೆ’: ದಾಬೋಲ್ಕರ್ ಹಂತಕನ ತಪ್ಪೊಪ್ಪಿಗೆಯಲ್ಲಿ ಮತ್ತಷ್ಟು ಶಾಕ್‌ಗಳು!


