ಸಿಡಿ ಹಗರಣದ ಸಂತ್ರಸ್ತೆ ಎನ್ನಲಾದ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಸಿಜೆಐ ಅಧ್ಯಕ್ಷತೆಯಲ್ಲಿ ಎಸ್‌ಐಟಿ ರಚನೆಯಾಗಬೇಕೆಂದು ಕೋರಿದ್ದಾರೆ. ಈ ಕುರಿತ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೊ ಪ್ರಕರಣ ರಾಜ್ಯದಲ್ಲಿ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಿದೆ. ಆದರೆ ಈ ಕುರಿತು ಯುವತಿ ಈವರೆಗೂ 5 ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಈ ಪ್ರಕರಣಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ರಮೇಶ್ ಜಾರಕಿಹೊಳಿಯವರೇ ತನಗೆ ಮೋಸ ಮಾಡಿದ್ದಾರೆ. ಹಾಗಾಗಿ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಯುವತಿ ವಿಡಿಯೋದಲ್ಲಿ ಕೋರಿದ್ದರು.

ಇದರ ಮುಂದುವರಿದ ಭಾಗವಾಗಿ ಮಾ. 28ರಂದು ಯುವತಿ ಸಿಜೆಐಗೆ ಈ-ಮೇಲ್ ಮಾಡಿದ್ದಾರೆ. ನಮ್ಮ ತಂದೆ, ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ, ನನ್ನ ಪೋಷಕರಿಗೆ ರಕ್ಷಣೆ ನೀಡಬೇಕೆಂದು ಅದರಲ್ಲಿ ಉಲ್ಲೇಖ ಮಾಡಿದ್ದಾರೆ.

ಎಸ್ಐಟಿ, ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕು. ಆದರೆ, ರಮೇಶ್ ಜಾರಕಿಹೊಳಿ ಅವರು ಇದಕ್ಕೆ ಅವಕಾಶ ಮಾಡಿಕೊಡದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಯುವತಿ ಪತ್ರದಲ್ಲಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಅವರು ಸಾರ್ವಜನಿಕವಾಗಿಯೇ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಯುವತಿ ಕಳುಹಿಸಿರುವ ಇ-ಮೇಲ್ ಅಧಿಕೃತ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇದನ್ನೂ ಓದಿ: ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಪಳನಿಸ್ವಾಮಿ


