ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ, ಅರಬ್ ದೇಶದವರೂ ಸೇರಿದಂತೆ ಜಾಗತಿಕ ನಾಯಕರು ಟ್ರಂಪ್ ಅವರನ್ನು ‘ಶಾಂತಿಯ ರಾಯಭಾರಿ’ಯಾಗಿಸಿದ ಗಾಝಾ ಕದನ ವಿರಾಮ ಒಪ್ಪಂದಕ್ಕೆ ವಾರದೊಳಗೆ ಇಸ್ರೇಲ್ ಎಳ್ಳು ನೀರು ಬಿಟ್ಟಿದೆ.
ಅರ್ಥಾತ್, ಹಮಾಸ್ ಮತ್ತು ಇಸ್ರೇಲ್ ನಡುವಿನ ‘ಗಾಝಾ ಶಾಂತಿ ಒಪ್ಪಂದ’ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಗಾಝಾದಲ್ಲಿ ಅಮಾಯಕರ ನರಮೇಧವನ್ನು ಇಸ್ರೇಲ್ ರಾಜಾರೋಷವಾಗಿ ಮುಂದುವರಿಸಿದೆ.
ಅಕ್ಟೋಬರ್ 9ರಂದು ಇಸ್ರೇಲ್-ಹಮಾಸ್ ಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಟ್ರಂಪ್ ಘೋಷಿಸಿದ್ದರು. ಅಂದಿನಿಂದ ಇಂದಿನವರೆಗೆ (ಅ.21) ಕನಿಷ್ಠ 97 ರಿಂದ 100 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ. ಸಾವೀಗೀಡಾದವರ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಇಸ್ರೇಲ್ ಕದನ ವಿರಾಮ ಒಪ್ಪಂದ ಮುರಿದು ಅಮಾಯಕರ ಹತ್ಯೆ ಮಾಡುತ್ತಿದ್ದರೂ, ಅಮೆರಿಕ ಹಮಾಸ್‌ನತ್ತ ಕೈ ತೋರಿಸುತ್ತಿದೆ. “ಹಮಾಸ್ ಅನ್ನು ನಿರ್ಣಾಮ ಮಾಡುತ್ತೇವೆ, ನರಕ ತೋರಿಸುತ್ತೇವೆ” ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ಕದನ ವಿರಾಮ ಒಪ್ಪಂದದ ಮೊದಲ ಹಂತವಾಗಿ ಹಮಾಸ್ ಜೀವಂತ ಇಸ್ರೇಲಿ ಒತ್ತೆಯಾಳುಗಳನ್ನು ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ 2 ಸಾವಿರ ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಬಿಡುಗಡೆ ಮಾಡಬೇಕಿತ್ತು.
ವರದಿಗಳ ಪ್ರಕಾರ, ಇಸ್ರೇಲ್ ಸುಮಾರು 1, 950ರಷ್ಟು ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಿದೆ. ಆದರೆ, ಅವರಲ್ಲಿ ಕೆಲವರನ್ನು ಬೇರೆ ಬೇರೆ ದೇಶಗಳಲ್ಲಿ ಕರೆದೊಯ್ದು ಬಿಡುವ ಮೂಲಕ ಅಮಾನವೀಯ ಕೃತ್ಯವೆಸಗಿದ ಆರೋಪವಿದೆ.
ಹಮಾಸ್ ಬಿಡುಗಡೆ ಮಾಡಿದ ಒತ್ತೆಯಾಳುಗಳು ಆರೋಗ್ಯವಂತರಾಗಿದ್ದರೆ, ಇಸ್ರೇಲ್ ಬಿಡುಗಡೆ ಮಾಡಿದ ಪ್ಯಾಲೆಸ್ತೀನಿಯರ ಪರಿಸ್ಥಿತಿ ಶೋಚಣೀಯವಾಗಿದೆ. ಇಸ್ರೇಲಿ ಬಂಧಿಖಾನೆಗಳಲ್ಲಿ ಅವರು ತೀವ್ರ ಹಿಂಸೆಗೆ ಒಳಗಾಗಿರುವುದನ್ನು ಅವರ ದೇಹದ ಸ್ಥಿತಿ ತೋರಿಸುತ್ತಿದೆ ಎಂದು ಹಲವಾರು ವರದಿಗಳು ಹೇಳಿವೆ.
ಹಮಾಸ್ 28 ಮೃತ ಒತ್ತೆಯಾಳುಗಳ ಪೈಕಿ, ಬಹುತೇಕರ ದೇಹಗಳನ್ನು ಇಸ್ರೇಲ್‌ಗೆ ಹಸ್ತಾಂತರಿಸಿದೆ. ಈ ನಡುವೆ ಹಮಾಸ್ ಮೃತದೇಹ ಹಸ್ತಾಂತರಿಸಲು ವಿಳಂಬ ಮಾಡುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಮಾಸ್, ಇಸ್ರೇಲ್ ಇಡೀ ಗಾಝಾ ಪಟ್ಟಿಯನ್ನು ನಾಶ ಮಾಡಿರುವ ಪರಿಣಾಮ ಮೃತದೇಹಗಳ ಹಸ್ತಾಂತರಕ್ಕೆ ಅಡೆತಡೆಗಳು ಉಂಟಾಗಿವೆ ಎಂದಿದೆ.
ಇನ್ನು, ಇಸ್ರೇಲ್ ಕದನ ವಿರಾಮ ಮುರಿದು ಈಗಾಗಲೇ ದಾಳಿ ಆರಂಭಿಸಿರುವ ಹಿನ್ನೆಲೆ, ಎಲ್ಲಾ ಮೃತದೇಹಗಳನ್ನು ಹಸ್ತಾಂತರಿಸಿದರೆ ಅಮೆರಿಕ ಮತ್ತು ಇಸ್ರೇಲ್ ಸೇರಿಕೊಂಡು ಮಾತು ಬದಲಿಸುವ ಆತಂಕವನ್ನು ಹಮಾಸ್ ವ್ಯಕ್ತಪಡಿಸಿದೆ. ಇವೆಲ್ಲದರ ಪರಿಣಾಮ ಗಾಝಾದ ಅಮಾಯಕರ ನಾಗರಿಕರು ನರಳುವಂತಾಗಿದೆ.
ಇಸ್ರೇಲ್-ಹಮಾಸ್ ನಡುವಿನ ಗಾಝಾ ಕದನ ವಿರಾಮ ಒಪ್ಪಂದವನ್ನು ಮತ್ತೆ ಹಳಿಗೆ ತರಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ವರದಿಗಳು ಹೇಳಿವೆ.
ಈ ನಡುವೆ ಸೋಮವಾರ ಪೂರ್ವ ಗಾಝಾ ನಗರದ ತುಫಾ ಸಮೀಪದ ಅಲ್-ಶಾಫ್ ಪ್ರದೇಶದಲ್ಲಿ ಎರಡು ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ. ಎರಡೂ ಬಾರಿಯೂ ಅಮಾಯಕರ ಜನರು ತಮ್ಮ ಮನೆಗಳನ್ನು ಪರಿಶೀಲಿಸಲು ವಾಪಾಸ್ ಬಂದಾಗ ಇಸ್ರೇಲ್ ಗುಂಡಿನ ದಾಳಿ ಮಾಡಿದೆ ಎಂದು ಗಾಝಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
ಹಳದಿ ಗಡಿ ರೇಖೆ ಅಥವಾ ಯೆಲ್ಲೋ ಲೇನ್ ದಾಟಿ ತುಫಾಹ್‌ಗೆ ಹೊಂದಿಕೊಂಡಿರುವ ಶುಜಾಯೆಯಾ ಸಮೀಪ ಸೈನಿಕರನ್ನು ಸಮೀಪಿಸಿದ ಉಗ್ರಗಾಮಿಗಳ ಮೇಲೆ ಗುಂಡು ಹಾರಿಸಿರುವುದಾಗಿ ಇಸ್ರೇಲ್ ಸಮರ್ಥಿಸಿಕೊಂಡಿದೆ.
ಅಕ್ಟೋಬರ್ 4ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡ ನಕ್ಷೆಯಲ್ಲಿ ಸೂಚಿಸಲಾದ ಹಳದಿ ರೇಖೆಯು, ಇಸ್ರೇಲಿ ಪಡೆಗಳು ಹಿಂದೆ ಸರಿದು ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ನೆಲೆಗೊಂಡಿರುವ ಗಡಿಯಾಗಿದೆ.
ಗಾಝಾ ನಗರದ ನಿವಾಸಿಗಳು ಈ ಹಳದಿ ಗಡಿ ರೇಖೆಯ ಬಗ್ಗೆ ಗೊಂದಲ ವ್ಯಕ್ತಪಡಿಸಿದ್ದಾರೆ. “ಇಲ್ಲಿ ಕಣ್ಣಿಗೆ ಗೋಚರಿಸುವ ಯಾವುದೇ ಗಡಿ ರೇಖೆ ಗುರುತುಗಳಿಲ್ಲ. ಇಡೀ ಪ್ರದೇಶ ಹಾಳಾಗಿದೆ. ಹೀಗಿರುವಾಗ ಗಡಿರೇಖೆ ಎಲ್ಲಿದೆ ಎಂದು ನಮಗೆ ಗೊತ್ತಿಲ್ಲ” ಗಾಝಾ ನಗರದ ಪೂರ್ವದಲ್ಲಿರುವ ತುಫಾದಲ್ಲಿ ವಾಸಿಸುವ 50 ವರ್ಷದ ಸಮೀರ್ ಹೇಳಿದ್ದಾರೆ ಎಂದು ಅಲ್-ಜಝೀರಾ ವರದಿ ವಿವರಿಸಿದೆ.
ತೈಲ ಆಮದು: ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದರೆ ‘ಭಾರಿ ಸುಂಕ’ ಭಾರತಕ್ಕೆ ಟ್ರಂಪ್ ಎಚ್ಚರಿಕೆ


