ಕನ್ನಡ ಸಂಸ್ಕೃತಿ ಇಲಾಖೆಯು ಇತ್ತೀಚೆಗೆ ನಡೆಸಿದ ಸಂವಾದ ಸರಣಿಯಲ್ಲಿ ಮಾತನಾಡಿದ್ದ ಖ್ಯಾತ ಶಾಸ್ತ್ರೀಯ ನೃತ್ಯಗಾರ್ತಿ ಪ್ರತಿಭಾ ಪ್ರಹ್ಲಾದ್ ಅವರ ಕೆಲವು ಮಾತುಗಳಿಗೆ ಕತ್ತರಿ ಪ್ರಯೋಗ ಮಾಡಿ, ಬಳಿಕ ಇಲಾಖೆಯು ಯೂಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದು, ಪ್ರತಿಭಾ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗಿನ ಸಂಬಂಧ ಮತ್ತು ಒಂಟಿ ತಾಯಿಯಾಗಿ ತಾವು ಕಂಡ ಅನುಭವಗಳನ್ನು ಅವರು ಹಂಚಿಕೊಂಡಿದ್ದನ್ನು ತೆಗೆದು ಹಾಕಲಾಗಿದೆ. ಎಡಿಟ್ ಮಾಡಿದ ವಿಡಿಯೊ ಪ್ರತಿಯನ್ನೇ ಪ್ರತಿಭಾ ಅವರಿಗೂ ನೀಡಲಾಗಿದೆ ಎಂದು ವರದಿಯಾಗಿದೆ.
“ಸರ್ಕಾರ ಬಯಸಿದರೆ ನಾನು ಮಾತನಾಡಿರುವುದನ್ನು ಸೆನ್ಸಾರ್ ಮಾಡಲಿ, ಆದರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ನನ್ನ ಭಾಷಣದ ಸಂಪೂರ್ಣ ಧ್ವನಿಮುದ್ರಣ ಪಡೆಯಲು ನಾನು ಅರ್ಹಳಾಗಿದ್ದೇನೆ” ಎಂದಿದ್ದಾರೆ.
ಕನ್ನಡ ಸಂಸ್ಕೃತಿ ಇಲಾಖೆಯು ಆಯೋಜಿಸುತ್ತಿರುವ ‘ಮನೆಯಂಗಳದಲ್ಲಿ ಮಾತುಕಥೆ’ ಎಂಬ ಸಂವಾದ ಸರಣಿಯಲ್ಲಿ ಪ್ರತಿಭಾ ಅವರು ಇತ್ತೀಚೆಗೆ ಮಾತನಾಡಿದ್ದರು. ಈ ಸರಣಿಯಲ್ಲಿ ಸಾಧಕ ಕನ್ನಡಿಗರ ಜೀವನ ಕಥೆಗಳನ್ನು ದಾಖಲಿಸಲಾಗುತ್ತಿದೆ. ಪದ್ಮಶ್ರೀ ಪುರಸ್ಕೃತೆ ಪ್ರತಿಭಾ ಅವರನ್ನು ಮೇ 21ರಂದು ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರು ಸಂದರ್ಶಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಪ್ರತಿಭಾ ಅವರು ತಮ್ಮ ನೃತ್ಯ ಬದುಕು, ಕಲಾ ನಿರ್ವಹಣೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗಿನ ಸಂಬಂಧ ಮತ್ತು ಅವಳಿ ಮಕ್ಕಳಿಗೆ ಒಂಟಿ ತಾಯಿಯಾಗಿ ಇರಲು ನಿರ್ಧರಿಸಿದ್ದು ಸೇರಿದಂತೆ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದರು.
“ವೈಯಕ್ತಿಕವಾಗಿ, ಮಕ್ಕಳನ್ನು ಹೊಂದಲು ಮದುವೆಯ ಅವಶ್ಯಕತೆಯಿದೆ ಎಂದು ನಾನು ನಂಬುವುದಿಲ್ಲ. ಕುಟುಂಬದ ಹೊರತಾಗಿ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಸಂಗಾತಿಯೂ ಮುಖ್ಯ…. ಆದರೆ, ಇದನ್ನು ಲೆಕ್ಕಿಸದೆ, ಸಮಾಜವು ಪ್ರಗತಿ ಹೊಂದಬೇಕು. ವಿವಿಧ ಮಾದರಿಗಳ ಬಗ್ಗೆ ಯೋಚಿಸಬೇಕು. ಅಂತಹ ಒಂದು ಮಾದರಿಯಲ್ಲಿ ನನ್ನ ಅವಳಿ ಮಕ್ಕಳು ಬೆಳೆದರು. ನಾನು ಒಂಟಿ ತಾಯಿಯಾಗಲು ನಿರ್ಧರಿಸಿದೆ. ಅದಕ್ಕಾಗಿ ನಾನು ಎಂದಿಗೂ ವಿಷಾದಿಸಲಿಲ್ಲ” ಎಂದು ಪ್ರತಿಭಾ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
“ರಾಮಕೃಷ್ಣ ಹೆಗಡೆಯವರು ಅನಾರೋಗ್ಯಕ್ಕೆ ತುತ್ತಾದಾಗ ಅವರೊಂದಿಗಿನ ಸಂಬಂಧವು ಹದಗೆಟ್ಟಿತು. ರಾಮಕೃಷ್ಣ ಹೆಗಡೆಯವರಿಂದ ಪ್ರತಿಭಾ ಅವರನ್ನು ದೂರವಿರಿಸಲು ಹೆಗಡೆಯವರ ಕುಟುಂಬ ಪ್ರಯತ್ನಿಸಿತು. ಹೆಗಡೆಯವರ ಅಂತಿಮ ದಿನಗಳಲ್ಲಿ ಪ್ರತಿಭಾ ಮತ್ತು ಅವರ ಮಕ್ಕಳು ಹೆಗಡೆಯವನ್ನು ಭೇಟಿಯಾಗದಂತೆ ಹೇಗೆ ತಡಲಾಯಿತು ಎಂಬುದರ ಕುರಿತೂ ಸಂದರ್ಶನದಲ್ಲಿ ಮಾತನಾಡಿದ್ದರು” ಎಂದು ‘ದಿ ಹಿಂದೂ’ ವರದಿ ಮಾಡಿದೆ.
ಪ್ರತಿಭಾ ಅವರನ್ನು ಸಂದರ್ಶಿಸಿದ ರಾಮಕೃಷ್ಣ ಉಪಾಧ್ಯ ಅವರು ‘ದಿ ಹಿಂದೂ’ಗೆ ಪ್ರತಿಕ್ರಿಯೆ ನೀಡಿದ್ದು, “ಆರಂಭದಲ್ಲಿ ಪೂರ್ಣ ಸಂದರ್ಶನವನ್ನು ಮೇ 22 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಆದರೆ ನಂತರದಲ್ಲಿ ಎಡಿಟ್ ಮಾಡಿ ಪ್ರಕಟಿಸಲಾಯಿತು. ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಂದರ್ಶನದ ಪ್ರತಿಯನ್ನು ತರಿಸಿಕೊಳ್ಳಲಿದ್ದೇನೆ” ಎಂದಿದ್ದಾರೆ.
ತನಗಿಂತ 35 ವರ್ಷ ದೊಡ್ಡವರಾಗಿದ್ದ ರಾಮಕೃಷ್ಣ ಹೆಗಡೆ ಅವರೊಂದಿಗಿನ ಸಂಬಂಧದ ಬಗ್ಗೆ ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಪ್ರತಿಭಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತನ್ನ ಭಾಷಣವನ್ನು ಸೆನ್ಸಾರ್ ಮಾಡಲಾಗಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, “ನನ್ನ ಜೀವನದ ಆಯ್ಕೆಗಳು ಮತ್ತು ಸವಾಲುಗಳ ಬಗ್ಗೆ ನಾನು ಹೇಳಿದ್ದಕ್ಕೆ ಸಂಸ್ಕೃತಿ ಇಲಾಖೆಯು ಆಕ್ಷೇಪಣೆಯನ್ನು ತೋರಿರುವುದು ವಿಚಿತ್ರವಾಗಿದೆ” ಎಂದಿದ್ದಾರೆ.
Strange that the Dept of Culture should have an objection to what I said about my life choices & challenges. @CMofKarnataka @BSBommai @csogok @NammaKarnataka_
— Prathibha Prahlad (@PrathibhaP) May 29, 2022


