ಸಂಸತ್ತಿನ ಉಭಯ ಸದನಗಳಲ್ಲಿ ಎರಡು ದಿನಗಳಿಂದ ಪ್ರತಿಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಮಣಿದಿದೆ. ಡಿಸೆಂಬರ್ 9ರಂದು ಚುನಾವಣಾ ಸುಧಾರಣೆಗಳು ಎಂಬ ವಿಷಯದ ಅಡಿಯಲ್ಲಿ ಎಸ್‌ಐಆರ್ ಕುರಿತು ಚರ್ಚೆ ನಡೆಸಲು ಒಪ್ಪಿಕೊಂಡಿದೆ.
ವರದಿಗಳ ಪ್ರಕಾರ, ಬಿಹಾರದ ಎಸ್‌ಐಆರ್ ಯಶಸ್ಸಿನ ಉದಾಹರಣೆ ಕೊಟ್ಟು ಎಸ್‌ಐಆರ್ ಪ್ರಕ್ರಿಯೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರ ಯೋಜಿಸಿದೆ. ಡಿಸೆಂಬರ್ 8ರಂದು ವಂದೇ ಮಾತರಂ ಕುರಿತು ಚರ್ಚೆ ನಡೆಸಲೂ ನಿರ್ಧರಿಸಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಡಿಸೆಂಬರ್ 8ರಂದು ಸೋಮವಾರ ಮಧ್ಯಾಹ್ನ 12ಗಂಟೆಯಿಂದ ‘ವಂದೇ ಮಾತರಂ’ ಕುರಿತು ಹಾಗೂ ಡಿಸೆಂಬರ್ 9ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ನವೆಂಬರ್ 30ರಂದು ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಎಸ್‌ಐಆರ್ ಕುರಿತು ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಬೇಡಿಕೆ ಇಟ್ಟಿತ್ತು. ಚರ್ಚೆಗೆ ಅವಕಾಶ ನೀಡದಿದ್ದರೆ ಕಲಾಪ ನಡೆಯಲು ಬಿಡುವುದಿಲ್ಲ ಎಂದಿತ್ತು.
ಎಸ್‌ಐಆರ್ ಮಾತ್ರವಲ್ಲದೆ ದೆಹಲಿ ಸ್ಫೋಟ ಘಟನೆಯ ನಂತರ ರಾಷ್ಟ್ರೀಯ ಭದ್ರತೆಯ ಕುರಿತು ಚರ್ಚೆಗೆ ವಿರೋಧ ಪಕ್ಷದವರು ಬಲವಾಗಿ ಒತ್ತಾಯಿಸಿದ್ದರು. ಸರ್ಕಾರ ಪ್ರಜಾಪ್ರಭುತ್ವವನ್ನು ಮುಗಿಸಿ, ಸಂಸದೀಯ ಸಂಪ್ರದಾಯಗಳನ್ನು ಸಮಾಧಿ ಮಾಡಲು ಬಯಸುತ್ತಿದೆ ಎಂದು ಆರೋಪಿಸಿದ್ದರು.


