ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಮಾಹಿತಿಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಬುಧವಾರ (ಆ.27) ಮಧ್ಯಾಹ್ನ ಎಕ್ಸ್‌ನಲ್ಲಿ ಪ್ರಕಟಿಸಿದ್ದಾರೆ.
In exercise of the powers conferred by the Constitution of India, the President, after consultation with Chief Justice of India, is pleased to appoint (i) Shri Justice Alok Aradhe, Chief Justice, Bombay High Court and (ii) Shri Justice Vipul Manubhai Pancholi, Chief Justice,…
— Arjun Ram Meghwal (@arjunrammeghwal) August 27, 2025
34 ನ್ಯಾಯಾಧೀಶರ ಅನುಮೋದಿತ ಬಲವನ್ನು ಹೊಂದಿರುವ ಸುಪ್ರೀಂ ಕೋರ್ಟ್ ಪ್ರಸ್ತುತ 32 ನ್ಯಾಯಾಧೀಶರೊಂದಿಗೆ ಕಾರ್ಯನಿರ್ವಹಿಸುತ್ತಿದೆ, 2 ಹುದ್ದೆಗಳು ಖಾಲಿ ಇವೆ. ಈ ನೇಮಕಾತಿಗಳೊಂದಿಗೆ, ಸುಪ್ರೀಂ ಕೋರ್ಟ್ ತನ್ನ ಪೂರ್ಣ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಆಗಸ್ಟ್ 25 ರಂದು ನಡೆದ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಜೆ.ಕೆ. ಮಹೇಶ್ವರಿ ಮತ್ತು ಬಿ.ವಿ ನಾಗರತ್ನ ಅವರನ್ನೊಳಗೊಂಡ ಕೊಲಿಜಿಯಂ, ನ್ಯಾಯಮೂರ್ತಿಗಳಾದ ಆರಾಧೆ ಮತ್ತು ಪಂಚೋಲಿ ಅವರಿಗೆ ಬಡ್ತಿ ನೀಡಲು ಶಿಫಾರಸು ಮಾಡಿತ್ತು.
ಆದರೆ, ನ್ಯಾಯಮೂರ್ತಿ ಪಾಂಚೋಲಿ ಅವರಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡುವ ಪ್ರಸ್ತಾಪಕ್ಕೆ ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.
ನ್ಯಾಯಮೂರ್ತಿ ಆರಾಧೆ ಅವರನ್ನು 2009ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. 2011ರಲ್ಲಿ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ಮಾಡಲಾಗಿತ್ತು.
2016ರಲ್ಲಿ ಅವರನ್ನು ಜಮ್ಮು ಕಾಶ್ಮೀರದ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು ಮತ್ತು 2018ರಲ್ಲಿ 3 ತಿಂಗಳು ಅದರ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
ಅದಾದ ನಂತರ, ನವೆಂಬರ್ 17, 2018 ರಂದು ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು 2022ರಲ್ಲಿ ಕೆಲವು ತಿಂಗಳುಗಳ ಕಾಲ ಅದರ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
ಜುಲೈ 2023ರಲ್ಲಿ, ಅವರನ್ನು ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ನಂತರ ಅವರನ್ನು ಜನವರಿ 2025ರಲ್ಲಿ ಬಾಂಬೆ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಯಿತು, ಅಲ್ಲಿ ಅವರು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾಯಮೂರ್ತಿ ಪಾಂಚೋಲಿ ಅವರ ಮಾತೃ ನ್ಯಾಯಾಲಯ ಗುಜರಾತ್ ಹೈಕೋರ್ಟ್ ಆಗಿದೆ. ಅವರನ್ನು ಜುಲೈ 2023ರಲ್ಲಿ ಪಾಟ್ನಾಗೆ ವರ್ಗಾಯಿಸಲಾಗಿತ್ತು.
ಮೇ 28, 1968ರಂದು ಜನಿಸಿದ ಪಾಂಚೋಲಿ ಅವರು, ಸೆಪ್ಟೆಂಬರ್ 1991ರಲ್ಲಿ ವಕೀಲಿಕೆ ವೃತ್ತಿಗೆ ಸೇರಿದರು ಮತ್ತು ಗುಜರಾತ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಪ್ರಾರಂಭಿಸಿದರು.
ಅಕ್ಟೋಬರ್ 1, 2014ರಂದು ಗುಜರಾತ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು, ಜೂನ್ 10, 2016 ರಂದು ಶಾಶ್ವತ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ನಂತರ, ಜುಲೈ 2023ರಲ್ಲಿ ಗುಜರಾತ್ ಹೈಕೋರ್ಟ್ ವಕೀಲರ ಸಂಘ (ಜಿಹೆಚ್‌ಸಿಎಎ) ವಿರೋಧದ ನಡುವೆಯೂ ಗುಜರಾತ್‌ನಿಂದ ಪಾಟ್ನಾ ಹೈಕೋರ್ಟ್‌ಗೆ ಪಾಂಚೋಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವಿಷಯ ವಿವಾದದ ಸ್ವರೂಪ ಪಡೆದಿತ್ತು.
ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ನೀಡಿದ ವರದಿಯಲ್ಲಿ, ನ್ಯಾಯಮೂರ್ತಿ ಪಾಂಚೋಲಿ ಅವರು ಉತ್ತಮ ನ್ಯಾಯಾಧೀಶರು ಹೊಂದಿರಬೇಕಾದ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ಜಿಹೆಚ್‌ಸಿಎಎ ಹೇಳಿತ್ತು.
ನ್ಯಾಯಮೂರ್ತಿ ಪಾಂಚೋಲಿ 35,000ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಅದು ಮತ್ತಷ್ಟು ಎತ್ತಿ ತೋರಿಸಿತ್ತು. ವಿರೋಧದ ಹೊರತಾಗಿಯೂ, ವರ್ಗಾವಣೆ ಜಾರಿಗೆ ಬಂದಿತ್ತು.
ಪಾಂಚೋಲಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಿಸುವುದಕ್ಕೆ ನ್ಯಾಯಮೂರ್ತಿ ಬಿ.ವಿ ನಾಗರತ್ನ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅವರು ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಕಾರಣ ಉಲ್ಲೇಖಿಸಿದ್ದಾರೆ. ಏಕೆಂದರೆ, ಹೈಕೋರ್ಟ್ ನ್ಯಾಯಾಧೀಶರ ಹಿರಿತನದ ಅಖಿಲ ಭಾರತ ಪಟ್ಟಿಯಲ್ಲಿ ನ್ಯಾಯಮೂರ್ತಿ ಪಾಂಚೋಲಿ ಪ್ರಸ್ತುತ 57ನೇ ಸ್ಥಾನದಲ್ಲಿದ್ದಾರೆ ಎಂದು ವರದಿಗಳು ಹೇಳಿವೆ.
ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿದ ಮೂರು ತಿಂಗಳೊಳಗೆ, ಮೂಲತಃ ಅದೇ ಹೈಕೋರ್ಟ್‌ನವರಾದ ಮತ್ತೊಬ್ಬರು ನ್ಯಾಯಾಧೀಶರನ್ನು ಶಿಫಾರಸು ಮಾಡುವುದಕ್ಕೆ ನಾಗರತ್ನ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಮೇ ತಿಂಗಳಲ್ಲಿ, ನ್ಯಾಯಮೂರ್ತಿ ಪಾಂಚೋಲಿ ಅವರಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಆಗ ಸುಪ್ರೀಂ ಕೋರ್ಟ್ ಕೊಲಿಜಿಯಂನ ಕನಿಷ್ಠ ಇಬ್ಬರು ನ್ಯಾಯಾಧೀಶರು ಪಾಂಚೋಲಿಯವರ ಹಿರಿತನದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಅಂಜಾರಿಯಾ ಸೇರಿದಂತೆ ಹಿರಿಯರನ್ನು ಈ ನೇಮಕ ಬೈಪಾಸ್ ಮಾಡಲಿದೆ ಎಂದಿದ್ದರು.
ಹಿರಿತನದ ಬಗ್ಗೆ ಇರುವ ಕಳವಳಗಳನ್ನು ಪರಿಹರಿಸಲು, ಕೊಲಿಜಿಯಂ ಪಾಂಚೋಲಿ ಬದಲಿಗೆ ಹಿರಿಯರಾದ ಅಂಜಾರಿಯಾ ಅವರನ್ನು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿತ್ತು. ಪಾಂಚೋಲಿ ಅವರನ್ನು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನೇಮಿಸಿತ್ತು.
ಆ ಬಳಿಕ ಇದೀಗ ಪಾಂಚೋಲಿಯವರ ಹೆಸರು ಮತ್ತೆ ಪ್ರಸ್ತಾಪವಾಗಿರುವುದರಿಂದ ನ್ಯಾಯಮೂರ್ತಿ ನಾಗರತ್ನ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆಂದು ತಿಳಿದುಬಂದಿದೆ. ಈ ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಹೈಕೋರ್ಟ್‌ನ ಅತಿಯಾದ ಪ್ರಾತಿನಿಧ್ಯವನ್ನು ನಾಗರತ್ನ ಅವರು ಕೇಂದ್ರೀಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ನ್ಯಾಯಮೂರ್ತಿ ಪಾಂಚೋಲಿ ಅವರನ್ನು ನೇಮಿಸಿದರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ, ಅಂಜಾರಿಯಾ ಮತ್ತು ಪಾಂಚೋಲಿ ಸೇರಿ ಗುಜರಾತ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರನ್ನು ಹೊಂದಲಿದೆ. ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಮತ್ತು ಪಾಂಚೋಲಿ ಇಬ್ಬರೂ 2028ರಲ್ಲಿ ಕ್ರಮವಾಗಿ ಎರಡು ವರ್ಷಗಳ ಅವಧಿಗೆ ಮತ್ತು 2031ರಲ್ಲಿ ಏಳು ತಿಂಗಳ ಅವಧಿಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲಿದ್ದಾರೆ.
ಮೇ ತಿಂಗಳವರೆಗೆ, ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ, ಎಂ.ಆರ್. ಶಾ ಮತ್ತು ಬೇಲಾ ಎಂ ತ್ರಿವೇದಿ ಸೇರಿ ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಇದ್ದರು. ನ್ಯಾಯಮೂರ್ತಿ ಶಾ ಮೇ ತಿಂಗಳಲ್ಲಿ ನಿವೃತ್ತರಾದರೆ, ನ್ಯಾಯಮೂರ್ತಿ ತ್ರಿವೇದಿ ಅವರು ಮೇ 16ರಂದು ನಿವೃತ್ತಿ ಹೊಂದಿದ್ದಾರೆ. ಬಾಂಬೆ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ತಲಾ ಮೂವರು ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನಲ್ಲಿದ್ದಾರೆ.
ಸುಪ್ರೀಂ ಕೋರ್ಟ್ 34 ನ್ಯಾಯಾಧೀಶರ ಅನುಮೋದಿತ ಬಲವನ್ನು ಹೊಂದಿದ್ದು, ಸಾಕಷ್ಟು ಪ್ರಾದೇಶಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಹೈಕೋರ್ಟ್‌ನ ಅನುಮೋದಿತ ಬಲವನ್ನು ಪರಿಗಣಿಸಲಾಗುತ್ತದೆ. ನ್ಯಾಯಮೂರ್ತಿ ನಾಗರತ್ನ ಅವರ ಕಳವಳಗಳು ಸುಪ್ರೀಂ ಕೋರ್ಟ್‌ನಲ್ಲಿ ಇತರ ಹೈಕೋರ್ಟ್‌ಗಳ ಕಡಿಮೆ ಪ್ರಾತಿನಿಧ್ಯವನ್ನು ಪ್ರತಿಬಿಂಬಿಸುತ್ತವೆ.
ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ನಾಗರತ್ನ ಭಿನ್ನಾಭಿಪ್ರಾಯ


