ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ಕೇಂದ್ರ ಸರ್ಕಾರ ಗುರುವಾರ (ಮೇ.8) ಎರಡನೇ ಬಾರಿಗೆ ಸರ್ವಪಕ್ಷ ಸಭೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಸಭೆಗೆ ಗೈರಾಗಿದ್ದರು.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಬುಧವಾರ (ಮೇ.7) ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಈ ಸಭೆಯಲ್ಲಿ ವಿವಿಧ ಪಕ್ಷಗಳ ಪ್ರಮುಖರಿಗೆ ಮಾಹಿತಿ ನೀಡಲಾಗಿದೆ.
‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ತಾಣಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಕನಿಷ್ಠ 100 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷಗಳ ನಾಯಕರಿಗೆ ಹೇಳಿದ್ದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
“ಇದು ನಿರಂತರ ಕಾರ್ಯಾಚರಣೆ ಎಂದಿರುವ ರಕ್ಷಣಾ ಸಚಿವರು, ಭಾರತದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ದಾಳಿ ಮಾಡಿದರೆ, ಭಾರತ ತಕ್ಕ ಪ್ರತಿಕ್ರಿಯೆ ನೀಡುತ್ತದೆ ಎಂಬುವುದಾಗಿ ಹೇಳಿದ್ದಾರೆ” ಎಂದಿವೆ.
ಭಾರತದ ಸಶಸ್ತ್ರ ಪಡೆಗಳು ನಡೆಸಿದ ನಿಖರ ದಾಳಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ಲಾಮಾಬಾದ್ ಬುಧವಾರ ಪ್ರತಿಜ್ಞೆ ಮಾಡಿದೆ.
“ಆಪರೇಷನ್ ಸಿಂಧೂರದ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿಸಲು ಸರ್ವಪಕ್ಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ನಾಯಕರು ಪ್ರಬುದ್ದತೆ ತೋರಿದ್ದಾರೆ. ಯಾರೂ ಗದ್ದಲ ಸೃಷ್ಟಿಸಿಲ್ಲ” ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ರಾಷ್ಟ್ರೀಯ ಭದ್ರತೆ ಮತ್ತು ಎಲ್ಲಾ ಭಾರತೀಯರ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿನ ಸುರಕ್ಷತೆಯ ವಿಷಯದ ಬಗ್ಗೆ ನಾಯಕರು ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ರಾಷ್ಟ್ರವು ಒಗ್ಗಟ್ಟಾಗಿದ್ದು, ಎಲ್ಲರು ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ಕಿರಣ್ ರಿಜಿಜು ಹೇಳಿದ್ದಾರೆ.
“ನಾವು ಸರ್ಕಾರ ರಚಿಸಲು ಅಥವಾ ಅಧಿಕಾರಕ್ಕಾಗಿ ಮಾತ್ರ ರಾಜಕೀಯ ಮಾಡುತ್ತಿಲ್ಲ. ರಾಷ್ಟ್ರ ನಿರ್ಮಾಣಕ್ಕಾಗಿಯೂ ರಾಜಕೀಯ ಮಾಡುತ್ತೇವೆ” ಎಂದು ಸಭೆಯಲ್ಲಿ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಇದು ನಿರಂತರ ಕಾರ್ಯಾಚರಣೆ ಎಂದು ತಿಳಿಸಿದ್ದಾರೆ. ಹಾಗಾಗಿ, ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ಆಪರೇಷನ್ ಸಿಂಧೂರ್‌ನ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಸಶಸ್ತ್ರ ಪಡೆಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಹಾಗಾಗಿ, ಅವರು ಸರ್ವಪಕ್ಷ ಸಭೆಯಲ್ಲಿ ಹಾಜರಿರಲಿಲ್ಲ ಎಂದು ರಿಜಿಜು ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಶಸ್ತ್ರ ಪಡೆಗಳಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಸರ್ಕಾರದ ಭಯೋತ್ಪಾದನಾ ವಿರೋಧಿ ಕ್ರಮವನ್ನು ಬೆಂಬಲಿಸಿದ್ದಾರೆ.
“ನಾವು ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಂತೆ, ಸರ್ಕಾರ ನಮ್ಮೊಂದಿಗೆ ಚರ್ಚಿಸಲು ಬಯಸದ ಕೆಲವು ವಿಷಯಗಳಿವೆ ಎಂದಿದೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
“ಸಭೆಯಲ್ಲಿ, ಸರ್ಕಾರ ಹೇಳಿದ್ದನ್ನು ನಾವು ಕೇಳಿದ್ದೇವೆ. ಕೆಲವು ಗೌಪ್ಯ ಮಾಹಿತಿಯನ್ನು ಹೊರಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ನಾವೆಲ್ಲರೂ ಸರ್ಕಾರದೊಂದಿಗಿದ್ದೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ ಎಂದು ಖರ್ಗೆ ಹೇಳಿದ್ದಾರೆ.
ಆಪರೇಷನ್ ಸಿಂಧೂರ ನಡೆಸಿದ್ದಕ್ಕಾಗಿ ಸಶಸ್ತ್ರ ಪಡೆಗಳು ಮತ್ತು ಭಾರತ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
“ನಾವು ದಿ ರೆಸಿಸ್ಟ್‌ಟೆಂಟ್ ಫ್ರಂಟ್ (ಟಿಆರ್‌ಎಫ್) ವಿರುದ್ಧ ಅಂತಾರಾಷ್ಟ್ರೀಯ ಅಭಿಯಾನವನ್ನು ನಡೆಸಬೇಕು ಮತ್ತು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಅದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು ಎಂದು ನಾನು ಹೇಳಿದ್ದೇನೆ. ದೇಶದಲ್ಲಿ ಟಿಆರ್‌ಎಫ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸುವಂತೆ ನಾವು ಅಮೆರಿಕವನ್ನು ಕೇಳಬೇಕಾಗಿದೆ” ಎಂದು ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಎಸ್. ಜೈಶಂಕರ್, ಜೆ.ಪಿ ನಡ್ಡಾ ಮತ್ತು ನಿರ್ಮಲಾ ಸೀತಾರಾಮನ್ ಸರ್ಕಾರವನ್ನು ಪ್ರತಿನಿಧಿಸಿದರೆ, ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್‌ನ ಸಂದೀಪ್ ಬಂಡೋಪಾಧ್ಯಾಯ ಮತ್ತು ಡಿಎಂಕೆಯ ಟಿ.ಆರ್ ಬಾಲು ಇದ್ದರು.
ಇನ್ನುಳಿದಂತೆ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಎಎಪಿಯ ಸಂಜಯ್ ಸಿಂಗ್, ಶಿವಸೇನೆಯ (ಯುಬಿಟಿ) ಸಂಜಯ್ ರಾವತ್, ಎನ್‌ಸಿಪಿ (ಎಸ್‌ಪಿ)ಯ ಸುಪ್ರಿಯಾ ಸುಳೆ, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ಸಿಪಿಐ (ಎಂ)ನ ಜಾನ್ ಬ್ರಿಟ್ಟಾಸ್ ಭಾಗವಹಿಸಿದ್ದರು.
ಜೆಡಿಯು ನಾಯಕ ಸಂಜಯ್ ಝಾ, ಕೇಂದ್ರ ಸಚಿವ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಭೆಗೆ ಗೈರಾಗಿದ್ದರು. ಏಪ್ರಿಲ್ 24ರಂದು ನಡೆದ ಸರ್ವಪಕ್ಷ ಸಭೆಯಲ್ಲೂ ಅವರು ಭಾಗವಹಿಸಿರಲಿಲ್ಲ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾಗಿದ್ದರು. ಏಪ್ರಿಲ್ 24ರಂದು ಸರ್ವಪಕ್ಷ ಸಭೆ ನಡೆಸಿದ್ದ ಕೇಂದ್ರ ಸರ್ಕಾರ ಈ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಇದೀಗ ಆಪರೇಷನ್ ಸಿಂಧೂರ ಬಳಿಕ ಎರಡನೇ ಬಾರಿ ಸರ್ವಪಕ್ಷ ಸಭೆ ನಡೆಸಿದೆ.
ಬಿಹಾರ| ಎನ್‌ಡಿಎ ತೊರೆದ ಇಬ್ಬರು ಹಿರಿಯ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ


