ಸ್ಮಾರ್ಟ್ ಫೋನ್ ತಯಾರಕರು ಹೊಸ ಮೊಬೈಲ್ ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಅಪ್ಲಿಕೇಶನ್ ಪ್ರಿ-ಇನ್‌ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ (ಡಿ.3) ಹಿಂಪಡೆದಿದೆ.
ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ತನ್ನ ಆದೇಶವನ್ನು ವಾಪಸ್ ತೆಗೆದುಕೊಂಡಿದೆ.
ಆದರೆ, ಸಂಚಾರ್ ಸಾಥಿಗೆ ಹೆಚ್ಚುತ್ತಿರುವ ಸ್ವೀಕೃತಿ ಪರಿಗಣಿಸಿ, ಮೊಬೈಲ್ ತಯಾರಕರಿಗೆ ಪ್ರಿ ಇನ್‌ಸ್ಟಾಲ್ ಕಡ್ಡಾಯಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಎಲ್ಲಾ ನಾಗರಿಕರಿಗೆ ಸೈಬರ್ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಪ್ರಿ- ಇನ್‌ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಈ ಅಪ್ಲಿಕೇಶನ್ ಸುರಕ್ಷಿತವಾಗಿದೆ ಮತ್ತು ಸೈಬರ್ ಜಗತ್ತಿನ ದುಷ್ಟ ಶಕ್ತಿಗಳಿಂದ ನಾಗರಿಕರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಸಂಪರ್ಕ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
ಈ ಅಪ್ಲಿಕೇಶನ್ ನಾಗರಿಕರ ಭಾಗವಹಿಸುವಿಕೆಯನ್ನು (ಜನ್ ಭಾಗಿದಾರಿ) ಹೆಚ್ಚಿಸಲು ಸಹಾಯ ಮಾಡುತ್ತದೆ.
ದುಷ್ಕೃತ್ಯಗಳಲ್ಲಿ ತೊಡಗಿರುವವರ ಬಗ್ಗೆ ಅಥವಾ ತಪ್ಪು ಕಾರ್ಯಗಳ ಬಗ್ಗೆ ಜನರು ಸರ್ಕಾರಕ್ಕೆ ಸುಲಭವಾಗಿ ಮಾಹಿತಿ ನೀಡಲು ಇದು ಉಪಯೋಗವಾಗುತ್ತದೆ. ಬಳಕೆದಾರರ ಸುರಕ್ಷತೆಯನ್ನು ಕಾಪಾಡುವುದು ಹೊರತು, ಬೇರೆ ಯಾವುದೇ ಉದ್ದೇಶ ಈ ಆ್ಯಪ್ ಹಿಂದೆ ಇಲ್ಲ ಎಂದಿದೆ.
ಇಲ್ಲಿಯವರೆಗೆ 1.4 ಕೋಟಿ ಬಳಕೆದಾರರು ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಮತ್ತು ದಿನಕ್ಕೆ 2000 ವಂಚನೆ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಪ್ಲಿಕೇಶನ್ ಪ್ರಿ-ಇನ್‌ಸ್ಟಾಲ್ ಮಾಡುವ ಆದೇಶದ ಮೂಲಕ ಅದರ ಬಳಕೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಕಡಿಮೆ ಅರಿವುಳ್ಳ ನಾಗರಿಕರಿಗೆ ಅಪ್ಲಿಕೇಶನ್ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶವಿತ್ತು. ಕಳೆದ ಒಂದು ದಿನದಲ್ಲಿ, 6 ಲಕ್ಷ ನಾಗರಿಕರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ಅಪ್ಲಿಕೇಶನ್ ಬಳಕೆ 10 ಪಟ್ಟು ಹೆಚ್ಚಾಗಿದೆ. ಇದು ಸರ್ಕಾರ ತಮಗೆ ಒದಗಿಸಿದ ಅಪ್ಲಿಕೇಶನ್‌ನಲ್ಲಿ ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಂಬಿಕೆಯ ದೃಢೀಕರಣವಾಗಿದೆ ಎಂದು ಸಂಪರ್ಕ ಇಲಾಖೆ ಹೇಳಿದೆ.
ಸಂಚಾರ್ ಸಾಥಿ ಕಡ್ಡಾಯದ ವಿರುದ್ದ ತೀವ್ರ ವಿರೋಧಗಳು ವ್ಯಕ್ತವಾದ ಹಿನ್ನೆಲೆ, ಕೇಂದ್ರ ದೂರ ಸಂಪರ್ಕ ಸಚಿವ ಜೋತಿರಾಧಿತ್ಯ ಸಿಂಧಿಯಾ ಬುಧವಾರ ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ್ದರು. “ಸಂಚಾರ್ ಸಾಥಿ’ ಆ್ಯಪ್ ಮೂಲಕ ಗೂಡಾಚರ್ಯೆ ನಡೆಯಲು ಸಾಧ್ಯವಿಲ್ಲ. ಜನರ ಪ್ರತಿಕ್ರಿಯೆಗಳನ್ನು ಅನುಸರಿಸಿ ಮೊಬೈಲ್‌ಗಳಲ್ಲಿ ಆ್ಯಪ್ ಇನ್‌ಸ್ಟಾಲ್‌ಗೆ ಸಂಬಂಧಿಸಿದ ಆದೇಶದಲ್ಲಿ ಬದಲಾವಣೆಗಳನ್ನು ಮಾಡಲು ಸಚಿವಾಲಯ ಸಿದ್ಧವಾಗಿದೆ” ಎಂದು ಹೇಳಿದ್ದರು.
ಸಂಚಾರ್ ಸಾಥಿ ಆ್ಯಪ್‌ನಿಂದ ಬೇಹುಗಾರಿಕೆ ಕುರಿತು ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಸಚಿವ ಸಿಂಧಿಯಾ, “ಸಂಚಾರ್ ಸಾಥಿ ಆ್ಯಪ್‌ನಿಂದ ಯಾವುದೇ ಗೂಢಚಾರಿಕೆ ಸಾಧ್ಯವಿಲ್ಲ, ಯಾವುದೇ ಗೂಢಚಾರಿಕೆ ಸಂಭವಿಸುವುದಿಲ್ಲ” ಎಂದು ತಿಳಿಸಿದ್ದರು.


