ಆರು ಜನ ನಕ್ಸಲ್ ನಾಯಕರ ಶರಣಾಗತಿ ಪ್ರಕ್ರಿಯೆಯಲ್ಲಿ ದಿಡೀರ್ ಬದಲಾವಣೆ ಆಗಿದ್ದು, ಇಡೀ ಕಾರ್ಯಕ್ರಮ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದೆ. ಜಿಲ್ಲಾಡಳಿತ ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಆರು ಮಂದಿ ನಕ್ಸಲ್ ಹೋರಾಟಗಾರರು ಶರಣಾಗತರಾಗಲಿದ್ದಾರೆ.
ಈ ಮುಂಚೆ ನಿಗದಿಯಾದಂತೆ ಚಿಕ್ಕಮಗಳೂರಿನ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗಬೇಕಿತ್ತು. ಬದಲಾದ ಕಾರ್ಯಕ್ರಮದಲ್ಲಿ ಸಿಎಂ ಸಮ್ಮುಖದಲ್ಲಿ ಇಂದು ಮಧ್ಯಾಹ್ನವೇ ಶರಣಾಗರಾಗಲಿದ್ದಾರೆ.
ಆರು ಜನ ನಕ್ಸಲರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶರಣಾಗತಿ ಆಗಬೇಕಿದ್ದ ಆರು ನಕ್ಸಲರನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಪೊಲೀಸರು ಬೆಂಗಳೂರಿಗೆ ಕರೆತಂದು ಶರಣಾಗತಿ ಮಾಡಿಸಲಿದ್ದಾರೆ. ಇಂದು ಬೆಳಗ್ಗೆಯಿಂದ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆ, ದಲಿತ ಸಂಘಟನೆ ಮುಖಂಡರು, ಶರಣಾಗುತ್ತಿರುವ ನಕ್ಸಕರ ಕುಟುಂಬದ ಸದಸ್ಯರ ಹಾಗೂ ಮಾಧ್ಯಮದವರು ಕಾಯುತ್ತಿದ್ದರು.
“ನನ್ನ ಸಮ್ಮುಖದಲ್ಲೇ ಶರಣಾಗತಿ ಆಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗತಾನೇ ಸೂಚನೆ ಕೊಟ್ಟಿದ್ದಾರೆ. ಆದ್ದರಿಂದ, ಆರು ಜನ ನಕ್ಸಲ್ ಕಾರ್ಯಕರ್ತರನ್ನು ಪೊಲೀಸರ ಜೊತೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದೇವೆ” ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಕೆ.ಎಲ್.ಅಶೋಕ್ ಹೇಳಿದರು.
ಇವರ ಜೊತೆಗೆ ನಕ್ಸಲ್ ಕಾರ್ಯಕರ್ತರ ಕುಟುಂಬದ ಸದಸ್ಯರನ್ನು ಪೊಲೀಸರ ಜೊತೆಯಲ್ಲಿಯೇ ಕರೆದುಕೊಂಡು ಹೋಗಲಾಗುತ್ತಿದೆ. ಇಂದು ಸಂಜೆ 6 ಗಂಟೆಗೆ ಮುಂಡಗಾರು ಲತಾ ಸೇರಿದಂತೆ ಉಳಿದ 5 ನಕ್ಸಲರು ಬಂದೂಕುಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲಿದ್ದಾರೆ.
“ಆರು ಮಂದಿ ನಕ್ಸಲ್ ಹೋರಾಟಗಾರರು ಬುಧವಾರ ಸರ್ಕಾರದ ಎದುರು ಶರಣಾಗಲಿದ್ದಾರೆ. ಅವರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ” ಎಂದು ಸರ್ಕಾರ ತಿಳಿಸಿದೆ.
ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಅವರು ಸರ್ಕಾರದ ಮುಂದೆ ಶರಣಾಗುವುದಾಗಿ ಒಪ್ಪಿಕೊಂಡಿದ್ದಾರೆ.
ಸಶಸ್ತ್ರ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿ ಬರಲು ಮತ್ತು ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳಲು ನಕ್ಸಲ್ ಹೋರಾಟಗಾರರು ನಿರ್ಧಾರಿಸಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆಯೊಂದಿಗೆ ಚರ್ಚೆ ನಡೆಸಿರುವ ನಕ್ಸಲ್ ಹೋರಾಟಗಾರರು, ಸರ್ಕಾರದ ಕರೆಯನ್ನು ಒಪ್ಪಿಕೊಂಡಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆಯ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾವೋವಾದಿ ಹೋರಾಟಗಾರರು ಸಭೆ ನಡೆಸಿದ್ದರು. ಸಭೆಯಲ್ಲಿ ತಮ್ಮ ಶರತ್ತುಗಳನ್ನು ಸರ್ಕಾರದ ಮುಂದಿರುವ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿ ಬರಲು ಸಮ್ಮತಿ ಸೂಚಿಸಿದ್ದಾರೆ.

ಕಾನೂನು ಪ್ರಕಾರ ಕ್ರಮ ಆಗಲಿದೆ: ಪರಮೇಶ್ವರ್
ನಕ್ಸಲರ ಶರಣಾಗತಿಯ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, “”ಶರಣಾಗುವ ನಕ್ಸಲರ ವಿರುದ್ಧ ಹಲವು ಪ್ರಕರಣಗಳಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
“ವಿಕ್ರಂಗೌಡ ಎನ್‌ಕೌಂಟರ್ ವೇಳೆ ನಕ್ಸಲರಿಗೆ ಶರಣಾಗಲು ಕರೆ ನೀಡಲಾಗಿತ್ತು. ಕಾಡಿನಲ್ಲಿದ್ದು ಈ ರೀತಿ ಜೀವನ ಏಕೆ ಮಾಡುತ್ತಿದ್ದೀರಿ, ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಅಂತ ಹೇಳಿದ್ದೇವೆ. ನಕ್ಸಲರ ವಿರುದ್ಧ ಹಲವು ಪ್ರಕರಣಗಳಿವೆ ನಿಜ, ಪ್ರಕರಣಗಳ ವಿಚಾರದಲ್ಲಿ ಕಾನೂನು ಪ್ರಕಾರ ಕ್ರಮ ಆಗಲಿದೆ” ಎಂದು ತಿಳಿಸಿದರು.
ನಕ್ಸಲ್ ನಾಯಕರ ನಡೆ ಸ್ವಾಗತಿಸಿದ ಸಚಿವ ದಿನೇಶ್
“ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಮರಳುತ್ತಿರುವ ಆರು ಜನ ನಕ್ಸಲೀಯರ ನಿರ್ಧಾರವನ್ನು ಸ್ವಾಗತ್ತಿಸುತ್ತೇನೆ. ನಕ್ಸಲರ ಶರಣಾಗತಿಯಿಂದ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಲಿದೆ. ಹಿಂಸೆ ಮತ್ತು ಕ್ರೌರ್ಯದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಸತ್ಯ ನಕ್ಸಲ್ ಚಳವಳಿಯಲ್ಲಿ ತೊಡಗಿದ್ದವರಿಗೆ ಅರಿವಾಗಿದೆ. ಹಿಂಸಾಮಾರ್ಗವನ್ನು ತ್ಯಜಿಸುವ ಮೂಲಕ ಎಲ್ಲರೊಂದಿಗೆ ಘನತೆಯಿಂದ ಬದುಕುವ ಆಯ್ಕೆ ಮಾಡಿಕೊಂಡ ನಕ್ಸಲ್ ಚಳವಳಿಗಾರರಿಗೆ ಶುಭವಾಗಲಿ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಮಧ್ಯಸ್ಥಿಕೆ ವಹಿಸಿದ ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಶರಣಾದ ನಕ್ಸಲರ ಬದುಕು ರೂಪಿಸುವಲ್ಲಿ ನಮ್ಮ ಸರ್ಕಾರ ಕೂಡ ರಚನಾತ್ಮವಾಗಿ ಕ್ರಮ ವಹಿಸುವ ಜೊತೆಗೆ ನಕ್ಸಲರ ಕೆಲ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ” ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ; ಚಿಕ್ಕಮಗಳೂರು| ‘ಶಾಂತಿಗಾಗಿ ನಾಗರಿಕ ವೇದಿಕೆ’ ನೇತೃತ್ವದಲ್ಲಿ ನಕ್ಸಲ್ ನಾಯಕರ ಶರಣಾಗತಿಗೆ ಕ್ಷಣಗಣನೆ


