ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಹಂಕಾರ ಮತ್ತು ಗಂಡಿನ ದರ್ಪ ಕಾಣಿಸುತ್ತಿದೆ. ಆದರೆ, ಇಲ್ಲಿ ತಾಯ್ತನದ ಶಕ್ತಿ ಇದೆ. ಅಂತಿಮವಾಗಿ ತಾಯ್ತನವೇ ಗೆಲ್ಲುತ್ತದೆ ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತನಗೆ ರೈತ ಸಂಘದ ನಾಯಕಿ ಚುಕ್ಕಿ ನಂಜುಂಡ್ಸ್ವಾಮಿ ಬೇಸರ ಹೊರಹಾಕಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಧರಣಿ ಸ್ಥಳದಲ್ಲಿ ಇಂದು ನಡೆದ ‘ಗ್ರಾಮ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, “ಇಲ್ಲಿನ ಒಗ್ಗಟ್ಟು ಮುರಿಯುವ ಕೆಲಸವನ್ನು ಕೆವರು ಮಾಡುತ್ತಿದ್ದಾರೆ. ಇಷ್ಟು ದಿನ ಇವರು ಯಾರೂ ನಮಗೆ ಕಂಡಿರಲಿಲ್ಲ, ಇದ್ದಕ್ಕಿದ್ದಂತೆ ಭೂಮಿ ಕೊಡುತ್ತೇವೆ ಎಂದು ಈಗ ಮುಂದೆ ಬಂದಿದ್ದಾರೆ. ಈ ನಡುವೆ, ಕಾನೂನಿನ ತೊಡಕು ಇದೆ ಎಂದು ಹೇಳಿ 10 ದಿನ ಕಾಲಾವಕಾಶ ಕೇಳಿದ್ದರು. ಇ ಂದ್ಯದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಕ್ಷಣಾ ಮಂತ್ರಿಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಡಿಫೆನ್ಸ್ ಕಾರಿಡಾರ್ ಮಾಡುತ್ತೇವೆ ಎಂದು ಅನುಮತಿ ಕೇಳಿದ್ದಾರೆ. ರೈತರು ಭೂಮಿ ಕೊಡದೇ ಇದ್ದರೆ ಡಿಫೆನ್ಸ್ ಕಾರಿಡಾರ್ ಆಂಧ್ರಪ್ರದೇಶಕ್ಕೆ ಹೋಗುತ್ತದೆ ಎಂದು ಹೇಳಿದ್ದಾರೆ; ಇದೆಲ್ಲಾ ಮಾಡುತ್ತಿರುವುದು ಸರಿಯಲ್ಲ” ಎಂದರು.
“ಡಿಫೆನ್ಸ್ ಕಾಡಿರಾಡ್ ಮಾಡುವುದೇ ಇದ್ದರೆ ಅದಕ್ಕೆ ಕೆಐಎಡಿಬಿ ಮಧ್ಯಸ್ಥಿತಕೆ ಬೇಕಾಗಿರುಲ್ಲ. ಅದನ್ನು ನಿರ್ಧರಿಸುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ. ಕೇಂದ್ರ ಯಾವುದೇ ರಾಜ್ಯದಲ್ಲಿ ಬೇಕಿದ್ದರೂ ಮಾಡಬಹುದು. ಜು.4 ರ ಸಭೆವರೆಗೂ ಸರ್ಕಾರಕ್ಕೆ ಇಲ್ಲಿ ಏನು ಮಾಡಬೇಕು ಎಂಬುದು ಗೊತ್ತಿರಲಿಲ್ಲ. ಅದಕ್ಕಾಗಿಯೇ ಅವರು ಇದ್ದಕ್ಕಿದ್ದಂತೆ ಡಿಫೆನ್ಸ್ ಕಾರಿಡಾರ್ ನೆಪದಲ್ಲಿ ಭೂಮಿಯನ್ನು ಕೆಐಎಡಿಬಿ ಲ್ಯಾಂಡ್ ಬ್ಯಾಂಕ್‌ನಲ್ಲಿ ಇಟ್ಟುಕೊಳ್ಳಲು ಯೋಚಿಸಿದ್ದಾರೆ. ಇವರ ಷಡ್ಯಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದರು.
“ನಾಳಿನ ಸಭೆ ಏನಾಗುತ್ತದೆ ನೋಡೋಣ, ನಾವು ಸಾಕಷ್ಟು ಆಶಾಭಾವ ಇಟ್ಟುಕೊಳ್ಳೋಣ. ನಮಗೆ ಸಾಕಷ್ಟು ತಾಳ್ಮೆ ಬೇಕು. ಏಕೆಂದರೆ, ರೈತರಾದ ನಮಗೆ ಬೆಳೆ ಬೆಳೆಯುವಾಗ ಕಾಣಿಸುವ ಎಲ್ಲ ಸಮಸ್ಯೆಗಳು ಈಗಲೂ ಬರುತ್ತವೆ. ನಾವು ಭೂಮಿಯನ್ನು ಅಳೆಯುವ ಕೆಲಸ ಮಾಡಿಲ್ಲ. ಅರ್ಧ ಎಕರೆ, ಒಂದು ಎಕರೆ ಇದ್ದರೂ ಶ್ರದ್ಧೆಯಿಂದ ಬೆಳೆ ಬೆಳೆಯುವ ಕೆಲಸ ಮಾಡುತ್ತಿದ್ದೇವೆ. ನಮಗೆ ನಷ್ಟವಾದರೂ ಬೇರೆಯವರಿಗೆ ನೀಡುವ ಕೆಲಸ ಮಾಡುತ್ತಿದ್ದೇವೆ. ಇಂಥ ನಿಸ್ವಾರ್ಥದ ಸಂಸ್ಖೃತಿ ಒಂದುಕಡೆಯಾದರೆ, ಎಲ್ಲವೂ ನಾನೇ ಎಂಬ ಮನಸ್ಥಿತಿ ಒಂದು ಕಡೆ. ಈ ಎರಡೂ ವೈರುಧ್ಯಗಳ ನಡುವೆ ನಡೆಯುತ್ತಿರುವ ಹೋರಾಟ ಇದು. ಅಹಂಕಾರ ಹಾಗೂ ಗಂಡಿನ ದರ್ಪ ಇಲ್ಲಿ ಕಾಣಿಸುತ್ತಿದೆ; ಆದರೆ ಇಲ್ಲಿ ತಾಯ್ತನದ ಶಕ್ತಿ ಇದೆ. ಅಂತಿಮವಾಗಿ ತಾಯ್ತನವೇ ಗೆಲ್ಲುತ್ತದೆ” ಎಂದರು.
ಸುಧೀರ್ಘ ಹಾಗೂ ಸಾತ್ವಿಕ ತಪಸ್ಸಿಗೆ ಫಲ ಸಿಗಲೇಬೇಕು: ನೂರ್ ಶ್ರೀಧರ್
ಜನಶಕ್ತಿ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಮಾತನಾಡಿ, “13 ಹಳ್ಳಿಗಳ ಭೂತಪಸ್ವಿಗಳಿಗೆ ಶರಣು, 1200 ದಿನಗಳ ದೊಡ್ಡ ಮಹಾತಪಸ್ಸು ಮಾಡಿದ್ದೀರ. ಇಂಥಹ ಸುಧೀರ್ಘ ಹಾಗೂ ಸಾತ್ವಿಕ ತಪಸ್ಸಿಗೆ ನಾಳೆ ಒಳ್ಳೆ ಫಲ ಸಿಗಲೇಬೇಕು” ಎಂದರು.
“ಕೆಐಎಡಿಬಿ ಎಲ್ಲ ಕಡೆ ಭೂಮಿ ಕಬಳಿಸುತ್ತಿರುವಾಗ ನಮ್ಮನ್ನು ತಡೆಯುವವರೇ ಇಲ್ಲ ಎನ್ನುತ್ತಿರುವಾಗ, ಎಲ್ಲ ಸರ್ಕಾರಗಳ ಅಹಂಕಾರವನ್ನು 13 ಹಳ್ಳಿಗಳ ಜನ ತಡೆದಿದ್ದಾರೆ. ಅಂತಿಮ ಅಧಿಸೂಚನೆ ಬಂದ ಬಳಿಕವೂ ಹಲವು ಜನರ ಬೆಂಬಲ ಸಿಕ್ಕಿದೆ. ಇದು 13 ಹಳ್ಳಿಗಳ ಹೋರಾಟವಲ್ಲ, ಇಡೀ ದೇಶದ ಹೋರಾಟ. ನೂರಕ್ಕೆ ನೂರು ನಾಳಿನ ಫಲಿತಾಂಶ ನಮ್ಮ ಪರವಾಗಿ ಆಗೇ ಆಗುತ್ತದೆ. ನಾಳಿನ ಸಭೆಗೆ ಎಲ್ಲ ತಾಯಂದಿರೂ ಸಿಹಿ ತನ್ನಿ, ‘ಸಿಹಿ ತಿಂದು, ಸಿಹಿ ಸುದ್ದಿ ಕೊಡಿ’ ಎಂದು ಮುಖ್ಯಮಂತ್ರಿಗಳನ್ನು ಕೇಳೋಣ” ಎಂದರು.
“ಇಲ್ಲಿರುವ ಸಂಘಟನೆಗಳೆಲ್ಲವೂ ಕೇವಲ ಕಾವಲು ಪಡೆಗಳು ಮಾತ್ರ, ನಿಮ್ಮ ಭೂಮಿ ಕೈತಪ್ಪುವುದಕ್ಕೆ ನಾವು ಬಿಡುವುದೇ ಇಲ್ಲ. ಈ ತಪಸ್ಸಿಗೆ ನಾಳೆ ಪ್ರತಿಫಲ ಸಿಗಬಹುದು. ನಮ್ಮ ಭೂಮಿ ಬಲವಂತದ ವಶಪಡಿಸಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದರೆ ಶಿವನ ತಪ್ಪಸ್ಸು ಕೆಡಿಸಿದಂತೆ. ಶಿವ ಮೂರನೇ ಕಣ್ಣು ಬಿಟ್ಟಾಗ ಪ್ರಳಯ ಸೃಷ್ಠಿ ಆಗುತ್ತದೆ’ ಇಲ್ಲೂ ಕೂಡ ಅದೇ ಆಗುತ್ತದೆ. ಅಂಥ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದರೆ ಅವರಿಗೇ ತೊಂದರೆ; ನಮಗೇನೂ ಆಗುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಸಮಾವೇಶದಲ್ಲಿ ಇಂದಿರಾ ಕೃಷ್ಣಪ್ಪ, ಬಡಗಲಪುರ ನಾಗೇಂದ್ರ, ಎಸ್.ಆರ್. ಹಿರೇಮಠ್, ಟಿ.ಯಶವಂತ್, ಮೀನಾಕ್ಷಿ ಸುಂದರಂ, ಗುರುಪ್ರಸಾದ್ ಕೆರಗೋಡು, ಕೆವಿ ಭಟ್, ಚಾಮರಸ ಪಾಟೀಲ್, ಎಚ್.ಆರ್. ಬಸವರಾಜಪ್ಪ, ಮುಖ್ಯಮಂತ್ರಿ ಚಂದ್ರು, ದೇವಿ, ಚುಕ್ಕಿ ನಂಜುಂಡಸ್ವಾಮಿ, ಕಾಳಪ್ಪ, ಅಪ್ಪಣ್ಣ, ಜಿಜಿ ನಾರಾಯಣಸ್ವಾಮಿ, ಆಂಜನೇಐ ರೆಡ್ಡಿ, ನೂರ್ ಶ್ರೀಧರ್, ನಂಜಪ್ಪ ನಲ್ಲಪ್ಪನಹಳ್ಳಿ, ಮಾರೇಗೌಡ, ಕಾರಳ್ಳಿ ಶ್ರೀನಿವಾಸ್, ರಮೇಶ್ ಚೀಮಾಚನಹಳ್ಳಿ ಸೇರಿದಂತೆ ಹಲವರಿದ್ದರು.
ದೇವನಹಳ್ಳಿ: ಭೂಮಿ ಕೊಡುವುದಿಲ್ಲ ಎಂದು ದಾಖಲೆ ನೀಡಿದ ಶೇ.80 ರಷ್ಟು ರೈತರು