ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದಾರೆ.
ರಾಜ್ಯಪಾಲ ಸಿ.ವಿ ಆನಂದ್ ಬೋಸ್ ಸರ್ಕಾರದಿಂದ ವರದಿ ಕೇಳಿದ್ದು, ಪೊಲೀಸರು ಕಾರ್ಯಕ್ರಮದ ಮುಖ್ಯ ಸಂಘಟಕ ಸತಾದ್ರು ದತ್ತ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮೆಸ್ಸಿ ಕಾರ್ಯಕ್ರಮದಲ್ಲಿ ಆಗಿದ್ದೇನು?
‘ಗೋಟ್ ಇಂಡಿಯಾ ಟೂರ್ 2025’ರ ಮೊದಲ ಹಂತವಾಗಿ ಶನಿವಾರ ಬೆಳಿಗ್ಗೆ 11:30ರ ಸುಮಾರಿಗೆ ಮೆಸ್ಸಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣ ತಲುಪಿದರು. ಅವರೊಂದಿಗೆ ಅರ್ಜೆಂಟೀನಾ ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಇದ್ದರು. ಮೆಸ್ಸಿ ಕ್ರೀಡಾಂಗಣದಲ್ಲಿ ಜನತ್ತ ಕೈ ಬೀಸಿ, ಸಣ್ಣ ಗೌರವ ಸ್ವೀಕರಿಸಿ ಬಳಿಕ ಆಟಗಾರರು ಮತ್ತು ಗಣ್ಯರೊಂದಿಗೆ ಸಂವಾದ ನಡೆಸಿದರು.
ಕೇವಲ 10-20 ನಿಮಿಷಗಳಷ್ಟೇ ಇದ್ದು ಬೇಗನೇ ಹೊರಟುಹೋದರು. ಇದರಿಂದ 4 ರಿಂದ 18 ಸಾವಿರದವರೆಗೆ ಪಾವತಿಸಿ ಟಿಕೆಟ್ ಪಡೆದಿದ್ದ ಅಭಿಮಾನಿಗಳಿಗೆ ಮೆಸ್ಸಿಯನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಕಾರಣ, ರಾಜಕಾರಣಿಗಳು, ಸೆಲೆಬ್ರಿಟಿಗಳು, ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ಬಿಗಿಯಾಗಿ ಸುತ್ತುವರಿದಿದ್ದರು.
ಇದರಿಂದ ನಿರಾಸೆಗೊಂಡ ಪ್ರೇಕ್ಷಕರು ಜೋರಾಗಿ ಕೂಗಲು ಶುರು ಮಾಡಿದರು. ನೀರಿನ ಬಾಟಲ್‌ಗಳು, ಕುರ್ಚಿಗಳು ಮತ್ತು ಇತರ ವಸ್ತುಗಳನ್ನು ಮೈದಾನಕ್ಕೆ ಎಸೆದರು. ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದು ಮೈದಾನಕ್ಕೆ ನುಗ್ಗಿದರು. ಬ್ಯಾನರ್, ಹೋರ್ಡಿಂಗ್ಸ್, ಮತ್ತು ಕುಳಿತುಕೊಳ್ಳುವ ಸೀಟುಗಳನ್ನು ಹಾನಿಗೊಳಿಸಿದರು (ಕೆಲವನ್ನು ಬೆಂಕಿಹಚ್ಚಿದರು). ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗಲಾಟೆ ನಿಯಂತ್ರಿಸಿದರು. ಘಟನೆಯಿಂದ ಯಾವುದೇ ಸಾವು-ನೋವು ವರದಿಯಾಗಿಲ್ಲ, ಆದರೆ, ಕ್ರೀಡಾಂಗಣದ ಆಸ್ತಿಗೆ ಹಾನಿಯಾಗಿದೆ.
ಕ್ರೀಡಾಂಗಣದ ಕಾರ್ಯಕ್ರಮಕ್ಕೂ ಮುನ್ನ ಮೆಸ್ಸಿ ಅವರು ಲೇಕ್ ಟೌನ್‌ನಲ್ಲಿ ತಮ್ಮ 70 ಅಡಿ ಎತ್ತರದ ಪ್ರತಿಮೆಯನ್ನು ವರ್ಚುವಲ್ ಆಗಿ ಅನಾವರಣಗೊಳಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳಪೆ ವ್ಯವಸ್ಥೆಗೆ ಆಘಾತ ವ್ಯಕ್ತಪಡಿಸಿ, ಮೆಸ್ಸಿ ಮತ್ತು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿ (ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ) ಘೋಷಿಸಿದ್ದಾರೆ. ಈ ಸಮಿತಿ ಘಟನೆ ಕಾರಣ ತಿಳಿಸಲಿದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಕ್ರಮಗಳನ್ನು ಶಿಫಾರಸು ಮಾಡಲಿದೆ.
ಪೊಲೀಸರು ಮುಖ್ಯ ಸಂಘಟಕ ಸತಾದ್ರು ದತ್ತ ಅವರನ್ನು ಕಳಪೆ ವ್ಯವಸ್ಥೆಗಾಗಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಡಿಜಿಪಿ ರಾಜೀವ್ ಕುಮಾರ್ ಅವರು ಸಂಘಟಕರು ಟಿಕೆಟ್ ಹಣ ಮರುಪಾವತಿಗೆ ಲಿಖಿತ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯಪಾಲ ಸಿ.ವಿ ಆನಂದ ಬೋಸ್ ಸರ್ಕಾರದಿಂದ ವಿವರವಾದ ವರದಿ ಕೇಳಿದ್ದು, ವ್ಯವಸ್ಥೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದ ಕಾರ್ಯಕ್ರಮದ ಬಳಿಕ ಮೆಸ್ಸಿ ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ. ಅಲ್ಲಿ, ಕೋಲ್ಕತ್ತಾದ ಘಟನೆ ಮರುಕಳಿಸದಂತೆ ಎಲ್ಲಾ ಎಚ್ಚರಿಕೆ ವಹಿಸಲಾಗಿದೆ ಎಂದು ವರದಿಯಾಗಿದೆ.


