ಕಿಸಾನ್ ಸಂಯುಕ್ತ ಮೋರ್ಚಾ ಕರೆ ನೀಡಿದ್ದ ‘ಭಾರತ್ ಬಂದ್’ ಬೆಂಬಲಿಸಿ, ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸಭೆಯಲ್ಲಿ ಸೋಮವಾರ ಮಾತನಾಡಿದ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಸಂಚಾಲಕರಾದ ಮಾವಳ್ಳಿ ಶಂಕರ್, ‘‘ಒಕ್ಕೂಟ ಸರ್ಕಾರ ಕ್ಯಾಕರಿಸಿ ಉಗುಳಿದರೆ ಅದನ್ನೇ ಪ್ರಸಾದ ಎಂದು ರಾಜ್ಯದ ಬಿಜೆಪಿ ಸರ್ಕಾರ ತಿಳಿದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ‘ಕೇಶವಕೃಪಾ’ದ ಗುಲಾಮರಾಗಿದ್ದಾರೆ’’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಶವಕೃಪಾ ರಾಜ್ಯದ ಆರೆಸ್ಸೆಸ್‌ನ ಕೇಂದ್ರ ಕಚೇರಿಯಾಗಿದೆ.
“ಕಳೆದ ಹತ್ತು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಒಕ್ಕೂಟ ಸರ್ಕಾವು ರೈತರಿಂದ ದಿಗ್ಬಂಧನಕ್ಕೆ ಒಳಗಾಗಿದೆ. ಅನ್ನವನ್ನು ಐಟಿ ಬಿಟಿ ಕಂಪೆನಿಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. ಅದನ್ನು ಭೂಮಿಯಲ್ಲಷ್ಟೇ ಬೆಳೆಯಲು ಸಾಧ್ಯ. ರೈತರ ಬೆವರು ಹರಿದರೆ ಮಾತ್ರ ಅಂಬಾನಿ ಅದಾನಿಯ ಮಾಲ್‌ಗಳು ತುಂಬುತ್ತದೆ. ಪ್ರಧಾನಿ ಮೋದಿಗೆ ರೈತರನ್ನು ಉದ್ದೇಶಿಸಿ ಮಾತನಾಡುವ ಯೋಗ್ಯತೆ ಮತ್ತು ಧೈರ್ಯ ಇಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಆಗ ಬ್ರಿಟಿಷರ, ಈಗ ಕಾರ್ಪೊರೇಟ್‌ಗಳ ಗುಲಾಮಿ ಪಕ್ಷ: ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್
“ಒಕ್ಕೂಟ ಸರ್ಕಾರ ಕ್ಯಾಕರಿಸಿ ಉಗುಳಿದರೆ ಅದನ್ನೇ ಪ್ರಸಾದ ಎಂದು ರಾಜ್ಯದ ಬಿಜೆಪಿ ಸರ್ಕಾರ ತಿಳಿದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌ಆರ್ ಬೊಮ್ಮಾಯಿ ಅವರು ದೇಶದ ಖ್ಯಾತ ಕಮ್ಯುನಿಷ್ಟ್ ಚಿಂತಕ ಎಂಎನ್ ರಾಯ್ ಅವರ ವಿಚಾರಧಾರೆಗಳಲ್ಲಿ ನಂಬಿಕೆ ಇಟ್ಟವರು. ಆದರೆ ಅವರ ಮಗ ಮುಖ್ಯಮಂತ್ರಿ ಬಸವರಾಜ್ ಅವರು ಕೇಶವಕೃಪಾದ ಗುಲಾಮರಾಗಿದ್ದಾರೆ” ಎಂದು ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
“ರೈತರ ಹೋರಾಟವು ‘ಪ್ರಾಯೋಜಿತ’ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಹಾಗಾದರೆ ನಿಮ್ಮನ್ನು ಅಧಿಕಾರಕ್ಕೆ ತಂದವರು ಯಾರು? ನಿಮ್ಮನ್ನು ಪ್ರಾಯೋಜಿಸಿದವರು ಯಾರು? ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕೆ ದುಡ್ಡು ಕೊಟ್ಟವರು ಯಾರು? ಒಕ್ಕೂಟ ಸರ್ಕಾರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಹಣ ನೀಡಿದವರು ಯಾರು? ಎಂದು ನಾವು ಪ್ರಶ್ನಿಸುತ್ತೇವೆ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವುದು ಮತ್ತೊಂದು ಸ್ವಾತಂತ್ಯ್ರ ಹೋರಾಟ” ಎಂದು ಮಾವಳ್ಳಿ ಶಂಕರ್ ಅವರು ಹೇಳಿದರು.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಾಪಾಸು ಪಡೆಯುವಂತೆ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸಿತ್ತಿದ್ದಾರೆ. ಈ ಹೋರಾಟ ಪ್ರಾರಂಭವಾಗಿ ಹತ್ತು ತಿಂಗಳಾದ ಹಿನ್ನಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾವು ಸೋಮವಾರದಂದು ಭಾರತ್ ಬಂದ್‌ಗೆ ಕರೆ ನೀಡಿತ್ತು. ಈ ಕರೆಗೆ ಓಗೊಟ್ಟಿರುವ ರಾಜ್ಯದ ರೈತ, ಕಾರ್ಮಿಕ, ದಲಿತ, ಮಹಿಳಾ, ಕನ್ನಡ ಪರ, ವಿದ್ಯಾರ್ಥಿ-ಯುವಜನ ಸಂಘಟನೆಗಳು ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳೂ ಬಂದ್‌ಗೆ ಬೆಂಬಲಿಸಿದ್ದವು.
ಇದನ್ನೂ ಓದಿ: ಹುತಾತ್ಮ ಭಗತ್ ಸಿಂಗ್ ಜನ್ಮದಿನ: ಕ್ರಾಂತಿಕಾರಿ ಸೇನಾನಿಗೆ ಗೌರವ ಸಲ್ಲಿಸಿದ ನಾಯಕರು


