ಚಿಕ್ಕಮಗಳೂರು: ಜಿಲ್ಲೆಯ ಮುತ್ತಿನಕೊಪ್ಪ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ‘ಡಾ.ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ಸ್ಥಾಪಿಸಲು ಸ್ಥಳವಕಾಶಕ್ಕಾಗಿ ಅನುಮತಿ ಕೋರಿ ಆರು ತಿಂಗಳು ಕಳೆದರು ಸಂಬಂಧಿಸಿದ ಅಧಿಕಾರಿ ನಿರ್ಲಕ್ಷ್ಯವಹಿಸಿದ್ದಾರೆಂದು ಕರ್ನಾಟಕ ಜನಶಕ್ತಿ ರಾಜ್ಯ ಮುಖಂಡರಾದ ಕೆ.ಎಲ್.ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯೂ ಅಂಬೇಡ್ಕರ್ ಪ್ರತಿಮೆಗೆ ಸಂಬಂಧಿಸಿದ ಸ್ಥಳವಕಾಶಕ್ಕೆ ನಿರ್ಲಕ್ಷ್ಯ ತೋರಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ಹಿರಿಯ ಮೇಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ, ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳವಕಾಶವನ್ನು ಗುರುತಿಸಿಕೊಟ್ಟು, ಸಂವಿಧಾನ ಶಿಲ್ಪಿ ‘ಡಾ ಬಿ ಆರ್ ಅಂಬೇಡ್ಕರ್”ರವರ ಗೌರವಾರ್ಥವಾಗಿ ಪ್ರತಿಮೆಯನ್ನು ಸ್ಥಾಪಿಸಲು ಸ್ಥಳವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿ ಆರು ತಿಂಗಳು ಕಳೆದರು ಇಲ್ಲಿಯವರೆಗೂ ಜಾಗವನ್ನು ಗುರುತಿಸಲು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಕೆ.ಎಲ್.ಅಶೋಕ್ ಅವರು ಮಾಹಿತಿ ನೀಡಿದರು.
ಇಷ್ಟು ಮಾತ್ರವಲ್ಲದೇ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಆಡಳಿತದಲ್ಲಿ ವಿಪರೀತ ಭ್ರಷ್ಟಾಚಾರ ಕಂಡು ಬರುತ್ತಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಶಾಸಕ ಟಿ.ಡಿ.ರಾಜೇಗೌಡರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕೆ.ಎಲ್.ಆಶೋಕ್ ತಿಳಿಸಿದ್ದಾರೆ.
‘ಬಿಜೆಪಿಯ ಭ್ರಷ್ಟಾಚಾರ ನೋಡಿ ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಈಗ ಕಾಂಗ್ರೆಸ್ ಕೂಡ ಅದೇ ಹಾದಿಯಲ್ಲಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮುತ್ತಿನಕೊಪ್ಪದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಉದ್ದೇಶದಿಂದ ಎಲ್ಲಾ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿತ್ತು. ಆದರೆ, ಶಾಸಕ ಟಿ.ಡಿ. ರಾಜೇಗೌಡ ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನು ವಿರೋಧಿಸಿ ಕಲ್ಕುಳಿ ವಿಠಲ ಹೆಗಡೆ ಸೇರಿದಂತೆ ಹಲವು ಜನರೊಂದಿಗೆ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ’ ಎಂದರು.
ಕ್ಷೇತ್ರದಲ್ಲಿ ಶಾಸಕರು ಹಾಗೂ ಅವರ ಹಿಂಬಾಲಕರು ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಾಗಲಗಂಚಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಮಾಡುವುದಾಗಿ ಆಶ್ವಾಸನೆ ನೀಡಿ, ಆರು ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಕುರಿತು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ವಿವಿಧ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ನೌಕರ ಸಂಘದವರು ಹಾಗೂ ಇನ್ನಿತರರು ಸೇರಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮದ ಕೃಷ್ಣ ಅವರು ಹೇಳಿದ್ದಾರೆ.
ಕೇದಾರನಾಥ ಹೆಲಿಕಾಪ್ಟರ್ ದುರಂತ: ಖಾಸಗಿ ಸಂಸ್ಥೆಯ ವಿರುದ್ಧ ದೂರು ದಾಖಲು


