ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿ ಕದಿಯಲು ಚಿಲುಮೆ ಸಂಸ್ಥೆಯು ಬರೋಬ್ಬರಿ 500 ಸಿಬ್ಬಂದಿಯನ್ನು ಅರೆಕಾಲಿಕ ಅವಧಿಗೆ ನೇಮಿಸಿತ್ತು ಎಂಬ ಆತಂಕಕಾರಿ ಸಂಗತಿಯು ಈಗ ಹೊರಬಿದ್ದಿದೆ.
ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ಮತ್ತು ಆತನ ಸಹೋದರ ಕೆಂಪೇಗೌಡ ಅವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತದಾರರ ಮಾಹಿತಿ ಕಲೆಹಾಕುತ್ತಿದ್ದ ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸಿ, ಪ್ರತಿಯೊಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯುತ್ತಿದ್ದಾರೆ.
ಚಿಲುಮೆ ಸಂಸ್ಥೆಯು ನೇಮಿಸಿಕೊಂಡ 500 ಸಿಬ್ಬಂದಿಗೆ ಡಿಜಿಟಲ್ ಸಮೀಕ್ಷಾ ಆ್ಯಪ್ ಬಗ್ಗೆ ತರಬೇತಿ ನೀಡಲಾಗಿತ್ತು. ಜೊತೆಗೆ ಮತದಾರರ ಮನೆ ಮನೆಗೆ ಭೇಟಿ ನೀಡಿ, ಮತದಾರರ ಮಾಹಿತಿ ಸಂಗ್ರಹಿಸಲಾಗಿತ್ತು ಎಂಬುದು ತನಿಖೆಯಿಂದ ಬಯಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಿ, ಮತದಾರರ ಮಾಹಿತಿ ಕಲೆಹಾಕಲು ಸಿಬ್ಬಂದಿ ಬೇಕಾಗಿದ್ದಾರೆ ಎಂದು ಚಿಲುಮೆ ಸಂಸ್ಥೆ ಜಾಹೀರಾತು ನೀಡಿ, ಸಾಕಷ್ಟು ಯುವಜನರನ್ನು ನೇಮಿಸಿಕೊಂಡಿತ್ತು. ಅವರಿಗೆ ದಿನದ ಲೆಕ್ಕದಲ್ಲಿ ಸಂಬಳ ಕೂಡ ನಿಗದಿ ಮಾಡಲಾಗಿತ್ತು.
ಬಿಬಿಎಂಪಿ ಅಧಿಕಾರಿಗಳು ನೇಮಿಸಿರುವ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಎಂಬುದಾಗಿ ಹೇಳಿಕೊಂಡ ಚಿಲುಮೆ ಸಿಬ್ಬಂದಿ ಮನೆಗಳಿಗೆ ತೆರಳಿ, ಮತದಾರರ ಹೆಸರು, ವಿಳಾಸ, ಜಾತಿ, ಉಪಜಾತಿ, ಕುಟುಂಬಸ್ಥರ ಮಾಹಿತಿ, ಮೊಬೈಲ್ ಸಂಖ್ಯೆ, ಬೆಂಬಲಿಸುವ ಪಕ್ಷ, ನೆಚ್ಚಿನ ರಾಜಕೀಯ ನಾಯಕ… ಹೀಗೆ ಹಲವು ಮಾಹಿತಿ ಪಡೆದು, ಅದನ್ನೇ ಆ್ಯಪ್‌ನಲ್ಲಿ ದಾಖಲಿಸಿದ್ದರು.
ಈ ಕೃತ್ಯಕ್ಕೆ ಬಿಬಿಎಂಪಿ ಅಧಿಕಾರಿಗಳು ಸಹಕರಿಸಿದ್ದರು ಎಂಬುದು ಬಯಲಾಗಿದ್ದು, ಆ ಅಧಿಕಾರಿಗಳನ್ನು ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಒಂದೊಂದು ಕಚೇರಿ 500 ಸಿಬ್ಬಂದಿಯ ತಂಡ ಕಟ್ಟಿಕೊಂಡಿದ್ದ ಚಿಲುಮೆ ಸಂಸ್ಥೆ ಮಹದೇವಪುರ, ಚಿಕ್ಕಪೇಟೆ ಹಾಗೂ ಇತರೆ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದೆ. ಆಯಾ ಕ್ಷೇತ್ರದಲ್ಲಿ ಬಾಡಿಗೆಗೆ ಕಟ್ಟಡ ಪಡೆದು, ಸಿಬ್ಬಂದಿಗೆ ಕೆಲಸ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲ ಕಚೇರಿಗಳನ್ನು ಪೊಲೀಸರು ಪತ್ತೆ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಟಿ ಕೋಟಿ ಸಂಪಾದನೆ ಆರೋಪಿ ಸ್ಥಾನದಲ್ಲಿರುವ ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಸಂಗ್ರಹಿಸುವ ಮೂಲಕವೇ ಕೋಟಿ ಕೋಟಿ ಸಂಪಾದನೆ ಮಾಡಿದೆ ಎನ್ನಲಾಗುತ್ತಿದೆ. ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ರಾಜಕಾರಣಿಗಳ ಜೊತೆ ಒಡನಾಟ ಹೊಂದಿದ್ದು, ಚುನಾವಣೆ ನಿರ್ವಹಣೆ ಹೆಸರಿನಲ್ಲಿ ಹಲವು ಸೇವೆಗಳನ್ನು ನೀಡುವುದರ ಜೊತೆಗೆ ಚುನಾವಣೆ ಕಾರ್ಯಕ್ರಮಗಳಿಗೆ ಜನರನ್ನು ಕಳುಹಿಸುವ ಕೆಲಸ ಕೂಡ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಸಂಬಂಧಪಟ್ಟ ರಾಜಕಾರಣಿಗಳಿಂದ ಲಕ್ಷ ಲಕ್ಷ ಹಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಅಧಿಕಾರಿಗಳ ಅಮಾನತು: ಹಗರಣ ಬೆಳಕಿಗೆ ಬಂದಂತೆ ಒಂದೊಂದೇ ಸಂಗತಿಗಳು ಹೊರಗೆ ಬರುತ್ತಿವೆ. ಇದರ ಬೆನ್ನಲ್ಲೇ ಐಎಎಸ್ ಅಧಿಕಾರಿಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ ರಂಗಪ್ಪ ಮತ್ತು ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಅವರನ್ನು ಅಮಾನತು ಮಾಡಿ, ಕೇಂದ್ರ ಚುನಾವಣೆ ಆಯೋಗವು ತನಿಖೆಗೆ ನ.25ರ ಶುಕ್ರವಾರ ಆದೇಶಿಸಿತ್ತು.
ಇದನ್ನೂ ಓದಿರಿ: ರಾಹುಲ್ ಆರತಿ ಎತ್ತುವುದನ್ನು ಅಪಹಾಸ್ಯ ಮಾಡಿದ ಅಮಿತ್ ಮಾಳವಿಯಾಗೆ ಜನರಿಂದ ಮಂಗಳಾರತಿ
ಬೆಂಗಳೂರಿನ ಬಿಬಿಎಂಪಿ ವ್ಯಾಪಿಯಲ್ಲಿ ನಡೆದ ಮತದಾರರ ಐಡಿ ಕಾರ್ಡ್ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ ಮಧ್ಯೆ ಪ್ರವೇಶ ಮಾಡಿದ್ದು, ಕರ್ನಾಟಕ ಚುನಾವಣೆ ಆಯೋಗಕ್ಕೆ ಚಾಟಿ ಬೀಸಿದೆ. ಬಿಬಿಎಂಪಿ ಹೊರತುಪಡಿಸಿ ವೋಟರ್ ಐಡಿ ಪರಿಷ್ಕರಣೆಗೆ ವಿಶೇಷ ಅಧಿಕಾರಿ ನೇಮಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈವರೆಗೆ ಸಂಗ್ರಹಿಸಿರುವ ಡೇಟಾ ಬಳಸದಂತೆಯೂ ಸೂಚಿಸಿದ್ದು, ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಶೇ. 100ರಷ್ಟು ಮತದಾರರ ಪರಿಷ್ಕರಣೆ ನಡೆಯಬೇಕು. ಅಲ್ಲದೇ ಚಿಕ್ಕಪೇಟೆ, ಮಹದೇವಪುರ, ಶಿವಾಜಿನಗರ ಉಸ್ತುವಾರಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಕೇಂದ್ರ ಚುನಾವಣೆ ಆಯೋಗ ನಿರ್ದೇಶನ ನೀಡಿದೆ.


