ಪಿಕೆ ಟಾಕೀಸ್ 08/ಜಾಗತಿಕ ಸಿನಿಮಾ/ಗ್ರೀಸ್ ಸಿನಿಮಾ/ ನಿಕೋಸ್ ಪನಯೊಟೊಪೊಲಸ್
ಐಡ್ಲರ್ಸ್ ಆಫ್ ದಿ ಫರ್ಟೈಲ್ ವ್ಯಾಲಿ(1978): ವೃದ್ಧ ತಂದೆ ಮತ್ತು ಮೂವತ್ತೈದು ವರ್ಷಗಳು ದಾಟಿದ ಮೂರು ಗಂಡು ಮಕ್ಕಳಿಗೆ ಪಿತ್ರಾರ್ಜಿತವಾಗಿ ಒಂದು ತೋಟದ ಬಂಗಲೆಯೊಂದಿಗೆ, ಆಕರ್ಷಿಕವಾಗಿರುವ ಮತ್ತು ಕಷ್ಟಪಟ್ಟು ದುಡಿಯುವ ಕೆಲಸದಾಕೆ ಸಿಕ್ಕರೆ? ಎಲ್ಲರೂ ಬಂಗಲೆಯೊಳಗೆ ಸೇರಿಕೊಂಡ ಮೇಲೆ ಮಾಡುವುದಕ್ಕೆ ಮುಂದೇನೆಂದು ತಿಳಿಯದೆ ಗೊತ್ತು ಗುರಿಯಿಲ್ಲದೆ ಹೋದರೆ? ಮನೆಯಿಂದ ಹೊರಗೆ ಹೋಗುವ ಅವಶ್ಯಕತೆಯೇ ಬಾರದಿದ್ದರೆ? ಇದೇ ಸಿನಿಮಾದ ಕಥಾನಕ.
ಬಂಗಲೆಗೆ ಬಂದ ಹೊಸದರಲ್ಲಿ ಸೂಟು ಬೂಟುಗಳನ್ನು ತೊಟ್ಟು, ಕೆಲಸದಾಕೆ ಮಾಡಿದ ವಿವಿಧ ಬಗೆಯ ಅಡುಗೆಗಳನ್ನು ಸವಿಯುತ್ತಾ, ವೈನ್ ಹೀರಿ ಸಂಭ್ರಮಿಸುತ್ತಾ, ಎಲ್ಲರೂ ಸೇರಿ ಹಾಡುತ್ತಾ ಖುಷಿಯಿಂದಿರುತ್ತಾರೆ. ಕ್ರಮೇಣ ತಂದೆ ಕೋಣೆಯಿಂದ ಹೊರಬರುವುದನ್ನು ನಿಲ್ಲಿಸುತ್ತಾನೆ. ದೊಡ್ಡ ಮಗ ಹೊರಗಿನ ಹೆಣ್ಣಿನೊಂದಿಗೆ ಲೈಂಗಿಕ ಸಂಪರ್ಕವಿಟ್ಟುಕೊಂಡಿರುವುದನ್ನು, ಕಿರಿಯ ಮಗ ನೋಡುತ್ತಾನೆ. ದೊಡ್ಡ ಮಗ ತನ್ನ ಗೆಳತಿಯನ್ನು ಮದುವೆಯಾಗುವ ಪ್ರಸ್ತಾಪ ಮಾಡಿದಾಗ ತಮ್ಮ, “ಈ ಮನೆಗೆ ಯಾವುದೇ ಹೆಣ್ಣು ಬಂದರೂ ಅವಳು ಕೆಲಸದಾಕೆಯಂತೆ ದಾಸಿಯಾಗುತ್ತಾಳೆಂದು” ಹೇಳುತ್ತಾನೆ. ಮದುವೆಯಾಗುವ ಯೋಚನೆ ಅಲ್ಲಿಗೆ ಕೊನೆಯಾಗುತ್ತದೆ.
ಮೂವರೂ ಗಂಡುಮಕ್ಕಳು ಕೆಲಸದಾಕೆಯೊಂದಿಗೆ ಗುಟ್ಟಾಗಿ ಲೈಂಗಿಕ ಸಂಪರ್ಕವಿಟ್ಟುಕೊಳ್ಳುತ್ತಾರೆ. ಆದರೆ ಕೆಲಸದಾಕೆ ಮಾತ್ರ ಕಿರಿಯ ಮಗನನ್ನು ಪ್ರೀತಿಸುತ್ತಾಳೆ. ನಡಿಗೆಯ ಕಾರಣಕ್ಕೆ ಮೊದಮೊದಲು ಮನೆ ಸುತ್ತಮುತ್ತ ಸುತ್ತಾಡಿದರೂ, ಕ್ರಮೇಣವಾಗಿ ಮನೆಯಿಂದ ಹೊರಗೆ ಬರುವುದನ್ನೇ ನಿಲ್ಲಿಸಿಬಿಡುತ್ತಾರೆ. ಊಟಕ್ಕಾಗಿ ಮಾತ್ರ ಅತಿ ಕಷ್ಟದಿಂದ ಡೈನಿಂಗ್ ಟೇಬಲ್ಲಿಗೆ ಬರುವಂತಾಗುತ್ತದೆ. ಕೊನೆಗೆ ಊಟ ಮತ್ತು ಮೈಥುನವೂ ಹಾಸಿಗೆಯಲ್ಲೇ ಆಗುವ ಸೋಮಾರಿತನಕ್ಕೆ ಅವರೆಲ್ಲರೂ ತಲುಪುತ್ತಾರೆ.
ಕಿರಿಯ ಮಗ ನಿದ್ದೆ ಮತ್ತು ಸೋಮಾರಿತನದಿಂದ ಹೊರಬರಬೇಕೆಂದು ಎಣಿಸಿ, ಮನೆಯನ್ನು ಬಿಟ್ಟು ಹೋಗಿ ಕೆಲಸ ಹುಡುಕಲು ನಿರ್ಧರಿಸುತ್ತಾನೆ. ಆದರೆ ತಂದೆ ಮತ್ತು ಅಣ್ಣಂದಿರ ಬಲವಂತಕ್ಕೆ ಕಟ್ಟುಬಿದ್ದು ಮನೆಯಲ್ಲೇ ಉಳಿದುಕೊಳ್ಳುತ್ತಾನೆ. ಕೊನೆಗೊಂದು ದಿನ ಕೆಲಸದಾಕೆ ಮತ್ತು ಕಿರಿಯ ಮಗ ಸೂಟ್‌ಕೇಸ್ ಹಿಡಿದು ಮನೆಯಿಂದ ಹೊರನಡೆಯುತ್ತಾರೆ. ತುಸು ದೂರ ನಡೆದ ನಂತರ, ಸುಸ್ತಾಗಿದೆ ಎಂದು ದಾರಿಯಲ್ಲೇ ಮಲಗುವ ದೃಶ್ಯದಲ್ಲಿ ಸಿನಿಮಾ ಮುಗಿಯುತ್ತದೆ.
ಈ ಸಿನಿಮಾ ಅಲ್ಬರ್ಟ್ ಕೊಸ್ರಿನ, “ಲೇಸಿನೆಸ್ ಇನ್ ದಿ ಫರ್ಟೈಲ್ ವ್ಯಾಲಿ” ಎಂಬ ಫ್ರೆಂಚ್ ಕಾದಂಬರಿಯ ದೃಶ್ಯರೂಪ. ಇದನ್ನು ಅಲೆಗರಿಯಾಗಿ ನೋಡಿದರೆ, ಆಧುನಿಕತೆಯ ಜಗತ್ತಿನ ಬದುಕಿನ ಶೈಲಿಯ ಮೇಲಿನ ಟಿಪ್ಪಣಿಯಂತೆ ಕಾಣುತ್ತದೆ. ಮತ್ತೊಂದು ರೀತಿಯಲ್ಲಿ ಹಣ, ಮನೆ, ಊಟ, ಆರೋಗ್ಯ, ಸೆಕ್ಸ್ ಎಲ್ಲವೂ ಮನೆಯಲ್ಲಿಯೇ ಸುಲಭವಾಗಿ ದಕ್ಕಿಬಿಟ್ಟರೆ ಅದು, “ಎಮೋಟಿವೇಷನಲ್ ಸಿಂಡ್ರೋಮ್ ಆಗಿ ಪರಿವರ್ತನೆ ಆಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ನೂರಕ್ಕೆ ತೊಂಭತ್ತರಷ್ಟು ಜನ ಕನಸ್ಸು ಕಾಣುವಂತೆ, ಶ್ರೀಮಂತಿಕೆ ಸಿಕ್ಕ ನಂತರ ಏನೂ ಮಾಡಲಾಗದೆ ಜಡವಾಗುವುದನ್ನು ಕಟ್ಟಿಕೊಟ್ಟಿದ್ದಾನೆ.
ಹಾಸಿಗೆಯಲ್ಲೊಬ್ಬ ಮಲಗಿರುವಾಗಲೇ ಹಾಸಿಗೆಯ ಹೊದಿಕೆಯನ್ನು ಕೆಲಸದಾಕೆ ಬದಲಾಯಿಸುವ ದೃಶ್ಯ ಸೋಮಾರಿತನದ ಪರಮಾವಧಿಯನ್ನು ನಿರೂಪಿಸುತ್ತದೆ. ಕಿರಿಯ ಮಗ ನಿದ್ದೆಯ ಮಂಪರಿನಲ್ಲೇ ಎದ್ದು ಧೂಳು ತುಂಬಿದ ಪುಸ್ತಕಗಳ ನಡುವಿನಿಂದ, “ಫ್ರೆಂಚ್ ರೆವೆಲ್ಯೂಷನ್” ಪುಸ್ತಕವನ್ನು ಎತ್ತಿ ನೋಡುವಾಗ, ಅಲ್ಲಿನ ದ್ವಂದ್ವತೆ ಕಾಣುತ್ತದೆ. ಕೆಲಸದಾಕೆ ಲೈಟ್ ಹಾಕಿದಾಗ ತೀವ್ರ ಕೋಪದಿಂದ ಅವಳನ್ನು ಬೈಯ್ಯುವ ದೃಶ್ಯ, ಕಷ್ಟಪಟ್ಟು ಕೆಲಸ ಮಾಡಿದ ನೌಕರನನ್ನು ಸೋಮಾರಿ ಮಾಲಿಕ ಸಾಲಗಾರನಂತೆ ರೇಗುವ ಬಗೆಯನ್ನು ನೆನಪಿಸುತ್ತದೆ.
ಹೀಗೆ ಹಲವಾರು ರೀತಿಯಲ್ಲಿ ಈ ಸಿನಿಮಾವನ್ನು ನೋಡಬಹುದಾದರೂ ಇದು ಯಾವುದು ಅಲ್ಲವೇನೋ ಎಂಬಂತೆ ಕೇವಲ ಅಲೆಗರಿಯಾಗಿ ನಿಲ್ಲುವಂತೆ ಸಿನಿಮಾವನ್ನು ಕಟ್ಟಿರುವ ನಿರ್ದೇಶಕನ ಸಾಮರ್ಥ್ಯ ಮತ್ತು ಚಾಣಾಕ್ಷತನ ಮಾತ್ರ ಮನಸ್ಸಿನಲ್ಲಿ ಉಳಿಯುತ್ತದೆ.
ಮಲಯಾಳಂ ನಿರ್ದೇಶಕ ಅಡೂರ್ ಗೋಪಾಲ ಕೃಷ್ಣ ಅವರ ’ಎಲಿಪ್ಪಥಾಯಂ’ನ ಮತ್ತು ಈ ಸಿನಿಮಾದ ಥೀಂ ಮತ್ತು ವಸ್ತುವಿನಲ್ಲಿ ಹೊಂದಾಣಿಕೆಯನ್ನು ಗುರುತಿಸಬಹುದು
ಡೆಲಿವರಿ (2004): ಮುಗ್ಧ ಯುವಕನೊಬ್ಬ ಕೈಯಲ್ಲಿ ಅಥೆನ್ಸ್‌ನ ನಕ್ಷೆಯೊಂದನ್ನು ಹಿಡಿದು ನಗರಕ್ಕೆ ಬರುತ್ತಾನೆ. ನಗರದಲ್ಲಿರುವ ವಿವಿಧ ಬಗೆಯ ಜನಗಳೊಂದಿಗೆ ವ್ಯವಹರಿಸಿದಾಗ ಅವನಲ್ಲಾಗುವ ಬದಲಾವಣೆಗಳು ಮತ್ತು ಉಳಿಯುವ ಅವನ ಮುಗ್ದತೆ ಹಾಗೂ ಅವನ ದುರ್ಬಲ ಸನ್ನಿವೇಶಗಳೇ ಈ ಸಿನಿಮಾ.
2004ನ ಇಸವಿಯಲ್ಲಿ ಅಥೆನ್ಸ್‌ನಲ್ಲಿ ನಡೆದಿರುವ ಒಲಂಪಿಕ್ಸ್ ಕ್ರೀಡಾಕೂಟದ ಸಲುವಾಗಿ ಅಥೆನ್ಸ್‌ನ ವೈಭವ ಮತ್ತು ಅದ್ದೂರಿತನವನ್ನು ಗ್ರೀಸ್ ಸರ್ಕಾರ ಪ್ರಪಂಚಕ್ಕೆ ತೋರಿಸಲು ಅನುವಾಗುತ್ತದೆ. ಇದಕ್ಕೆ ಉತ್ತರವಾಗಿ ನಿಕೋಸ್ ಅಥೆನ್ಸ್‌ನಲ್ಲಿರುವ ಜನಸಾಮಾನ್ಯರ ನೋವಿನ ಬದುಕನ್ನು ಸಿನಿಮಾವಾಗಿ ಚಿತ್ರಿಸಿದ್ದಾರೆ.
ಈ ಯುವಕ ಮೊದಲಿಗೆ ರಸ್ತೆಯಲ್ಲಿ ನಿಂತು ನೀರಿನ ಬಾಟಲ್‌ಗಳನ್ನು ಮಾರುವ ಕೆಲಸಕ್ಕೆ ಸೇರುತ್ತಾನೆ. ಆದರೆ ಅಂಗಡಿ ಹೊಂದಿರುವ ಅಲ್ಬೇನಿಯನ್‌ನಿಂದ ಪಿಜ್ಜಾ ಡೆಲಿವರಿ ಕೆಲಸ ಸಿಗುತ್ತದೆ ಮತ್ತು ಈ ಕೆಲಸವನ್ನು ಅತಿ ಖುಷಿಯಿಂದ ಮಾಡುತ್ತಾನೆ. ಯುವಕ ಡೆಲಿವರಿ ಸಲುವಾಗಿ ನಗರವನ್ನೆಲ್ಲ ಸುತ್ತುತ್ತಿರುವಾಗ ಅವನ ದೃಷ್ಟಿಕೋನದಿಂದಲೇ ಪ್ರೇಕ್ಷಕರು ಅಥೆನ್ಸ್‌ಅನ್ನು ನೋಡುತ್ತಾರೆ.
ಪಿಜ್ಜಾ ಅಂಗಡಿಯಲ್ಲಿ ಕೆಲಸ ಮಾಡುವ ಹೆಣ್ಣನ್ನು ಮೋಹಿಸುತ್ತಾನೆ, ಆದರೆ ಅವಳು ವೈಶ್ಯವಾಟಿಕೆಯಲ್ಲಿ ತೊಡಗಿರುತ್ತಾಳೆ. ಅವಳ ಬದುಕಿನ ಏಳುಬೀಳುಗಳನ್ನು ನಿಭಾಯಿಸಲು ಪ್ರಯತ್ನಿಸಿ ಗೊಂದಲಕ್ಕೀಡಾಗುತ್ತಾನೆ. ಅವಳ ಮೇಲಾಗುವ ದೌರ್ಜನ್ಯವನ್ನು ತಡೆಯುತ್ತಾನೆ. ಡೆಲಿವರಿ ಕೆಲಸದಲ್ಲಿ ಸಿಗುವ ಗಿರಾಕಿಗಳು ಮತ್ತು ಅವರಿರುವ ಮನೆಗಳು ಅಥೇನ್ಸ್‌ನ ಬೇರೆಯದೇ ಕಥೆ ಹೇಳುತ್ತದೆ.
ಅಥೆನ್ಸ್ ವಲಸಿಗರಿಂದ ಕಿಕ್ಕಿರಿದಿದ್ದು, ಚೀನಿಯರು, ಆಫ್ರಿಕನ್ನರು, ಭಾರತೀಯರು, ಮುಸ್ಲಿಂ ದೇಶದವರನ್ನು ಕಾಣಬಹುದು. ಇವರೆಲ್ಲರ ಜೊತೆಗೆ ಗ್ರೀಸ್ ಗ್ರೀಸಿಗರಿಗೆ ಮಾತ್ರ ಎನ್ನುವ ಪ್ರತಿಭಟನಾಕಾರರನ್ನು ನೋಡಬಹುದು. ಸಿನಿಮಾದ ಕೆಲಭಾಗಗಳಲ್ಲಿ ಹಿಂದಿ ಗೀತೆಯೊಂದು ಹಿನ್ನೆಲೆಯಲ್ಲಿ ಕೇಳುವುದು ವಿಶೇಷ.
ಹೀಗೆ ಡೆಲಿವರಿ ಕೆಲಸದಲ್ಲಿ ಬಂದ ಕರೆಯ ಅನ್ವಯ ಹೊರಟಾಗ ಕೆಲವರು ಈ ಯುವಕನ್ನು ಹೊಡೆದು ಅವನ ಸ್ಕೂಟರನ್ನು ಕಿತ್ತುಕೊಂಡು ಹೋಗುತ್ತಾರೆ. ಅಲ್ಲಿಗೆ ಅವನ ಬದುಕು ಮತ್ತೆ ಮೊದಲಿದ್ದ ಹಂತಕ್ಕೇ ಬಂದು ನಿಲ್ಲುತ್ತದೆ. ಆದರೆ ಈ ಬಾರಿ ಅಥೆನ್ಸ್‌ನ ಕ್ರೂರತೆ ಯುವಕನಲ್ಲಿ ಹಾಸುಹೊಕ್ಕಿರುತ್ತದೆ. ಹಸಿವನ್ನು ತಾಳಲಾಗದೆ ನಗರದ ವಿವಿಧ ಬೀದಿಗಳಲ್ಲಿ ಭಿಕ್ಷೆ ಕೇಳಲು ಕೆಲವರು ಬೈಯ್ಯಲು, ಮತ್ತಿತರು ಅವನನ್ನು ನಿರ್ಲಕ್ಷಿಸಲು, ಇವೆಲ್ಲವನ್ನು ತಾಳಲಾಗದೆ ಪಿಸ್ತೂಲಿನಿಂದ ಒಬ್ಬನನ್ನು ಕೊಲ್ಲುತ್ತಾನೆ. ಈ ಸುದ್ದಿ ತಿಳಿದು ಪೊಲೀಸರು ಯುವಕನನ್ನು ನಡುರಸ್ತೆಯಲ್ಲಿ ಗುಂಡಿಕ್ಕಿ ಕೊಲ್ಲುವುದರ ಮೂಲಕ ಸಿನಿಮಾ ಮುಗಿಯುತ್ತದೆ.
ಅಥೆನ್ಸ್ ಬಡತನ, ವಲಸಿಗರ ನೋವು, ಮನೆಯಿಲ್ಲದಿರುವವರು, ಮಾದಕ ವ್ಯಸನಿಗಳು, ಕಳ್ಳತನ, ವ್ಯೆಶ್ಯಾವಾಟಿಕೆ, ಬೀದಿಗಳಲ್ಲಿ ಕ್ರೌರ್ಯ, ಹೀಗೆ ಪ್ರಪಂಚಕ್ಕೆ ಕಾಣದಂತೆ ನಿಗೂಢವಾಗಿಟ್ಟ ಅಥೆನ್ಸ್‌ಅನ್ನು, ಮಾತುಗಳನ್ನೇ ಆಡದ ಯುವಕನ ಪಾತ್ರದ ಮೂಲಕ, ಮೂಕ ಪ್ರೇಕ್ಷಕನ ಅಳಲಿನಂತೆ ನಿರ್ದೇಶಕ ಕಟ್ಟಿಕೊಟ್ಟಿದ್ದಾರೆ.
ನಿಕೋಸ್ ಪನಯೊಟೊಪೊಲಸ್: ಗೊದಾರ್ದ್‌ನ ಪ್ಯಾರಿಸ್ ನೋಡಲು ಎಷ್ಟು ಚೆಂದವೋ ಹಾಗೆಯೇ ನಿಕೋಸ್‌ನ ಅಥೆನ್ಸ್ ಕೂಡ. ಇವರ ಅತಿ ಹೆಚ್ಚಿನ ಸಿನಿಮಾಗಳಲ್ಲಿ ಕಥೆ ನಡೆಯುವುದು ಅಥೆನ್ಸ್ ನಗರದಲ್ಲೇ. ನಗರ ಪ್ರದೇಶದ ಜನಗಳು ಮತ್ತು ಅವರ ಬದುಕುಗಳನ್ನು ನೈಜವಾಗಿ ತೋರಿಸುವುದರಲ್ಲಿ ನಿಕೋಸ್‌ರವರದ್ದು ಎತ್ತಿದ ಕೈ.
ಡೈಯಿಂಗ್ ಇನ್ ಅಥೆನ್ಸ್(2006), ಅಥೆನ್ಸ್ ಇಸ್ತಾನ್‌ಬುಲ್(2008) ಮತ್ತು ದಿ ಫ್ರೂಟ್ ಟ್ರೀಸ್ ಅಫ್ ಅಥೆನ್ಸ್(2010) ಅನ್ನುವ ಸಿನಿಮಾಗಳ ಹೆಸರುಗಳಲ್ಲೇ ಅಥೆನ್ಸ್ ನಗರದ ಹೆಸರು ಇರುವುದನ್ನು ಗಮನಿಸಿದರೆ ಸಾಕು, ನಿಕೋಸ್‌ಗೂ ಮತ್ತು ಅಥೆನ್ಸ್‌ಗೂ ಇರುವ ಸಂಬಂಧದ ಗಾಢತೆಯನ್ನು ತಿಳಿಯಬಹುದು.
ಮೆಲೋಡ್ರಾಮ (1980) ಸಿನಿಮಾದಲ್ಲಿ, ಮುಖ್ಯಪಾತ್ರಧಾರಿಗಳು ಅಥೆನ್ಸ್‌ನ ಬೀದಿಗಳಲ್ಲಿ ನಡೆದುಕೊಂಡು ಹೋಗುವ ದೀರ್ಘವಾದ ಶಾಟ್, ಗೊದಾರ್ದ್ ಸಿನಿಮಾಗಳ ಪ್ಯಾರಿಸ್ ಮತ್ತು ಅವರ ಶೈಲಿಯನ್ನು ನೆನಪಿಸುತ್ತದೆ.
ಸಿನಿಮಾದಲ್ಲಿ ಪಾತ್ರಗಳು ಚಲಿಸಿದಂತೆ ಕ್ಯಾಮರಾ ಚಲಿಸುವುದನ್ನು ಮೋಟಿವೆಟಡ್ ಕ್ಯಾಮರಾ ಮೂವ್‌ಮೆಂಟ್ ಎನ್ನುತ್ತಾರೆ. ಒಬ್ಬ ಲೇಖಕ ಪೆನ್ನನ್ನು ಬಳಸುವಂತೆ ನಿರ್ದೇಶಕ ಕ್ಯಾಮರವನ್ನು ಬಳಸುವುದು ನೋಡಲು ಸೋಜಿಗವೆನಿಸುತ್ತದೆ. ಕ್ಯಾಮರಾವನ್ನು ಚಲಿಸುತ್ತಾ, ಪ್ರೇಕ್ಷಕರಿಗೆ ಸುತ್ತಮುತ್ತಲಿರುವುದನ್ನು ತೋರಿಸುತ್ತಾ, ನಿರ್ದೇಶಕ ನೇರವಾಗಿ ಪ್ರೇಕ್ಷಕನೊಂದಿಗೆ ಸಂವಾದಿಸುವುದು ಅಪರೂಪ.
ನಿಕೋಸ್ ಸಿನಿಮಾಗಳಲ್ಲಿನ ಶಾಟ್‌ಗಳನ್ನು ಗಮನಿಸಿದರೆ ಅದು ವೃತ್ತಾಕಾರದ ಶೈಲಿಯಲ್ಲಿರುತ್ತವೆ. ಅಂದರೆ ಒಂದು ಶಾಟ್ ಪಾತ್ರದ ಕ್ಲೋಸಪ್‌ನಿಂದ ಶುರುವಾದರೆ, ಕಟ್ ಮಾಡದೆ ಪಾತ್ರಗಳನ್ನು ಹಿಂಬಾಲಿಸುತ್ತಾ, ಸಂಭಾಷಣೆಯನ್ನು ಚಿತ್ರಿಸಿ ಮತ್ತೆ ಕ್ಯಾಮರಾ ಅದೇ ಪಾತ್ರದ ಕ್ಲೋಸಪ್‌ಗೆ ಬಂದು ನಿಲ್ಲುವುದು ನಿರ್ದೇಶಕನ ಶೈಲಿಯ ವೈಶಿಷ್ಟತೆಯನ್ನು ತೋರಿಸುತ್ತದೆ. ಹಾಗೆಯೇ ದಿ ಕಲರ್ಸ್ ಆಫ್ ಐರಿಸ್ (1974) ಸಿನಿಮಾದಲ್ಲಿ, ಜಾಹಿರಾತಿನ ಶೂಟಿಂಗ್ ವೇಳೆ ಅಪರಿಚತನೊಬ್ಬ ಸಮುದ್ರಕ್ಕೆ ಹೋಗಿ ಮುಳುಗಿ ಸಾಯುವ ದೃಶ್ಯದಿಂದ ಶುರುವಾಗಿ ಸಿನಿಮಾದ ಕೊನೆಯಲ್ಲಿ ಅದೇ ದೃಶ್ಯವನ್ನು ಚಿತ್ರೀಕರಿಸುವ ಸಲುವಾಗಿ ಮುಖ್ಯಪಾತ್ರಧಾರಿಯೂ ಸಮುದ್ರಕ್ಕೆ ಹೋಗಿ ಸಾಯುವ ದೃಶ್ಯದಿಂದಲೇ ಮುಕ್ತಾಯವಾಗುತ್ತದೆ. ನಿರ್ದೇಶಕನ ವೃತ್ತಾಕಾರದ ಶೈಲಿಯ ಬಳಕೆಯನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.
ಐಡ್ಲರ್ಸ್ ಆಫ್ ದಿ ಫರ್ಟೈಲ್ ವ್ಯಾಲಿ(1978) ಸಿನಿಮಾದಲ್ಲಿ ಕ್ಯಾಮರಾ ಚಲಿಸುವ ಶೈಲಿ ನಿದ್ದೆಗಣ್ಣಿನಿಂದ ಮನೆಯೆಲ್ಲ ಸುತ್ತುತ್ತಾ ಪಾತ್ರಗಳು ಮಲಗಿರುವುದನ್ನು ಚಿತ್ರೀಕರಿಸುವುದು, ಮನೆಯಲ್ಲಿ ಕೆಲಸದಾಕೆ ಮತ್ತು ಪ್ರೇಕ್ಷಕರು ಮಾತ್ರವಿದ್ದಾರೆಂಬ ಅನಿಸಿಕೆ ಉಂಟಾಗಿಸುತ್ತದೆ.
ಇವರ ಸಿನಿಮಾದ ಕಥೆಗಳಲ್ಲಿನ ಮುಖ್ಯಪಾತ್ರಧಾರಿಗಳು ಎಲ್ಲಿಂದಲೋ ಬಂದಿರುತ್ತಾರೆ ಮತ್ತು ಮತ್ತೆಲ್ಲಿಗೋ ಹೋಗುವ ತವಕದಲ್ಲಿರುತ್ತಾರೆ. ಎಲ್ಲಿಂದ ಎಲ್ಲಿಗೆ ಪ್ರಶ್ನೆಗಳು ನಮ್ಮ ಬದುಕಿನ ಇರುವಿಕೆಯ ಪ್ರಶ್ನೆಗಳನ್ನು ಎಬ್ಬಿಸುತ್ತವೆ.


