ಖಾತೆ ಹಂಚಿಕೆ ಕುರಿತು ಅಸಮಾಧಾನಗೊಂಡಿರುವ ವಿಜಯನಗರ ಕ್ಷೇತ್ರದ ಶಾಸಕ ಮತ್ತು ಹಾಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಮ್ಮ ಶಾಸಕರ ಕಾರ್ಯಾಲಯದ ಬೋರ್ಡ್ ತೆರವುಗೊಳಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ರಾಜೀನಾಮೆಯ ಎಚ್ಚರಿಕೆ ನೀಡಿದ್ದಾರೆ.
ಹಲವು ವರ್ಷಗಳಿಂದ ವಿಜಯನಗರದಲ್ಲಿ ಕಾರ್ಯಾಲಯ ಹೊಂದಿದ್ದ ಅವರು ನಿನ್ನೆ ಏಕಾಏಕಿ ಅದನ್ನು ತೆರವುಗೊಳಿಸಿದ್ದಾರೆ. ತಮಗೆ ಪ್ರವಾಸೋದ್ಯಮ ಖಾತೆ ಬೇಡ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಅವರು ಈ ಮೂಲಕ ತಮ್ಮ ಪ್ರತಿಭಟನೆ ಹೊರ ಹಾಕಿದ್ದಾರೆ.
ಇಂಧನ ಅಥವ ಬೃಹತ್ ಕೈಗಾರಿಕೆ ಖಾತೆ ತಮಗೆ ನೀಡಬೇಕೆನ್ನುವುದು ಆನಂದ್ ಸಿಂಗ್ ಆಗ್ರಹವಾಗಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿಯವರು ಮಾತುಕತೆ ನಡೆಸುತ್ತಿದ್ದೇನೆ, ಎಲ್ಲರನ್ನೂ ಸಮಾಧಾನ ಮಾಡುತ್ತೇನೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ನಾನು ಭ್ರಷ್ಟನಲ್ಲ. ಯಾವ ಹಗರಣಗಳು ನನ್ನನ್ನು ಮುತ್ತಿಕೊಂಡಿಲ್ಲ. ಹಾಗಿದ್ದರೂ ನಾನು ಬಯಸಿದ ಖಾತೆ ಏಕೆ ನೀಡುತ್ತಿಲ್ಲ. ಅದು ಸಿಗದಿದ್ದರೆ ಈ ಪ್ರವಾಸೋದ್ಯಮ ಖಾತೆಯೇ ಬೇಡ ಎಂದು ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
2019ರ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಾಳಯಕ್ಕೆ ಸೇರಿರುವ ಆನಂದ್ ಸಿಂಗ್ ಪ್ರಬಲ ಖಾತೆಯ ಪಟ್ಟು ಹಿಡಿದಿದ್ದಾರೆ. ಸಿಗದಿದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮುಸ್ಲಿಮರ ವಿರುದ್ದ ಹಿಂಸಾಚಾರಕ್ಕೆ ಕರೆ ನೀಡಿದ ಸಂಘಪರಿವಾರದ ನಾಯಕ ಶರಣ್ ಪಂಪ್‌ವೆಲ್


