ಜಮ್ಮು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯ ಚಶೋತಿ ಪ್ರದೇಶದಲ್ಲಿ ಗುರುವಾರ (ಆ.14) ಸಂಭವಿಸಿದ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿ 38ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 40ಕ್ಕೆ ಏರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 200ಕ್ಕೂ ಹೆಚ್ಚು ಕಾಣೆಯಾಗಿರುವ ಕುರಿತು ವರದಿಯಾಗಿದೆ.
ಮಚೈಲ್ ಮಾತಾ ಯಾತ್ರೆಯ ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ಯಾತ್ರಾರ್ಥಿಗಳ ಭಾರೀ ದಟ್ಟಣೆ ಮತ್ತು ನಿರಂತರ ಮಳೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಮೇಘಸ್ಫೋಟ ಸಂಭವಿಸಿದಾಗ ದುರಂತ ಸ್ಥಳದಲ್ಲಿ 250ಕ್ಕೂ ಹೆಚ್ಚು ಜನರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತ ಸ್ಥಳದಲ್ಲಿ ರಕ್ಷಣಾ ತಂಡಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿವೆ. ಇದುವರೆಗೆ 100ರಿಂದ 150 ಜನರನ್ನು ರಕ್ಷಿಸಲಾಗಿದೆ. ಅವರನ್ನು ಸ್ಥಳಾಂತರಿಸಲು ಮತ್ತು ವೈದ್ಯಕೀಯ ನೆರವು ನೀಡಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ” ಎಂದು ಕಿಶ್ತ್ವಾರ ಡಿಡಿಸಿ ಅಧ್ಯಕ್ಷೆ ಪೂಜಾ ಠಾಕೂರ್ ತಿಳಿಸಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವಾಹನ ನಿಲುಗಡೆ ಸ್ಥಳ, ಲಂಗರ್ (ಸಮುದಾಯ ಅಡುಗೆಮನೆ) ಮತ್ತು ಸಿಆರ್‌ಪಿಎಫ್ ಶಿಬಿರದ ಮೇಲೆ ಹಠಾತ್ ಪ್ರವಾಹವು ನುಗ್ಗಿದ್ದು, ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಆದರೆ, ಪ್ರತಿಕೂಲ ಹವಾಮಾನ ಮತ್ತು ಹಾನಿಗೊಳಗಾದ ರಸ್ತೆಗಳು ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ ಎಂದಿದ್ದಾರೆ.


