ಮೂವರು ವ್ಯಕ್ತಿಗಳು ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಿಕ ಭಾನುವಾರ (ನ.2) ತಡರಾತ್ರಿ ನಡೆದಿದೆ.
ಮಧುರೈ ಮೂಲದ ವಿದ್ಯಾರ್ಥಿನಿ ಕೊಯಮತ್ತೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ವಿಮಾನ ನಿಲ್ದಾಣ ಸಮೀಪದ ಬೃಂದಾವನ ನಗರದ ಬಳಿ ಗೆಳೆಯನ ಜೊತೆ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಕಾರಿನ ಬಳಿಗೆ ಬಂದ ಮೂವರು, ಗೆಳೆಯನ ಮೇಲೆ ಹಲ್ಲೆ ಮಾಡಿ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ. ಹಲ್ಲೆಗೊಳಗಾದ ಗೆಳೆಯ ಪ್ರಜ್ಞೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ವಿದ್ಯಾರ್ಥಿನಿ ಅರೆಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಪೊಲೀಸರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಗೆಳೆಯ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಪರಾಧಿಗಳನ್ನು ಪತ್ತೆಹಚ್ಚಲು ಉಪ ಪೊಲೀಸ್ ಆಯುಕ್ತ (ಉತ್ತರ) ಎನ್. ದೇವನಾಥನ್ ನೇತೃತ್ವದಲ್ಲಿ ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸೋಮವಾರ ಬೆಳಿಗ್ಗೆ ವಿಧಿವಿಜ್ಞಾನ ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಲು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಕೊಯಮತ್ತೂರು ನಗರ ಪೊಲೀಸ್ ಆಯುಕ್ತ ಹೇಳಿದ್ದಾರೆ.
ಘಟನೆ ನಡೆದ ಬೃಂದಾವನ ನಗರ ಮತ್ತು ಎಸ್‌ಐಎಚ್‌ಎಸ್ ಕಾಲೋನಿ ನಡುವಿನ ರಸ್ತೆಯ ಉದ್ದಕ್ಕೂ ದಾರಿ ದೀಪಗಳ ಕೊರತೆ ಇದೆ. ರಾತ್ರಿ ಹೊತ್ತು ಪೊಲೀಸರು ಗಸ್ತು ತಿರುಗುವುದಿಲ್ಲ. ಇದರಿಂದ ಈ ಪ್ರದೇಶ ಅಪರಾಧ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಬಗ್ಗೆ ಬರೆದುಕೊಂಡು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ದ ಕಿಡಿಕಾರಿದ್ದಾರೆ. ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ವಿದ್ಯಾರ್ಥಿ ಮೇಲಿನ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕೊಯಮತ್ತೂರಿನಲ್ಲಿ ರಾತ್ರಿ ಗಸ್ತು ಬಲಪಡಿಸಲು ಮತ್ತು ಮಹಿಳೆಯರ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.


