ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದ ಮೂವರು ಶಂಕಿತ ಆರೋಪಿಗಳನ್ನು ಪೊಲೀಸರು ಸೋಮವಾರ (ನ.3) ತಡರಾತ್ರಿ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶಂಕಿತ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಅವರು ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ಪೊಲೀಸರು ಮೂವರ ಕಾಲಿಗೂ ಗುಂಡಿಕ್ಕಿ ಬಂಧಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಬಂಧಿತ ಶಂಕಿತರನ್ನು ಗುಣ ಅಲಿಯಾಸ್ ತವಾಸಿ, ಸತೀಶ್ ಅಲಿಯಾಸ್ ಕರುಪ್ಪಸಾಮಿ ಮತ್ತು ಕಾರ್ತಿಕ್ ಅಲಿಯಾಸ್ ಕಾಳೀಶ್ವರನ್ ಎಂದು ಗುರುತಿಸಲಾಗಿದ್ದು, ದಿನಗೂಲಿ ಕಾರ್ಮಿಕರಾದ ಇವರು ಶಿವಗಂಗೈ ಜಿಲ್ಲೆಯ ನಿವಾಸಿಗಳು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ವರದಿಗಳು ವಿವರಿಸಿವೆ.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ತುಡಿಯಲೂರಿನ ನಿರ್ಜನ ಸ್ಥಳದಲ್ಲಿ ಆರೋಪಿಗಳ ಬಂಧನವಾಗಿದೆ. ವಿಶೇಷ ಪೊಲೀಸ್ ತಂಡ ಶಂಕಿತ ಆರೋಪಿಗಳ ಬಂಧನಕ್ಕೆ ತೆರಳಿದಾಗ, ಅವರು ಪೊಲೀಸ್ ಕಾನ್‌ಸ್ಟೆಬಲ್ ಚಂದ್ರಶೇಖರ್ ಎಂಬವರ ಮಣಿಕಟ್ಟಿನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗ್ತಿದೆ.
ಆತ್ಮರಕ್ಷಣೆಗಾಗಿ ಮತ್ತು ಆರೋಪಿಗಳು ತಪ್ಪಿಸಿಕೊಳ್ಳುವುದನ್ನು ತಡೆಯಲು ಪೊಲೀಸರು ಅವರ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಕರುಪ್ಪಸ್ವಾಮಿ ಮತ್ತು ಕಾಳೀಶ್ವರನ್ ಅವರ ಎರಡೂ ಕಾಲುಗಳಿಗೆ ಹಾಗೂ ತವಾಸಿಯ ಒಂದು ಕಾಲಿಗೆ ಗುಂಡೇಟಿನಿಂದ ಗಾಯವಾಗಿದೆ.
ಮೂವರನ್ನು ತಕ್ಷಣವೇ ಬಂಧಿಸಿದ ಪೊಲೀಸರು ಚಿಕಿತ್ಸೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಸಿಎಂಸಿಎಹೆಚ್) ದಾಖಲಿಸಿದ್ದಾರೆ. ಗಾಯಗೊಂಡ ಪೊಲೀಸ್ ಕಾನ್‌ಸ್ಟೆಬಲ್ ಅನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ವ್ಯಕ್ತಿಗಳು ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಿಕ ಭಾನುವಾರ (ನ.2) ತಡರಾತ್ರಿ ನಡೆದಿದೆ.
ಮಧುರೈ ಮೂಲದ ವಿದ್ಯಾರ್ಥಿನಿ ಕೊಯಮತ್ತೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ವಿಮಾನ ನಿಲ್ದಾಣ ಸಮೀಪದ ಬೃಂದಾವನ ನಗರದ ಬಳಿ ಗೆಳೆಯನ ಜೊತೆ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಕಾರಿನ ಬಳಿಗೆ ಬಂದ ಮೂವರು, ಗೆಳೆಯನ ಮೇಲೆ ಹಲ್ಲೆ ಮಾಡಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ : ಆರೋಪಿಗಳ ಪತ್ತೆಗೆ 7 ತಂಡ ರಚನೆ


