ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದರೂ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಳ್ಳದ ಹಿನ್ನೆಲೆ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವಿಗೀಡಾದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಪ್ರಮುಖ ಸರ್ಕಾರಿ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿ ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಬಾಲಸೋರ್‌ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿ, ಆದೇ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥ (ಹೆಚ್‌ಒಡಿ) ಸಮೀರ್ ಕುಮಾರ್ ಸಾಹು ವಿರುದ್ಧ ಪದೇ ಪದೇ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಆದರೆ, ಕಾಲೇಜಿನ ಪ್ರಾಂಶುಪಾಲ ಮತ್ತು ಇತರ ಅಧಿಕಾರಿಗಳು ಈ ದೂರನ್ನು ನಿರ್ಲಕ್ಷಿಸಿದ್ದರು. ಹೆಚ್‌ಒಡಿ ವಿರುದ್ದ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಕಾಲೇಜಿನ ನಡೆ ಖಂಡಿಸಿ ಸಂತ್ರಸ್ತೆಯ ಜೊತೆ ಕೆಲ ವಿದ್ಯಾರ್ಥಿಗಳು ಶನಿವಾರ ಕ್ಯಾಂಪಸ್‌ನಲ್ಲಿ ಧರಣಿ ಹಮ್ಮಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿನಿ ಪ್ರಾಂಶುಪಾಲರ ಕೊಠಡಿ ಬಳಿ ಹಠಾತ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸಿಸಿಟಿವಿ ದೃಶ್ಯಗಳ ಪ್ರಕಾರ, ವಿದ್ಯಾರ್ಥಿಗಳ ಗುಂಪೊಂದು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿತ್ತು.
ಶೇಕಡ 90ಕ್ಕೂ ಹೆಚ್ಚು ಸುಟ್ಟ ಗಾಯಗಳಿಂದ ನರಳುತ್ತಿದ್ದ ವಿದ್ಯಾರ್ಥಿನಿಯನ್ನು ಭುವನೇಶ್ವರದ ಏಮ್ಸ್‌ಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡವು ಆಕೆಗೆ ಸುಟ್ಟಗಾಯಗಳ ಘಟಕದಲ್ಲಿ ಚಿಕಿತ್ಸೆ ನೀಡುತ್ತಿತ್ತು.
ವಿದ್ಯಾರ್ಥಿನಿಯ ಜೀವ ಉಳಿಸಲು ವೈದ್ಯರು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಮೂತ್ರ ಪಿಂಡ ಬದಲಿಸಿ ಆಕೆಯನ್ನು ಬದುಕಿಸಲು ಪ್ರಯತ್ನಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.46ರ ಸುಮಾರಿಗೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ ಎಂದು ಭುವನೇಶ್ವರದ ಏಮ್ಸ್ ತಡರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿನಿಯ ಸಾವಿಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಂತಾಪ ಸೂಚಿಸಿದ್ದು, ತಪ್ಪಿತಸ್ಥರೆಲ್ಲರೂ ಕಠಿಣ ಶಿಕ್ಷೆಯನ್ನು ಎದುರಿಸಲಿದ್ದಾರೆ ಎಂದು ಆಕೆಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
“ಎಫ್‌ಎಂ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಯಿತು. ಸರ್ಕಾರ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದರೂ, ತಜ್ಞ ವೈದ್ಯಕೀಯ ತಂಡದ ಅವಿರತ ಪ್ರಯತ್ನಗಳ ಹೊರತಾಗಿಯೂ, ವಿದ್ಯಾರ್ಥಿನಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.”
“ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ತಡೆಯುವ ಶಕ್ತಿಯನ್ನು ನೀಡಲಿ ಎಂದು ಭಗವಾನ್ ಜಗನ್ನಾಥನನ್ನು ಬೇಡಿಕೊಳ್ಳುತ್ತೇನೆ. ಈ ಪ್ರಕರಣದ ತಪ್ಪಿತಸ್ಥರೆಲ್ಲರೂ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ಎದುರಿಸಲಿದ್ದಾರೆ ಎಂದು ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನಾನು ಭರವಸೆ ನೀಡುತ್ತೇನೆ. ಇದಕ್ಕಾಗಿ, ನಾನು ಅಧಿಕಾರಿಗಳಿಗೆ ವೈಯಕ್ತಿಕವಾಗಿ ಸೂಚನೆಗಳನ್ನು ನೀಡಿದ್ದೇನೆ. ಸರ್ಕಾರವು ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಸಿಎಂ ಮಾಝಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೆಚ್‌ಒಡಿಯ ಲೈಂಗಿಕ ಕಿರುಕುಳದ ಬಗ್ಗೆ ಆಂತರಿಕ ದೂರು ಸಮಿತಿ (ಐಸಿಸಿ)ಗೆ ವಿದ್ಯಾರ್ಥಿನಿ ನೀಡಿದ್ದ ದೂರು ಆಧರಿಸಿ ಕ್ರಮ ಕೈಗೊಳ್ಳಬೇಕಾದ ಕಾಲೇಜು ಆಡಳಿತ ಮಂಡಳಿ, ದೂರನ್ನು ಹಿಂಪಡೆಯಲು ಆಕೆಗೆ ಒತ್ತಡ ಹೇರಿತ್ತು ಎಂದು ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದರು.
ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಕಾಲೇಜಿನ ಪ್ರಾಂಶುಪಾಲ ದಿಲೀಪ್ ಘೋಷ್ ಮತ್ತು ಲೈಂಗಿಕ ಕಿರುಕುಳದ ಆರೋಪಿ ಸಮೀರ್ ಕುಮಾರ್ ಸಾಹುವನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ಹೇಳಿವೆ.
ನಿಮಿಷಾ ಪ್ರಿಯಾ ಮರಣದಂಡನೆ: ಗ್ರ್ಯಾಂಡ್ ಮುಫ್ತಿ ಎಪಿ ಉಸ್ತಾದ್ ಮಧ್ಯಪ್ರವೇಶದ ಬಳಿಕ ಯೆಮನ್‌ನಲ್ಲಿ ಮಹತ್ವದ ಸಭೆ; ವರದಿ


