ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳು ರೈತರಿಗೆ ಹೇಗೆ ಪ್ರಯೋಜನಕಾರಿ ಎಂಬುವುದನ್ನು ವಿವರಿಸಲು ಸಂಸದೆ ಹೇಮಾ ಮಾಲಿನಿ ಅವರನ್ನು ’ಕಂಡಿ ಕಿಸಾನ್ ಸಂಘರ್ಷ್ ಸಮಿತಿ’ಯು ಪಂಜಾಬ್‌ಗೆ ಆಹ್ವಾನಿಸಿದೆ. ಸಂಸದೆಗೆ ಪತ್ರ ಬರೆದಿರುವ ಸಮಿತಿಯು, ಅವರಿಗೆ ಒಂದು ವಾರ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಮತ್ತು ವಿಮಾನಯಾನದ ಶುಲ್ಕದ ವೆಚ್ಚವನ್ನು ತಾವೇ ಭರಿಸುವುದಾಗಿ ಪ್ರಸ್ತಾಪಿಸಿದೆ.
ಸಮಿತಿಯ ಅಧ್ಯಕ್ಷರಾದ ಭೂಪಿಂದರ್ ಸಿಂಗ್ ಘುಮಾನ್ ಮತ್ತು ಉಪಾಧ್ಯಕ್ಷ ಜರ್ನೈಲ್ ಸಿಂಗ್ ಗರ್ದಿವಾಲ್ ಅವರು, “ಪಂಜಾಬಿಗಳು ಹೇಮಾ ಮಾಲಿನಿಯನ್ನು ಗೌರವದಿಂದ ನೋಡುತ್ತಿದ್ದಾರೆ. ಯಾಕೆಂದರೆ ಅವರು ರಾಜ್ಯದ ಜನರಿಂದ ಪ್ರೀತಿಸಲ್ಪಟ್ಟಿರುವ ಧರ್ಮೇಂದ್ರ ಅವರ ಪತ್ನಿ” ಎಂದು ಸಂಸದೆಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ತಮಗೇನು ಬೇಕೆಂದು ಗೊತ್ತಿಲ್ಲ; ಅವರನ್ನು ಯಾರೋ ಪ್ರಚೋದಿಸುತ್ತಿದ್ದಾರೆ: ಹೇಮಾ ಮಾಲಿನಿ
“ಈ ಆಂದೋಲನದಲ್ಲಿ ಈಗಾಗಲೇ 100 ಜನರು ಸಾವನ್ನಪ್ಪಿದ್ದಾರೆ. ಆದರೆ ರೈತರಿಗೆ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನೀವು ಹೇಳಿದ್ದು ನೋವುಂಟುಮಾಡಿದೆ. ನಮ್ಮ ಸಮಿತಿಯು ನಿಮ್ಮನ್ನು ಪಂಜಾಬ್‌ಗೆ ಆಹ್ವಾನಿಸಲು ನಿರ್ಧರಿಸಿದೆ. ಇದರಿಂದಾಗಿ ಕಾನೂನುಗಳ ಬಗ್ಗೆ ನೀವು ತಿಳಿದುಕೊಂಡಿರುವುದನ್ನು ರೈತರಿಗೆ ವಿವರಿಸಬಹುದು” ಪತ್ರದಲ್ಲಿ ತಿಳಿಸಲಾಗಿದೆ.
“ನಮ್ಮ ಸ್ಥಿತಿಗೆ ಅನುಗುಣವಾಗಿ ಪಂಚತಾರಾ ಹೋಟೆಲ್‌ನಲ್ಲಿ ನಿಮ್ಮ ವಾಸ್ತವ್ಯವನ್ನು ವ್ಯವಸ್ಥೆಗೊಳಿಸಬೇಕೆಂದು ನಾವು ನಿರ್ಧರಿಸಿದ್ದೇವೆ. ಇದಕ್ಕೆ ಹಣವನ್ನು ರೈತರು ಮತ್ತು ಕಾರ್ಮಿಕರು ಪಾವತಿಸುತ್ತಾರೆ” ಎಂದು ತಿಳಿಸಲಾಗಿದೆ.
“ಪಂಜಾಬ್‌ನ ಮಕ್ಕಳು ಸಹ ಪಂಜಾಬ್ ಅನ್ನು ನಾಶಮಾಡಲು ರೂಪಿಸಲಾದ ಕೃಷಿ ಕಾನೂನುಗಳ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದಾರೆ. ಆದರೆ ನೀವು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದೀರಿ. ಆದ್ದರಿಂದ ನೀವು ಪಂಜಾಬ್‌ಗೆ ಬಂದು ಅದನ್ನು ಜನರಿಗೆ ವಿವರಿಸಬೇಕೆಂದು ನಾವು ವಿನಂತಿಸುತ್ತೇವೆ. ಇದರಿಂದಾಗಿ ನಮ್ಮ ಜನರು ದೆಹಲಿಯ ಗಡಿಗಳಲ್ಲಿ ಕೊರೆಯುವ ಚಳಿಯಿಂದಾಗಿ ಪ್ರಾಣ ಕಳೆದುಕೊಳ್ಳುವುದು ತಪ್ಪುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹೇಮಾ ಮಾಲಿನಿ ಇತ್ತೀಚೆಗೆ, “ಇಷ್ಟೆಲ್ಲಾ ಮಾತುಕತೆಗಳು ನಡೆದ ನಂತರವೂ ರೈತರು ಸಹಮತಕ್ಕೆ ಬರುತ್ತಿಲ್ಲ. ಅವರಿಗೇನು ಬೇಕೆಂದು ಅಥವಾ ಈ ಕಾನೂನುಗಳಲ್ಲಿ ಏನು ಸಮಸ್ಯೆಯಿದೆ ಎಂಬುದು ಅವರಿಗೆ ತಿಳಿದಿಲ್ಲ. ಇದರರ್ಥ ಅವರನ್ನು ಯಾರೋ ಪ್ರಚೋದಿಸುತ್ತಿದ್ದಾರೆ” ಎಂದು ಹೇಳಿದ್ದರು.
ಇದನ್ನೂ ಓದಿ: ಬಾಲಿವುಡ್ ಡ್ರಗ್ ಮಾಫಿಯಾ: ಜಯಾ ಬಚ್ಚನ್ ಪರ ನಿಂತ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ


