‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಪ್ರಶ್ನೆ ಕೇಳಿದ್ದಕ್ಕೆ ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ, ಸಾಮಾಜಿಕ ಮಾಧ್ಯಮ ಪ್ರಭಾವಿ ಅಪೂರ್ವ ಮಖಿಜಾ, ಹಾಸ್ಯನಟ ಸಮಯ್ ರೈನಾ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಔಪಚಾರಿಕ ದೂರು ದಾಖಲಾಗಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
“ತನಿಖೆ ನಡೆಯುತ್ತಿದೆ” ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.
ಮುಂಬೈ ಪೊಲೀಸ್ ಆಯುಕ್ತರು ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗದಲ್ಲಿ ದಾಖಲಾಗಿರುವ ದೂರಿನಲ್ಲಿ, ಕಾರ್ಯಕ್ರಮದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
“Would you watch your parents have sex everyday of your life or would you join in once ” – Ranveer Allahbadia trying to be 'dank'
This is the same guy who won an award from the Government of India and was officially felicitated by the Prime Minister. 🤢🤢 pic.twitter.com/DHdbtwvuxi
— Roshan Rai (@RoshanKrRaii) February 9, 2025
‘ಬೀರ್ ಬೈಸೆಪ್ಸ್’ ಎಂದೇ ಹೆಸರು ಗಳಿಸಿರುವ ಪಾಡ್‌ಕಾಸ್ಟರ್ ಮತ್ತು ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ಹೇಳಿಕೆ ವಿವಾದಕ್ಕೆ ಕಾರಣವಾದ ಬಳಿಕ, ಕಾರ್ಯಕ್ರಮದ ಇಡೀ ತಂಡದ ವಿರುದ್ದ ದೂರು ದಾಖಲಾಗಿದೆ.
ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ರಾಷ್ಟ್ರೀಯ ಯುವ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಯನ್ನು ಪಡೆದ ಆನ್‌ಲೈನ್ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಅಲ್ಲಾಬಾದಿಯಾ ಕೂಡ ಒಬ್ಬರು. ಈ ಹಿಂದೆ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಾಬಾದಿಯಾ ಅವರು ಕೇಂದ್ರ ಸಂಪುಟ ಸಚಿವರ ಸರಣಿಯ ಸಂದರ್ಶನಗಳನ್ನು ನಡೆಸಿದ್ದರು.
PM Modi's Candid Conversation with Ranveer Allahbadia aka 'BeerBiceps': First National Creators Awards Felicitate Content Creators.#PMModi #BeerBicep #RanveerAllahbadia #NationalCreatorsAward2024 #contentcreators pic.twitter.com/OEWEQVr3Mz
— India.com (@indiacom) March 8, 2024
ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಅಲ್ಲಾಬಾದಿಯಾ “ನಿನ್ನ ಪೋಷಕರು ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುತ್ತಾ ಇರುತ್ತೀಯಾ? ಇಲ್ಲ ಒಮ್ಮೆ ಅದರಲ್ಲಿ ಭಾಗವಹಿಸಿ ಶಾಶ್ವತವಾಗಿ ನಿಲ್ಲಿಸುತ್ತೀಯಾ?” ಎಂದು ಮಹಿಳಾ ಸ್ಪರ್ಧಿಯೊಬ್ಬರಿಗೆ ಕೇಳಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ತಮ್ಮ ಖಾಸಗಿ ಭಾಗದ ಉದ್ದ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಜೋಕ್ ಮಾಡಿದ್ದಾರೆ.
ಪೋಷಕರು, ಲೈಂಗಿಕತೆಯ ವಿಷಯವನ್ನು ಉಲ್ಲೇಖಿಸಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಅಲ್ಲಾಬಾದಿಯ ಟೀಕೆಗೆ ಗುರಿಯಾಗಿದ್ದಾರೆ.
ಯೂಟ್ಯೂಬ್‌ನಲ್ಲಿ ಬಲಪಂಥೀಯ ವಿಚಾರಧಾರೆಗಳನ್ನು ಪ್ರಚಾರ ಮಾಡುವ ರಣವೀರ್ ಅಲ್ಲಾಬಾದಿಯ, ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.
When @thetanmay exposed the 'spirituality' of @BeerBicepsGuy & called him a "Views Obsessed Mother Fcuking Capitalist"…. EVEN Tanmay would not have guessed how close to reality he was hitting.
(BTW #RanveerAllahabadia knows his audience – he will end up with even more followers… pic.twitter.com/whwrjkpkpD— The DeshBhakt 🇮🇳 (@TheDeshBhakt) February 10, 2025
ಆನ್‌ಲೈನ್ ಪ್ರಸಾರದ ಮೂಲಕ ಜನಪ್ರಿಯತೆ ಮತ್ತು ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಕಾರ್ಯಕ್ರಮದ ಆಯೋಜಕರು ಮತ್ತು ಭಾಗವಹಿಸುವವರು ಉದ್ದೇಶಪೂರ್ವಕವಾಗಿ ಮಹಿಳೆಯರ ಖಾಸಗಿ ಭಾಗಗಳ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಯೂಟ್ಯೂಬ್‌ನಲ್ಲಿ ಜಾಗತಿಕವಾಗಿ ಪ್ರಸಾರವಾದ ಈ ಕಾರ್ಯಕ್ರಮ ಅಲ್ಲಾಬಾದಿಯ ಮಹಿಳೆಯರನ್ನು ಗುರಿಯಾಗಿಸಿ ನಗುವುದು ಮತ್ತು ಅನುಚಿತ ಹಾಸ್ಯಗಳನ್ನು ಮಾಡುವುದನ್ನು ಒಳಗೊಂಡಿದೆ. ಇದನ್ನು ದೂರುದಾರರು ಗಂಭೀರ ಅಪರಾಧ ಎಂದು ಹೇಳಿದ್ದಾರೆ.
ಕುಟುಂಬದ ವಿಷಯದಲ್ಲಿ ನಾನು ಎಂದಿಗೂ ಅಗೌರವ ತೋರುವುದಿಲ್ಲ: ಅಲ್ಲಾಬಾದಿಯಾ
ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಅಲ್ಲಾಬಾದಿಯಾ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತನ್ನ ಹೇಳಿಕೆ ಅನುಚಿತ ಮತ್ತು ಸೂಕ್ಷ್ಮತೆಯ ಕೊರತೆಯನ್ನು ಹೊಂದಿದ್ದವು ಎಂದು ಒಪ್ಪಿಕೊಂಡಿದ್ದಾರೆ.
“ಇಂಡಿಯಾಸ್ ಗಾಟ್ ಲ್ಯಾಟೆಂಟ್‌ನಲ್ಲಿ ನಾನು ಆ ರೀತಿಯ ಹೇಳಿಕೆಗಳನ್ನು ನೀಡಬಾರದಿತ್ತು ಕ್ಷಮಿಸಿ” ಎಂದು ಅಲ್ಲಾಬಾದಿಯಾ ವಿಡಿಯೋದಲ್ಲಿ ಹೇಳಿದ್ದಾರೆ. “ನನ್ನ ಹೇಳಿಕೆ ಕೇವಲ ಅನುಚಿತವಾಗಿರಲಿಲ್ಲ, ಅದು ತಮಾಷೆಯೂ ಆಗಿರಲಿಲ್ಲ. ಹಾಸ್ಯ ನನ್ನ ಸಾಮರ್ಥ್ಯವಲ್ಲ. ವೈಯಕ್ತಿಕವಾಗಿ ನಾನು ನಿರ್ಣಯಿಸುವಲ್ಲಿ ಒಂದು ಲೋಪವನ್ನು ಹೊಂದಿದ್ದೇನೆ, ಅದು ಸಾಮಾನ್ಯ ವಿಷಯವಲ್ಲ. ವಿಶೇಷವಾಗಿ ಎಲ್ಲಾ ವಯಸ್ಸಿನ ಜನರು ವೀಕ್ಷಿಸುವ ವೇದಿಕೆಯಲ್ಲಿ” ಎಂದಿದ್ದಾರೆ.
I shouldn’t have said what I said on India’s got latent. I’m sorry. pic.twitter.com/BaLEx5J0kd
— Ranveer Allahbadia (@BeerBicepsGuy) February 10, 2025
“ತಾನು ಆ ವೇದಿಕೆಯನ್ನು ಜವಾಬ್ದಾರಿಯಿಂದ ಬಳಸಬೇಕಿತ್ತು ಎಂದಿರುವ ಅಲ್ಲಾಬಾದಿಯಾ, ಕುಟುಂಬವನ್ನು ಅವಮಾನಿಸುವುದು ಎಂದಿಗೂ ನನಗೆ ಅಷ್ಟೊಂದು ಕನಿಷ್ಠ ವಿಷಯವಿಲ್ಲ. ಈ ವೇದಿಕೆಯನ್ನು ಉತ್ತಮವಾಗಿ ಬಳಸಬೇಕಿದೆ. ಅದು ಇಡೀ ಅನುಭವದಿಂದ ನಾನು ಕಲಿತ ಪಾಠ” ಎಂದು ಹೇಳಿದ್ದಾರೆ.
“ವಿಡಿಯೊದ ಸೂಕ್ಷ್ಮವಲ್ಲದ ಭಾಗಗಳನ್ನು ತೆಗೆದುಹಾಕುವಂತೆ ನಿರ್ಮಾಪಕರನ್ನು ವಿನಂತಿಸಿದ್ದೇನೆ. ಮುಂದೆ ಸುಧಾರಿಸುವುದಾಗಿ ಭರವಸೆ ನೀಡಿದ್ದೇನೆ. ಕ್ಷಮಿಸಿ ಎಂದಷ್ಟೇ ನಾನು ಹೇಳಬಲ್ಲೆ, ನೀವು ಮನುಷ್ಯರಾಗಿ ನನ್ನನ್ನು ಕ್ಷಮಿಸುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ವಿವಾದದಿಂದ ಲಾಭ ಪಡೆಯುವ ಉದ್ದೇಶದಿಂದ ಹೇಳಿಕೆಗಳನ್ನು ನೀಡಲಾಗಿದೆ: ದೂರು
ವಿವಾದದಿಂದ ಲಾಭ ಪಡೆಯುವ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡಲಾಗಿದೆ. ಮಹಿಳೆಯರ ಘನತೆಗೆ ಉಂಟಾಗುವ ಹಾನಿ ಅಥವಾ ಯುವ ಪ್ರೇಕ್ಷಕರ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಬಗ್ಗೆ ಯಾವುದೇ ಗಮನ ಹರಿಸಲಾಗಿಲ್ಲ ಎಂದು ದೂರಿನಲ್ಲಿ ಒತ್ತಿ ಹೇಳಲಾಗಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು “ನನಗೆ ಅದರ ಬಗ್ಗೆ ಮಾಹಿತಿ ದೊರೆತಿದೆ. ನಾನು ಇನ್ನೂ ವಿಡಿಯೋ ನೋಡಿಲ್ಲ. ವಿಷಯಗಳನ್ನು ತಪ್ಪಾದ ರೀತಿಯಲ್ಲಿ ಹೇಳಲಾಗಿದೆ ಮತ್ತು ಪ್ರಸ್ತುತಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ, ನಾವು ಇತರರ ಸ್ವಾತಂತ್ರ್ಯವನ್ನು ಅತಿಕ್ರಮಿಸಿದಾಗ ನಮ್ಮ ಸ್ವಾತಂತ್ರ್ಯ ಕೊನೆಗೊಳ್ಳುತ್ತದೆ. ನಮ್ಮ ಸಮಾಜದಲ್ಲಿ, ನಾವು ಕೆಲವು ನಿಯಮಗಳನ್ನು ಮಾಡಿದ್ದೇವೆ, ಯಾರಾದರೂ ಅವುಗಳನ್ನು ಉಲ್ಲಂಘಿಸಿದರೆ ಅದು ಸಂಪೂರ್ಣವಾಗಿ ತಪ್ಪು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.
#WATCH | Mumbai: On controversy over YouTuber Ranveer Allahbadia's remarks on a show, Maharashtra CM Devendra Fadnavis says, "I have come to know about it. I have not seen it yet. Things have been said and presented in a wrong way. Everyone has freedom of speech but our freedom… pic.twitter.com/yXKcaWJWDD
— ANI (@ANI) February 10, 2025
ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಮಾಜಿ ಮುಖ್ಯಸ್ಥೆ ಮತ್ತು ರಾಜ್ಯಸಭಾ ಸಂಸದೆ ರೇಖಾ ಶರ್ಮಾ ಕೂಡ ರಣವೀರ್ ಅಲ್ಲಾಬಾದಿಯಾ ಅವರ ಹೇಳಿಕೆಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ಈ ವಿಡಿಯೋ ತುಂಬಾ ಆಘಾತಕಾರಿಯಾಗಿದೆ. ಮಹಿಳೆಯಾಗಿರಲಿ, ಪುರುಷನಾಗಿರಲಿ, ಈ ರೀತಿಯ ಹಾಸ್ಯವನ್ನು ಸಮಾಜ ಎಂದಿಗೂ ಒಪ್ಪುವುದಿಲ್ಲ ಎಂದು ನಾನು ಭಾವಿಸುತ್ತೇನೆ. ತಾಯಿ ಅಥವಾ ಮಹಿಳೆಯ ದೇಹದ ಬಗ್ಗೆ ಹಾಸ್ಯ ಮಾಡುವುದು ಒಳ್ಳೆಯದಲ್ಲ. ಎಲ್ಲೋ ಇಂದಿನ ಯುವಕರು ನೈತಿಕವಾಗಿ ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂಬುವುದನ್ನು ಇದು ತೋರಿಸುತ್ತದೆ. ಇಂತಹ ಹಾಸ್ಯಗಳು ಸೃಜನಶೀಲ ಕೆಲಸಗಳಲ್ಲಿ ತೊಡಗಿರುವ ಇತರರ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಭಾವಿಸುತ್ತೇನೆ. ಕ್ರಮ ಕೈಗೊಳ್ಳಲು ನಾನು ಆ ವಿಡಿಯೋವನ್ನು ಎನ್‌ಸಿಡಬ್ಲ್ಯು ಅಧ್ಯಕ್ಷರಿಗೆ ರವಾನಿಸಿದ್ದೇನೆ” ಎಂದಿದ್ದಾರೆ.
ಶಿವಸೇನೆಯು ತನ್ನ ವಕ್ತಾರ ರಾಜು ವಾಗ್ಮರೆ ಮೂಲಕ ರಣವೀರ್ ಅಲ್ಲಾಬಾದಿಯಾ ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ನೀಡಿದ ಹೇಳಿಕೆಗಳನ್ನು ಖಂಡಿಸಿದೆ
“ಶಿವಾಜಿ ಮಹಾರಾಜರ ಪರಂಪರೆಯಡಿಯಲ್ಲಿ, ಮಹಾರಾಷ್ಟ್ರ ರಾಜ್ಯದಲ್ಲಿ ಇಂತಹ ಭಾಷೆಯನ್ನು ಸಹಿಸಲಾಗುವುದಿಲ್ಲ. ಅವರು ಇದನ್ನೆಲ್ಲಾ ತಕ್ಷಣವೇ ನಿಲ್ಲಿಸಬೇಕು; ಇಲ್ಲದಿದ್ದರೆ ನಾವು ನಮ್ಮದೇ ಆದ ಶೈಲಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ರಾಜು ವಾಗ್ಮರೆ ಕಾರ್ಯಕ್ರಮದ ನಿರ್ಮಾಪಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮದ ಆಯೋಜಕರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಬಂಧನದ ತಡೆಯಾಜ್ಞೆ ವಿಸ್ತರಣೆ


