ಬಲಂಪಥೀಯರ ಕೆಂಗಣ್ಣಿಗೆ ಗುರಿಯಾಗಿರುವ ಕೇರಳದ ಜನಪ್ರಿಯ ದಲಿತ ರ‍್ಯಾಪರ್ ‘ವೇಡನ್’ (ಹಿರಂದಾಸ್ ಮುರಳಿ) ವಿರುದ್ದ ಪಾಲಕ್ಕಾಡ್‌ನ ಬಿಜೆಪಿ ಮುಖಂಡರೊಬ್ಬರು ದೂರು ದಾಖಲಿಸಿದ್ದಾರೆ.
ವೇಡನ್ ಅವರ ಹಾಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವಂತಿದೆ, ವಿಭಜನೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದ್ದಾರೆ.
ಪಾಲಕ್ಕಾಡ್ ಪುರಸಭೆಯ ಸದಸ್ಯೆ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷೆಯಾಗಿರುವ ವಿ.ಎಸ್. ಮಿನಿಮೋಲ್ ಅವರು ವೇಡನ್ ವಿರುದ್ದ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ಎನ್‌ಐಎಗೆ ಪತ್ರ ಬರೆದಿದ್ದಾರೆ.
ವೇಡನ್ ಅವರ ಹಾಡಿನಲ್ಲಿ ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡುವಂತಹ ಅಂಶವಿದೆ. ಹಿಂದೂ ಸಮುದಾಯದೊಳಗೆ ಜಾತಿ ಆಧಾರಿತ ವಿಭಜನೆಗೆ ಕಾರಣವಾಗುವ ಪ್ರಚೋದನಕಾರಿ ಭಾಷೆಯನ್ನು ಬಳಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಧಾನಿ ಬಗ್ಗೆ ವೇಡನ್ ಆಧಾರರಹಿತ, ಆಕ್ಷೇಪಾರ್ಹ ಮತ್ತು ಅಗೌರವದ ಹೇಳಿಕೆಗಳನ್ನು ನೀಡಿದ್ದಾರೆ. ಇದು ಅವರ ವೈಯಕ್ತಿಕ ಮತ್ತು ರಾಜಕೀಯ ಇಮೇಜ್‌ಗೆ ಕಳಂಕ ತರುವುದಲ್ಲದೆ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕುಂದಿಸುತ್ತದೆ” ಎಂದು ಮಿನಿಮೋಲ್ ಎರಡು ದಿನಗಳ ಹಿಂದೆ ಸಲ್ಲಿಸಲಾದ ದೂರಿನಲ್ಲಿ ಹೇಳಿದ್ದಾರೆ.
ಲೈವ್ ಕಾರ್ಯಕ್ರಮದಲ್ಲಿ ವೇಡನ್ ಮೋದಿ ಅವರನ್ನು ನೇರವಾಗಿ ಉಲ್ಲೇಖಿಸಿದ್ದಾರೆ. ಇದು ಪ್ರಧಾನ ಮಂತ್ರಿ ಕಚೇರಿಗೆ ತೋರಿದ ಅಗೌರವ ಮಾತ್ರವಲ್ಲದೆ, ಸಾರ್ವಜನಿಕ ದ್ವೇಷವನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂದು ಮಿನಿಮೋಲ್ ತಿಳಿಸಿದ್ದಾರೆ.
ಕೊಚ್ಚಿ ಬಳಿಯ ತ್ರಿಪುನಿತುರದಲ್ಲಿ ಏಪ್ರಿಲ್ 28ರಂದು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವೇಡನ್ ಅವರನ್ನು ಬಂಧಿಸಿದ್ದು ಸೇರಿದಂತೆ ಅವರಿಗೆ ಸಂಬಂಧಿಸಿತ ಇತರ ಪ್ರಕರಣಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೆಚ್ಚುವರಿಯಾಗಿ, ಜಾಮೀನಿನ ಮೇಲೆ ಬಿಡುಗಡೆಯಾದರೂ, ವೇಡನ್ ದೊಡ್ಡ ಸಂಗೀತ ಕಚೇರಿಗಳನ್ನು ಆಯೋಜಿಸುವುದನ್ನು ಮುಂದುವರೆಸಿದ್ದಾರೆ. ಅಲ್ಲಿ ಅವರು ಪ್ರೇಕ್ಷಕರಲ್ಲಿ ಹಿಂಸೆ ಮತ್ತು ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮಾನನಷ್ಟ, ಗುಂಪು ದ್ವೇಷ ಹರಡುವಿಕೆ ಮತ್ತು ಸಾರ್ವಜನಿಕ ಕಿಡಿಗೇಡಿತನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವೇಡನ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮಿನಿಮೋಲ್ ಕೋರಿದ್ದಾರೆ. ಸಂಬಂಧಿತ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳಡಿಯೂ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದಾರೆ.
ಈ ಆರೋಪಗಳಿಗೆ ಸಂಬಂಧಿಸಿದಂತೆ ವೇಡನ್ ಮತ್ತು ಅವರ ತಂಡ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಸಂಘ ಪರಿವಾರದ ನಾಯಕರು ಇತ್ತೀಚೆಗೆ ವೇಡನ್ ವಿರುದ್ಧ ಮಾಡಿದ ಟೀಕೆಗಳನ್ನು ಅನುಸರಿಸಿ ಆರೋಪಗಳನ್ನು ಮಾಡಲಾಗಿದೆ.
ಬುಧವಾರ ಪಾಲಕ್ಕಾಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಐಕ್ಯವೇದಿಕೆಯ ನಾಯಕಿ ಕೆ.ಪಿ ಶಶಿಕಲಾ, ವೇಡನ್ ಅವರ ಅನುಚಿತವಾಗಿ ಉಡುಗೆ ತೊಟ್ಟ ವರ್ತನೆಗಳು ಸಾಮಾಜಿಕ ಅವಮಾನ ಎಂದು ಟೀಕಿಸಿದ್ದರು ಮತ್ತು ಅವುಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದರು. ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ರ‍್ಯಾಪ್ ಸಂಗೀತದ ಪ್ರಸ್ತುತತೆಯನ್ನು ಪ್ರಶ್ನಿಸಿದ್ದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ವೇಡನ್, ಶಶಿಕಲಾ ಅವರ ಜಾತಿವಾದಿ ಹೇಳಿಕೆಗಳು ನನ್ನನ್ನು ‘ಒಬ್ಬ ಉಗ್ರಗಾಮಿ, ಪ್ರತ್ಯೇಕತಾವಾದಿ ಅಥವಾ ತೊಂದರೆ ಕೊಡುವವ’ ಎಂದು ಬಿಂಬಿಸುವ ಪ್ರಯತ್ನಗಳಾಗಿವೆ ಎಂದು ಹೇಳಿದ್ದರು.
ತೆಲಂಗಾಣದಲ್ಲಿ ಬಿಆರ್‌ಎಸ್-ಬಿಜೆಪಿ ಮೈತ್ರಿ? ಹೊಸ ಚರ್ಚೆ ಹುಟ್ಟು ಹಾಕಿದ ವೈರಲ್ ಪತ್ರ


