“ಆರ್ಥಿಕ ಕುಸಿತ, ಕೃಷಿ ಸಂಕಟ, ನಿರುದ್ಯೋಗ ಮತ್ತು ಉದ್ದೇಶಿತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದ”ಕ್ಕೆ ಕಾರಣವಾಗಿರುವ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ 10 ದಿನಗಳ ಕಾಲದ ಮಹಾಪ್ರತಿಭಟನೆ ನಡೆಸಲು ಉದ್ದೇಶಿಸಿದೆ. ಈ ಹೋರಾಟಕ್ಕೆ ಎಲ್ಲಾ ವಿರೋಧ ಪಕ್ಷಗಳು ಬೆಂಬಲ ನೀಡಬೇಕೆಂದು ಕೋರಿ ನವೆಂಬರ್ 04ರಂದು ಪ್ರತಿಪಕ್ಷಗಳೊಂದಿಗೆ ಕಾಂಗ್ರೆಸ್ ಸಭೆ ನಡೆಸಲಿದೆ.
10 ದಿನಗಳ ಕಾಲ ನಿರಂತರವಾಗಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದ್ದು ಇದಕ್ಕೆ ಬೆಂಬಲ, ಒಗ್ಗಟ್ಟು ಮತ್ತು ಸಲಹೆ-ಸೂಚನೆ ಪಡೆಯಲು ನವೆಂಬರ್ 04 ಸಭೆಗೆ ವಿಪಕ್ಷಗಳಿಗೆ ಆಹ್ವಾನ ನೀಡಿದೆ.
ಆರ್ಥಿಕ ಕುಸಿತದಿಂದ ಜನತೆ ಕಂಗೆಟ್ಟಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಗಳಲ್ಲಿ ಈ ವಿಷಯವು ಕೆಲವು ಕ್ಷೇತ್ರಗಳಲ್ಲಿ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಆರ್‌ಸಿಇಪಿಯಂತಹ ಅಪಾಯಕಾರಿ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಈ ಕುರಿತು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಲು ಪ್ರತಿಭಟನೆ ಆಯೋಜಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್‌ಗೆ ಆಗಮಿಸಿದ ದಿನವೇ ಆರ್ಥಿಕ ಕುಸಿತದ ವಿರೋಧಿಸಿ ಕಾಂಗ್ರೆಸ್ ಏಕತೆಯ ನಡೆ ಆಯೋಜಿಸುತ್ತಿದ್ದು, ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಡ ತರಲು ಮುಂದಾಗಿದೆ.
ಆರ್‌ಸಿಇಪಿ ಒಪ್ಪಂದವು ನಮ್ಮ ಆರ್ಥಿಕತೆಗೆ ಹೊಸ ಬೆದರಿಕೆಯಾಗಿದೆ ಹಾಗಾಗಿ ಕಾಂಗ್ರೆಸ್ ಅದನ್ನು ವಿರೋಧಿಸುತ್ತದೆ. “ಆರ್‌ಸಿಇಪಿ 16 ದೇಶಗಳ ನಡುವಿನ ಮುಕ್ತ-ವ್ಯಾಪಾರದ ಪ್ರಯತ್ನವಾಗಿದೆ. ಈ ಒಪ್ಪಂದವನ್ನು ದೇಶೀಯ ಉದ್ಯಮ, ರೈತ ಗುಂಪುಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ವಿರೋಧ ಪಕ್ಷಗಳು ಬಲವಾಗಿ ವಿರೋಧಿಸುತ್ತಿವೆ. ಆರ್‌ಸಿಇಪಿ ಶಸ್ತ್ರಸಜ್ಜಿತವಾದ ಚೀನಾವು ಅಗ್ಗದ ಸರಕುಗಳನ್ನು ಭಾರತಕ್ಕೆ ತುರುಕುತ್ತದೆ ಎಂದು ಪಕ್ಷದ ವಕ್ತಾರ ಪ್ರೊ. ಗೌರವ್ ವಲ್ಲಭ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವಿತ ಆರ್‌ಸಿಇಪಿ ಒಪ್ಪಂದದ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಅವರ ಮನೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಒಪ್ಪಂದವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಿಂದ ಅಗ್ಗದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ಅದು ‘ದೇಶದ 50 ದಶಲಕ್ಷಕ್ಕೂ ಹೆಚ್ಚು ದೇಶೀಯ ಹಾಲು ಉತ್ಪಾದಕರ ಜೀವನೋಪಾಯವನ್ನು ಕಿತ್ತುಕೊಳ್ಳಲ್ಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


