“500 ಕೋಟಿ ರೂಪಾಯಿಯ ಸೂಟ್‌ಕೇಸ್ ನೀಡುವ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ” ಎಂದು ಹೇಳಿಕೆ ನೀಡಿದ ಎರಡು ದಿನಗಳ ನಂತರ, ಮಾಜಿ ಕ್ರಿಕೆಟಿಗ ಮತ್ತು ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರನ್ನು ಕಾಂಗ್ರೆಸ್ ಸೋಮವಾರ (ಡಿಸೆಂಬರ್ 8) ಅಮಾನತುಗೊಳಿಸಿದೆ.
ನವಜೋತ್ ಕೌರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ನ ಪಂಜಾಬ್ ಘಟಕ ತಿಳಿಸಿದೆ.
ಈ ಕುರಿತ ಆದೇಶ ಪತ್ರವನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ (ಪಿಸಿಸಿ) ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಸೋಮವಾರ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಶನಿವಾರ (ಡಿಸೆಂಬರ್ 6) ಚಂಡೀಗಢದಲ್ಲಿ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ನವಜೋತ್ ಕೌರ್, ಅಮಾನತಿಗೆ ಕಾರಣವಾದ ಹೇಳಿಕೆ ನೀಡಿದ್ದರು.
“ನನ್ನ ಪತಿ ಕಾಂಗ್ರೆಸ್ ಜೊತೆ ಬಲವಾಗಿ ನಿಂತಿದ್ದಾರೆ. ಪಕ್ಷ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ, ಅವರು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ” ಎಂದು ಮಾಜಿ ಶಾಸಕಿಯೂ ಆದ ನವಜೋತ್ ಕೌರ್ ಮಾಧ್ಯಮಗಳ ಮುಂದೆ ಹೇಳಿದ್ದರು.
“ಆದರೂ, ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ನಿರೀಕ್ಷೆ ನನಗಿಲ್ಲ. ಏಕೆಂದರೆ, ಕಾಂಗ್ರೆಸ್‌ನಲ್ಲಿ ಈಗಾಗಲೇ ಐದು ಮಂದಿ ಸಿಎಂ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಅವರೆಲ್ಲ ಕಾಂಗ್ರೆಸ್ ಅನ್ನು ಸೋಲಿಸಲು ಪಣತೊಟ್ಟು ನಿಂತಿದ್ದಾರೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥ ಮಾಡಿಕೊಂಡರೆ, ಅದು ಬೇರೆ ವಿಷಯ” ಎಂದಿದ್ದರು.
“ನಾವು ಯಾವಾಗಲೂ ಪಂಜಾಬ್ ಪರವಾಗಿ ಮಾತನಾಡುತ್ತೇವೆ. ಆದರೆ, ಮುಖ್ಯಮಂತ್ರಿ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ನಮ್ಮಲ್ಲಿ 500 ಕೋಟಿ ರೂಪಾಯಿ ಹಣವಿಲ್ಲ” ಎಂದು ಇದೇ ವೇಳೆ ನವಜೋತ್ ಕೌರ್ ಹೇಳಿದ್ದರು.
ಈ ವೇಳೆ ವರದಿಗಾರರು, “ನಿಮ್ಮಲ್ಲಿ ಯಾರಾದರೂ ಹಣ ಕೇಳಿದ್ದಾರೆಯೇ?” ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ನವಜೋತ್ ಕೌರ್, “ಇಲ್ಲ ಹಣ ಕೇಳಿಲ್ಲ, ಆದರೆ 500 ಕೋಟಿ ರೂಪಾಯಿಯ ಸೂಟ್ ಕೇಸ್ ಕೊಟ್ಟವನೇ ಮುಖ್ಯಮಂತ್ರಿಯಾಗುತ್ತಾನೆ” ಎಂದಿದ್ದರು.
ನವಜೋತ್ ಅವರ ಈ ಹೇಳಿಕೆ ಮುಂದಿಟ್ಟುಕೊಂಡು ಪಂಜಾಬ್‌ನ ಎಎಪಿ ಮತ್ತು ಬಿಜೆಪಿ ಪಕ್ಷಗಳು ಕಾಂಗ್ರೆಸ್ ಮೇಲೆ ಮುಗಿಬಿದ್ದಿತ್ತು. ಕಾಂಗ್ರೆಸ್ ಈ ಕುರಿತು ಸ್ಪಷ್ಟನೆ ನೀಡುವಂತೆ ಆಗ್ರಹಿಸಿತ್ತು.
ವಿವಿಧ ಕಾಂಗ್ರೆಸ್ ನಾಯಕರೂ ಕೂಡ ನವಜೋತ್ ಕೌರ್ ಹೇಳಿಕೆ ವಿರುದ್ದ ಕಿಡಿಕಾರಿದ್ದರು. ಅವರ ಹೇಳಿಕೆಯನ್ನು ಅಲ್ಲಗಳೆದಿದ್ದರು.
ಪಿಸಿಸಿ ಅಧ್ಯಕ್ಷ ಅಮರಿಂದರ್ ಸಿಂಗ್ ‘ಭ್ರಷ್ಟ’ : ನವಜೋತ್ ಕೌರ್
ತನ್ನನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಸೋಮವಾರ ಸಂಜೆ ಪ್ರತಿಕ್ರಿಯಿಸಿದ ನವಜೋತ್ ಕೌರ್, ಪಿಸಿಸಿ ಅಧ್ಯಕ್ಷ ಅಮರಿಂದರ್ ಸಿಂಗ್ ‘ಅಸೂಕ್ಷ್ಮ, ಬೇಜವಾಬ್ದಾರಿ, ನೈತಿಕವಾಗಿ ಅಪ್ರಾಮಾಣಿಕ ಮತ್ತು ಭ್ರಷ್ಟ’ ಎಂದು ಕಿಡಿಕಾರಿದ್ದಾರೆ.
“ಅಮರಿಂದರ್ ಅವರ ಅಸಮರ್ಥತೆ ಮತ್ತು ಬೇಜವಾಬ್ದಾರಿ ವರ್ತನೆಯಿಂದ ನೋಯಿಸಲ್ಪಟ್ಟ ನನ್ನ ಎಲ್ಲಾ ಸಹೋದರ ಸಹೋದರಿಯರ ಪರವಾಗಿ ನಾನು ನಿಲ್ಲುತ್ತೇನೆ. ಅವರನ್ನು ಅಧ್ಯಕ್ಷರನ್ನಾಗಿ ಸ್ವೀಕರಿಸಲು ನಾನು ನಿರಾಕರಿಸುತ್ತೇನೆ. ಮುಖ್ಯಮಂತ್ರಿ ಅವರನ್ನು ಏಕೆ ರಕ್ಷಿಸುತ್ತಿದ್ದಾರೆಂದು ನನಗೆ ಆಶ್ಚರ್ಯವಾಗುತ್ತದೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.


