ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ.
ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗಾಗಿ ರಚಿಸಲಾಗಿರುವ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿರುವ ಪ್ರಿಯಾಂಕಾ ಗಾಂಧಿ, ಗುರುವಾರದಿಂದ (ಫೆ.19) ಎರಡು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಗುರುವಾರ ಗುವಾಹಟಿಯ ಪ್ರಸಿದ್ಧ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ತಮ್ಮ ಪ್ರವಾಸ ಆರಂಭಿಸಲಿರುವ ಅವರು, ನಂತರ ಪಕ್ಷದ ಪ್ರಧಾನ ಕಚೇರಿಯಾದ ‘ರಾಜೀವ್ ಭವನ’ದಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಪ್ರಿಯಾಂಕಾ ಗಾಂಧಿ ಜೊತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಅಸ್ಸಾಂಗೆ ತೆರಳಿದ್ದಾರೆ. ಅಸ್ಸಾಂ ಚುನಾವಣೆಗೆ ಡಿ.ಕೆ ಶಿವಕುಮಾರ್ ಅವರನ್ನು ಹಿರಿಯ ವೀಕ್ಷಕರಾಗಿ ನೇಮಿಸಲಾಗಿದೆ. ಡಿಕೆಶಿ ಈಗಾಗಲೇ ಹಲವು ಬಾರಿ ದೆಹಲಿಯಲ್ಲಿ ಅಸ್ಸಾಂ ನಾಯಕರೊಂದಿಗೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಸಭೆಗಳನ್ನು ನಡೆಸಿದ್ದು, ಪ್ರಸ್ತುತ ಪ್ರಿಯಾಂಕಾ ಗಾಂಧಿಯವರೊಂದಿಗೆ ಸಂಘಟನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಜಾರ್ಖಂಡ್‌ನ ಕಾಂಗ್ರೆಸ್ ನಾಯಕ ಬಂಧು ತಿರ್ಕಿ ಅವರನ್ನೂ ಸಹ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹಿರಿಯ ವೀಕ್ಷಕ ತಂಡದಲ್ಲಿ ಸೇರಿಸಲಾಗಿದೆ.
ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಪಿಸಿಸಿ) ಅಧ್ಯಕ್ಷ ಗೌರವ್ ಗೊಗೋಯ್ ಮತ್ತು ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಜಿತೇಂದ್ರ ಸಿಂಗ್ ಅವರು ಈ ಹಿರಿಯ ನಾಯಕರೊಂದಿಗೆ ಸಮನ್ವಯ ಸಾಧಿಸಿ ಚುನಾವಣಾ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ.
ಬಿಜೆಪಿಗೆ ಹಾರಲು ಸಿದ್ದರಾದ ಬೋರಾ
ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕ ಭೂಪೇನ್ ಕುಮಾರ್ ಬೋರಾ ಅವರ ರಾಜೀನಾಮೆ ನಿರ್ಧಾರವು ಪಕ್ಷದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಬಿಕ್ಕಟ್ಟಿನ ನಡುವೆಯೇ ಹೈಕಮಾಂಡ್ ಸೂಚನೆಯಂತೆ ಪ್ರಿಯಾಂಕಾ ಗಾಂಧಿ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಅಸ್ಸಾಂಗೆ ಭೇಟಿ ನೀಡುತ್ತಿದ್ದಾರೆ.
ಭೂಪೇನ್ ಬೋರಾ ಅವರು ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ಸೌಜನ್ಯದ ನಡವಳಿಕೆ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಬೋರಾ ಅವರ ರಾಜೀನಾಮೆ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಾಧಾನಪಡಿಸಲು ಪ್ರಯತ್ನಿಸಿದರು. ನಂತರ ಬೋರಾ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಫೆಬ್ರವರಿ 17 ರಂದು ಬೋರಾ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಬೋರಾ ಫೆಬ್ರವರಿ 22ರಂದು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್‌ಗೆ ದೊಡ್ಡ ಹೊಡೆತವೆಂದು ಪರಿಗಣಿಸಲಾಗಿದೆ.
ಬೋರಾ ತನ್ನ ರಾಜೀನಾಮೆ ನಿರ್ಧಾರ ಮರು ಪರಿಶೀಲಿಸುವುದಾಗಿ ತಿಳಿಸಿದ ಬಳಿಕ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಸಿಎಂ ಶರ್ಮಾ ಬೋರಾ ಫೆ.22ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರು ಅಸ್ಸಾಂಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಚುನಾವಣೆಯ ವೀಕ್ಷಕನಾಗಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿರುವ ಪ್ರಿಯಾಂಕಾ ಗಾಂಧಿ ಜೊತೆ ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಚಾರ ತಂತ್ರಗಳ ಕುರಿತು ಚರ್ಚಿಸಲು ಅಸ್ಸಾಂಗೆ ತೆರಳುತ್ತಿರುವುದಾಗಿ ಡಿಕೆಶಿ ಹೇಳಿದ್ದಾರೆ. ಬೋರಾ ಅವರ ಮನವೊಲಿಕೆಯ ಬಗ್ಗೆ ಅವರು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆದರೂ, ಡಿಕೆಶಿ ಬೋರಾ ಅವರ ಮನವೊಲಿಸುವ ಸಾಧ್ಯತೆ ಇದೆ ಎಂದು ಚರ್ಚೆಗಳು ನಡೆಯುತ್ತಿವೆ.


