Homeಕರ್ನಾಟಕಬಜರಂಗದಳದ ‘ಮೋರಲ್ ಪೊಲೀಸಿಂಗ್’ ಅನ್ನು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕಿಗೆ ಬಹಿರಂಗ ಬೆದರಿಕೆ

ಬಜರಂಗದಳದ ‘ಮೋರಲ್ ಪೊಲೀಸಿಂಗ್’ ಅನ್ನು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕಿಗೆ ಬಹಿರಂಗ ಬೆದರಿಕೆ

- Advertisement -
- Advertisement -

ಬಜರಂಗದಳದ ದುಷ್ಕರ್ಮಿಗಳು ನಡೆಸಿರುವ ‘ಮೋರಲ್ ಪೊಲೀಸಿಂಗ್’ ಅನ್ನು ತೀವ್ರವಾಗಿ ಖಂಡಿಸಿದ್ದ ಕಾಂಗ್ರೆಸ್‌ ವಕ್ತಾರೆ ಲಾವಣ್ಯ ಬಲ್ಲಾಳ್ ಅವರಿಗೆ, ಸಂದೀಪ್‌ ಎಂಬ ವ್ಯಕ್ತಿಯೊಬ್ಬ ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ಗುರುವಾರ ನಡೆದಿದೆ. ಲಾವಣ್ಯ ಅವರು ಸ್ಥಳೀಯ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳು, ಇತ್ತೀಚೆಗೆ ಮಂಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ, ಅವರ ಮೇಲೆ ಹಲ್ಲೆ ನಡೆಸಿ ‘ಮೋರಲ್ ಪೊಲೀಸಿಂಗ್’ ನಡೆಸಿದ್ದರು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಲಾವಣ್ಯ ಅವರು, ಬಜರಂಗದಳ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರಿಗೆ ಭಾರಿ ಬೆಂಬಲ ದೊರಕಿತ್ತು.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ‘ಮಾರಲ್ ಪೊಲೀಸಿಂಗ್’ – ಬಜರಂಗದಳ ಕಾರ್ಯಕರ್ತರ ಬಂಧನ

ಇದೇ ವಿಚಾರವಾಗಿ ಮಂಗಳೂರಿನ ಸ್ಥಳೀಯ ಟಿವಿ ವಾಹಿನಿಯೊಂದು ‘ದಾದಾಗಿರಿ!?’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರೈಮ್ ಟೈಂ ಪ್ಯಾನಲ್ ಚರ್ಚೆಯನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಲಾವಣ್ಯ ಬಲ್ಲಾಳ್ ಅವರಿಗೆ ಕರೆ ಮಾಡಿದ್ದ ಸಂದೀಪ್ ಎನ್ನುವ ವ್ಯಕ್ತಿಯೊಬ್ಬ, “ನೀವು ಏಸಿ ಕಾರಲ್ಲಿ ಕೂತು ಮಾತನಾಡುತ್ತೀರಿ ಅಲ್ಲವೆ? ನೀವು ಹೊರಗೆ ಬಂದು ಸಾರ್ವಜನಿಕವಾಗಿ ಮಾತನಾಡಿ, ನಾವು ನಿಮಗೆ ಕೂಡಾ ಹಲ್ಲೆ ನಡೆಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾನೆ.

 

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಲಾವಣ್ಯ ಬಲ್ಲಾಳ್, “ಈ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚಿಸಿ, ಚಾನೆಲ್‌ನಲ್ಲಿ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ದ ದೂರು ದಾಖಲಿಸಲಿದ್ದೇನೆ. ಕರೆ ಮಾಡಿರುವ ವ್ಯಕ್ತಿಯ ವಿವರಗಳನ್ನು ಚಾನೆಲ್ ಇನ್ನೂ ನೀಡಿಲ್ಲ. ಚಾನೆಲ್‌ ಅನ್ನು ವೇದಿಕೆಯಾಗಿ ವ್ಯಕ್ತಿ ನನಗೆ ಬೆದರಿಕೆ ಹಾಕಿರುವುದರಿಂದ, ವಾಹಿನಿಯನ್ನೂ ದೂರಿನಲ್ಲಿ ಸೇರಿಸಲಿದ್ದೇನೆ” ಎಂದು ಹೇಳಿದ್ದಾರೆ.

ಈ ಬಗ್ಗೆ ನೀಡಿರುವ ಚಿಂತಕ ಶ್ರೀನಿವಾಸ ಕಾರ್ಕಾಳ, “ಸರಕಾರಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡದಿದ್ದಾಗ, ಕಾನೂನು ನಿಯಮ ಮತ್ತು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳದಿದ್ದಾಗ ಒಟ್ಟು ಆಡಳಿತ ವ್ಯವಸ್ಥೆ ಕುಸಿದುಬೀಳುತ್ತದೆ. ಆಗ ಇಂಥ ಅನಪೇಕ್ಷಣೀಯ ಘಟನೆಗಳು ಸಂಭವಿಸುತ್ತವೆ. ‘ನಮ್ಮದೇ ಸರಕಾರ, ನಾವು ಏನು ಮಾಡಿದರೂ ನಮಗೆ ನಮ್ಮ ಸರಕಾರದ ರಕ್ಷಣೆ ಇದೆ’ ಎಂಬ ಭರವಸೆ ಮತ್ತು ಧೈರ್ಯ ಇದ್ದಾಗ ಸಮಾಜವಿರೋಧಿ ಶಕ್ತಿಗಳು ಇನ್ನಷ್ಟು ಮತ್ತಷ್ಟು ಉಗ್ರವಾಗುತ್ತವೆ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಎಗ್ಗಿಲ್ಲದೆ ಮುಂದುವರಿಸುತ್ತವೆ” ಎಂದು ಹೇಳಿದ್ದಾರೆ.

ಶ್ರೀನಿವಾಸ ಕಾರ್ಕಾಳ
ಶ್ರೀನಿವಾಸ ಕಾರ್ಕಾಳ

“ಅನೇಕ ಬಾರಿ ಅಪರಾಧ ಕೃತ್ಯ ನಡೆಯುವ ಬಗ್ಗೆ ಪೊಲೀಸರಿಗೆ ಪೂರ್ವ ಸೂಚನೆ ಇರುವುದಿಲ್ಲ. ಹಾಗಾಗಿ ಅವನ್ನು ಅವರಿಗೆ ತಡೆಯುವುದು ಸುಲಭ ಸಾಧ್ಯದ ಕೆಲಸವಲ್ಲ. ಆದರೆ ಅಪರಾಧ ಕೃತ್ಯ ನಡೆದ ಬಳಿಕ ಪೊಲೀಸರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮುಖ್ಯ. ಆ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು ಮತ್ತು ಅವರಿಗೆ exemplary punishment ಆಗುವಂತೆ ಮಾಡುವುದು ಮುಂದೆ ಅಂತಹ ಘಟನೆ ನಡೆಯದಂತೆ ನೋಡಿಕೊಳ್ಳುವ ಪರಿಣಾಮಕಾರಿ ಉಪಾಯ. ಆದರೆ ನಮ್ಮ ಪೊಲೀಸರು ಇಂತಹ ಕ್ರಮ ಜರುಗಿಸದಿರುವುದರಿಂದ, ಅಪರಾಧಿಗಳು ಸುಲಭವಾಗಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದರಿಂದ ಇವೆಲ್ಲ ಮತ್ತೆ ಮತ್ತೆ ಸಂಭವಿಸುತ್ತವೆ. ಹಾಗಾಗಿ ಇಂದಿನ ಈ ಕೆಟ್ಟ ಪರಿಸ್ಥಿತಿಯ ಹೊಣೆಯನ್ನು ಬಹುಪಾಲು ಪೊಲೀಸರು ಹೊರಬೇಕಾಗುತ್ತದೆ. ಮತ್ತು ಈಗಲೂ ಪೊಲೀಸರ ವರ್ತನೆಯಲ್ಲಿ ಹೆಚ್ಚಿನ ಬದಲಾವಣೆ ಆಗದಿರುವುದರಿಂದ ಇಂತಹ ಘಟನೆ ಮುಂದೆಯೂ ನಡೆಯುತ್ತ ಹೋಗುವುದರಲ್ಲಿ ಅನುಮಾನವಿಲ್ಲ” ಎಂದು ಹೇಳಿದ್ದಾರೆ.

ಕರಾವಳಿಯಲ್ಲಿ ಇತ್ತೀಚೆಗೆ ಹಲವಾರು ಮೋರಲ್ ಪೊಲೀಸಿಂಗ್ ಪ್ರಕರಣಗಳು ನಡೆಯುತ್ತಿದೆ. ಕಳೆದ ಭಾನುವಾರ ನಡೆದಿದ್ದ ಪ್ರಕರಣದಲ್ಲಿ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದರಾದರೂ, ಠಾಣೆಯಲ್ಲೇ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಇದರ ವಿರುದ್ದ ಕೂಡಾ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ಮಂಗಳೂರು: ಅತ್ಯಾಚಾರ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ- ಪೊಲೀಸ್ ಪೇದೆ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...