ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಸೋಮವಾರ (ಮಾ.3) ಬಂಧಿಸಿದ್ದಾರೆ.
ಮೃತ ಹಿಮಾನಿ ಅವರ ಫೇಸ್‌ಬುಕ್ ಗೆಳೆಯ, ಹರಿಯಾಣದ ಜಜ್ಜರ್ ಜಿಲ್ಲೆಯ ಕೈಪುರ್ ಗ್ರಾಮದ ಸಚಿನ್ ಅಲಿಯಾಸ್ ಧಿಲ್ಲು (30) ಬಂಧಿತ ವ್ಯಕ್ತಿ.
ಈತ ಕಳೆದ ಒಂದೂವರೆ ವರ್ಷದಿಂದ ಫೇಸ್‌ಬುಕ್ ಮೂಲಕ ಹಿಮಾನಿ ಅವರಿಗೆ ಪರಿಚಯವಿದ್ದ. ಕಳೆದ ಏಳು ತಿಂಗಳಿನಿಂದ ಹರಿಯಾಣದ ರೋಹ್ತಕ್ ಜಿಲ್ಲೆಯ ವಿಜಯನಗರದ ಹಿಮಾನಿಯವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಹಿಮಾನಿ ಅವರ ಸಹೋದರ ಮತ್ತು ತಾಯಿ ದೀರ್ಘ ಸಮಯದಿಂದ ದೆಹಲಿಯಲ್ಲಿ ವಾಸಿಸುತ್ತಿದ್ದರು.
ಆರೋಪಿ ಸಚಿನ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆತನನ್ನು ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು ಹಿಮಾನಿಯವರಿಗೆ ಸಂಬಂಧಿಸಿದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಆಭರಣವನ್ನು ಜಜ್ಜರ್‌ನ ಕನೋಡ ಗ್ರಾಮದಲ್ಲಿರುವ ಆರೋಪಿಯ ಮೊಬೈಲ್ ಅಂಗಡಿಯಿಂದ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ 1ರಂದು ರೋಹ್ತಕ್-ದೆಹಲಿ ಹೆದ್ದಾರಿಯ ಸಂಪ್ಲಾ ಬಸ್ ನಿಲ್ದಾಣದ ಬಳಿ ಸೂಟ್‌ಕೇಸ್‌ನಲ್ಲಿ ಹಿಮಾನಿಯವರ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ರೋಹ್ತಕ್ ರೇಂಜ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಕ್ರಿಶನ್ ಕುಮಾರ್ ರಾವ್, “ಫೆಬ್ರವರಿ 28ರಂದು ಮನೆಯಲ್ಲಿ ನಡೆದ ಜಗಳದಲ್ಲಿ ಸಚಿನ್ ಮೊಬೈಲ್ ಫೋನ್ ಚಾರ್ಜರ್ ಸಹಾಯದಿಂದ ಹಿಮಾನಿ ಅವರನ್ನು ಕೊಂದಿದ್ದಾನೆ” ಎಂದು ಹೇಳಿದ್ದಾರೆ.
“ಆರೋಪಿ ಸಾಮಾಜಿಕ ಜಾಲತಾಣದ ಮೂಲಕ ಕಳೆದ ಒಂದೂವರೆ ವರ್ಷದಿಂದ ಹಿಮಾನಿ ಅವರ ಜೊತೆ ಸಂಪರ್ಕದಲ್ಲಿದ್ದ. ವಿಜಯನಗರದ ಅವರ ಮನೆಗೆ ಕಳೆದ ಅರೇಳು ತಿಂಗಳಿನಿಂದ ಆತ ಆಗಾಗ ಭೇಟಿ ಕೊಡುತ್ತಿದ್ದ. ಫೆಬ್ರವರಿ 27ರಂದು ಹಿಮಾನಿ ಮನೆಗೆ ಹೋಗಿದ್ದ ಆರೋಪಿ ಇಡೀ ರಾತ್ರಿ ಆಕೆಯೊಂದಿಗೆ ಕಳೆದಿದ್ದ. ಮರುದಿನ ಹಣಕಾಸಿನ ವಿಷಯಕ್ಕೆ ಅವರಿಬ್ಬರ ನಡುವೆ ಜಗಳ ಶುರುವಾಗಿದೆ. ಅದು ತಾರಕಕ್ಕೇರಿ ಸಚಿನ್ ಹಿಮಾನಿಯ ಕೈಗಳನ್ನು ಆಕೆಯ ದುಪಟ್ಟದಿಂದ ಕಟ್ಟಿದ್ದು, ಬಳಿಕ ಮೊಬೈಲ್ ಚಾರ್ಜರ್‌ನಿಂದ ಆಕೆಯ ಕತ್ತು ಬಿಗಿದಿದ್ದಾನೆ. ನಂತರ ಆಕೆಯ ದೇಹವನ್ನು ರಕ್ತದ ಕಲೆಗಳಿದ್ದ ಹೊದಿಕೆಯೊಂದಿಗೆ ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ” ಎಂದು ಎಡಿಜಿಪಿ ತಿಳಿಸಿದ್ದಾರೆ.
“ಕೊಲೆ ಬಳಿಕ ಹಿಮಾನಿಯ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಆಭರಣಗಳನ್ನು ತೆಗೆದುಕೊಂಡ ಸಚಿನ್, ಅದನ್ನು ಜಜ್ಜರ್‌ನ ಕನೋಡ ಗ್ರಾಮದಲ್ಲಿರುವ ಆತನ ಮೊಬೈಲ್ ಅಂಗಡಿಗೆ ಕೊಂಡೊಯ್ದಿದ್ದ”.
“ಆರೋಪಿ ಸಚಿನ್ ಕಳವುಗೈದ ವಸ್ತುಗಳನ್ನು ಸಾಗಿಸಲು ಹಿಮಾನಿಯ ಸ್ಕೂಟರ್ ಬಳಸಿದ್ದ. ಬಳಿಕ ಹಿಮಾನಿಯ ಮನೆಗೆ ವಾಪಸ್ ಬಂದ ಆತ, ಹಿಮಾನಿಯ ಶವ ತುಂಬಿದ್ದ ಸೂಟ್‌ಕೇಸ್ ಜೊತೆ ರೋಹ್ತಕ್‌ನ ವಿಜಯ್ ನಗರದಿಂದ ದೆಹಲಿ ಬೈಪಾಸ್‌ವರೆಗೆ ಆಟೋದಲ್ಲಿ ತೆರಳಿದ್ದ. ಅಲ್ಲಿಂದ ಸಂಪ್ಲಾಗೆ (ಸುಮಾರು 26 ಕಿ.ಮೀ) ಬಸ್‌ನಲ್ಲಿ ಪ್ರಯಾಣಿಸಿದ್ದ. ನಂತರ, ಸುಮಾರು 80 ಮೀಟರ್‌ಗಳಷ್ಟು ಕಾಲ್ನಡಿಗೆಯಲ್ಲಿ ಹೋಗಿ ಸೂಟ್‌ಕೇಸ್ ಅನ್ನು ಪೊದೆಗೆ ಎಸೆದಿದ್ದ” ಎಂದು ಎಡಿಜಿಪಿ ಹೇಳಿದ್ದಾರೆ.
“ಹಿಮಾನಿ ಯುವ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದರು. ಆರೋಪಿಗೆ ಯಾವುದೇ ರಾಜಕೀಯ ಸಂಪರ್ಕವಿಲ್ಲ. ಆಕೆ ಆತನಿಂದ ಹಣ ಪಡೆಯುತ್ತಿದ್ದರೋ ಅಥವಾ ಆತ ಆಕೆಯಿಂದ ಹಣ ಪಡೆಯುತ್ತಿದ್ದರೋ ಎಂಬ ಬಗ್ಗೆ ಇದುವರೆಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆರೋಪಿ ಈಗಾಗಲೇ ವಿವಾಹಿತನಾಗಿರುವುದರಿಂದ ಮತ್ತು ಆಕೆ ಒಂಟಿಯಾಗಿರುವುದರಿಂದ ಮದುವೆಯಾಗಲು ಎರಡೂ ಕಡೆಯಿಂದ ಒತ್ತಡವಿತ್ತು ಎನ್ನಲಾಗಿದೆ. ಈ ಬಗ್ಗೆಯೂ ಇಲ್ಲಿಯವರೆಗೆ ಯಾವುದೇ ಮಾಹಿತಿ ದೊರೆತಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.
ರೋಹ್ತಕ್‌ನ ವೈಶ್ ಕಾನೂನು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಹಿಮಾನಿ, ಮಾರ್ಚ್ 1ರಂದು ಶವ ಪತ್ತೆಯಾಗುವ ಮೊದಲೇ ನಾಪತ್ತೆಯಾಗಿದ್ದರು. ಇವರು ಭಾರತ್ ಜೋಡೋ ಯಾತ್ರೆಯ ಹರಿಯಾಣದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು.
ಸಿಸಿಟಿವಿ ವಿಡಿಯೋ ವೈರಲ್ : ಆರೋಪಿ ಸಚಿನ್ ರೋಹ್ತಕ್‌ನ ವಿಜಯನಗರದ ಮನೆಯಿಂದ ಹಿಮಾನಿಯವರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಹೋಗಿದ್ದಾರೆ ಎನ್ನಲಾದ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.



