ಭಾರತದ ಸಂವಿಧಾನವು ಸ್ವ-ಆಡಳಿತ, ಘನತೆ ಮತ್ತು ಸ್ವಾತಂತ್ರ್ಯದ ಒಂದು ಗಮನಾರ್ಹವಾದ ಸ್ವದೇಶಿ ಉತ್ಪನ್ನವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬಣ್ಣಿಸಿದ್ದಾರೆ.
ನಾಗ್ಪುರದಲ್ಲಿ ಶನಿವಾರ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಿಜೆಐ, “ಕೆಲವರು ಸಂವಿಧಾನದ ಬಗ್ಗೆ ಸಂಪೂರ್ಣವಾಗಿ ಶ್ಲಾಘನೀಯ ಪದಗಳಲ್ಲಿ ಮಾತನಾಡುತ್ತಿದ್ದರೆ, ಇನ್ನೂ ಅನೇಕರು ಅದರ ಯಶಸ್ಸಿನ ಬಗ್ಗೆ ಸಿನಿಕರಾಗಿದ್ದಾರೆ” ಎಂದು ವಿಷಾದಿಸಿದ್ದಾರೆ.
“ಸಂವಿಧಾನವು ಮಹತ್ತರವಾದ ಪ್ರಗತಿಯನ್ನು ಸಾಧಿಸಿದ್ದರೂ, ಇನ್ನು ಹೆಚ್ಚಿನ ಕೆಲಸವನ್ನು ಸಾಧಿಸಬೇಕಾಗಿದೆ. ಹಿಂದೆ ಇದ್ದ ಬಹುದೊಡ್ಡ ಅಸಮಾನತೆ ಇಂದಿಗೂ ಮುಂದುವರೆದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಯುವ ಕಾನೂನು ವಿದ್ಯಾರ್ಥಿಗಳು ಮತ್ತು ಪದವೀಧರರು ಸಾಂವಿಧಾನಿಕ ಮೌಲ್ಯಗಳಿಂದ ಮಾರ್ಗದರ್ಶನ ಪಡೆದರೆ, ಅವರು ಎಂದಿಗೂ ವಿಫಲರಾಗುವುದಿಲ್ಲ” ಎಂದು ಕಿವಿಮಾತು ಹೇಳಿದ್ದಾರೆ.
ಪ್ರಸ್ತಾವನೆಯನ್ನು ಉಲ್ಲೇಖಿಸಿದ ಸಿಜೆಐ, “ಇದು ಸಂವಿಧಾನಕ್ಕೆ ಒಂದು ಚಿಕ್ಕ ಆದರೆ ತೂಕದ ಭಾಗವಾಗಿದೆ” ಎಂದು ಶ್ಲಾಘಿಸಿದ್ದಾರೆ. “ಭಾರತದ ಜನರು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ” ಎಂದು ಸ್ಮರಿಸಿದ್ದಾರೆ.
“ಇದು (ಸಂವಿಧಾನ) ಅಳೆಯಲಾಗದಷ್ಟು ಮಹತ್ವದ್ದಾಗಿದೆ. ಏಕೆಂದರೆ ಇದು ಭಾರತದ ಪ್ರಜೆಗಳಿಗೆ ಪೌರತ್ವದ ಸ್ಥಾನಮಾನ ನೀಡುತ್ತದೆ. ವಸಾಹತುಶಾಹಿ ಅಧಿಕಾರವು ನಮಗೆ ಸಂವಿಧಾನವನ್ನು ಅನುಗ್ರಹದ ಕ್ರಿಯೆಯಾಗಿ ನೀಡಲಿಲ್ಲ. ನಮ್ಮದು (ಸಂವಿಧಾನ) ಒಂದು ದಾಖಲೆಯಾಗಿದೆ. ಸ್ವ-ಆಡಳಿತ, ಘನತೆ ಮತ್ತು ಸ್ವಾತಂತ್ರ್ಯದ ಉತ್ಪನ್ನವಾಗಿದೆ” ಎಂದಿದ್ದಾರೆ.
“ನಮ್ಮ ಸಂವಿಧಾನದ ಯಶಸ್ಸನ್ನು ಸಾಮಾನ್ಯವಾಗಿ ಎರಡು ವಿರುದ್ಧ ತುದಿಗಳಿಂದ ನೋಡಲಾಗುತ್ತದೆ. ಕೆಲವರು ನಮ್ಮ ಸಂವಿಧಾನದ ಬಗ್ಗೆ ಸಂಪೂರ್ಣವಾಗಿ ವ್ಯಂಗ್ಯವಾಗಿ ಮಾತನಾಡುತ್ತಾರೆ, ಇತರರು ನಮ್ಮ ಸಂವಿಧಾನದ ಯಶಸ್ಸಿನ ಸಿನಿಕತನವನ್ನು ಹೊಂದಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಸಂವಿಧಾನವನ್ನು ಅದು ಹೊರಹೊಮ್ಮಿದ (ವಸಾಹತುಶಾಹಿ ಕಾಲಘಟ್ಟ) ಸಂದರ್ಭದಿಂದ ನೋಡಿದಾಗ, ಅದು ಗಮನಾರ್ಹವಾದುದೇನೂ ಅಲ್ಲ” ಎಂದಿರುವ ಭಾರತದ ಮುಖ್ಯ ನ್ಯಾಯಾಧೀಶರು, “ಸಂವಿಧಾನವು ಹೆಚ್ಚು ನ್ಯಾಯಯುತ ಮತ್ತು ಪ್ರಜಾಪ್ರಭುತ್ವ ಸಮಾಜದ ಕಡೆಗೆ ಮಹತ್ತರವಾದ ದಾಪುಗಾಲುಗಳನ್ನು ಇಟ್ಟಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಂವಿಧಾನ ಶಿಲ್ಪಿಗೆ ಅವಹೇಳನ; ಸಮಾಜ ಕಲ್ಯಾಣ ಇಲಾಖೆ ದೂರಿನನ್ವಯ ಜೈನ್ ಕಾಲೇಜಿನ ವಿರುದ್ಧ ಎಫ್‌ಐಆರ್
“ಆದರೆ ನಾವು ವಿಶ್ರಾಂತಿ ಪಡೆಯುವವರೆಗೆ ಹೆಚ್ಚಿನ ಕೆಲಸಗಳನ್ನು ಸಾಧಿಸಬೇಕಾಗಿದೆ. ನಮ್ಮ ಸಮಾಜವನ್ನು ಛಿದ್ರಗೊಳಿಸಿರುವ ಆಳವಾಗಿ ಬೇರೂರಿರುವ ಅಸಮಾನತೆ ಇಂದಿಗೂ ಮುಂದುವರೆದಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಎದುರಿಸಿದ ತೊಂದರೆಗಳ ಕುರಿತು ಮಾತನಾಡಿದ ಸಿಜೆಐ ಚಂದ್ರಚೂಡ್, “ನಾವು ಇಂದು ಟೇಕ್ ಇಟ್ ಫಾರ್ ಗ್ರಾನ್‌ಟೆಡ್ ಎಂದು ಭಾವಿಸಿರುವ ಅನೇಕ ಸಾಂವಿಧಾನಿಕ ಹಕ್ಕುಗಳು ಮತ್ತು ಪರಿಹಾರಗಳಿಗಾಗಿ ಭಾರತೀಯರು ಬಾಬಾ ಸಾಹೇಬರಿಗೆ ಋಣಿಯಾಗಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಜಾತಿಯಿಂದ ರೋಗಗ್ರಸ್ತವಾಗಿರುವ ಸಮಾಜದಿಂದಾಗಿ ಬಾಬಾ ಸಾಹೇಬರ ವಿರುದ್ಧ ತಡೆಗೋಡೆಗಳನ್ನು ಜೋಡಿಸಲಾಗಿದೆ. ಆದರೂ ಅವರು ನಮ್ಮ ದೇಶದ ಇತಿಹಾಸದಲ್ಲಿ, ಬಹುಶಃ ವಿಶ್ವದ ಅತ್ಯಂತ ಎತ್ತರದ ವ್ಯಕ್ತಿಗಳಲ್ಲಿ ಒಬ್ಬರಾದರು” ಎಂದಿದ್ದಾರೆ ಸಿಜೆಐ.


