ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದವರಿಗೆ ಕೃಷಿಯೋಗ್ಯ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೆ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಕೊರಗ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು.
ಕೊರಗ ಸಮುದಾಯದವರಿಗೆ ನೀಡಲೆಂದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಿರುವ ಕೃಷಿ ಯೋಗ್ಯ ಭೂಮಿಯನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಕೊರಗ ಸಂಘದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ಮುಂದೆ ತಮ್ಮ ಅಹವಾಲನ್ನು ಸಲ್ಲಿಸಿದರು.
ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯದವರಿಗೆ ಕೃಷಿ ಭೂಮಿಯ ಹಂಚಿಕೆ ಉತ್ತಮ ರೀತಿಯಲ್ಲಿ ನಡೆದಿದ್ದು, ಅದೇ ಮಾದರಿಯನ್ನು ದಕ್ಷಿಣ ಕನ್ನಡದಲ್ಲೂ ಅನುಸರಿಸುವಂತೆ ಕೊರಗ ಸಂಘದ ಪ್ರತಿನಿಧಿಗಳು ಸಚಿವರಲ್ಲಿ ಮನವಿ ಮಾಡಿದರು.
ಸಮುದಾಯದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡರು,ಈ ಹಿಂದೆ ಕೊರಗ ಸಮುದಾಯಕ್ಕೆ ಕೃಷಿ ಭೂಮಿ ಮಂಜೂರು ಮಾಡಿದ ಪ್ರಕ್ರಿಯೆಗಳನ್ನು ಜಿಲ್ಲಾಡಳಿತದೊಂದಿಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಲೋಚನೆ ನಡೆಸಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅತೀ ಸೂಕ್ಷ್ಮ ಹಾಗೂ ಅತೀ ಹಿಂದುಳಿದಿರುವ ಪರಿಶಿಷ್ಟ ಪಂಗಡದ ಸಮುದಾಯವಾಗಿರುವ ಕೊರಗರು ಗುಂಪು ಗುಂಪಾಗಿ ವಾಸಿಸುವ ಹಿನ್ನೆಲೆಯವರಾಗಿದ್ದು, ಕನಿಷ್ಠ 10 ರಿಂದ 15 ಕುಟುಂಬಗಳಿಗೆ ಒಟ್ಟೊಟ್ಟಿಗೆ ಯಾಗಿ ಭೂಮಿ ಮಂಜೂರು ಮಾಡಿದರೆ ತಮ್ಮ ಹಿಂದಿನ ಸಮುದಾಯ ಪರಿಕಲ್ಪನೆಯಂತೆ ಕೊರಗರು ಸ್ವತಂತ್ರವಾಗಿ
ಬದುಕಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾ ಕೊರಗ
ಸಂಘದ ಅಧ್ಯಕ್ಷ ಸುಂದರ ಬೆಳವಾಯಿ ಅವರು ಸಭೆಯಲ್ಲಿ ಮನವಿ ಮಾಡಿದರು.
ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಸುವುದಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕೊರಗ ಸಮುದಾಯದ ಹಿನ್ನೆಲೆ ಹಾಗೂ ಪ್ರಸ್ತುತ ಕೊರಗ ಸಮುದಾಯದ ಸ್ಥಿತಿಗತಿಯ ಬಗ್ಗೆ ಸಭೆಗೆ ವಿವರ ನೀಡಿದರು.
ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು. ಎಚ್, ದ.ಕ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಬೆಳುವಾಯಿ, ಉಪಾಧ್ಯಕ್ಷ ಕೊಗ್ಗ ರಮೇಶ್, ಪ್ರಧಾನ ಕಾರ್ಯದರ್ಶಿ ಶಶಿಕಲಾ, ಪದಾಧಿಕಾರಿಗಳಾದ ಸಂಜೀವ ಕೊಡಿಕಲ್, ಕಮಲ ಮೊಂಟೆಪದವು, ಜಾಗೃತ ಕರ್ನಾಟಕದ ರಾಜ್ಯ ಸಮಿತಿ ಸದಸ್ಯರಾದ ಬಿ.ಸಿ.ಬಸವರಾಜ್, ಲಕ್ಷ್ಮಣ್ ಕುಂದರ್, ಡಾ.ವಾಸು ಎಚ್.ವಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಸೇರಿ ಇತರರು ಭಾಗವಹಿಸಿದ್ದರು.
ಛತ್ತೀಸ್‌ಗಢ | ಅದಾನಿ ಗಣಿಗಾಗಿ ಬಿಜೆಪಿ ಸರ್ಕಾರದಿಂದ 5,000 ಮರಗಳ ಮಾರಣಹೋಮ


